ಪ್ರತ್ಯಗಾತ್ಮ ಚಿಂತನ (ನೇನಂಶಿ) – 59

ಹೆಣ್ಣಿನವರಿಗೆ ನೋವು, ಗಂಡಿನವರಿಗೆ ನಲಿವು
ಹಣ್ಣಾದ ಮುದುಗಣ್ಗಳಿಗೆ ಸೊಂಟ ನೋವು
ಸಣ್ಣ ಮಕ್ಕಳಿಗಂತು ಅದುವೆ ಸುಖದಾಗರವು
ಕಣ್ಣಿಟ್ಟು ಕಾಣ್ ಮದುವೆ- || ಪ್ರತ್ಯಗಾತ್ಮ ||

ಮದು ಮಕ್ಕಳಿಗೆ ತಮ್ಮ ಓಪರನು ಕಾಂಬಾಸೆ
ಮೊದಲು ಊಟದ ಆಸೆ ಬಂದ ನೆಂಟರಿಗೆ
ಮದಿರಾಕ್ಷಿಯರ್ಗೆಲ್ಲ ಮೈಸಿರಿಯ ಮೆರೆವಾಸೆ
ಇದು ಕಣಾ ಮದುವೆ ಮನೆ- || ಪ್ರತ್ಯಗಾತ್ಮ ||

ಮುದುಕರನು ನೀ ಕಂಡು ಮುದಿಗೊರಡು ಎನ್ನದಿರು
ಮದುವೆ ಮೊದಲಾದಂಥ ಶುಭ ಕಾರ್ಯಗಳಲಿ
ವಿಧಿ ವಿಧಾನವ ತಿಳಿಸಿ ಮನೆಯ ಮುನ್ನಡೆಸಲಿಕೆ
ಮುದುಕರನುಭವ ಬೇಕು- || ಪ್ರತ್ಯಗಾತ್ಮ ||

ಮನೆ ಮಂದಿ ಹೊರ ಹೋಗೆ ಮನೆಯ ಕಾಯುವರಲ್ತೆ!
ಮನೆಯವರು ನಿದ್ರಿಸಲು ಇವರು ನಿದ್ರಿಸರು
ದಣಿವಾಗಿ ಕೆಮ್ಮುತಿರೆ ಅತ್ತ ಸುಳಿಯನು ಕಳ್ಳ
ನೆನೆ ಅವರ ಉಪಕಾರ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post

Leave a Reply

Your email address will not be published. Required fields are marked *