ಪ್ರತ್ಯಗಾತ್ಮ ಚಿಂತನ (ನೇನಂಶಿ) – 52

ಹಿರಿಯ ಆರಕ್ಷಕರು ಕೆಳಗಿನವರನು ಬಯ್ಯೆ
ಕಿರಿಯ ಪೇದೆಯ ಬಯ್ಯೆ ಆ ಕೆಳಗಿನವರು
ಪಿರಿದು ಕೋಪದಿ ಪೇದೆ ಹಾದಿ ನಾಯಿಯ ಒದೆದ
ಪರದೇಶಿಗೇ ಶಿಕ್ಷೆ- || ಪ್ರತ್ಯಗಾತ್ಮ ||

ಉಂಡು ತೆಪ್ಪಗೆ ಕುಳಿತ ಗಂಡನನು ರಂಜಿಸಲು
ಉಂಡ ಬಾಯಿಗೆ ಇನಿತು ಒಗ್ಗರಣೆ ಎಂದು
ಮಂಡಕ್ಕಿ ಪುರಿ ಕೊಡಲು ಮೊದಲು ಮುಕ್ಕಿಗೆ ಕಲ್ಲು!
ಗಂಡ ಕೆಂಡವೆ ಆದ! – || ಪ್ರತ್ಯಗಾತ್ಮ ||

ಮಡದಿ ತಾನೊಲವಿನಲಿ ಎದೆಯ ನೋವಿನ ಪತಿಗೆ
ಸಡಗರದಿ ಗಸಗಸೆಯ ಪಾಯಸವ ಕೊಡಲು,
ಕುಡಿದು ನಾಲಗೆ ಸುಟ್ಟು `ಬಿಸಿ’ ಎಂದು ಬೊಬ್ಬೆ ಇಡೆ
ಬಿಡದೆ ಹೆಚ್ಚಿತು ನೋವು- || ಪ್ರತ್ಯಗಾತ್ಮ ||

ಸತಿಪತಿಗಳೊಂದು ದಿನ ಎಲೆಯಡಿಕೆ ಮೆಲ್ಲುತಿರೆ
ಸತಿ ಎಲೆಯ ಹದಗೊಳಿಸಿ ಮಡಿಸಿ ಕೊಡುತಿರಲು
ಅತಿ ಸುಣ್ಣ ನಾಲಗೆಯ ಸುಡಲು ಪತಿ ಚಡಪಡಿಸೆ
ಸತಿ ನಕ್ಕಳೊಳಗೊಳಗೆ !- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *