ಬಂಡೆಗೊರವ – Great Thick-knee Great Stone-curlew

ರಂಗನತಿಟ್ಟಿನಲ್ಲಿ ನೀವು ದೋಣಿವಿಹಾರಕ್ಕೆ ಹೋಗಿ ದೊಡ್ಡಗಾತ್ರದ ಹಕ್ಕಿಗಳನ್ನು ನೋಡಿ ಆನಂದಿಸುತ್ತಾ ಹಾಗೇ ದೋಣಿ ಇನ್ನೇನು ಹೊರಟ ಸ್ಥಾನಕ್ಕೆ ಹಿಂದಿರುಗಿತು ಎನ್ನುವಾಗ ಬಂಡೆಯ ಮೇಲೆ ಕಾಣುವ ದಪ್ಪಕೊಕ್ಕಿನ, ಎದ್ದುಕಾಣುವ ಹಳದಿ “ಕನ್ನಡಕದ” ಹಕ್ಕಿಯೇ ಬಂಡೆಗೊರವ!  ಪ್ರಧಾನವಾಗಿ ಬೂದು-ಬಿಳಿ ಹಕ್ಕಿ. ಬಲವಾದ ತುಸು ಮೇಲ್ತಿರುಗಿರುವ ಕೊಕ್ಕು. ಹಾರುವಾಗ  ರೆಕ್ಕೆಯ ಮೇಲಿನ ಬಿಳಿ ಮಚ್ಚೆ ಹಾಗೂ ರೆಕ್ಕೆಯಂಚಿನ ಕಪ್ಪು ಬಣ್ಣ ಪ್ರಧಾನವಾಗಿ ಕಾಣುತ್ತದೆ. ಇದರ ಚಟವಟಿಕೆ ಸಂಜೆ ಮತ್ತು ರಾತ್ರಿಯೇ ಹೆಚ್ಚು. ಆದರೆ, ಹಗಲಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.  ಕಲ್ಲಿನ ಸಂದಿಯಲ್ಲಿನ ಏಡಿ ಪ್ರಧಾನವಾದ ಆಹಾರ. ಅದನ್ನು ಎಳೆಯಲು ಕೊಕ್ಕು ಮಾರ್ಪಾಡುಗೊಂಡಿದೆ.

ಚಿತ್ರ : ಜಿ ಎಸ್ ಶ್ರೀನಾಥ

ಇಂಗ್ಲಿಷಿನಲ್ಲಿ Great Thick-knee (Great Stone-curlew) Esacus recurvirostris ಎಂದು ಕರೆಯಲಾಗುವ ಇವು ಗಾಬರಿಗೊಳಿಸಿದಾಗ ಹಾರುವುದಕ್ಕಿಂತಲೂ ಓಡಿ ತಪ್ಪಿಸಿಕೊಳ್ಳುತ್ತದೆ. ಬಂಡೆಗಳಿರುವ ನದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆಯಾದರೂ ಕೆಲವು ಕರಾವಳಿ ಪ್ರದೇಶದಲ್ಲಿಯೂ ಇರುತ್ತದೆ.  ಒಂದು, ಎರಡು ಅಥವಾ ಕೆಲವೇ ಹಕ್ಕಿಗಳ ಗುಂಪಿನಲ್ಲಿ ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಹಾಗೂ ಶ್ರೀಲಂಕಾಗಳಲ್ಲಿಯೂ ಕಂಡುಬರುತ್ತದೆ. ಇರಾನಿನಲ್ಲಿಯೂ ಇದೆ.  ಆಫ್ಘಾನಿಸ್ತಾನದಲ್ಲಿ ಇರಬಹುದು ಎಂಬ ಸಂದೇಹವನ್ನು ಕೆಲವು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇದರಂತೆ ಕಾಣುವ ಇತರ ಪ್ರಭೇದಗಳುಂಟು.

ನೀವು ಗಮನಿಸಿರಬಹುದು ಪ್ರತೀಹಕ್ಕಿಯೂ ತನಗೆ ಅನುಕೂಲಕರವಾದ ಒಂದು ವಾತಾವರಣದಲ್ಲಿ ಕಂಡುಬರುತ್ತದೆ ಎಂದು. ಇದೇ ಒಂದು ಬಗೆಯ ಅರಿವು. ಎಲ್ಲಿಯವರೆಗೆ ಆ ಅನುಕೂಲಕರ ವಾತಾವರಣವಿರುವುದೋ ಅಲ್ಲಿಯವರೆಗೂ ಹಕ್ಕಿಗಳಿಗೆ ಆತಂಕವಿಲ್ಲ. ಕೆಲವು ಬಾಹ್ಯ ತೊಂದರೆಗಳಿರಬಹುದು. ಆದ್ದರಿಂದ ನಾವು ಈ ವಾತಾವರಣವನ್ನು (ಇದನ್ನು ಶಿಷ್ಟವಾಗಿ ಆವಾಸ – ಹ್ಯಾಬಿಟಾಟ್ ಎಂದು ಕರೆಯುತ್ತಾರೆ) ಕಾಪಾಡಿದರೆ ಹಕ್ಕಿಯನ್ನು ಕಾಪಾಡುವಲ್ಲಿ ದೊಡ್ಡ ಹೆಜ್ಜೆಯಿಟ್ಟಂತೆ. ಈ ಭೂಮಿ ಅವುಗಳದ್ದೂ ಆಗಿರುವಾಗ, ಜೊತೆಗೆ ನಮ್ಮ ಬದುಕಿಗೆ ಸಹಾಯಕವೂ ಪೂರಕವೂ ಆಗಿರುವಾಗ ಅವನ್ನು ಕಾಪಾಡುವ ಹೊಣೆಗಾರಿಕೆಯನ್ನು ನಾವು ನಿಭಾಯಿಸುತ್ತೇವೆ, ಅಲ್ಲವೆ?

ಈ ಹಕ್ಕಿ ನಿಮಗೆ ಕಂಡು ಬಂದಲ್ಲಿ kalgundi.naveen@yahoo.com ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು : ಜಿ ಎಸ್ ಶ್ರೀನಾಥ ಹಾಗು ದಿಲೀಪ್ ವರ್ಮ

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *