ದೈವದತ್ತವು ಪ್ರತಿಭೆ; ಪ್ರಕೃತಿ ಕೊಡುಗೆಯು ಭಾವ,
ದೇವಿ ತಾಯಿಯ ಭಾಷೆ; ಲಿಪಿಯು ಗುರು ಕೊಡುಗೆ,
ಪೂರ್ವಜರ ಛಂದಸ್ಸು ನನ್ನದೇನಿಹುದಿಲ್ಲಿ?
ಕವಿಪಟ್ಟವೆನಗೇಕೆ?- || ಪ್ರತ್ಯಗಾತ್ಮ ||
ನಾನು ಪಂಡಿತನಲ್ಲ; ಪಾಂಡಿತ್ಯವೆನಗಿಲ್ಲ,
ನಾನಂತು ಸುಜ್ಞಾನಿ ಅಲ್ಲವೇ ಅಲ್ಲ
ನಾನೊಬ್ಬ ನಾಡಾಡಿ ನಾಡುನುಡಿಯಭಿಮಾನಿ
ನಾನೊಬ್ಬ ಕನ್ನಡಿಗ- || ಪ್ರತ್ಯಗಾತ್ಮ ||
ಬಾಳಿನಲಿ ಕಂಡುಂಡ ಅನುಭವದ ಸಾರವನು
ನಾಳೆ ಬಹಳ ಮಕ್ಕಳಿಗೆ ನೆರವಾಗಲೆಂದು
ಹಾಳೆಯಲಿ ಬರೆದಿಹೆನು ಚುಟುಕರೂಪದಿ ಅದನೆ
ಬೀಳುಗಳೆಯಲು ಬೇಡ- || ಪ್ರತ್ಯಗಾತ್ಮ ||
ಚುಟುಕವೆಂಬುದು ಒಂದು ಪದ್ಯ ಜಾತಿ ವಿಶೇಷ
ಜಟಪಟನೆ ಹೊರಬರುವ ಕಿರು ಆಶು ಕವಿತೆ,
ಘಟದೊಳಗೆ ಸಾಗರವ ತುಂಬಿಟ್ಟ ಪರಿಯಂತೆ
ಚುಟುಕವನೆ ಕೋದಿಹೆನು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ