ಬಂಗಾರದ ಹನಿಗಳು – ಕಂಸ

ಬಂಗಾರದ ಹನಿಗಳು – ಕಂಸ – ಕವನ ಸಂಕಲನ

ಕವನ ಸಂಕಲನ
ಲೇಖಕರು: ಕಂಚುಗಾರನಹಳ್ಳಿ ಸತೀಶ್ (ಕಂಸ)
ಪ್ರಕಾಶಕರು: ಕಂಸ ಪ್ರಕಾಶನ

ಲೇಖಕರ ಪರಿಚಯ

ಕಂಚುಗಾರನಹಳ್ಳಿ ಸತೀಶ್ ಕವನಗಳು, ಚುಟುಕುಗಳು, ಕಥೆಗಳು, ಆಧುನಿಕ ವಚನಗಳು, ಶಿಶು ಗೀತೆಗಳು, ನ್ಯಾನೋ ಕಥೆಗಳು, ಹಾಯ್ಕುಗಳು, ಗಝಲ್ ಗಳು, ಟಂಕಾಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಂಚುಗಾರನಹಳ್ಳಿ ಇವರು ಹುಟ್ಟಿದ ಊರು. ಇವರ ಪ್ರಕಟಿತ ಕೃತಿಗಳು ಸ್ಯಾನಿಟರಿ ಪ್ಯಾಡ್, ಮತ್ತು ಬಂಗಾರದ ಹನಿಗಳು.

ಕವಿತೆ ಎನ್ನುವುದು ಅಂತರಂಗದ ಪಿಸುಮಾತು.ನಾ ಮುಂದು ತಾ ಮುಂದು ಎಂದು ಓಡೋಡಿ ಬರುವ ಭಾವನೆಗಳ ಸಂಕಲನವೇ ಕವಿತೆ.ಅಂತಹ ಒಂದು ನೂರು ಕವನಗಳ ಸಂಗ್ರಹವೇ ಈ ” ಬಂಗಾರದ ಹನಿಗಳು (ಪ್ರತಿ ಹನಿಗೂ ಬೆಲೆ ಇದೆ…..)”ಕೃತಿಯಾಗಿದೆ.

ಈ ಕವನ ಸಂಕಲನದ ರೂವಾರಿಗಳಾದ ಶ್ರೀ ಕಂಚುಗಾರನಹಳ್ಳಿ ಸತೀಶ್(ಕಂಸ) ಅವರ ಕೃತಿಯ ಹೆಸರೇ ಬಹಳ ಅರ್ಥಗರ್ಭಿತವಾಗಿದೆ. ಕವಿತೆಯಲ್ಲಿನ ಸಾಲುಗಳು,ಸಾಲುಗಳಲ್ಲಿನ ಪದಗಳು, ಪದಗಳಲ್ಲಿನ ಅಕ್ಷರಗಳು ಪ್ರತಿಯೊಂದು ಕೂಡ ಒಂದೊಂದು ಬಂಗಾರದ ಹನಿ ಇದ್ದಂತೆ.ಕವಿತೆ ಕಟ್ಟುವಲ್ಲಿನ ಶ್ರಮ ಕವಿ ಮಾತ್ರ ಅರಿತಿರುವ. ಯಾರು ಬೇಕಾದರೂ ಕವನಗಳ ಓದುಗರಾಗಬಹುದು,ಕೇಳುಗರಾಗಬಹುದು. ಆದರೆ ಕವಿ ಮಾತ್ರ ಕವಿತೆಯ ಶಿಲ್ಪಿಯಾಗಬಲ್ಲ.

ಕವಿಗಳಾದ ಕಂಸ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು,ಪ್ರವೃತ್ತಿಯಲ್ಲಿ ಒಬ್ಬ ಯುವ ಸಾಹಿತಿ.ಈಗಾಗಲೇ ಅಪ್ಪ ಪ್ರಶಸ್ತಿ ವಿಜೇತ “ಸ್ಯಾನಿಟರಿ ಪ್ಯಾಡ್(Only for Ladies)”ಎಂಬ ಕಾದಂಬರಿಯನ್ನು ವಿಶೇಷವಾಗಿ ಕರುನಾಡಿಗೆ ಅರ್ಪಿಸಿ, ಸ್ತ್ರೀ ಪರ ಕಾಳಜಿಯನ್ನು ಮೆರೆಯುವುದರ ಮೂಲಕ ತಮ್ಮನ್ನು ತಾವು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕವಿತೆ ಕಟ್ಟುವ ಕಾರ್ಯ ಒಂದು ತಪಸ್ಸು ಇದ್ದಂತೆ. ನಾನು ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮತ್ತು ಬರೆದೇ ತೀರುತ್ತೇನೆ ಎಂಬ ಹಠ ಇದ್ದಾಗ ಮಾತ್ರ ಬರೆಯಲು ಸಾಧ್ಯವಾಗುವುದು. ಬಲ್ಲವನಿಗೆ ಛಲ ಒಂದಿದ್ದರೆ ಜಗಮಲ್ಲನಾಗುವುದರಲ್ಲಿ ಸಂಶಯವಿಲ್ಲ.

ಪ್ರಸ್ತುತ ಕೃತಿಯ ಒಳಹೊಕ್ಕಾಗ,ಕವನಗಳು ಜಗತ್ತಿನ ನೈಜತೆಗೆ ಹಿಡಿದ ಕೈಗನ್ನಡಿಯಾಗಿವೆ.ಬದುಕಿನ ಸಂಘರ್ಷಗಳು, ರಸಮಯ ಕ್ಷಣಗಳು,ಜೀವನದುದ್ದಕ್ಕೂ ಎದುರಾಗುವ ಕೌತುಕಗಳು…..ಹೀಗೆ ಹತ್ತು ಹಲವಾರು ವಿಷಯಗಳನ್ನು ಸಮಗ್ರವಾಗಿ ಒಳಗೊಂಡಿವೆ. ಓದಿ ಆಲೋಚನೆಗೊಮ್ಮೆ ಇಳಿದಾಗ ಹೌದಲ್ಲವೇ? ಎಷ್ಟೊಂದು ಸತ್ಯ. ನಮ್ಮ ಬದುಕಲ್ಲಿಯೂ ಕೂಡ ಇದೇ ರೀತಿ ನಡೆಯುತ್ತದಲ್ಲವೇ? ಎಂದು ಅನಿಸುವುದು ಖಂಡಿತ. ಕವಿ ಮನದ ಮಾತುಗಳಲ್ಲಿರುವ ಮಾಧುರ್ಯವನ್ನು ಓದಿಯೇ ತಿಳಿಯಬೇಕು.ಓದುತ್ತಾ ಹೋದಂತೆ ಈ ಕೃತಿಯು ಭಾವಾಂತರಂಗದಲ್ಲಿ ತರಂಗಗಳನ್ನು ಹೊರಹೊಮ್ಮಿಸುವುದು.ಸಮಾಜದಲ್ಲಿರುವ ಅಸಹಜ ವಿಚಾರಗಳನ್ನು ಕೂಡ ಸಹಜ ಎಂದು ಭಾಸವಾಗುವಂತೆ ಪದಗಳನ್ನು ಹೆಣೆದಿದ್ದಾರೆ ನಮ್ಮ ಕಂಸ ಅವರು.

ಮಲೆನಾಡಿನ ಮೋಜಿನಲ್ಲಿ ಬೆಳೆದ ಕವಿಗಳು ವಿಷಯ ವಸ್ತುವಿನ ಆಯ್ಕೆಯಲ್ಲೂ ಕೂಡ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದಾರೆ.ಕೋಟಿ ಕೊಟ್ಟರೂ ಮರಳಿ ಬಾರದ ಆ ಬಾಲ್ಯದ ದಿನಗಳ ನೆನಪಿನ ಬುತ್ತಿಯನ್ನು ನಮಗೆಲ್ಲ ಉಣಬಡಿಸಿದ್ದಾರೆ.ಸಮಸ್ಯೆ ಎಂಬುದು ನೋಡಲು ಕಂಡು ಮುಟ್ಟಲು ಸಿಗದ ನೆರಳಿನಂತೆ ಎನ್ನುವ ಕವಿ ಆಶಯವು ಮಾರ್ಮಿಕವಾಗಿದೆ.ಕಡಗೋಲಿನ ಹೊಡೆತಕ್ಕೆ ಸಿಕ್ಕು ಒದ್ದಾಡಿದಾಗ ಮಾತ್ರ ಹಾಲಿಗೆ ತುಪ್ಪದ ಶ್ರೇಷ್ಠತೆ ಬರಲು ಸಾಧ್ಯ.ಸಲೀಸಾದ ದಾರಿಯಲ್ಲಿ ಯಾರು ಬೇಕಾದರೂ ಪಯಣಿಸಬಹುದು.ಆದರೆ ಹೆಜ್ಜೆ-ಹೆಜ್ಜೆಗೂ ಅಡೆತಡೆಗಳಿರುವ ದಾರಿಯಲ್ಲಿ ಸಾಮರ್ಥ್ಯ ಇದ್ದವನಿಗೆ ಮಾತ್ರ ಪಯಣ ಸಾಧ್ಯ. ಸಿಕ್ಕ ಕಂದರಗಳನ್ನೆಲ್ಲ ಮುಚ್ಚಿ,ಪದಗಳ ಹಂದರ ಹೆಣೆದು ಕವಿಮಿತ್ರರು”ಬಂಗಾರದ ಹನಿಗಳು”ಕವನ ಸಂಕಲನದ ಮೂಲಕ ಎರಡನೆಯ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ. ಸೋಲಲ್ಲೇ ಗೆಲುವಿದೆ ಎಂಬುದನ್ನು ಈ ಕೃತಿಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ. ಸ್ವಂತ ಸಾಮರ್ಥ್ಯದಿಂದ ಬೆಳೆದ ವ್ಯಕ್ತಿಗಳಿಗೆ ಬೆಲೆ ಹೆಚ್ಚು ಎಂದು ಯುವಜನತೆಗೆ ಕಿವಿ ಮಾತನ್ನು ಹೇಳಿದ್ದಾರೆ.

“ಬಂಗಾರದ ಹನಿಗಳು”ಕವನ ಸಂಕಲನವನ್ನು ಶಾಲಾ ಮಕ್ಕಳಿಗೆ ಅರ್ಪಿಸಿದ್ದು ಸಾರ್ಥಕವೆಂದೆನಿಸಿದೆ. ಶಾಲಾ ಮಕ್ಕಳು ಒಬ್ಬ ಶಿಕ್ಷಕನಿಗೆ ಬಂಗಾರವನ್ನು ಕೂಡ ಮೀರಿಸುವಂತಹ ಒಂದು ಶಾಶ್ವತ ಆಸ್ತಿ.ಈ ಸಮಾಜದಲ್ಲಿ ಒಬ್ಬ ಶಿಕ್ಷಕನಿಗೆ ಇರುವ ಗೌರವ ಮತ್ತ್ಯಾವ ಹುದ್ದೆಯಲ್ಲೂ ಸಿಗದು.ಶಿಕ್ಷಕನ ಕೈಯಲ್ಲಿನ ಬಳಪ ಮತ್ತು ಸಾಹಿತಿಯ ಕೈಯಲ್ಲಿನ ಲೇಖನಿ ಸಮಾಜದ ಡೊಂಕುಗಳನ್ನು ತಿದ್ದುವ ಆಯುಧಗಳು ಇದ್ದಂತೆ. ಅಂತಹ ಒಂದು ಪವಿತ್ರ ವೃತ್ತಿಯಲ್ಲಿರುವ ಕಂಸ ಅವರಿಗೆ ಈ ಕೃತಿಯು ಅಭೂತಪೂರ್ವ ಯಶಸ್ಸನ್ನು ತಂದು ಕೊಡಲಿ ಎಂದು ಶುಭಹಾರೈಕೆಗಳು.ಮತ್ತಷ್ಟು ಕೃತಿಗಳು ಅವರ ಲೇಖನಿಯಿಂದ ಹೊರಹೊಮ್ಮಲಿ ಎಂದು ಆಶಿಸುವ……

ಶ್ರೀಮತಿ ಭುವನೇಶ್ವರಿ.ರು.ಅಂಗಡಿ
ಶಿಕ್ಷಕಿಯರು
ಸ.ಹಿ.ಪ್ರಾ.ಶಾಲೆ, ಸಂಕಧಾಳ
ತಾ-ನರಗುಂದ ಜಿ-ಗದಗ
ದೂ: 9945095539

Related post

1 Comment

  • ವಿಮರ್ಶಾತ್ಮಕ ಲೇಖನ ಅಭಿನಂದನೆಗಳು.

Leave a Reply

Your email address will not be published. Required fields are marked *