ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ

ಫೀನಿಕ್ಸ್ ಎಂಬ ಪುರಾಣ ಹಕ್ಕಿ ಹಾಗು ಕ್ರೌಂಚ ಪಕ್ಷಿ

ಫೀನಿಕ್ಸ್ ಎಂಬ ಹೆಸರು ಕೇಳದವರ್ಯಾರು. ಜೀವನದಲ್ಲೂ ಅಥವಾ ಇನ್ನೆಲ್ಲೋ  ಸೋತು ಮತ್ತೆ ಗೆದ್ದು ಬಂದವರನ್ನು “ಮತ್ತೆ ಫೀನಿಕ್ಸ್ ನಂತೆ ಬೂದಿಯಿಂದ ಮೇಲೆದ್ದು ಬಂದರು” ಎಂದು ಮಾತನಾಡಿಕೊಳ್ಳುವುದು ಸಹಜ. ಫೀನಿಕ್ಸ್, ಇದು ಗ್ರೀಕ್ ಪುರಾಣದ ಪಕ್ಷಿಯ ಹೆಸರು. ಇದರ ಬಗ್ಗೆ ಹುಡುಕುತ್ತಾ ಹೋದರೆ ತುಂಬಾ ಕಥೆಗಳಿವೆ, ಮಾಹಿತಿಗಳಿವೆ, ಈ ಪಕ್ಷಿಯದ್ದು ಎನ್ನಲಾದ ಕಲ್ಪಿಸಿ ರಚಿಸಲಾದ ಚಿತ್ರಗಳಿವೆ.

ಫೀನಿಕ್ಸ್ ಪಕ್ಷಿಯ ಕಲ್ಪಿತ ಚಿತ್ರ

ಗ್ರೀಕ್ ಪುರಾಣದಲ್ಲಿ ಬರುವ ಅಮರ ಪಕ್ಷಿ ಈ ಫೀನಿಕ್ಸ್. ಸೂರ್ಯನ ಪ್ರತೀಕವಾಗಿ ಹಾಗು ರೋಮ್ ನಗರದ ಸಂಕೇತವಾಗಿ ಗ್ರೀಕರ ಜಾನಪದ ಕಥೆಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಅಮರ ಪಕ್ಷಿಯು 500 ವರ್ಷಗಳ ಕಾಲ ಬದುಕಿ ಇಚ್ಛಾಮರಣಿಯಂತೆ ತನ್ನ ಗೂಡಿಗೆ ಬೆಂಕಿ ಹಚ್ಚಿಕೊಂಡು ಬೂದಿಯಾಗಿ ಮತ್ತೆ ಹೊಸತಾಗಿ ಜನ್ಮ ತಳೆಯುವುದೆಂದು ನಂಬಲಾಗಿದೆ. ಆಧ್ಯಾತ್ಮಿಕ ಚಿಂತನೆಗಳಲ್ಲಿ ಇದು ಆತ್ಮದ ಮರುಹುಟ್ಟಿನ ಸಂಕೇತವಾಗಿದೆ. ಕ್ರಿಸ್ತಪೂರ್ವ 5 ನೇ ಶತಮಾನದಲ್ಲಿ “ಹೆರೊಡೋಟಸ್” ಎಂಬ ಚರಿತ್ರೆಕಾರನು ಜಾನಪದ ಕಥೆಗಳಲ್ಲಿರುವಂತೆಯೇ  “ಫೀನಿಕ್ಸ್ ಎಂಬುದು ಪುರಾತನ ಹಕ್ಕಿ ಇದು ಐನೂರು ವರ್ಷಗಳಿಗೊಮ್ಮೆ ದೇಹತ್ಯಾಗ ಮಾಡಿ ಹೊಸದಾಗಿ ಜನ್ಮ ತಳೆಯುವುದು” ಎಂದು ದಾಖಲಿಸಿದ್ದಾನೆ . ಪ್ರಾಚೀನ ರೋಮನ್ ಸಾಮ್ರಾಜ್ಯದ ಕಾಲದಲ್ಲಿ ನಾಣ್ಯಗಳಲ್ಲಿ ಇದರ ಕೆತ್ತನೆ ಇದ್ದರೆ ಯುನೈಟೆಡ್ ಸ್ಟೇಟ್ಸ್ ನ ಅರಿಝೋನಾದ ಧ್ವಜದ ಮೇಲಿನ ಮುದ್ರೆಯಾಗಿದೆ. ಗ್ರೀಕ್ ಮಾತ್ರವಲ್ಲದೆ ಚೀನಾ, ಜಪಾನ್ ಸಂಸ್ಕೃತಿಗಳಲ್ಲಿಯೂ ಸಹ ಪುನರ್ಜನ್ಮದ ಸಂಕೇತವಾಗಿ ಬಿಂಬಿತವಾಗಿದೆ. ಈ ಹಕ್ಕಿಯು ಹೀಗಿರಬಹುದು, ಹಾಗಿರಬಹುದು ಕಡುಗೆಂಬು ಹಾಗು ಚಿನ್ನದ ಬಣ್ಣದಿಂದ ಕೂಡಿದ್ದು ಎಂದು ಕಲ್ಪಿಸಿ ಚಿತ್ರಗಳನ್ನು ರಚಿಸಿದ್ದಾರೆಯೇ ಹೊರತು ಇದಕ್ಕೆ ಪಕ್ಷಿ ತಜ್ಞರು ಸಂಶೋಧಿಸಿದ ವೈಜ್ಞಾನಿಕ ದಾಖಲೆಗಳಿಲ್ಲ.

ಫೀನಿಕ್ಸ್ ಪಕ್ಷಿಯಂತೆಯೇ ನಮ್ಮ ಭಾರತದ ಪುರಾಣ ಮಹಾಕಾವ್ಯ – ಕಥೆಗಳಾದ ರಾಮಾಯಣ ಹಾಗು ಮಹಾಭಾರತದಲ್ಲಿ ಕ್ರೌಂಚ ಪಕ್ಷಿಯ ಉಲ್ಲೇಖವಿದೆ. ವಾಲ್ಮೀಕಿ ಮಹರ್ಷಿಗಳು ಬೇಡನ ಜೀವನದಿಂದ ಋಷಿಯಾಗಿ ಪರಿವರ್ತನೆಗೊಂಡ ಸಮಯದಲ್ಲಿ ಮರವೊಂದರ ಮೇಲೆ ಕುಳಿತಿದ್ದ ಕ್ರೌಂಚ ಪಕ್ಷಿಯ ಜೋಡಿಗಳನ್ನು ನೋಡಿದ ಬೇಡನೊಬ್ಬನು ಬಿಟ್ಟ ಬಾಣಕ್ಕೆ ಗಂಡು ಕ್ರೌಂಚ ಪಕ್ಷಿಯು ಸಾಯುತ್ತದೆ. ಅದರಿಂದ ಹೆಣ್ಣು ಕ್ರೌಂಚ ಹಕ್ಕಿಯು ಸಂಗಾತಿಯನ್ನು ಕಳೆದುಕೊಂಡ ದುಃಖದಿಂದ ದೀನವಾಗಿ ರೋದನೆ ಮಾಡತೊಡಗಿದಾಗ ಅಲ್ಲೇ ಇದ್ದ ವಾಲ್ಮೀಕಿ ಮಹರ್ಷಿಗಳು ವಿಚಲಿತರಾಗಿ ಬೇಡನ ವಿರುದ್ಧ

ಕ್ರೌಂಚ ವ್ಯೂಹದ ಕಲ್ಪಿತ ಚಿತ್ರ

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಎಂದರೆ
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ಎಂದು ಶ್ಲೋಕವನ್ನು ಉದ್ಗರಿಸುತ್ತಾರೆ

ಮಹಾಭಾರತದ ಕುರುಕ್ಷೇತ್ರ ಯುದ್ದದ ಎರಡನೇ ದಿನದಲ್ಲಿ ಪಾಂಡವರು ಹಾಗು ಕೌರವರು ಕ್ರೌಂಚ ವ್ಯೂಹವನ್ನು ರಚಿಸಿ ಕಾದಾಡುತ್ತಾರೆ. ಇವಿಷ್ಟೂ ಪುರಾಣಗಳ ಉಲ್ಲೇಖ. ಫೀನಿಕ್ಸ್ ಪಕ್ಷಿಯನ್ನು ಪುರಾಣದ ಕಥೆಗಳಲ್ಲಿ ಮಾತ್ರ ತಿಳಿಯಬಹುದಾದರೆ ಕ್ರೌಂಚ ಪಕ್ಷಿಯನ್ನು ಈಗಲೂ ಸಹ ನೋಡಬಹುದಾಗಿದೆ.

“ಡೆಮೊಸೆಲ್ ಕ್ರೇನ್” ಅಥವಾ “ನ್ಯೂಮಿಡಿಯನ್ ಕ್ರೇನ್” ಎಂದು ಕರೆಯುವ ಈ ಕ್ರೌಂಚ ಪಕ್ಷಿಯು ಕೊಕ್ಕರೆ ಜಾತಿಯ ಚಿಕ್ಕ ಪಕ್ಷಿ. ಕಪ್ಪು ಕುತ್ತಿಗೆಯ, ಕೆಂಪು ಕಣ್ಣಿನ ಬಿಳಿಯ ಮೈಬಣ್ಣದಿಂದ ಕೂಡಿದ ಈ ಉದ್ದಕಾಲಿನ ಹಕ್ಕಿಯು ಮೂಲತಃ ವಲಸೆ ಹಕ್ಕಿಯಾಗಿದ್ದು ಇದರ ಪ್ರಯಾಣ ಬಹಳ ರೋಚಕವಾಗಿದೆ. 16000 ರಿಂದ 26000 ಅಡಿಗಳ ಎತ್ತರದಲ್ಲಿ ಹಾರುವ ಸಾಮರ್ಥ್ಯ ಇರುವ ಕ್ರೌಂಚ ಪಕ್ಷಿಗಳು ಸೆಂಟ್ರಲ್ ಯುರೇಷಿಯಾ (ಯುರೋಪ್ ಹಾಗು ಏಷ್ಯಾ ಖಂಡದ ಮಧ್ಯಭಾಗ) ಪ್ರದೇಶಗಳಿಂದ ಬ್ಲ್ಯಾಕ್ ಸಮುದ್ರದ ಮೂಲಕ ಈಶಾನ್ಯ ಚೀನಾಕ್ಕೆ ಆಗಮಿಸಿ ತನ್ನ ಚಳಿಗಾಲವನ್ನು ಭಾರತದಲ್ಲಿ ಹಾಗು ಕೆಲಕಾಲ ಮಂಗೋಲಿಯಾ ಹಾಗು ಆಫ್ರಿಕಾದ ಸವನ್ನಾ ಮರುಭೂಮಿಯ ಪ್ರದೇಶಗಳಲ್ಲಿ ಕಳೆಯುತ್ತದೆ.

ಈ ಹಕ್ಕಿಯು ಏಕಾಂತ ಹಾಗು ಸಾಮಾಜಿಕ ಸ್ವಾಭಾವಗಳೆರಡನ್ನೂ ಮೈಗೂಡಿಸಿಕೊಂಡಿವೆ. ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುವ ಸಮಯಗಳಲ್ಲಿ ಕ್ರೌಂಚ ಪಕ್ಷಿಗಳು ಏಕಾಂಗಿಯಾಗಿ ವರ್ತಿಸಿದರೆ ಮಿಕ್ಕೆಲ್ಲ ಸಮಯಗಳಲ್ಲಿ ಇವು ಇತರೆ ಕ್ರೌಂಚ ಪಕ್ಷಿಗಳ ಜೊತೆ ಬೆರೆತು ಸಾಮೂಹಿಕವಾಗಿ ಕಾಣಸಿಗುತ್ತವೆ. ಇವು ಮಲುಗುವ ರೀತಿಯು ವಿಚಿತ್ರ, ತನ್ನ ತಲೆಯನ್ನು ಬುಜದ ಮೇಲೆ ಇಟ್ಟುಕೊಂಡು ಒಂಟಿಕಾಲಿನಲ್ಲಿ ರಾತ್ರಿ ವಿರಮಿಸುತ್ತವೆ.

ಮರಿಗಳೊಡನೆ ಕ್ರೌಂಚ ಪಕ್ಷಿಗಳು

ಕ್ರೌಂಚ ಪಕ್ಷಿಗಳು ಸರ್ವಭಕ್ಷಿಗಳು, ಸಸ್ಯಾಹಾರಿಗಳಾಗಿ ಸಿರಿ ಧಾನ್ಯಗಳನ್ನು ಹಾಗು ಹುಲ್ಲಿನ ಬೀಜಗಳನ್ನು ತಿಂದರೆ, ಜೀರುಂಡೆ ಮತ್ತು ಹಲ್ಲಿಯಂತಹ ಕೀಟಗಳನ್ನು ಸಹ ಭಕ್ಷಿಸುತ್ತವೆ. ತನ್ನ ಜೀವಿತಾವಧಿಯಲ್ಲೇ ಒಂದೇ ಸಂಗಾತಿಯ ಜೊತೆ ಬದುಕುವ ಇವು ಏಕ ಪತ್ನಿ/ಪತಿ ವ್ರತಸ್ಥಗಳು. ಈ ಸಂಗತಿಯನ್ನು ವಾಲ್ಮೀಕಿ ಮಹರ್ಷಿಗಳು ಕಂಡುಕೊಂಡಿದ್ದಾದರೂ ಹೇಗೋ?

ಏಪ್ರಿಲ್ ನಿಂದ ಜೂನ್ ತಿಂಗಳವರೆಗೂ ಸಂತಾನಭಿವೃದ್ದಿಯಲ್ಲಿ ತೊಡಗುವ ಕ್ರೌಂಚ ಪಕ್ಷಿಗಳು ನೆಲದಲ್ಲಿ ಹೆಚ್ಚಾಗಿ ಬೆಳೆದಿರುವ ಹುಲ್ಲಿನ ಪ್ರದೇಶಗಳಲ್ಲಿ ಹಾಗು ರೈತರ ಜಮೀನುಗಳಲ್ಲಿ ಒಮ್ಮೆಗೆ ಎರಡು ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ಮೊಟ್ಟೆಗಳಿಂದ ಹೊರಬರುವವರೆಗೆ ಇವು ಆಕ್ರಮಣಕಾರಿಯಾಗಿ ಗೂಡನ್ನು ರಕ್ಷಿಸುತ್ತ ಪರಭಕ್ಷಕ ಪ್ರಾಣಿ ಪಕ್ಷಿಗಳ ಮುಂದೆ ತನ್ನ ರೆಕ್ಕೆಗಳನ್ನು  ಮುರಿದಂತೆ ಮಾಡಿ ವಿಲಕ್ಷಣವಾಗಿ ತೆರೆದು ಅವು ಬೆಚ್ಚುವಂತೆ ಮಾಡಿ ಓಡಿಸುತ್ತವೆ.

ಖೀಚನ್ ಹಳ್ಳಿಯಲ್ಲಿ ಕ್ರೌಂಚ ಪಕ್ಷಿಗಳು

ಮಧ್ಯ ಯುರೇಷಿಯಾ ದಿಂದ ಹಿಮಾಲಯ ಪರ್ವತಗಳನ್ನು ದಾಟಿಕೊಂಡು ಭಾರತಕ್ಕೆ ವಲಸೆ ಬರುವ ಕ್ರೌಂಚ ಪಕ್ಷಿಗಳು ರಾಜಸ್ಥಾನ ಹಾಗು ಗುಜರಾತಿನಲ್ಲಿ ಸಾಂಪ್ರದಾಯಿಕ ಪಕ್ಷಿಗಳೆಂದೇ ಗುರುತಿಸಲ್ಪಟ್ಟಿವೆ. ರಾಜಸ್ಥಾನದ “ಖೀಚನ್” ಎಂಬ ಹಳ್ಳಿಯಲ್ಲಿ ಇವುಗಳು ಸಾವಿರಕ್ಕೂ ಹೆಚ್ಚು ಸಂಖ್ಯೆಗಳಲ್ಲಿ ಕಾಣಸಿಗುತ್ತವೆ. ಆ ಹಳ್ಳಿಯ ಜನರು ಪ್ರತಿವರ್ಷವೂ ಇವುಗಳ ಆಗಮನಕ್ಕಾಗಿ ಕಾದು ಅವುಗಳು ಆಗಮಿಸಿದನಂತರ ಸಂಭ್ರಮದಿಂದ ಅವುಗಳು ಇರುವವರೆಗೂ ಧಾನ್ಯಗಳನ್ನು ಎರಚಿ ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ.

ಕೊಕ್ಕರೆ ಜಾತಿಗಳಲ್ಲೇ ಕ್ರೌಂಚ ಪಕ್ಷಿಗಳು ಎರಡನೇ ಅತಿ ಹೆಚ್ಚು ಸಂಖ್ಯೆಗಳಲ್ಲಿ ಇವೆ, ಮೊದಲನೆಯದು “ಸ್ಯಾಂಡ್ ಹಿಲ್” ಎಂಬುವ ಇನ್ನೊಂದು ಕೊಕ್ಕರೆ ಜಾತಿ ಹಕ್ಕಿಗಳು ವಿಶ್ವದಲ್ಲೇ ಹೆಚ್ಚು ಕಾಣಸಿಗುವ ಪಕ್ಷಿಗಳು. ಐ ಯು ಸಿ ಎನ್ (ಪರಿಸರ ಸಂರಕ್ಷಣ ಅಂತಾರಾಷ್ಟ್ರೀಯ ಒಕ್ಕೂಟ) ದಲ್ಲಿ ಕ್ರೌಂಚ ಪಕ್ಷಿಗಳು ರೆಡ್ ಲಿಸ್ಟ್ ನಲ್ಲಿ ಇರದಿದ್ದರೂ ಸಾದಾರಣವಾಗಿ ಇತರೆ ಹಕ್ಕಿಗಳಿಗಿರುವಂತೆ ಇವುಗಳಿಗೂ ಸಹ ಮನುಷ್ಯರಿಂದ ಆವಾಸ ನಷ್ಟ, ಬೇಟೆಯ ಭೀತಿಯನ್ನು ಎದುರಿಸುತ್ತಿವೆ.

ಈ ಮನಮೋಹಕ ಕ್ರೌಂಚ ಪಕ್ಷಿಗಳ ವರ್ಣನೆಯನ್ನು ಭಾರತ ಹಾಗು ಪಾಕಿಸ್ತಾನದ ಸಾಹಿತ್ಯದಲ್ಲೂ ಸಹ ಕವಿಗಳು ಬಳಸಿಕೊಂಡಿದ್ದಾರೆ. ಸುಂದರ ಮಹಿಳೆ ಹಾಗು ಹುಡುಗಿಯರನ್ನು ಕಾವ್ಯಗಳಲ್ಲಿ ವರ್ಣಿಸುವುದಕ್ಕೆ ಕ್ರೌಂಚ ಪಕ್ಷಿಗಳ ರೂಪದಿಂದ ಬಣ್ಣಿಸುತ್ತಾರೆ. ಬಲ್ಗೇರಿಯನ್ ಭಾಷೆಯಲ್ಲಿ “ಜಾನ್ರೇ” ಎಂದರೆ ಸುಂದರ ಮನಮೋಹಕ ಎಂದು.

ವನ ಹಾಗು ವನ್ಯಜೀವಿಗಳ ರಕ್ಷಣೆ ಮಾನವನ ಆದ್ಯ ಕರ್ತವ್ಯ….

ಕು ಶಿ ಚಂದ್ರಶೇಖರ್
ಚಿತ್ರಗಳು: ಅಂತರ್ಜಾಲ ಕೃಪೆ

Related post

2 Comments

  • ಅದ್ಭುತವಾದ ಲೇಖನ, ಕ್ರೌಂಚ ಪಕ್ಷಿಗಳ ಚಿತ್ರಗಳ ಜೊತೆ ಮೂಡಿದ ಲೇಖನ ಮಾಹಿತಿಪೂರ್ಣವಾಗಿದ್ದು. ಜ್ಞಾನಾಭಿವೃದ್ಧಿಯ ಇಂತಹ ಬರಹಗಳು ಅತ್ಯವಶ್ಯಕ. ಧನ್ಯವಾದಗಳು ಸರ್

  • ಧನ್ಯವಾದಗಳು ಸರ್

Leave a Reply

Your email address will not be published. Required fields are marked *