ಬಂಧು ಒಂದು ಮನವಿ

ಕಲಕಬೇಡ ಕುಲುಕಬೇಡ

ನಮ್ಮ ಬದುಕ ಬಂಧು

ಕಲಕಿ ಕದಡಿ

ಬಗ್ಗಡ  ಮಾಡಿಬಿಡಬೇಡ

ನೋಡುಗಣ್ಣುಗಳಿಗೆ

ಕುಚೋದ್ಯಕಾರಣ ಆಗಿ

ಆ ಕಲುಷಿತ ಬದುಕು

ದುರ್ಗಂಧ ಉಗ್ಗೀತು…!

ನಮ್ಮ ನಾವಿದ್ದ ಹಾಗೆಯೆ

ಬಿಟ್ಟು ಬಿಡುವ ಕೃಪೆತೋರು

ನಮ್ಮ ಹುಟ್ಟೇ ಹಾಗಿರಬಹುದು

ಬಹುಷಃ

ನಿನ್ನ ಕಣ್ಣೀಗ ಹೇಗೆ

ನೋಡುತ್ತಿದೆಯೋ ಹಾಗೆ

ಅಥವ ಕಾಣದೆಯೂ ಇರಬಹುದು ನಿನಗೆ

ನಿನ್ನ ಕಣ್ಣ ಸೋಂಕಿಂದ

ನಮ್ಮ ನೈಜ ರೂಪುರೇಖೆ     

ಹೇಗೋ ಏನೋ

ನಾವಂತು ಅರಿಯೆವು

ಆದರೂ ನೀ ನಮ್ಮ ಬಂಧು

ಅದು ಯಾವ ರೀತಿಯೇ ಇರಲಿ

ನಂಟಾಗಲಿ ಗೆಳೆತನವಾಗಲಿ

ನಾವೂ ನಿನ್ನ ಬಂಧುಬಂಧವೆ

ಹೌದಲ್ಲವೆ ಹೇಳು…

ನಮ್ಮ ದೈಹಿಕ ಮಾನಸಿಕ

ಲಕ್ಷಣಗಳೆಲ್ಲ ವೈಯಕ್ತಿಕ

ಹಾಗೆಯೇ ನಿನ್ನದೂ ಕೂಡ

ಜಗತ್ತಿನಾದ್ಯಂತ ಇದ್ದ ಹಾಗೆ

ಎಂದೆಂದಿಗೂ

ಎಲ್ಲವೂ ಎಲ್ಲೆಲ್ಲೂ ಅನಂತ

ಪರಿಮಾಣದ ಬೆರಳುಗಳು…!

ವೈವಿಧ್ಯ ವೈಶಾಲ್ಯ

ಈ ಧರೆಯ ವೈಶಿಷ್ಟ್ಯ…!

ಏನಾಗಲಿ ಎಂತಾಗಲಿ

ನೀ ನಮ್ಮ ಬಂಧು

ನಮಗಂತೂ ಬೇಕೇ ಬೇಕು

ಅಂತೆಯೇ ನಾವೂ ಸಹ

ನಿನಗೂ ಇರಬಹುದು

ಎಂಬನಿಸಿಕೆ ಕೂಡ ಸಹಜ ಅಲ್ಲವೆ

ಹಾಗಂತ ನೀನು ತೋರುವ

ಕೈಮರದ ಮತ್ತದರ ದಿಕ್ಕು   

ದಾರಿಗಳ ಹಂಗು

ನಮಗೇಕೆ ಬೇಕು

ನಮ್ಮ ದಾರಿ ನಮಗಿರಲಿ

ನಮ್ಮ ಬಾಳು ನಮಗಿರಲಿ…!

ಡಾ. ಅರಕಲಗೂಡು ನೀಲಕಂಠ ಮೂರ್ತಿ

– ಮೈಸೂರು

Related post