ಫಲಾಫಲ

ಫಲಾಫಲ

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ೬೦೦ ॥

ಡಿವಿಜಿಯವರು ನಮ್ಮ ಬದುಕನ್ನು ಜಟಕಾ ಬಂಡಿಗೆ ಹೋಲಿಸಿ, ಅದನ್ನು ಹೊತ್ತು ನಡೆಸುವ ಕುದುರೆ ನಾವು ಎಂದಿದ್ದಾರೆ, ಇನ್ನು ಅದನ್ನು ನಡೆಸುವವನನ್ನು ವಿಧಿಗೆ ಹೋಲಿಸಿ, ವಿಧಿಯ ಆಣತಿಯಂತೆ ನಾವು ನಡೆಯುತ್ತೇವೆಯೇ ಹೊರತು ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ ಎಂದಿದ್ದಾರೆ. ಹಾಗೆಯೇ, ಜೀವನದಲ್ಲಿ ಯಾರಿಗಾದರೂ ತನ್ನ ಉನ್ನತಿಗೆ ತಾನೇ ಕಾರಣ ಎಂಬ ಅಹಂಕಾರ ಇರುವುದೋ ಅವರ ಅಹಂಕಾರಕ್ಕೆ ಚಾಟಿ ಬೀಸುವಂತಿದೆ ಈ ಕಗ್ಗ. ಕುದುರೆಯ ಕಾಲು ಸೋಲುವವರೆಗೆ ಮಾತ್ರ ಬಂಡಿಯ ಈ ಸವಾರಿ ನಂತರ ಈ ಭೂಮಿಯೇ ನಮ್ಮೆಲ್ಲರ ಅಂತಿಮ ತಾಣ ಎಂಬುದನ್ನು ತಿಳಿಸಿದ್ದಾರೆ.

ಇನ್ನು ಪ್ರಯತ್ನ ಮಾತ್ರ ನಮ್ಮದು ಆದರೆ ಏನಾಗಬೇಕು ಎಂದಿಹುದೋ ಅದನ್ನು ತಪ್ಪಿಸಲು ಯಾರ ಕೈಯಲ್ಲೂ ಆಗುವುದಿಲ್ಲ ಎಂಬುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ.

ಒಮ್ಮೆ ಮಹಾವಿಷ್ಣು ಈಶ್ವರನನ್ನು ಕಾಣಲೆಂದು, ಗರುಡನನ್ನೇರಿ ಕೈಲಾಸಕ್ಕೆ ಬಂದ. ವಿಷ್ಣು ಇಳಿದು ಹೋದ ನಂತರ ಗರುಡನ ಕಣ್ಣಿಗೆ ಆತಂಕದಿಂದಿರುವ ಒಂದು ಪುಟ್ಟ ಪಕ್ಷಿ ಕಾಣಿಸಿತು. ಅದರ ಬಳಿ ಹೋಗಿ ಕಾರಣ ಕೇಳಿದಾಗ ಅದು ” ಈಗ ತಾನೇ ಯಮಧರ್ಮರಾಯ ಒಳಗೆ ಹೋದ, ನನ್ನನ್ನು ಕಂಡವನೇ ಆಶ್ಚರ್ಯದಿಂದ ನನ್ನನ್ನೆ ದಿಟ್ಟಿಸಿ ನೋಡಿದ. ನನಗೇಕೋ ಭಯವಾಗುತ್ತಿದೆ. ನನ್ನ ಅಂತಿಮ ಸಮಯ ಹತ್ತಿರವಾಗಿರಬೇಕು. ಯಮನು ಹೊರಬಂದು ನನ್ನ ಪ್ರಾಣಹರಣ ಮಾಡುತ್ತಾನೆ.” ಎಂದಾಗ ಗರುಡ ಯೋಚಿಸಿ, ” ನೀನೇನೂ ಚಿಂತಿಸಬೇಡ ಈ ಕೂಡಲೇ ನಿನ್ನನ್ನು ದೂರದ ಮಂದರಗಿರಿ ಪರ್ವತಕ್ಕೆ ಕರೆದುಕೊಂಡು ಹೋಗುವೆ. ನಿನಗಾವ ತೊಂದರೆಯೂ ಇಲ್ಲ ಎಂದು ಹೇಳಿ ಆ ಪುಟ್ಟ ಹಕ್ಕಿಯನ್ನು ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ವಾಯುವೇಗದಲ್ಲಿ ಮಂದರಗಿರಿಯಲ್ಲಿ ಬಿಟ್ಟು ಬಂದಿತು.

ಈಶ್ವರನನ್ನು ಭೇಟಿಯಾಗಿ ಹೊರಬಂದ ಯಮ, ಆ ಪುಟ್ಟ ಹಕ್ಕಿಗಾಗಿ ಹುಡುಕುವುದನ್ನು ಕಂಡ ಗರುಡ ಅತ್ಯಂತ ಹೆಮ್ಮೆ, ಅಹಂಕಾರದಿಂದ “ಯಮಧರ್ಮಾ, ನೀನು ಆ ಹಕ್ಕಿಗೆ ಏನೂ ಮಾಡಲಾರೆ. ಅದು ಈಗ ಇಲ್ಲಿಲ್ಲ. ದೂರದ ಮಂದರಗಿರಿಯಲ್ಲಿ ಅದನ್ನು ಬಿಟ್ಟು ಬಂದಿರುವೆ ” ಎಂದಾಗ ಯಮ “ಓ ಹಾಗಾ, ನಾನು ಇಲ್ಲಿಗೆ ಬಂದಾಗ ಆ ಹಕ್ಕಿಯನ್ನು ಇಲ್ಲಿ ನೋಡಿ ಆಶ್ಚರ್ಯವಾಯಿತು. ಇನ್ನು ಸ್ವಲ್ಪ ಸಮಯದ ನಂತರ, ಮಂದರಗಿರಿಯಲ್ಲಿ ಇದರ ಅಂತ್ಯಕಾಲ ಎಂದಿದೆ. ಇದೋ ಪುಟ್ಟ ಹಕ್ಕಿ ಅಷ್ಟು ಬೇಗ ಇದು ಅಲ್ಲಿಗೆ ತಲುಪಲು ಹೇಗೆ ಸಾಧ್ಯ ಎಂದುಕೊಂಡಿದ್ದೆ‌ ನೀನೇ ಅದನ್ನು ಮಂದರಗಿರಿಗೆ ತಲುಪಿಸಿದ್ದು ಒಳ್ಳೆಯದಾಯ್ತು” ಎಂದಾಗ ಗರುಡನ ಅಹಂಕಾರ ಇಳಿದುಹೋಯ್ತು. “ಅಯ್ಯೋ, ನಾನೇ ಅದರ ಸಾವಿಗೆ ಕಾರಣನಾದೆನಲ್ಲಾ” ಎಂದು ಗರುಡ ನೊಂದುಕೊಂಡಾಗ ಯಮ “ವಿಧಿ ಹೇಗಿರುವುದೋ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರೂ ನಿಮಿತ್ತ ಮಾತ್ರರು. ನೀನು ನೊಂದುಕೊಳ್ಳಬೇಡ” ಎಂದು ಸಮಾಧಾನ ಮಾಡಿದನಂತೆ.

ಗೀತೆಯಲ್ಲಿ ತಿಳಿಸಿರುವಂತೆ ಕರ್ತವ್ಯ ಮಾತ್ರ ನಮ್ಮದು ಅದರ ಫಲಾಫಲಗಳನ್ನು ದೇವರಿಗೆ ಬಿಟ್ಟು ನೆಮ್ಮದಿಯಿಂದ ಬಾಳಲು ಪ್ರಯತ್ನಿಸೋಣವೇ ?

ಶ್ರೀವಲ್ಲಿ ಮಂಜುನಾಥ

Related post

Leave a Reply

Your email address will not be published. Required fields are marked *