ಪ್ರತ್ಯಗಾತ್ಮ ಚಿಂತನ (ನೇನಂಶಿ) – 61

ಬಗೆಬಗೆಯ ಕರ್ಮಫಲ ಭೋಗಿಪುದು ಜೀವಾತ್ಮ
ಜಗದ ಸುಖ ದುಃಖಗಳ ದ್ವಂದ್ವಕೊಳಗಾಗಿ
ನಗು ಅಳುವಿನಿಂ ದೂರ ಪರಮಾತ್ಮ ನಿರ್ಲಿಪ್ತ
ನಿಗಮ ಸಾರುವುದಿಂತು- || ಪ್ರತ್ಯಗಾತ್ಮ ||

ಜೇಡಿ ಮಣ್ಣನು ತಂದು ಬಗೆಬಗೆಯ ಬೊಂಬೆಗಳ
ಮಾಡಿರಲು ಇದು ಆನೆ, ಅವು ನಾಯಿ-ಕುದುರೆ
ಕೂಡಿಸಿದರೆಲ್ಲವನು ಮತ್ತೆ ಮಣ್ಣಿನ ಮುದ್ದೆ
ನೋಡು ಒಂದೇ ಸತ್ಯ- || ಪ್ರತ್ಯಗಾತ್ಮ ||

ಒಂದರಿಂ ಹಲವಾರು ಹಣತೆಗಳ ಹೊತ್ತಿಸಿರೆ
ಒಂದೊಂದು ಬೇರೆಂಬ ಮಾಯೆ ಕವಿಯುವುದು
ಒಂದೆ ಹಣತೆಯೊಳೆಲ್ಲ ಬತ್ತಿ ಸೇರಿಸೆ ಜ್ಯೋತಿ
ಒಂದೆ ತಾನ್ ಎರಡಿಲ್ಲ- || ಪ್ರತ್ಯಗಾತ್ಮ ||

ಎಚ್ಚರಾಗುವವರೆಗೂ ದಿಟದಂತೆ ತೋರುವುದು
ಎಚ್ಚೆತ್ತು ಕಂದೆರೆಯೆ ಕನಸು ಬರಿ ಮಿಥ್ಯೆ
ಎಚ್ಚೆತ್ತ ಜ್ಞಾನಿಗಳ ಕಣ್ಗೆ ಈ ಜಗವೆಲ್ಲ
ಅಚ್ಚರಿಯ ಕನಸಂತೆ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ

Related post