ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕ – ಜಯತೀರ್ಥ

ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕ – ಜಯತೀರ್ಥ

ರಂಗಭೂಮಿಯ ಹಿನ್ನಲೆಯಲ್ಲಿ ಬಂದಂತಹ ಭರವಸೆಯ ಕನ್ನಡದ ಸಿನಿಮಾ ನಿರ್ದೇಶಕರಲ್ಲಿ ಜಯತೀರ್ಥರವರು ಸಹ ಒಬ್ಬರು. ಮುಂದಿನ ವಾರ ಬಿಡುಗಡೆಗೊಳ್ಳುತ್ತಿರುವ ಇವರು ನಿರ್ದೇಶಿಸಿರುವ “ಕೈವ” ಚಿತ್ರದ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿರ್ದೇಶಕರು 1983 ರ ಕರಗ ಉತ್ಸವದಲ್ಲಿ ನೆಡೆದ ಒಂದು ಪ್ರಮುಖ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಆ ಘಟನೆಯ ಪಾತ್ರಧಾರಿಗಳನ್ನು ಭೇಟಿ ಮಾಡಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.

2020 ರಲ್ಲಿ “ಆಕೃತಿ” ಕನ್ನಡ ಅಂತರ್ಜಾಲ ಪತ್ರಿಕೆಗೆ ನಾನು ಹಾಗು ನನ್ನ ಗೆಳೆಯ ಸುನಿಲ್ ಗುಂಡೂರಾವ್ ಸೇರಿ ಮಾಡಿದ ಸಂದರ್ಶನದಲ್ಲಿ ಜಯತೀರ್ಥರವರು ತಮ್ಮ ರಂಗಭೂಮಿಯಿಂದ ಸಿನಿಮಾ ಪ್ರಯಾಣವನ್ನು ಹಾಗು ತಾವು ನಿರ್ದೇಶಿಸಿದ ಚಲನಚಿತ್ರಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

ರಂಗಪ್ರಯಾಣ

ಮೇ 8, 1977 ರಲ್ಲಿ ಹುಟ್ಟಿದ ಜಯತೀರ್ಥರವರು ಬೆಂಗಳೂರಿನವರು, ಓದಿದ್ದು 8 ನೇ ತರಗತಿಯವರೆಗು ಮಾತ್ರ. ಚಿಕ್ಕಂದಿನಿಂದಲೇ ಸಿನಿಮಾ ರಂಗಭೂಮಿಯತ್ತ ಆಕರ್ಷಣೆ ಬೆಳೆಸಿಕೊಂಡಿದ್ದ ಜಯತೀರ್ಥರವರು ತಮ್ಮ ಹದಿನಾರನೇ ವಯಸ್ಸಿನಲ್ಲಿ ಹಿರಿಯ ರಂಗಭೂಮಿ ಕಲಾವಿದ ಎ.ಎಸ್. ಮೂರ್ತಿ (ಜಿಗಿ ಜಿಗಿ ಗೊಂಬೆ ಆಟ) ಯವರ ಪರಿಚಯವಾಗಿ ಅವರ “ಅಭಿನಯ ತರಂಗ”ಕ್ಕೆ ಸೇರಿ ಅಲ್ಲಿ ನಾಟಕಗಳಿಗೆ ಕಥೆ ಸಂಭಾಷಣೆ ಬರೆಯುವುದು, ನಟರಿಗೆ ಬಣ್ಣ (ಮೇಕಪ್) ಹಚ್ಚುವುದು, ವಸ್ತ್ರವಿನ್ಯಾಸ ಇನ್ನು ಅನೇಕ ಬಗೆಯ ಕೆಲಸಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯ ವಿವಿಧ ಆಯಾಮಗಳನ್ನು ಪರಿಚಯ ಮಾಡಿಕೊಂಡರು. ಈ ಎಲ್ಲಾ ಕೆಲಸಗಳ ನಡುವೆ ಅಲ್ಲಿನ ನಾಟಕಗಳಲ್ಲಿ ಅಭಿನಯಿಸುತ್ತ ರಂಗಭೂಮಿಯ ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿಯನ್ನು ಸಹ ಕೊಡುತ್ತಿದ್ದರು. “ರಂಗಭೂಮಿ ಎಂದರೆ ಅದು ದೊಡ್ಡ ವಿಶ್ವವಿದ್ಯಾಲಯವಿದ್ದ ಹಾಗೆ, ಸಮಾಜದಲ್ಲಿನ ವ್ಯವಸ್ಥೆ ಶಾಲೆಯ ಮೂಲಕ ಓದು ಬರಹ, ಅದಕ್ಕೊಂದು ಸರ್ಟಿಫಿಕೇಟು ಉದ್ಯೋಗ ಕೊಟ್ಟರೆ ರಂಗಭೂಮಿಯಲ್ಲಿ ಕಲಿತವರು ಎಲ್ಲಿ ಬೇಕಾದರೂ ಬದುಕಬಹುದು” ಎಂಬುದು ಜಯತೀರ್ಥರವರ ಅಭಿಪ್ರಾಯ.

ರಂಗಭೂಮಿಯಲ್ಲಿ ಜಯತೀರ್ಥರವರು ಗ್ರೀನ್ ರೂಮ್ ನಾಣಿ, ಜಿ ಕೆ ಗೋವಿಂದರಾವ್, ಆರ್ ನಾಗೇಶ್, ಬಿ ಸಿ ಚಂದ್ರಶೇಖರ್ ಇನ್ನೂ ಮುಂತಾದ ರಂಗದಿಗ್ಗಜರ ಪರಿಚಯವಾಯಿತು. ಫ್ರೆಂಚ್ ಅಸಂಗತ ನಾಟಕಗಳು, ಕೈಲಾಸಂ, ಕುವೆಂಪು ರವರ ನಾಟಕಗಳನ್ನು ರಂಗತೆರೆಯಲ್ಲಿ ವಿಭಿನ್ನವಾಗಿ ನಿರ್ದೇಶಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡರು. ಇದಲ್ಲದೆ ಎಸ್ ಮೂರ್ತಿ ರೊಡನೆ ಬೀದಿ ನಾಟಕಗಳಲ್ಲಿ ತೊಡಗಿಸಿಕೊಂಡರು. ಕ್ರಮೇಣ ಬೀದಿ ನಾಟಕಗಳು ಜನರನ್ನು ಆಕರ್ಷಿಸಿದಾಗ “ನನ್ನೆದೆಯ ಬೀದಿ ನಾಟಕ” ಎಂದು ತಮ್ಮದೇ ತಂಡವೊಂದನ್ನು ಕಟ್ಟಿ ಆಗಿನ ಸಾಮಾಜಿಕ ಪಿಡುಗುಗಳಾದ ಹೆಣ್ಣು ಬ್ರೂಣ ಹತ್ಯೆ, ಬಾಲಕಾರ್ಮಿಕತನ, ವರದಕ್ಷಿಣೆ ಯಂತಹ ಸಮಸ್ಯೆಗಳ ಮೇಲೆ ಸಣ್ಣ ಸಣ್ಣ ನಾಟಕಗಳನ್ನು ಬರೆದು ಸಾಮಾಜಿಕ ಅರಿವನ್ನು ಮೂಡಿಸಿದರು. ಬೀದಿ ನಾಟಕಗಳ ಸವಾಲು ಏನೆಂದರೆ ಅಲ್ಲಿ ತಂಡವು ಯಾವುದೇ ತರಹದ ಮೇಕಪ್ ಆಗಲಿ ಅಥವಾ ಸೆಟ್ಟುಗಳಾಗಲಿ ಉಪಯೋಗಿಸದೆ ಎಲ್ಲಾ ಕಲಾವಿದರು ತಮ್ಮ ದನಿಯನ್ನು ಉಪಯೋಗಿಸಿ ಹಾವ ಭಾವದಿಂದ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಬೇಕಾಗಿತ್ತು. ಬೀದಿ ನಾಟಕಗಳನ್ನು ಮಾಡುತಿದ್ದಾಗ ಸಾಮಾಜಿಕ ಸಮಸ್ಯೆಗಳ ಭಾಗವಾಗಿದ್ದ ಕೆಲವರು ಇದನ್ನು ಸಹಿಸಲಾರದೆ ಹೊಡೆಯಲಿಕ್ಕೆ ಬಂದರೆ ಬಹಳಷ್ಟು ಜನರು ಇದರಿಂದ ಪ್ರಭಾವಿತರಾಗಿ ತಂಡವನ್ನು ಕರೆದೊಯ್ದು ಸನ್ಮಾನಗಳನ್ನು ಮಾಡಿದರು.

ಬೀದಿ ನಾಟಕಗಳು ಜನಪ್ರಿಯವಾಗಿ ಕಲ್ಕತ್ತಾದಿಂದ ಅಖಿಲ ಭಾರತೀಯ ನಾಟಕ ಪ್ರದರ್ಶನದ ಕಾರ್ಯಕ್ರಮಕ್ಕಾಗಿ ಒಂದು ನಾಟಕ ನಿರ್ದೇಶಿಸಲು ಬಂದ ಕೋರಿಕೆಗೆ ಜಯತೀರ್ಥರವರು ಒಂದು ನಾಟಕವನ್ನು ಮಾಡಿಕೊಟ್ಟರು, ಅದಕ್ಕೆ ಮೊದಲ ಬಹುಮಾನ ಸಹ ಬಂದಿತು. ನಂತರ ಮಂಜುನಾಥ್ ಬಡಿಗೇರ್ (ಜಿ ವಾಹಿನಿಯ ಡ್ರಾಮ ಜೂನಿಯರ್ ನಿರ್ದೇಶಕ) ಮುನೇಶ್ ಬಡಿಗೇರ್, ಬಿ ಎಮ್ ಗಿರಿರಾಜ್ (ಜಟ್ಟ ಸಿನಿಮಾ ನಿರ್ದೇಶಕರು) ಹೀಗೆ ಅನೇಕರ ಜೊತೆ ಸೇರಿಕೊಂಡು ದೇಶಾದ್ಯಂತ ಅನೇಕ ನಾಟಕಗಳನ್ನು ಪ್ರದರ್ಶಿಸಿದರು.

ಸಿನಿಮಾ ಪ್ರಯಾಣ

ನಮ್ಮ ದೇಶದಲ್ಲಿ ಪ್ರಯೋಗಾತ್ಮಕ ಚಿತ್ರಗಳು ಬಹಳ ಕಡಿಮೆ ಎಂದು ಅರಿತಿದ್ದ ಜಯತೀರ್ಥರವರು ಫ್ರೆಂಚ್ ಮೂವಿಗಳು, ಚಾಪ್ಲಿನ್ ಚಿತ್ರಗಳು, ಮಹಾಯುದ್ಧದ ಕುರಿತಾದ ಚಲನಚಿತ್ರಗಳು ಅದರಲ್ಲಿನ ವಿಚಾರಗಳು ಇನ್ನು ಅನೇಕ ಗೊತ್ತೇ ಇರದ ಭಾಷೆಯ ಶ್ರೇಷ್ಠ ಚಿತ್ರಗಳಿಂದ ಆಕರ್ಷಿತರಾಗಿದ್ದರು. ಕ್ರಮೇಣ ಸಿನಿಮಾ ತಂತ್ರಜ್ಞಾನವನ್ನು ಕಲಿತು ೨೦೦೫ ರಲ್ಲಿ ‘ಹಸಿವು’ ಎಂಬ ಕಿರು ಚಿತ್ರ ನಿರ್ದೇಶಿಸಿದರು. “ಹಸಿವು” ಕಿರುಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ಯಾರಿಸ್ ಚಿತ್ರೋತ್ಸವದಿಂದ ಉತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಜಾನಪದ ಮೇಳದಲ್ಲಿ ಆಕರ್ಷಸಿದ ಅಸ್ಸಾಂನ ಬಿಹು ಕುಣಿತದ ವಿಷಯವಾಗಿ ಅಧ್ಯಯನಿಸಿ ಅದೇ ವಿಷಯವಾಗಿ ಪ್ರೀತಿಯ ವ್ಯಾಖ್ಯಾನ ಕೊಟ್ಟು ತಮ್ಮ ಮೊದಲ ಚಿತ್ರ “ಒಲವೇ ಮಂದಾರ” ವನ್ನು ನಿರ್ದೇಶಿಸಿದರು. ಈ ಚಿತ್ರ ಜನ ಮನ್ನಣೆಗಳಿಸಿ ಹದಿನೆಂಟು ಪ್ರಶಸ್ತಿಗಳನ್ನು ಬಾಚಿಕೊಂಡಿತು. “ಟೋನಿ” ಚಿತ್ರದಲ್ಲಿ ಮೂರು ಉಪಕತೆಗಳನ್ನು ಮೂಲ ಕಥೆಯೊಡನೆ ಸೇರುವಂತ ಪ್ರಯೋಗವನ್ನು ಮಾಡಿದರು. ನಂತರದ ತಮ್ಮ ಬುಲೆಟ್ ಬಸ್ಯಾ ಚಿತ್ರಗಳಲ್ಲಿ ಹಾಸ್ಯಕ್ಕೆ ಹೊತ್ತು ಕೊಟ್ಟು, ಬ್ಯೂಟಿಫುಲ್ ಮನಸ್ಸುಗಳು, ವೆನಿಲಾ ಸಿನೆಮಾಗಳಲ್ಲಿ ಮಾಧ್ಯಮದ ದುರುಪಯೋಗ ಹಾಗು ಡ್ರಗ್ಸ್ ನಿಂದ ಯುವಜನತೆ ದಾರಿತಪ್ಪುತ್ತಿರುವುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದರು.

ರೆಟ್ರೋ ಶೈಲಿಯ “ಬೆಲ್ ಬಾಟಮ್” ಚಿತ್ರದ ಯಶಸ್ಸು ಜಯತೀರ್ಥ ರವರನ್ನು ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಎಂಬ ಹೆಸರನ್ನು ತಂದುಕೊಟ್ಟಿತು. ಚಿತ್ರವೂ ಅಪಾರ ಯಶಸ್ಸನ್ನು ಕಂಡು ಇತರೆ ಭಾಷೆಗಳಲ್ಲಿ ಡಬ್ಬ್ ಆಯಿತು. ಹೊಸಬರನ್ನೇ ಹಾಕಿಕೊಂಡು “ಬನಾರಸ್” ಚಿತ್ರದಲ್ಲಿ ಕಾಶಿಯನ್ನು ಅದ್ಭುತವಾಗಿ ತೆರೆಯ ಮೇಲೆ ತೋರಿಸಿದ ಜಯತೀರ್ಥರವರು ಪ್ರೀತಿ, ವಿರಹ, ಹಾಸ್ಯ, ವಿಜ್ಞಾನದ ವಿಷಯಗಳನ್ನು ಚಿತ್ರದಲ್ಲಿ ಅಳವಡಿಸಿದ್ದಾರೆ. ಇದೀಗ ಅವರ ಹೊಸ ಚಿತ್ರ “ಕೈವ” ಸಿದ್ದವಾಗಿ ಮುಂದಿನ ವಾರ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರ ಕೂಡ ರೆಟ್ರೋ ಶೈಲಿಯಲ್ಲಿಯೇ ಮೂಡಿಬಂದಿರುವುದು ಖಚಿತ.

“ಕೈವ” ಚಿತ್ರವು ಯಶಸ್ವಿಯಾಗಿ ಪ್ರೇಕ್ಷಕರನ್ನು ತಲುಪಿ ನಿರ್ದೇಶಕ ಜಯತೀರ್ಥರವರಿಗೆ ಇನ್ನಷ್ಟು ಹೆಚ್ಚಿನ ಹೆಸರನ್ನು ತಂದುಕೊಡಲೆಂದು ಸಾಹಿತ್ಯಮೈತ್ರಿ ತಂಡವು ಹಾರೈಸುತ್ತದೆ.

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *