ಪ್ರತ್ಯಗಾತ್ಮ ಚಿಂತನ
ಕಾಲ ಕಾಲಕೆ ಮೋಡ ಮಳೆಯ ಸುರಿಸುತ್ತಿರಲಿ
ಆಗೆಲ್ಲ ಬೆಳೆಯು ಸಾಕಷ್ಟು ಬರಲಿ
ಸಾಲಗಾರನ ಕೈಗೆ ಸಿಲುಕದೆ ಕೃಷೀವಲನ
ಬಾಳು ಹಸನಾಗಿರಲಿ- || ಪ್ರತ್ಯಗಾತ್ಮ ||
ಜೀವ ಜಂತುಗಳೆಲ್ಲ ಜೀವಿಸಲಿ ಸುಖವಾಗಿ
ದೇವೇಂದ್ರ ವರ್ಷಿಸಲಿ ಕಾಲ ಕಾಲಕ್ಕೆ
ಬೇವೊಂದೆ ಬಾಳಿನಲಿ ಇರದೆ, ಬೆಲ್ಲವೂ ಇರಲಿ
ನೋವಿರದೆ ಸುಖವಿರಲಿ- || ಪ್ರತ್ಯಗಾತ್ಮ ||
ಮನೆಯ ಅಂಗಳದಲ್ಲಿ ಮಕ್ಕಳಾಡುತಲಿರಲಿ
ಮನೆಯೊಳಗೆ ನಡೆದಿರಲಿ ನಿತ್ಯ ಶುಭಕಾರ್ಯ
ಮನೆ ಮಂದಿ ಅನ್ಯೋನ್ಯ ಭಾವದಲಿ ಬಾಳಿರಲಿ
ಮನೆ ತುಂಬ ನಗುವಿರಲಿ- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ