ಪ. ಸ. ಕುಮಾರ್ ರವರ ಎಡಗೈ ಚಿತ್ರಕಲಾ ಪ್ರದರ್ಶನ

ಪ. ಸ. ಕುಮಾರ್ ರವರ ಎಡಗೈ ಚಿತ್ರಕಲಾ ಪ್ರದರ್ಶನ

ಪ್ರದರ್ಶನ: 10.11.2023 ರಿಂದ 27.11.2023
ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 6ರ ವರೆಗೆ
ಸ್ಥಳ: ಆರ್ಟ್ ಹೌಜ್, ಪ್ಯಾಲೇಸ್ ರಸ್ತೆ,
ವಸಂತನಗರ, (ಮೌಂಟ್ ಕಾರ್ಮೆಲ್ ಕಾಲೇಜು ಹತ್ತಿರ)
ಬೆಂಗಳೂರು

ಮಾಮೂಲಾಗಿ ಬಲಗೈ ಅಥವಾ ಅಪರೂಪಕ್ಕೆ ಎಡಗೈನಲ್ಲಿ ಚಿತ್ರ ಬರೆಯುವುದು ವಾಡಿಕೆ. ಆದರೆ ನಮ್ಮ ನಾಡಿನ ಹಿರಿಯ ಚಿತ್ರ ಕಲಾವಿದರಾದ ಪ ಸ ಕುಮಾರ್ ಅವರು ಎರಡೂ ಕೈಗಳಲ್ಲೂ ರೇಖಾಚಿತ್ರಗಳನ್ನು ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದಾರೆ. ಈ ವಿಷಯ ಬಹುಶಃ ಅವರ ಕಲಾ ಬಳಗದ ವಿನಃ ಉಳಿದ ಕಲಾಸಕ್ತಕರಿಗೆ ತಿಳಿದಿರಲಿಕ್ಕಿಲ್ಲ.‌

ಹೀಗೆ ಎಡಗೈನಲ್ಲಿ ರೇಖಾಚಿತ್ರ ಬರೆಯಲು ಸಂಕಲ್ಪಿಸಿದ ಹಾಗೂ ಸಾಧಿಸಿದ ಕಾರ್ಯವೀಗ 25ನೇ ವರ್ಷದಲ್ಲಿದೆ! ಹಾಗಾಗಿ ಇದು ಕುಮಾರ್ ಅವರ ಈ ಎಡಗೈಯ ಕಲಾ ಸಾಧನೆಯು ರಜತ ಮಹೋತ್ಸವ ವರ್ಷ!

ಬಹುಶಃ ಈ ಕಲಾವಿದರೇ ಇದನ್ನು ಲೆಕ್ಕವಿರಿಸದೇ ಇರಬಹುದು. ಆದರೆ ಈ ಸಾಧನೆಯ ಹಿಂದೆ ಒಂದು ದುರಂತ ಕತೆಯೂ ಅಡಗಿದೆ.

‘ಮನಸ್ಸಿದ್ದರೆ ಮಾರ್ಗ’ ಎನ್ನುವುದನ್ನು ಈ ಕಲಾವಿದರ ಆ ರೋಚಕ ಕತೆಯು ತೆರೆದಿಡುತ್ತದೆ.

ಕನ್ನಡ ನಾಡಿನ ಖ್ಯಾತ ಚಿತ್ರಕಲಾವಿದ ಪ ಸ ಕುಮಾರ್ ಅವರ ರೇಖೆಗಳ ಮಾಂತ್ರಿಕತೆಯು ಚಿತ್ರಕಲೆಯನ್ನು ಇಷ್ಟ ಪಡುವವರಿಗೆಲ್ಲಾ ಗೊತ್ತಿರುವ ವಿಚಾರವೇ ಸರಿ. ಚಿತ್ರಾಸಕ್ತರಷ್ಟೇ ಅಲ್ಲದೇ ಕತೆ, ಕಾದಂಬರಿ ಹಾಗೂ ಕವಿತೆಗಳ ಪುಸ್ತಕಗಳನ್ನು ಓದುವ ಪುಸ್ತಕ ಪ್ರಿಯರಿಗೂ ಇವರು ಅಚ್ಚುಮೆಚ್ಚು.

ಅದಕ್ಕೆ ಕಾರಣ ಪ ಸ ಕುಮಾರ್ ಅವರು ಕನ್ನಡ ಪುಸ್ತಕ ಲೋಕದ ಬಹುಪಾಲು ಪುಸ್ತಕಗಳಿಗೆ ಮುಖಪುಟಗಳ ವಿನ್ಯಾಸ ಹಾಗೂ ರೇಖಾಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಇವರಿಂದ ಮುಖಪುಟ ವಿನ್ಯಾಸ ಮಾಡಿಸಿದರಷ್ಟೇ ಮಾರುಕಟ್ಟೆಯಲ್ಲಿ ಆ ಕೃತಿಗೆ ಮನ್ನಣೆ ಹಾಗೂ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಪ್ರತೀತಿ ಇತ್ತು. ಅಲ್ಲದೇ ಪ್ರಜಾಮತ ಹಾಗೂ ಕನ್ನಡಪ್ರಭಗಳಲ್ಲಿನ ಅವರ ಸಾಂದರ್ಭಿಕ ಚಿತ್ರಗಳನ್ನು ನೋಡಿದವರಿಗೆ ಅವರ ರೇಖಾಚಿತ್ರಗಳ ಅನುಭವ ಆಗಿರುತ್ತದೆ.

ಕನ್ನಡದ ಹಿರಿಯ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಿಗೆ ಪ ಸ ಕುಮಾರ್ ಅವರಿಂದ ಮುಖಪುಟ ವಿನ್ಯಾಸಗಳಿಗಾಗಿ ಹಾಗೂ ರೇಖಾಚಿತ್ರಗಳಿಗಾಗಿ ಕಾದು ಕೂತ ಉದಾಹರಣೆಯೂ ಇತ್ತು. ಸ್ನೇಹ ಸ್ಟುಡಿಯೋದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ಕುಮಾರ್ ಅವರು ಕೊಟ್ಟಿದ್ದಾರೆ. ಹೀಗೆ ಹೆಸರು ಹಾಗೂ ಕೀರ್ತಿಯೊಂದಿಗೆ ಬಹು ಬೇಡಿಕೆಯೂ ಇದ್ದ ದಿನಗಳಲ್ಲೇ ಪ ಸ ಕುಮಾರ್ ಅವರಿಗೆ ಒಂದು ಅಪಘಾತವಾಗುತ್ತೆ!

1998ರ ಒಂದು ರಾತ್ರಿ ಜೋರು ಮಳೆಯು ಸುರಿಯುತ್ತಿರುತ್ತದೆ. ನಿಲ್ಲುವ ಮಾತೇ ಇಲ್ಲಾ, ಕಾದು ಕಾದು ಬೇಸತ್ತ ಕಲಾವಿದ ಕುಮಾರ್ ಅವರು ತಮ್ಮ ಸ್ಕೂಟರ್ ಏರಿ ಕನ್ನಡಪ್ರಭ ಕಚೇರಿಯಿಂದ (ಆಗ ಕನ್ನಡಪ್ರಭದ ಕಚೇರಿಯು ಇಂಡಿಯನ್ ಎಕ್ಸಪ್ರೆಸ್ ಕಟ್ಟಡದಲ್ಲಿತ್ತು) ನಂದಿನಿ ಲೇಔಟ್ ಕಡೆಗೆ ಮಳೆಯಲ್ಲೇ ಹೊರಟರು. ಸ್ಯಾಂಕಿ ಟ್ಯಾಕ್ ಹತ್ತಿರ ಬರುತ್ತಿದ್ದಾಗ ಅವರ ಸ್ಕೂಟರ್ ಸ್ಲಿಪ್ ಆಯ್ತು. ಗಾಡಿಯಿಂದ ಬಿದ್ದರು. ಮಳೆಯು ಒಂದೇ ಸಮ ಸುರಿಯುತ್ತಲ್ಲೇ ಇತ್ತು. ಹಾಗೆ ಎದ್ದು ಗಾಡಿ ಎತ್ತಲು ಹೋದರೆ ಬಲಗೈ ಸರಿಯಾಗಿ ಕೆಲಸ ಮಾಡ್ತಿಲ್ಲಾ, ಬಲಗೈನ ಭುಜಕ್ಕೆ ಬಲವಾದ ಏಟು ಬಿದ್ದಿತ್ತು. ದಿಕ್ಕು ತೋಚದೇ ಇದ್ದಾಗ ಮಲ್ಲೇಶ್ವರದಲ್ಲಿದ್ದ ಗೆಳೆಯ ಅ ಲ ನರಸಿಂಹನ್ ಅವರ ಮನೆಗೆ ಆಟೋ ಹಿಡಿದು ಹೋದರು. ಆತಂಕಗೊಂಡಿದ್ದ ಕುಮಾರ್ ಆವರಿಗೆ ಅ ಲ ನರಸಿಂಹನ್ ಹಾಗೂ ಅವರ ಬಾವಮೈದ ಧೈರ್ಯ ಹೇಳಿದರು. ನಂತರ ಅಪಘಾತವಾಗಿದ್ದ ಜಾಗಕ್ಕೆ ಕುಮಾರ್ ಅವರೊಂದಿಗೆ ಅ ಲ ನರಸಿಂಹನ್ ಅವರ ಭಾವಮೈದ ಬಂದರು. ಕುಮಾರ್ ಅವರಿಗೆ ನಂದಿನಿ ಲೇಔಟ್‍ಗೆ ಹೋಗಲು ಆಟೋ ಮಾಡಿಕೊಟ್ಟು ಅಪಘಾತದಿಂದ ಡ್ಯಾಮೇಜ್ ಆಗಿದ್ದ ಸ್ಕೂಟರ್ ಅನ್ನು ಅವರ ಮನೆಗೆ ಕೊಂಡೊಯ್ದರು. ಅಷ್ಟೆಲ್ಲಾ ಆಗಿದ್ದು 12 ರ ಮಧ್ಯರಾತ್ರಿ!

ಮನೆಗೆ ಬಂದ ಕುಮಾರ್ ಅವರು ಬಲಗೈ ನೋವಲ್ಲಿಯೇ ರಾತ್ರಿಯನ್ನು ಕಳೆದರು. ಬೆಳಗ್ಗೆ ಹೆಂಡತಿಯ ಸಹಾಯದಿಂದ ಚಿರಪರಿಚಿತರಾಗಿದ್ದ ಡಾಕ್ಟರ್ ಅವರಲ್ಲಿಗೆ ಚಿಕಿತ್ಸೆಗಾಗಿ ಹೋದರು. ಬಲಗೈ ಜಾಯಿಂಟಲ್ಲಿ ಸೀಳಿದೆ ಎಂದು ಹೇಳಿ ಕಟ್ಟು ಕಟ್ಟಿದರು. ಆಗ ಡಾಕ್ಟರ್ ಅವರಲ್ಲಿ ಕುಮಾರ್ ಅವರು ಆತಂಕದಲ್ಲಿ ಹೀಗೆ ಕೇಳಿದರು, ‘ನಾನು ಆರ್ಟಿಸ್ಟ್, ಈ ಬಲಗೈ ನನಗೆ ಮುಖ್ಯ, ಮುಂದೆ ಏನಾದರೂ ತೊಂದರೆ ಆಗಬಹುದಾ?’ ಎಂದು.

ಅದಕ್ಕೆ ಡಾಕ್ಟರ್ ಅವರ ಉತ್ತರ ಕುಮಾರ್ ಅವರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿತ್ತು. ಹಾಗೇ ಮುಂದುವರಿದು ಹೀಗೆಂದರು, ‘ಕೂಡಿಕೊಂಡು ಸರಿಯೂ ಹೋಗಬಹುದು, ಇಲ್ಲವೇ ತೊಂದರೆಯೂ ಆಗಬಹುದು’! ಎಂದು.

ಆಸ್ಪತ್ರೆಯಿಂದ ಮನೆಗೆ ಬಂದರೂ ಡಾಕ್ಟರ್ ಅವರ ಮಾತುಗಳು ಕುಮಾರ್ ಅವರನ್ನು ಬಹುವಾಗಿ ಕಾಡತೊಡಗಿತ್ತು. ಚಿತ್ರ ಬರೆಯುವುದೇ ವೃತ್ತಿ-ಪ್ರವೃತ್ತಿ ಎರಡೂ ಆಗಿತ್ತು. ಚಿತ್ರ ಬರೆಯಲೇ ಆಗದಿದ್ದರೆ ಮುಂದೇನು? ಅದೇ ಜೀವನ ಕೂಡ. ಈ ಬಲಗೈ ಚಿತ್ರ ಬರೆಯಲು ಸಹಕರಿಸದಿದ್ದರೆ ಬದುಕು ಹೇಗೆ? ಚಿತ್ರ ಬರೆಯದೇ ಇರುವುದಾದರೂ ಹೇಗೆ? ಪ ಸ ಕುಮಾರ್ ಎಂಬ ಹೆಸರಿನ ಅಸ್ಥಿತ್ವ ಏನು? ಇದೇ ಚಿಂತೆಯಲ್ಲಿ ತಡ ರಾತ್ರಿಯಾದರೂ ಅವರಿಗೆ ನಿದ್ದೆಯು ಹತ್ತಿರ ಸುಳಿಯಲೇ ಇಲ್ಲ.

ಮನೆಯ ಹೊರಗೆ ಮಳೆ ಸುರಿಯುತ್ತಿತ್ತು. ಮನದೊಳಗೆ ಚಿಂತೆಗಳು ಭೋರ್ಗರೆಯುತ್ತ ದೊಡ್ಡ ಅಲೆಗಳನ್ನೇ ಸೃಷ್ಠಿಸಿತ್ತು, ಚಿಂತೆಯು ಮಡುವಲ್ಲಿ ಮುಳುಗಿಸಿತ್ತು!

ಇಂತಹ ತಾಕಲಾಟದಲ್ಲಿದ್ದ ಕುಮಾರ್ ಅವರು ಹೆಂಡತಿಯಿಂದ ಪೆನ್ನು-ಪೇಪರ್ ಪಡೆದು ಚಿತ್ರ ಬರೆಯಲು ಕೂತರು!

‘ಈ ಕೈ ನೋವಲ್ಲಿ ಚಿತ್ರ ಬರೆಯಲಾದೀತೆ ಮಲಗಿ ನಿದ್ರೆ ಮಾಡಿ’ ಎಂದರು ಹೆಂಡತಿ. ಆದರೆ ತಮ್ಮ ಚಿತ್ರ ಬರೆಯುವ ಅಭ್ಯಾಸಕ್ಕೆ ಕುಂದುಂಟಾಗಬಾರದು ಎಂಬ ಸದುದ್ಧೇಶದಿಂದ ಎಡಗೈನಲ್ಲೇ ಪೆನ್ ಹಿಡಿದು ಚಿತ್ರ ಬರೆಯಲು ಮೊದಲಿಟ್ಟರು!

ಹೀಗೆ ಬಲಗೈ ಕಟ್ಟು ಬಿಚ್ಚುವವರೆಗೂ ಸತತವಾಗಿ ಎಡಗೈನಲ್ಲಿ ಚಿತ್ರ ಬರೆಯುವುದನ್ನು ನಿರಂತರ ತಪಸ್ಸಂತೆ ಕೂತು ಅಭ್ಯಾಸಿಸಿದರು. ಹಾಗೇ ಬರೆಯುತ್ತಾ, ಬರೆಯುತ್ತಾ ಬಲಗೈನಲ್ಲಿ ಬರೆದಷ್ಟೇ ಸುಲಲಿತವಾಗಿ ಎಡಗೈನಲ್ಲಿ ಚಿತ್ರ ಬರೆಯಲು ಸಾಧ್ಯವಾಗಿ ಹೋಯ್ತು.

ಆನಂತರ ಬಲಗೈ ಕೂಡ ಸರಿ ಹೋಯ್ತು. ಬಲಗೈ ಕೂಡ ಎಂದಿನಂತೆ ಚಿತ್ರ ಬರೆಯಲು ಸಹಕರಿಸಿತು.

ಹಾಗಾಗಿ ಈಗ ಬಲಗೈ ಹಾಗೂ ಎಡಗೈ ಎರಡರಲ್ಲೂ ಚಿತ್ರಗಳನ್ನು ಬರೆಯುತ್ತಿದ್ದಾರೆ. ಆ ಒಂದು ಅಪಘಾತವು ಕುಮಾರ್ ಅವರ ಚಿತ್ರರಚನಾ ಬದುಕನ್ನೇ ಬದಲಿಸಿತು. ಬಲಗೈಗೆ ತೊಂದರೆಯಾಗಿದ್ದೇ ಎಡಗೈನಲ್ಲಿ ಚಿತ್ರ ಬರೆಯಲು ಸ್ಫೂರ್ತಿಯಾಯ್ತು. ಅದನ್ನು ಸಾಧಿಸಿದ್ದೂ ಆಯ್ತು. ಕುಮಾರ್ ಅವರಿಗೆ ನೋವಲ್ಲೂ ನಲಿವು ಸಿಕ್ಕಿತ್ತು.

ಬಹುಶಃ ಹೀಗೆ ಎರಡೂ ಕೈಯಲ್ಲೂ ಚಿತ್ರ ಬರೆಯುವ ಚಿತ್ರಕಲಾವಿದರು ಅಪರೂಪ ಎನಿಸುತ್ತದೆ. ಹುಟ್ಟಿದಾರಭ್ಯ ಎಡಗೈನಲ್ಲೇ ಬರೆಯುವ ಕಲಾವಿದರು ಸಿಗಬಹುದು. ಆದರೆ ಹುಟ್ಟಿದಾರಭ್ಯ ಬಲಗೈನಲ್ಲಿ ಬರೆಯುವವರು ಮತ್ತೆ ಎಡಗೈನಲ್ಲಿ ಅಭ್ಯಾಸಿಸಿ ಯಶ ಕಂಡವರು ಅಪರೂಪ ಎನ್ನಬಹುದು!.

ಹೀಗೆ ಎಡಗೈನಲ್ಲಿ ರಚಿಸಿದ್ದ ಚಿತ್ರಗಳ ಬಗ್ಗೆ ಕುಮಾರ್ ಹೀಗೆ ಹೇಳುತ್ತಾರೆ, “ಬಲಗೈನಲ್ಲಿ ಚಿತ್ರಿಸಿದ ಚಿತ್ರಗಳಿಗಿಂತ ಈ ಎಡಗೈನಲ್ಲಿ ಚಿತ್ರಿಸಿದ ಚಿತ್ರಗಳು ಸ್ವಲ್ಪ ಭಿನ್ನವಾಗಿರುತ್ತವೆ. ಒಂದೇ ತರಹದ ಚಿತ್ರಗಳಿಂದ ಹೊರಗೆ ಬಂದು ತಮ್ಮದೇ ಆದ ಒಂದು ರೀತಿಯ ಸ್ವಂತಿಕೆಯನ್ನು ಇವು ರೂಪಿಸಿಕೊಂಡಿವೆ. ನನ್ನದೇ ಶೈಲಿಯಿಂದ ಹೊರಗೆ ಬಂದ ಕೃತಿಗಳಿವು! ನನ್ನ ಕಲಾ ಬಳಗದ ಸ್ನೇಹಿತರು ಹಾಗೂ ನನ್ನ ಚಿತ್ರಗಳ ನೋಡುತ್ತಾ ಬಂದವರು ಈ ಭಿನ್ನ ಶೈಲಿಯನ್ನು ಮೆಚ್ಚಿದರು. ಅಲ್ಲದೇ ನನಗೂ ಅವರ ಮಾತು ಸರಿ ಎನಿಸಿತು. ಈಗಲೂ ನಾನು ಎಡಗೈ ಹಾಗೂ ಬಲಗೈ ಎರಡರಲ್ಲೂ ರೇಖಾಚಿತ್ರಗಳನ್ನು ಬರೆಯುತ್ತಾ ಬಂದಿದ್ದೇನೆ”.

ಈವರೆಗೂ ಎಡಗೈನಲ್ಲಿ ಸರಿಸುಮಾರು 150ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಬರೆದಿದ್ದಾರೆ. ಒಂದಿಷ್ಟು ವರ್ಷಗಳು ಹೆಚ್ಚು ಅಭ್ಯಾಸಿಸಿರಲಿಲ್ಲ ಎನ್ನುವುದನ್ನು ಬಿಟ್ಟರೆ ರಚನೆಯು ನಿರಂತರ ನಡೆದಿದೆ. ಈ ಎಡಗೈನ ರೇಖಾಚಿತ್ರಗಳನ್ನೆಲ್ಲಾ ಒಗ್ಗೂಡಿಸಿ ಪುಸ್ತಕ ತರುವ ಉದ್ಧೇಶವೂ ಇದೆ’ ಎನ್ನುತ್ತಾರೆ.

ಎಡಗೈನಲ್ಲಿ ಪೇಂಟಿಂಗ್ ಮಾಡಿದ್ದೀರಾ? ಎನ್ನುವ ಪ್ರಶ್ನೆಗೆ ಕುಮಾರ್ ಅವರು ಉತ್ತರಿಸಿದ್ದು ಹೀಗೆ.
‘ಇಲ್ಲಿಯವರೆಗೂ ರೇಖಾಚಿತ್ರಗಳನ್ನಷ್ಟೇ ಮಾಡಿದ್ದೀನಿ. ಆದರೆ ಪೇಂಟಿಂಗ್ ಮಾಡಲು ಪ್ರಯತ್ನಿಸಿಲ್ಲ. ಅದನ್ನು ಮಾಡಬಹುದೆಂದು ಕೂಡ ಆಲೋಚಿಸಿಲ್ಲ’ ಎನ್ನುತ್ತಾರೆ.

‘ಎಡಗೈನಲ್ಲಿ ಚಿತ್ರ ಬರೆಯುವ ಹಂತದಲ್ಲಿ ಕೆಲವೊಮ್ಮೆ ಕೈ ಹಾಗೇ ಇದ್ದಕ್ಕಿದ್ದಂತೆ ನಿಂತು ಬಿಡುತ್ತೆ. ಮುಂದೆ ಎತ್ತ ಸಾಗಬೇಕು, ಏನು ಬರೆಯಬೇಕು ಎಂದು ಕೈ ಪ್ರಶ್ನೆ ಮಾಡುತ್ತೆ! ಎಡದ ಗುಣವೇ ಬೇರೆ, ಬಲದ ಗುಣವೇ ಬೇರೆ! ಇವೆರಡರಲ್ಲಿಯೂ ಚಿತ್ರ ಬರೆಯುವ ಗುಣಗಳೇ ಬೇರೆ ಬೇರೆ! ಹಾಗಾಗಿ ಪೇಂಟಿಂಗ್ ಕಷ್ಟವಾಗಬಹುದೇನೋ, ಪ್ರಯತ್ನಿಸಿ ನೋಡೋಣಾ!’

ಹೀಗೆ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ ನಿರಂತರ ಅಭ್ಯಾಸ ಮಾಡಿದ್ದು ಈಗ ಸಾಧನೆಯಾಗಿದೆ!

ಲೇಖನ : ಗುರುದತ್ತ ಎನ್ ಸಂಕೇತ್
ಕೃಪೆ : ಕನ್ನಡ ಸಂಪದ – ಸಲ್ಲಾಪ.ಕಾಂ

Related post

Leave a Reply

Your email address will not be published. Required fields are marked *