ಪ್ಲ್ಯಾಟಿಪಸ್ ಮತ್ತು ಎಕಿಡ್ನಾ

ಪ್ಲ್ಯಾಟಿಪಸ್ ಮತ್ತು ಎಕಿಡ್ನಾ

ಮರಿಗಳಿಗೆ ಜನ್ಮನೀಡಿ ಮೊಲೆಯುಣಿಸುವುದು ಸಾಮಾನ್ಯವಾಗಿ ಸಸ್ತಿನಿಗಳ ಪ್ರಮುಖ ಲಕ್ಷಣ‌, ಇದು ಎಲ್ಲರಿಗೂ ತಿಳಿದಿರುವ ಸಂಗತಿ, ಆದರೆ ಕೆಲವೊಂದು ಸಸ್ತಿನಿಗಳು ಪಕ್ಷಿ ಮತ್ತು ಸರೀಸೃಪಗಳಂತೆ ಮೊಟ್ಟೆಯಿಟ್ಟು ಪಕ್ಷಿಗಳಂತೆ ಕಾವುಕೊಟ್ಟಾದ ಮೇಲೆ ಹೊರಬರುವ ಮರಿಗಳಿಗೆ ಹಾಲುಣಿಸುತ್ತವೆ.

ಈ ವಿಭಾಗದಲ್ಲಿ ಬರುವ ಸಸ್ತಿನಿಗಳನ್ನ ಓವಿಪರಸ್ (Oviparous) ಸಸ್ತಿನಿಗಳು ಎಂದು ಕರೆಯುತ್ತಾರೆ. ಪ್ಲ್ಯಾಟಿಪಸ್ ಮತ್ತು ಎಕಿಡ್ನಾ ಈ ಗುಂಪಿನಲ್ಲಿ ಬರುವ ಪ್ರಮುಖ ಸಸ್ತಿನಿಗಳು.

ಪ್ಲ್ಯಾಟಿಪಸ್

ಪ್ಲಾಟಿಪಸ್ ಗ್ರೀಕ್ ಮೂಲದ ಪದ. ಮೊನೊಟ್ರೀಮ್‌ (Monotreme) ವಿಭಾಗದಲ್ಲಿ ಬರುವ ಪ್ರಾಣಿಗಳಲ್ಲಿ ಪ್ಲಾಟಿಪಸ್ ಮತ್ತು ಎಕಿಡ್ನಾ ಮಾತ್ರವೇ ಇರುವುದು. ಬಾತುಕೋಳಿಯಂತೆ ಕೊಕ್ಕು, ಬೀವರ್ ನ ಬಾಲ, ನೀರು ನಾಯಿಯಂತೆ ದೇಹದ ಜೊತೆಗೆ ನೀರಲ್ಲಿ ಸಲೀಸಾಗಿ ಈಜಲು ಜಾಲಪಾದಗಳನ್ನ ಹೊಂದಿದ ಇದರ ವೈಜ್ನಾನಿಕ ಹೆಸರು “ಆರ್ನಿಥೋರಿಂಚಸ್ ಅನಟೀನಸ್”.

ಆಸ್ಟ್ರೇಲಿಯಾ, ನ್ಯೂಗಿನಿಯಾದಲ್ಲಿ ಕಂಡುಬರುವ ಬಿಸಿರಕ್ತದ ಪ್ರಾಣಿಗಳಾದ ಇವು ಮೂತ್ರಜನಕಾಂಗ ಜೀರ್ಣಾಂಗ ಮತ್ತು ಸಂತಾನೋತ್ಪತ್ತಿಗಾಗಿ ಒಂದೇ ದ್ವಾರವನ್ನ ಹೊಂದಿವೆ.

ನೀರಿನಲ್ಲಿ ಕಿವಿ ಮತ್ತು ಕಣ್ಣುಗಳನ್ನ ಮುಚ್ಚಿಕೊಂಡು ಸರಾಗವಾಗಿ ಈಜಬಲ್ಲ ಪ್ಲಾಟಿಪಸ್ ಎಲೆಕ್ಟ್ರೋರಿಸೆಪ್ಷನ್ ಸಂವೇದನದ ಮುಕಾಂತರ ಹುಳುಗಳು, ಜಂತುಗಳು, ಸಿಹಿನೀರಿನ ಸೀಗಡಿ ಹಾಗೂ ನದಿಯ ಮಣ್ಣಿನಡಿಯಲ್ಲಿ ಜಂತುಗಳನ್ನ ತಮ್ಮ ಕೊಕ್ಕು ಉಗುರುಗಳಿಂದ ಬೇಟೆಯಾಡುತ್ತವೆ. ನಿಶಾಚರಿಗಳಾದ ಪ್ಲಾಟಿಪಸ್ ದಿನಕ್ಕೆ 14 ಗಂಟೆ ನಿದ್ರಿಸುತ್ತವೆಯಲ್ಲದೇ ಪ್ರತಿದಿನ ತಮ್ಮ ದೇಹದ 20 % ನಷ್ಟು ತೂಕದಷ್ಟು ಆಹಾರ ಸೇವಿಸುತ್ತವೆ. 45 ರಿಂದ 50 Cm ಉದ್ದ , 2.5 kg ತೂಗುವ ಇವುಗಳ ಜೀವಿತಾವದಿ, 12 ವರ್ಷಗಳು. ಮೊದಲು ಇವನ್ನ ತುಪ್ಪಳಕ್ಕಾಗಿ ಬೇಟೆಯಾಡುತ್ತಿದ್ದರಾದರೂ ಆಸ್ಟ್ರೇಲಿಯಾ ದೇಶ ಇವುಗಳನ್ನ ಸಂರಕ್ಷಿಸಿದೆ.

ಎಕಿಡ್ನಾ

ಒರಟಾದ ಕೂದಲು ಮತ್ತು ಮೈಮೇಲೆ ಮುಳ್ಳುಗಳನ್ನ ಹೊಂದಿರುವ, ನೋಡಲು ವಿಲಕ್ಷಣವಾಗಿ ಮುಳ್ಳುಹಂದಿಯಂತೆ ಕಂಡುಬರುವ, ಮಧ್ಯಮ ಗಾತ್ರದ ಉದ್ದನೆಯ ಕೊಕ್ಕನ್ನ ಹೊಂದಿರುವ ಎಕಿಡ್ನಾ ಗಳು ಏಕಾಂಗಿಯಾಗಿ ಜೀವಿಸುವ ಪ್ರಾಣಿಗಳು. ಎಕಿಡ್ನಾ ಸಹ ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾಗಳಲ್ಲಿ ಕಂಡುಬರುತ್ತವೆ.

6 ಕೇಜಿ ತೂಗುವ ಗಂಡು ಎಕಿಡ್ನಾ ಹೆಣ್ಣಿಗಿಂತ ಹೆಚ್ಚು ತೂಗುತ್ತದೆಯಲ್ಲದೇ ಗಾತ್ರದಲ್ಲಿ 25 % ದೊಡ್ಡದಾಗಿರುತ್ತದೆ. ಹೆಣ್ಣು ಎಕಿಡ್ನಾ ವರ್ಷಕ್ಕೆ ಒಂದು ಮೊಟ್ಟೆಯಿಟ್ಟು 10 ದಿನಗಳಲ್ಲಿ ಮರಿ ಮಾಡಿ ಕಾಂಗರೋದಂತೆ ತನ್ನ ದೇಹದ ಚೀಲದಲ್ಲಿ ಇರಿಸಿಕೊಂಡು 6 ತಿಂಗಳು ಹಾಲುಣಿಸಿ ಬೆಳೆಸಿದ ನಂತರ ಮರಿಯನ್ನು ಸ್ವತಂತ್ರವಾಗಿ ಬಿಟ್ಟು ತೊರೆಯುತ್ತದೆ.

ಒಣ ಪ್ರದೇಶದಲ್ಲಿ ವಾಸಿಸುವ ಎಕಿಡ್ನಾಗಳು ನೀರಿನಲ್ಲಿ ಸಲೀಸಾಗಿ ಸಮರ್ಥವಾಗಿ ಈಜಬಲ್ಲವು. ದೊಡ್ಡ ಉಗುರು ಬಲವಾದ ಚಿಕ್ಕ ಕಾಲುಗಳನ್ನ ಹೊಂದಿರುತ್ತವೆ. ಹಿಮ್ಮುಖವಾಗಿರುವ ಇವುಗಳ ಹಿಂಗಾಲುಗಳು ಮಣ್ಣನ್ನ ಅಗೆಯಲು ಸಹಾಯಕವಾಗಿವೆ. ಸಣ್ಣದಾದ ಬಾಯಿಯಿದ್ದು ದವಡೆಗಳಲ್ಲಿ ಹಲ್ಲುಗಳಿರುವುದಿಲ್ಲ. ಅಂಟಿನಿಂದ ಕೂಡಿದ ಉದ್ದವಾದ ನಾಲಿಗೆಯಿಂದ ಎಲೆಕ್ಟ್ರೋರಿಸೆಪ್ಷನ್ ಸಂವೇದನೆಯ ಮುಖಾಂತರ ಇರುವೆಗಳನ್ನ ಎಳೆದೆಳೆದು ತಿನ್ನುತ್ತವೆಯಾದ್ದರಿಂದ ಇವಕ್ಕೆ ಮುಳ್ಳು ಇರುವೆ ಬಾಕ ( Spiny anteater) ಎಂತಲೂ ಕರೆಯುತ್ತಾರೆ.

ಮೃತ್ಯುಂಜಯ ನ. ರಾ

Related post