ಫ್ಯಾಷನ್ ಯುಗದ ಔಷಧೀಯ ಹಣ್ಣು – ಫ್ಯಾಷನ್ ಫ್ರೂಟ್

ಫ್ಯಾಷನ್ ಫ್ರೂಟ್

ಹೆಸರೇನೋ ಫ್ಯಾಷನ್ ಆಗಿದೆ ಆದರೆ, ಈ ಹಣ್ಣು ತಿನ್ನೋಕೆ ಎಷ್ಟು ಫ್ಯಾಷನ್ ಆಗಿದೆ ಎಂಬುವುದೇ ಒಂದು ಸ್ವಾರಸ್ಯಕರ ಸಂಗತಿ. ‘ಫೆಸಿಫ್ಲೋರ ಎಡ್ಯುಲಸ್’ ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜೆಂಟಿನಾಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಫೆಸಿಫ್ಲೋರ ಎಂಬ ಶಬ್ದದ ಮೂಲ ಲ್ಯಾಟಿನ್ ಭಾಷೆಯಾಗಿದ್ದು, ಇದನ್ನು ಇಂಗ್ಲೀಷ್‌ನಲ್ಲಿ ‘ಫ್ಯಾಷನ್ ಫ್ಲವರ್’ ಎಂದು ಕರೆಯಲಾಗುತ್ತದೆ. ಈ ಹೂವಿಗೆ ಫ್ಯಾಷನ್ ಫ್ಲವರ್ ಎಂದು ಹೆಸರಿಸಿದವರು ಸ್ಪಾನಿಶ್ ಮಿಷನರಿಗಳು. ಇದರಲ್ಲಿ ಬೆಳೆಯುವ ಹಣ್ಣುಗಳನ್ನು ಅಮೇರಿಕಾ ಮತ್ತು ಕಾಮನ್‌ವೆಲ್ತ್ ರಾಷ್ಟçಗಳಲ್ಲಿ ‘ಫ್ಯಾಷನ್ ಫ್ರೂಟ್’ ಎಂದೂ ದಕ್ಷಿಣ ಆಫ್ರಿಕಾದಲ್ಲಿ ‘ಪರ್ಪಲ್ ಗ್ರೆಸಿಡಿಲ್ಲಾ’ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.

ಈ ಹಣ್ಣನ್ನು ಉಷ್ಣವಲಯ ಮತ್ತು ಸಮಶೀತೋಷ್ಣ ವಲಯ ದೇಶಗಳಾದ ದಕ್ಷಿಣ ಅಮೇರಿಕಾ, ಕೆರೆಬಿಯನ್, ಆಫ್ರಿಕಾ, ಮಧ್ಯ ಅಮೇರಿಕಾ, ದಕ್ಷಿಣ ಏಷ್ಯಾ, ವಿಯೇಟ್ನಾಂ, ಇಸ್ರೇಲ್, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ಹವಾಯಿ ದ್ವೀಪಗಳಲ್ಲಿ ವಾಣಿಜ್ಯ ಉದ್ದೇಶ ಹಾಗೂ ಇದರಲ್ಲಿರುವ ಸಿಹಿಯ ಗುಣದಿಂದಾಗಿ ಯಥೇಚ್ಚವಾಗಿ ಬೆಳೆಯುತ್ತಾರೆ. ಈ ಹಣ್ಣಿನ ಬಹುಭಾಗವು ಹೆಚ್ಚಿನ ನೀರಿನಂಶಗಳಿಂದ ಕೂಡಿದ್ದು ಇದು ಕಲ್ಲಂಗಡಿ ಅಥವಾ ಸೌತೆಕಾಯಿಯ ಪ್ರಬೇಧಕ್ಕೆ ಸೇರಿದ್ದು ನೋಡಲು ಓವಲ್ ಆಕಾರವನ್ನು ಹೊಂದಿರುತ್ತದೆ. ಈ ಕಾಯಿಯು ಬಲಿತಾಗ ನೋಡಲು ಹಳದಿ ಅಥವಾ ಕಡು ನೇರಳೆ ಬಣ್ಣವನ್ನು ಹೊಂದಿದ್ದು ಹಣ್ಣಾದಂತೆ ಇದರ ಮೇಲ್ಮೈ ಮೆದುವಾಗುತ್ತಾ ಹೋಗುತ್ತದೆ, ಹಾಗೂ ಒಳ ಭಾಗದಲ್ಲಿ ಅಸಂಖ್ಯ ಸಂಖ್ಯೆಯ ಬೀಜಗಳ ಸುತ್ತ ರಸಭರಿತವಾದ ಸ್ವಾದಿಷ್ಟ ಭರಿತ ಅಂಶವನ್ನು ಒಳಗೊಂಡಿರುತ್ತದೆ. ಈ ಹಣ್ಣನ್ನು ನೇರವಾಗಿ ಬಿಡಿಸಿ ತಿನ್ನಬಹುದಾಗಿದ್ದು ಜೊತೆ ಜೊತೆಗೆ ಜ್ಯೂಸ್ ರೂಪದಲ್ಲೂ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಇದರ ಜ್ಯೂಸ್‌ನ್ನು ಇತರ ಜ್ಯೂಸ್ ಜೊತೆ ಬೆರೆಸುವುದರಿಂದ ಇದರ ಜ್ಯೂಸ್‌ನ ಸ್ವಾದಿಷ್ಟತೆಯನ್ನು ಇನ್ನಷ್ಟು ಹೆಚ್ಚಿಸಲು ಸಹಕಾರಿಯಾಗಿದೆ.

ಈ ಹಣ್ಣನ್ನು ಬೆಳೆಗಾರರು ತೆಳುವಾದ ಅರಣ್ಯ ರೀತಿಯಲ್ಲಿ ಬೆಳೆಯುತ್ತಾರೆ. ಫ್ಯಾಷನ್ ಪ್ರೂಟ್ ಬಳ್ಳಿಗೆ ಫಲವತ್ತಾದ ಉಷ್ಣಾಂಶವಿರುವ ಪ್ರದೇಶದ ಅಗತ್ಯವಿದ್ದು, ಒಮ್ಮೆ ನಾಟಿ ಮಾಡಿದರೆ ಸುಮಾರು ಐದರಿಂದ ಏಳು ವರ್ಷದವರೆಗೆ ಬದುಕಬಲ್ಲದು. ಈ ಬಳ್ಳಿಯು ಅತ್ಯಂತ ವೇಗವಾಗಿ ಬೆಳೆಯುವ ಗುಣವನ್ನು ಹೊಂದಿದ್ದು ವರ್ಷದಲ್ಲಿ 15 ರಿಂದ 20 ಅಡಿಯಷ್ಟು ಉದ್ದಕ್ಕೆ ಬೆಳೆಯಬಲ್ಲುದು. ಈ ಹಣ್ಣನ್ನು ಬ್ರಿಟನ್ ನಂತಹ ಅತೀ ಉಷ್ಣಾಂಶವಿರುವ ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಲಾಗುತ್ತದೆ.
‘ಫ್ಯಾಷನ್ ಫ್ರೂಟ್ ಹೂವನ್ನು ಪೆರುಗ್ವೆ ದೇಶದ ರಾಷ್ಟ್ರೀಯ ಪುಷ್ಪವಾಗಿಯೂ ಅಂಗೀಕರಿಸಲಾಗಿದೆ.’

ವಿವಿಧ ರೀತಿಯ ತಳಿಗಳು

ಫ್ಯಾಷನ್ ಫ್ಯೂಟ್‌ನಲ್ಲಿ ಗಾಢ ಹಳದಿ ಬಣ್ಣದ ‘ಪ್ಲಾವಿಕರ್ಪಾ’ ಎಂಬ ಜಾತಿಯ ಹಣ್ಣನ್ನು ‘ಗೋಲ್ಡನ್ ಫ್ಯಾಷನ್ ಫ್ರೂಟ್’ ಎಂತಲೂ ಕರೆಯಲಾಗುತ್ತದೆ. ಇದರ ಗಾತ್ರವು ದ್ರಾಕ್ಷಿ ಹಣ್ಣಿನಷ್ಟಿದ್ದು ಮೆದುವಾಗಿ ಜಾರುವ ಮೇಲ್ಮೆಯನ್ನು ಹೊಂದಿರುತ್ತದೆ. ಈ ‘ಪ್ಲಾವಿಕರ್ಪಾ’ ತಳಿಯನ್ನು ಆಸ್ಟ್ರೇಲಿಯಾ ದೇಶದಲ್ಲಿ ಗೋಲ್ಡನ್ ಫ್ರೂಟ್ ಗಿಡಗಳ ಮಧ್ಯ ಮಧ್ಯದಲ್ಲಿ ಎಡೆ ಕೃಷಿಯಾಗಿ ಬೆಳೆಯಲಾಗುತ್ತದೆ. ಕಡು ನೇರಳೆ ಬಣ್ಣದ ‘ಎಡ್ಯೂಲಸ್’ ತಳಿಯು ಲಿಂಬೂ ಹಣ್ಣಿನ ಗಾತ್ರವಾಗಿದ್ದು ಹಳದಿ ಫ್ಯಾಷನ್ ಫ್ರೂಟ್‌ಗಿಂತ ಕಡಿಮೆ ಆಮ್ಲೀಯ ಅಂಶವನ್ನು ಹೊಂದಿದ್ದು ಹೆಚ್ಚು ಪರಿಮಳ ಹಾಗೂ ಸ್ವಾದಿಷ್ಟತೆಯಿಂದ ಕೂಡಿರುತ್ತದೆ. ಈ ವಿವಿಧ ತಳಿಗಳ ಹಣ್ಣಿನ ರಸ ಹಾಗೂ ಮೇಲಿನ ಸಿಪ್ಪೆಯು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅತ್ಯವಶ್ಯಕವಾಗಿ ಬೇಕಾಗುವ ‘ಫೋಲಿಪಿನೋಲ್’ ಹಾಗೂ ಇತರ ಜೀವಸತ್ವಗಳನ್ನು ಹೊಂದಿದೆ.

ಜೀವಸತ್ವ ಮತ್ತು ಖನಿಜಾಂಶದ ಆಗರ

ಫ್ಯಾಷನ್ ಫ್ಯೂಟ್‌ನಲ್ಲಿ ಹೇರಳವಾಗಿ ಮನುಷ್ಯನ ದೇಹಕ್ಕೆ ಅವಶ್ಯವಾಗಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜಾಂಶಗಳು ಲಭ್ಯವಿದ್ದು ಅವುಗಳಲ್ಲಿ ವಿಶೇಷವಾಗಿ ಜೀವಸತ್ವಗಳಾದ ವಿಟಮಿನ್ ‘ಎ’ 8%, ಬೆಟಾ ಕರೋಟೇನ್ 7%, ರೈಬೋ ಫ್ಲೆವಿನ್ 11%, ನಿಯಾಸಿನ್ 10%, ವಿಟಮಿನ್ ಬಿ6 8%, ಫೋಲೇಟ್ (ಬಿ9) 4%, ಕೋಲಿನ್ 2%, ವಿಟಮಿನ್ ‘ಸಿ’ 36%, ವಿಟಮಿನ್ ‘ಕೆ’ 1% ದಷ್ಷು ಪ್ರಮಾಣದಲ್ಲಿ ಲಭ್ಯವಿದ್ದು, ಖನಿಜಾಂಶಗಳಾದ ಕ್ಯಾಲ್ಸಿಯಂ 1%, ಐರನ್ 12%, ಮೆಗ್ನೇಷಿಯಂ 8%, ರಂಜಕ 10%, ಪೊಟಾಷಿಯಂ 7%, ಸೋಡಿಯಂ 2%, ಝಿಂಕ್ 1% ರಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಮನುಷ್ಯನ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗುವ ವಿಟಮಿನ್ ಹಾಗೂ ಖನಿಜಾಂಶಗಳಲ್ಲಿ ಬಹುಪಾಲು ಈ ಹಣ್ಣಿನಲ್ಲೇ ಹೇರಳವಾಗಿ ದೊರೆಯುತ್ತದೆ. 100 ಗ್ರಾಂ ಈ ಹಣ್ಣಿನ ಸೇವನೆಯಿಂದ ಸುಮಾರು 97 ಕ್ಯಾಲೊರಿಯಷ್ಟು ಶಕ್ತಿಯು ದೇಹಕ್ಕೆ ಲಭ್ಯವಾಗುತ್ತದೆ.

ಹಣ್ಣಿನ ಬಳಕೆ

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಈ ಹಣ್ಣಿಗೆ ವಾಣಿಜ್ಯವಾಗಿ ಬಹಳ ಬೇಡಿಕೆಯಿದ್ದು ತಾಜಾ ಹಣ್ಣಿನ ರೂಪದಲ್ಲಿ ಹಾಗೂ ಸಂಸ್ಕರಿಸಿದ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು ಇವುಗಳನ್ನು ಫ್ರೂಟ್ ಸಲಾಡ್ ಹಾಗೂ ತಾಜಾ ಹಣ್ಣಿನ ಪಲ್ಪ್ ಗಳನ್ನು ತಯಾರಿಸಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಮರುಭೂಮಿ ಪ್ರದೇಶಗಳಲ್ಲಿ ಇದರಲ್ಲಿರುವ ನೀರಿನಂಶದ ಕಾರಣದಿಂದಾಗಿ ಹೇರಳವಾಗಿ ಬಳಸಲಾಗುತ್ತದೆ. ಇವುಗಳನ್ನು ಕೇಕ್, ಐಸ್‌ಕ್ರೀಂ, ವೆನಿಲಾ ಸ್ಲೆಸ್ ತಯಾರಿಕೆಗಳಲ್ಲೂ ಬಳಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ 1920 ರಿಂದ ‘ಫ್ಯಾಷೋನ್’ ಎಂಬ ಬ್ರಾಂಡ್ ಮೂಲಕ ಈ ಹಣ್ಣಿನ ರಸದಿಂದ ತಯಾರಿಸಲಾದ ಮದ್ಯವು ಮಾರುಕಟ್ಟೆಯಲ್ಲಿ ದೊರೆಯುತ್ತದೆ.

ಪೂರ್ವ ಆಫ್ರಿಕಾ, ಬ್ರೆಜಿಲ್, ಕೊಲಂಬಿಯಾ ಮತ್ತು ಡೊಮೆನಿಕಲ್ ರಿಪಬ್ಲಿಕ್‌ಗಳಲ್ಲಿ ಫ್ಯಾಷನ್ ಫ್ಯೂಟ್‌ನಿಂದ ತಯಾರಿಸಲಾದ ಜ್ಯೂಸ್‌ನ್ನು ಪಾನೀಯವಾಗಿ ಬಳಸುತ್ತಾರೆ. ಡೊಮೆನಿಕಲ್ ರಿಪಬ್ಲಿಕ್‌ಗಳಲ್ಲಿ ಫ್ಯಾಷನ್ ಫ್ಯೂಟ್ ಸ್ವಾದವಿರುವ ಶಿರಫ್‌ಗಳು ಮಾರಕಟ್ಟೆಯಲ್ಲಿ ಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತದ ಆಂಧ್ರಪ್ರದೇಶದ ಚಿಂತಪಳ್ಳಿ ಕಾಡುಗಳಲ್ಲಿ ವೈನ್ ತಯಾರಿಕೆಯ ಉದ್ದೇಶದಿಂದ ಫ್ಯಾಷನ್ ಪ್ರೂಟ್ ಹಣ್ಣನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲು ಪ್ರಾರಂಭಿಸಿದ್ದಾರೆ. ಇದನ್ನು ಅಸ್ಸಾಂನ ದಟ್ಟಾರಣ್ಯಗಳಲ್ಲಿ ಹಾಗೂ ಕೇರಳದಲ್ಲಿ ಹಳದಿ ಬಣ್ಣದ ತಳಿಯ ಹಣ್ಣನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಮೆಕ್ಸಿಕೋದಲ್ಲಿ ಈ ಹಣ್ಣನ್ನು ಮೆಣಸಿನಪುಡಿ ಮತ್ತು ನಿಂಬೆ ಹಣ್ಣಿನ ರಸದೊಂದಿಗೆ ನೇರವಾಗಿ ತಿನ್ನಲು ಬಳಸುತ್ತಾರೆ.

ಆರೋಗ್ಯಕ್ಕೆ ಆಗುವ ಲಾಭಗಳು

ಈ ಹಣ್ಣಿನಲ್ಲಿ ವಿವಿಧ ರೀತಿಯ ರೋಗಗಳು ಹಾಗೂ ರೋಗ ಲಕ್ಷಣಗಳಿಗೆ ರಾಮ ಬಾಣವಾಗಿ ಕೆಲಸ ನಿರ್ವಹಿಸುವ ಗುಣಗಳಿವೆೆ. ಈ ಹಣ್ಣಿನಲ್ಲಿರುವ ವಿಶೇಷ ಔಷಧೀಯ ಗುಣಗಳು ಕ್ಯಾನ್ಸರ್‌ನ ಅಂಶಗಳು ಜೀವಕೋಶಗಳಲ್ಲಿ ವೇಗವಾಗಿ ಹರಡುವುದನ್ನು ನಿಯಂತ್ರಿಸುವುದರೊಂದಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಶೇಷ ಅಂಶವನ್ನು ಹೊಂದಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ವೇಗವಾಗಿ ವೃದ್ಧಿಸುವುದರ ಜೊತೆಗೆ ಇದರ ವಿಶೇಷ ಔಷಧೀಯ ಅಂಶವು ಕಣ್ಣಿನ ದೃಷ್ಟಿಯ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಈ ಹಣ್ಣಿನ ಸೇವನೆಯಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿ ದೇಹದಲ್ಲಿ ದ್ರವಾಂಶವನ್ನು ಸಮತೋಲನದಲ್ಲಿ ಇರಿಸುವಲ್ಲಿಯೂ ಸಹಕರಿಸುತ್ತದೆ. ಅದೇ ರೀತಿ ಕಡಿಮೆ ರಕ್ತದೊತ್ತಡಕ್ಕೆ ರಾಮ ಬಾಣವಾಗಿದ್ದು ದೇಹದಲ್ಲಿ ರಕ್ತ ಪರಿಚಲನೆಯು ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಈ ಹಣ್ಣು ಮೂಳೆಯ ಆರೋಗ್ಯವನ್ನು ಹೆಚ್ಚಿಸಿ ಮೂಳೆಯಲ್ಲಿ ಖನಿಜಾಂಶವನ್ನು ಹೆಚ್ಚಿಸುತ್ತದೆ ಮತ್ತು ಇದರ ವಿಶೇಷ ಗುಣಗಳು ಮನುಷ್ಯನ ಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸಿ ಮುಪ್ಪಾದಂತೆ ಕಾಣುವುದನ್ನು ತಡೆಯುತ್ತದೆ. ಈ ಹಣ್ಣನ್ನು ಉರಿಯೂತ ತಡೆಗಟ್ಟುವಲ್ಲಿಯೂ ಸಹ ಬಳಸಲಾಗುತ್ತದೆ. ನಿದ್ರೆಯನ್ನು ಹೆಚ್ಚಿಸುವ ವಿಶೇಷ ಗುಣ ಈ ಹಣ್ಣಿಗಿದ್ದು, ಅಸ್ತಮಾ ಖಾಯಿಲೆಯ ನಿಯಂತ್ರಣಕ್ಕೂ ಈ ಹಣ್ಣನ್ನು ನೇರವಾಗಿ ಬಳಸಲಾಗುತ್ತದೆ.

ಈ ಹಣ್ಣು ಬಳ್ಳಿಗಳಲ್ಲಿ ಬೆಳೆಯುವ ಕಾರಣದಿಂದಾಗಿ ಇದು ಪರಾವಂಬಿ ಸಸ್ಯವಾಗಿದೆ. ಅಂದರೆ ಇತರ ಮರಗಿಡಗಳನ್ನು ಆಶ್ರಯಿಸಿ ಅವುಗಳ ಸುತ್ತ ಹಬ್ಬಿಕೊಂಡು ಬೆಳೆಯುವುದರ ಜೊತೆಗೆ ಉತ್ತಮ ಸೂರ್ಯನ ಬೆಳಕನ್ನೂ ಸಹ ಬಯಸುತ್ತದೆ. ಈ ಹಣ್ಣಿಗೆ ಸುಮಾರು ನೂರಾರು ವರ್ಷಗಳ ಇತಿಹಾಸವಿದ್ದು ಸುಮಾರು 500 ಕ್ಕೂ ಮಿಕ್ಕಿದ ಪ್ರಬೇಧಗಳಲ್ಲಿ ಇದು ಲಭ್ಯವಿದೆ. ಆದರೆ ಇದರ ಲಭ್ಯತೆ ಪ್ರಪಂಚದಾದ್ಯಂತ ವಿಭಿನ್ನವಾಗಿದೆ.

ಸಂತೋಷ್ ರಾವ್, ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ : 9742884160

Related post

Leave a Reply

Your email address will not be published. Required fields are marked *