ಅರಿಗಳನು ವೈರಿಯೆಂದೆಂದಿಗೂ ಜರೆಯದಿರು
ಗುರುವಾಗಬಹುದವರೆ ನಿನ್ನ ಏಳಿಗೆಗೆ
ಗುರು ವಸಿಷ್ಠರ ಎದುರು ಬ್ರಹ್ಮರ್ಷಿಯಾದನಲ !
ಅರಸು ವಿಶ್ವಾಮಿತ್ರ- || ಪ್ರತ್ಯಗಾತ್ಮ ||
ಛಲವ ಬಲ್ವಿಡಿವಿಡಿದ ಕೌರವಗೆ ಕೇಡಾಯ್ತು,
ಛಲವನುದಾತ್ತೀಕರಿಸಿ ಕುಶಿಕ ಋಷಿಯಾದ,
ಛಲವಿರಲಿ ಹಠವಿರಲಿ ಅದನುದಾತ್ತೀಕರಿಸು
ಗೆಲುವು ನಿನಗಾದೀತು- || ಪ್ರತ್ಯಗಾತ್ಮ ||
ತಪವಗೈದವರೆಲ್ಲ ಸತ್ಪುರುಷರೇನಲ್ಲ
ತಪಗೈದು ವರ ಪಡೆದ ದುರ್ಜನರೆ ಹೆಚ್ಚು
ಜಪತಪಾದಿಗಳೆಲ್ಲ ಸ್ವಾರ್ಥ ಸಾಧನೆಗಲ್ಲ.
ಉಪಕೃತಿಗೆ ಮೀಸಲಿಡು- || ಪ್ರತ್ಯಗಾತ್ಮ ||
ಹರನ-ಬ್ರಹ್ಮನ ಕುರಿತು ಘೋರ ತಪವಾಚರಿಸಿ
ಪರಪೀಡನೆಗೆ ವರವ ಪಡೆದ ರಾವಣನು
ಹರಸಾಹಸವ ಮಾಡಿ ಮಣ್ಣು ಮುಕ್ಕಿದ ಕಡೆಗೆ
ಪರಕಿಲ್ಲ ಇಹಕಿಲ್ಲ- || ಪ್ರತ್ಯಗಾತ್ಮ ||

ಎನ್. ಶಿವರಾಮಯ್ಯ ‘ನೇನಂಶಿ’
ವಾಚನ – ಗೌರಿ ದತ್ತ ಏನ್ ಜಿ