ಹುಲಿ-ಚಿರತೆ-ಸಾರಂಗ-ನರಿ-ಕರಡಿ-ಖಡ್ಗಮೃಗ
ಮೊಲ-ಜಿಂಕೆ-ಕಾಡೆಮ್ಮೆ-ಸೀಳ್ನಾಯಿ-ಸಿಂಹ
ಸಲಗ-ವಾನರ-ತೋಳ-ಹಂದಿ-ಮುಂಗುಸಿ-ಕೋಳಿ
ಮಲೆನಾಡಿನೈಸಿರಿಯೊ !- || ಪ್ರತ್ಯಗಾತ್ಮ ||
ಕಾಡು ಕಾಷ್ಠದ ಗೂಡು, ಔಷಧಿಯ ನೆಲೆವೀಡು
ಮೂಡು ಮನೆಯಲಿ ಬಳಕೆ ಇದರ ಮರಮುಟ್ಟು
ನಾಡಿನಾದಾಯಕ್ಕೆ ಕಾಡು ಮೂಲಾಧಾರ
ಕಾಡು ಜೇನಿನ ಗೂಡು- || ಪ್ರತ್ಯಗಾತ್ಮ ||
ಮುಳ್ಳುಗಿಡ ನೂರಾರು, ಕಳ್ಳಿಗಿಡ ನೂರಾರು
ಬಳ್ಳಿಗಳು ಎಷ್ಟೊಂದು ಎಣಿಸಿದವರಿಲ್ಲ
ಎಲ್ಲೆಡೆಗೂ ಹಬ್ಬಿರುವ ಗೇಣುದ್ದ ಸಸ್ಯಗಳು
ಇಲ್ಲೇತಕೆನ್ನದಿರು- || ಪ್ರತ್ಯಗಾತ್ಮ ||
ಒಂದೊಂದು ಗಿಡ ಒಂದು ಜಾತಿ ಗಿಡಮೂಲಿಕೆಯು
ಒಂದೊಂದು ಗಿಡ ಒಂದು ರೋಗಾಪಹಾರಿ
ಹಿಂದಿನವರಿದನೆಲ್ಲ ತಿಳಿದೆ `ಆಯುರ್ವೇದ’ವೆಂದರು
ವನೌಷಧಿಯ- ||| ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ