ಪ್ರತ್ಯಗಾತ್ಮ ಚಿಂತನ
ಇಳಿಹೊತ್ತು ಸಂಜೆಯಲಿ ಮಬ್ಬುಗತ್ತಲೆಯಲ್ಲಿ
ಹುಲು ಸರವಿ ಬಿದ್ದಿರಲು ಹುತ್ತವನು ಬಳಸಿ
ಎಲರುಣಿಯ ಭ್ರಮೆ ಬರಲು ಅದನು ಪರಿಕಿಸಬೇಕು
ಬಳಿಕವೇ ದಿಟದರಿವು !- || ಪ್ರತ್ಯಗಾತ್ಮ ||
ಬ್ರಹ್ಮನೆಂದರೆ ನಾಲ್ಕು ಮೊಗದ ಬ್ರಹ್ಮನು ಅಲ್ಲ
ಬ್ರಹ್ಮಾಂಡವ್ಯಾಪಿ ಆ ಬ್ರಹ್ಮ ಪರವಸ್ತು
ಬ್ರಹ್ಮ ಚಿದ್ಘನ ವಸ್ತು; ನಿರ್ಗುಣ, ನಿರಾಕಾರ,
ಬ್ರಹ್ಮ ಚೈತನ್ಯವೈ- || ಪ್ರತ್ಯಗಾತ್ಮ ||
ಬಳ್ಳಿ ಮಿಂಚಿನ ಹೊಳಪು; ಬಣ್ಣ ಬಣ್ಣದ ಮುಗಿಲು
ಹುಲ್ಲ ಮೇಲಿನ ಹನಿಯು; ಮಳೆಬಿಲ್ಲ ಸೊಬಗು
ಎಲ್ಲ ಕ್ಷಣ ಭಂಗರವು, ವೈರಾಗ್ಯ ಸಹಕಾರಿ
ಬಲ್ಲ ಜ್ಞಾನಿಯೆ ಬಲ್ಲ ! – || ಪ್ರತ್ಯಗಾತ್ಮ ||
ನೀರ ಮೇಲಣ ಗುಳ್ಳೆ; ಗಾಳಿಗೊಡ್ಡಿದ ಸೊಡರು
ಕ್ರೂರ ಸರ್ಪದ ಬಾಯ್ಗೆ ಸಿಲುಕಿರುವ ಕಪ್ಪೆ
ಪಾರಿಜಾತದ ಹೂವು ಎಷ್ಟು ಹೊತ್ತಿರಬಹುದು ?
ಮೂರು ಗಳಿಗೆಯ ಬಾಳು- || ಪ್ರತ್ಯಗಾತ್ಮ ||
ಎನ್. ಶಿವರಾಮಯ್ಯ (ನೇನಂಶಿ)
ವಾಚನ: ಗೌರಿದತ್ತ
1 Comment
ಪ್ರತ್ಯಾಗಾತ್ಮ ಎಂದಿನಂತೆ ಅದ್ಭುತ.. No words