ಶಿಕ್ಷಕನು ಮಕ್ಕಳಿಗೆ ಶಿಕ್ಷಣವ ಕೊಡಬೇಕು
ಶಿಕ್ಷೆ ಕೊಡುವುದು ಅಲ್ಲ ಶಿಕ್ಷಕನ ಕೆಲಸ
ಶಿಕ್ಷಕನು ತತ್ವವಿದ, ಮಾರ್ಗದರ್ಶಿಯು, ಗೆಳೆಯ,
ಮೋಕ್ಷದಾಯಕ ಕಾಣ !- || ಪ್ರತ್ಯಗಾತ್ಮ ||
ದಕ್ಷತೆಯೆ ಇಲ್ಲದಿಹ ಶಿಕ್ಷಕರ ನೇಮಿಸಲು
ಲಕ್ಷಾವಧಿಯ ಮುಗ್ಧ ಬಾಲಕರ ಬಾಳು
ದಿಕ್ಸೂಚಿಯಿಲ್ಲದಿಹ ನೌಕೆಯಂತಾಗುವುದು.
ದಿಕ್ಕು ತೋರುವರಾರು?- || ಪ್ರತ್ಯಗಾತ್ಮ |||
ಮನೆ ಬಾಡಿಗೆಗೆ ಕೊಡುವ ಮುನ್ನ ಪರಿಕಿಸಿ ನೋಡು
ಮನೆ ಬೇಡಿ ಬರುವವನು ಕಾಲಿಗೆರಗುವನು
ಮನೆ ಕೊಟ್ಟು ಬಳಿಕವನ ಕಾಲ ಹಿಡಿಯುವೆಯೇನು ?
ನೆನೆದು ಕೊಡು ಯೋಗ್ಯನಿಗೆ- || ಪ್ರತ್ಯಗಾತ್ಮ ||
ಬಾಯಿ ಅಬ್ಬರ ಹೆಚ್ಚು ಬಾಡಿಗೆಯ ಹಣ ಕೊಡನು
ನಾಯಿ ಜೀವನ ನಡೆಸಿ ಹಂಗಿನಲಿ ಬಾಳ್ವ
ಸಾಯಿ ನೀನೆಂದೆಂದು ಒಡೆಯನನೆ ಶಪಿಸುತ್ತ
ಹಾಯಾಗಿ ಮಲಗುವನು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ