ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ

ಬಣ್ಣವನ್ನು ಬದಲಾಯಿಸುವ ಈ ಗೋಸುಂಬೆ

ಕೆಲವೊಂದು ವ್ಯಕ್ತಿಗಳ ಎದುರುಗಡೆ ಮತ್ತು ಹಿಂದುಗಡೆಯಿಂದ ಒಂದೊಂದು ರೀತಿಯಿಂದ ಮಾತನಾಡುವವರನ್ನು, ಮಾತು ಬದಲಾಯಿಸುವವರನ್ನು ಗೋಸುಂಬೆಗಳು ಎಂದು ಸಾಮಾನ್ಯವಾಗಿ ಕರೆಯುವುದು ವಾಡಿಕೆ. ಇದರ ಅರ್ಥ ತಮಗೆ ಅಗತ್ಯವಿರುವ ರೀತಿ ತಮ್ಮ ಮನಸ್ಸನ್ನು ಬದಲಾಯಿಸುವವರು ಎಂದು ಅರ್ಥ. ಅದೇ ರೀತಿ ಇಲ್ಲೊಂದು ಹಲ್ಲಿಯ ಜಾತಿಯ ಪ್ರಾಣಿಯೊಂದಿದ್ದು, ಅದು ತಾನು ಇರುವ ವಾತಾವರಣಕ್ಕೆ ಅನುಗುಣವಾಗಿ ತನ್ನ ಮೈಯ ಬಣ್ಣವನ್ನು ಬದಲಾಯಿಸುತ್ತದೆ. ಅದರ ಹೆಸರು ‘ಗೋಸುಂಬೆ’ ಎಂದು.

ಗೋಸುಂಬೆಗಳು ಹಲ್ಲಿಯ ಜಾತಿಗೆ ಸೇರಿದವುಗಳಾಗಿದ್ದು ವಿಶಿಷ್ಟ ಹಾಗೂ ಹೆಚ್ಚು ವಿಶೇಷವಾದ ಗುಣಗಳನ್ನು ಹೊಂದಿರುವುದರಿಂದ ಇವುಗಳನ್ನು ಪ್ರಪಂಚದ ಅತ್ಯಂತ ಹಳೆಯ ಹಲ್ಲಿಗಳೆಂದು ಗುರುತಿಸಲಾಗಿದೆ. 2015 ರ ವೇಳೆಗೆ ಪ್ರಪಂಚದಲ್ಲಿ ಸುಮಾರು 215 ಪ್ರಬೇಧದ ಹಲ್ಲಿಗಳನ್ನು ಗುರುತಿಸಲಾಗಿದೆ. ಉರಗ ವರ್ಗ ಹಾಗೂ ‘ಕೆಮಿಲಿಯಾನಿಡೀ’ ಕುಟುಂಬಕ್ಕೆ ಸೇರಿದ ಪ್ರಾಣಿ ಇದಾಗಿದ್ದು, ಇದನ್ನು ‘ಊಸರವಳ್ಳಿ’ ಎಂದೂ ಸಹ ಕರೆಯುತ್ತಾರೆ.

ಊಸರವಳ್ಳಿಗಳ ನಾಲಿಗೆಯು ಅದರ ಮೈಯ ಉದ್ದಕ್ಕಿಂತಲೂ ಹೆಚ್ಚಿದ್ದು, ತಮ್ಮ ನಾಲಿಗೆಯನ್ನು ತೀರಾ ಉದ್ದಕ್ಕೆ ಚಾಚಬಲ್ಲುದಾಗಿದೆ. ಇವು ತಮ್ಮ ಬಾಲವನ್ನು ಮರದ ಕೊಂಬೆಗೆ ಸುತ್ತಿ ಹಿಡಿದುಕೊಳ್ಳಬಲ್ಲುದು. ಇವುಗಳು ಸಂದರ್ಭ ಹಾಗೂ ವಾತಾವರಣಕ್ಕೆ ಅನುಗುಣವಾಗಿ ತಮ್ಮ ಮೈಯ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳು ದೀರ್ಘ ಕಾಲದವರೆಗೂ ಆಹಾರವಿಲ್ಲದೇ ಬದುಕಬಲ್ಲವು. ಊಸರವಳ್ಳಿ ತನ್ನ ಎರಡೂ ಕಣ್ಣುಗಳನ್ನು ಬೇರೆ ಬೇರೆ ದಿಕ್ಕಿನಲ್ಲಿ ಸ್ವತಂತ್ರವಾಗಿ ತಿರುಗಿಸಬಲ್ಲುದು. ಇದರ ಎರಡು ಬೆರಳುಗಳು ಮುಂದಕ್ಕೆ ಚಾಚಿದ್ದರೆ, ಇನ್ನೆರಡು ಹಿಂದಕ್ಕೆ ಹಕ್ಕಿಗಳ ಬೆರಳುಗಳಂತೆ ಚಾಚಿಕೊಂಡಿರುತ್ತವೆ.

ಎಲ್ಲ ಗೋಸುಂಬೆಗಳಿಗೂ ಬಣ್ಣ ಬದಲಿಸುವ ಶಕ್ತಿಯಿರುವುದಿಲ್ಲ, ಬದಲಿಗೆ ಪೂರ್ತಿ ಪ್ರಬುದ್ಧಾವಸ್ಥೆಗೆ ಬಂದ ಗಂಡು ಊಸರವಳ್ಳಿಗಳು ಮಾತ್ರ ಬಣ್ಣ ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಗೋಸುಂಬೆಗಳು ತಮ್ಮ ಸುತ್ತಲಿನ ಪರಿಸರದ ಬಣ್ಣಕ್ಕೆ ತಕ್ಕಂತೆ ತಮ್ಮ ಮೈ ಬಣ್ಣವನ್ನು ಹೊಂದಿಸಿಕೊಳ್ಳುತ್ತವೆ ಎನ್ನುವದು ತಪ್ಪು ತಿಳುವಳಿಕೆ. ಗೋಸುಂಬೆಗಳು ಬೇಕಾದಾಗೆಲ್ಲಾ ತಮ್ಮ ಮೈಬಣ್ಣವನ್ನು ಬದಲಾಯಿಸುವ ಬದಲು ಇವು ಕೆರಳಿದಾಗ ಮಾತ್ರ ತಮ್ಮ ಮೈಬಣ್ಣವನ್ನು ಬದಲಿಸುತ್ತವೆ. ಅದೇ ರೀತಿ ಹೆಣ್ಣು ಊಸರವಳ್ಳಿಗಳನ್ನು ಕಂಡಾಗ ಪ್ರಬುದ್ಧ ಗಂಡು ಊಸರವಳ್ಳಿಗಳು ಬಣ್ಣ ಬದಲಿಸುವುದು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.

ಗೋಸುಂಬೆಗಳ ಮೈಯ ಹೊರಚರ್ಮದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ವರ್ಣದ್ರವ್ಯವನ್ನು ಹೊಂದಿರುವ ಹಲವು ಜೀವಕೋಶಗಳಿವೆ. ಎಲ್ಲ ಜೀವಿಗಳ ಹೊರ ಚರ್ಮದಲ್ಲಿ ಜೀವಕೋಶಗಳ ನಡುವೆ ಕಪ್ಪುವರ್ಣ ದ್ರವ್ಯ ಇದೆ. ಹಲವು ಗೋಸುಂಬೆಗಳು ಕಪ್ಪು ವರ್ಣದ್ರವ್ಯವನ್ನು ಹರಡುವ ಮೂಲಕ ತಮ್ಮ ಮೈಬಣ್ಣವನ್ನು ಕಪ್ಪಾಗಿಸಿ ಮತ್ತು ಕಪ್ಪು ವರ್ಣದ್ರವ್ಯವನ್ನು ಕುಗ್ಗಿಸಿಕೊಂಡು ತಮ್ಮ ಮೈಬಣ್ಣವನ್ನು ಬಿಳುಪಾಗಿಸಿ ಹೊಂದಿಸಿಕೊಳ್ಳಬಲ್ಲವು. ಹೀಗೆ ಆಕ್ಟೋಪಸ್‌ಗಳೂ ತಮ್ಮ ಮೈಬಣ್ಣವನ್ನು ಬದಲಿಸಬಲ್ಲವು. ಕೆಲವು ಜೀವಿಗಳು ತಮ್ಮ ಮೈಯ ಚರ್ಮದ ಜೀವಕೋಶಗಳಲ್ಲಿ ಇರುವ ವರ್ಣದ್ರವ್ಯವನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ಬಣ್ಣವನ್ನು ಬದಲಿಸುತ್ತವೆ. ಗೋಸುಂಬೆಗಳು ತಮ್ಮ ಮೈಯಲ್ಲಿರುವ ಕೆಂಪು ಮತ್ತು ಹಳದಿ ಬಣ್ಣದ ವರ್ಣದ್ರವ್ಯವನ್ನು ಹಿಗ್ಗಿಸುವ ಮತ್ತು ಕುಗ್ಗಿಸುವ ಮೂಲಕ ತಮ್ಮ ಮೈಬಣ್ಣವನ್ನು ಬದಲಿಸುವ ಬದಲಿಗೆ ಇವುಗಳು ಹಳದಿ, ಕಿತ್ತಳೆ ಇಲ್ಲವೇ ಕೆಂಪು ಬಣ್ಣಕ್ಕಷ್ಟೇ ಬದಲಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಜಿನೇವಾದ ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ಅಧ್ಯಯನಕಾರರು ಒಟ್ಟಾಗಿ ನಡೆಸಿದ ಅಧ್ಯಯನಗಳಲ್ಲಿ ಗೋಸುಂಬೆಗಳ ಬದಲಾಗುವ ಮೈಬಣ್ಣಕ್ಕೆ ಕಾರಣ ಅವುಗಳ ಹೊರಮೈಯಲ್ಲಿರುವ ವಿಶೇಷ ಬಗೆಯ ಜೀವಕೋಶಗಳು ಮತ್ತು ಬೆಳಕಿನೊಂದಿಗೆ ಅವು ನಡೆದುಕೊಳ್ಳುವ ಬಗೆ ಎಂದು ತಿಳಿದುಬಂದಿದೆ. ಗೋಸುಂಬೆಗಳ ಮೈಬಣ್ಣ ಬದಲಾಗುವಂತೆ ಕಾಣಲು ಬೆಳಕನ್ನು ಪ್ರತಿಫಲಿಸುವ ಜೀವಕೋಶಗಳು ಕಾರಣ.

ಗೋಸುಂಬೆಗಳ ಮೈಯ ಚರ್ಮದಲ್ಲಿ ಇರುವ ವಿಶೇಷ ಬಗೆಯ ವರ್ಣಕೋಶಗಳು ಸಣ್ಣ ಹರಳುಗಳನ್ನು ಹೊಂದಿದ್ದು ಇವು ಬೆಳಕನ್ನು ಪ್ರತಿಫಲಿಸಬಲ್ಲವು. ಈ ಹರಳುಗಳೇ ಗೋಸುಂಬೆಗಳ ಬದಲಾಗುವ ಮೈಬಣ್ಣಕ್ಕೆ ಕಾರಣ ಎಂದು ತಿಳಿದುಬಂದಿದೆ. ಇವು ತಮ್ಮ ಮೈಯನ್ನು ಸಡಿಲಿಸಿದ್ದಾಗ ಮತ್ತು ಕೆರಳಿದಾಗ ತಮ್ಮ ಹೊರಮೈಯಲ್ಲಿ ಆಗುವ ಬದಲಾವಣೆಗಳಿಂದ ಮೈಯ ಬಣ್ಣವು ಬದಲಾದಂತೆ ಕಾಣುತ್ತದೆ. ಬೆಳಕನ್ನು ಪ್ರತಿಫಲಿಸುವ ವರ್ಣಕೋಶಗಳ ನಡುವಿನ ಅಂತರ ಬದಲಾದಂತೆ ಪ್ರತಿಫಲಿಸುವ ಬಣ್ಣದ ಪ್ರಮಾಣ ಬದಲಾಗುವುದರಿಂದ ಬೇರೆ ಬೇರೆ ಬಣ್ಣಗಳು ಕಾಣುತ್ತವೆ.

‘ಗೋಸುಂಬೆಗಳು ಮೈಸಡಿಲಿಸಿ ಕುಳಿತಾಗ ವರ್ಣಕೋಶಗಳ ನಡುವಿನ ಅಂತರ ಕಡಿಮೆಯಿದ್ದು ಇಂತಹ ಹೊತ್ತಿನಲ್ಲಿ ಕಡಿಮೆ ಪ್ರಮಾಣದ ಬೆಳಕನ್ನು ಪ್ರತಿಫಲಿಸಿ ಗೋಸುಂಬೆಯ ಮೈ ನೀಲಿ ಬಣ್ಣವನ್ನು ಹೊರಸೂಸುತ್ತದೆ’ ಎಂದು ಜಿನೀವಾ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಮೈಕಲ್ ಮಿಲಿಂಕೊವಿಚ್ ಹೇಳುತ್ತಾರೆ. ಇವು ಕೋಪಗೊಳ್ಳುತ್ತಿದ್ದಂತೆ ಇವುಗಳ ವರ್ಣಕೋಶಗಳ ನಡುವಿನ ಅಂತರ ಹೆಚ್ಚಾಗಿ ಹೆಚ್ಚಿನ ಪ್ರಮಾಣದ ಬೆಳಕು ಪ್ರತಿಫಲನ ಆಗುವುದರಿಂದ ಹಳದಿ, ಕಿತ್ತಳೆ ಇಲ್ಲವೇ ಕೆಂಪು ಬಣ್ಣದಂತೆ ಕಾಣುತ್ತದೆ ಎನ್ನುತ್ತಾರೆ ಮಿಲಿಂಕೊವಿಚ್.ಗೋಸುಂಬೆಗಳ ಮೈಯ ಹೊರತೊಗಲು ಹಿಗ್ಗಿದಾಗ ವರ್ಣಕೋಶಗಳ ನಡುವಿನ ಅಂತರ ಹೆಚ್ಚಿದಂತೆ, ಹೆಚ್ಚು ಪ್ರಮಾಣದ ಬೆಳಕು ಪ್ರತಿಫಲಿಸಿ ಕ್ರಮವಾಗಿ ನೀಲಿ, ಹಸಿರು, ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣ ಪ್ರತಿಫಲಿಸುತ್ತದೆ. ಗೋಸುಂಬೆಗಳು ಕೆರಳಿದಾಗ ಮೆಲ್ಲಗೆ ಕೆಂಪು ಬಣ್ಣಕ್ಕೆ ತಿರುಗುವುದಲ್ಲದೇ, ಅವುಗಳ ಮೈಬಣ್ಣದ ಹೊಳಪು ಹೆಚ್ಚುತ್ತದೆ. ಗೋಸುಂಬೆಗಳ ಈ ನಡವಳಿಕೆಯ ಕುರಿತು ಅಧ್ಯಯನಕ್ಕಾಗಿ ಅವುಗಳನ್ನು ಹಲವು ಬಗೆಯ ಪರೀಕ್ಷೆಗೆ ಒಳಪಡಿಸಲಾಯಿತು. ಹೆಚ್ಚು ಸ್ಪಷ್ಟತೆಯಿರುವ ಕ್ಯಾಮರಾ ಬಳಸಿ ಗೋಸುಂಬೆಗಳ ಮೈಬಣ್ಣದಲ್ಲಿ ಆಗುವ ಬದಲಾವಣೆಗಳನ್ನು ವೀಡಿಯೋ ಚಿತ್ರೀಕರಿಸಿ ಪರೀಕ್ಷಿಸಿದಾಗ ಬದಲಾಗುವ ಬೆಳಕಿನ ಪ್ರತಿಫಲನದಿಂದ ಬಣ್ಣಗಳು ಇವುಗಳ ಮೈಯಲ್ಲಿ ಬದಲಾದಂತೆ ಕಂಡುಬಂದಿತು ಎನ್ನುತ್ತಾರೆ ಮಿಲಿಂಕೊವಿಚ್. ಗೋಸುಂಬೆಗಳ ಹೊರಚರ್ಮದ ಮೇಲೆ ಒತ್ತಡ ಹೇರಿ ಹೊರ ಚರ್ಮವನ್ನು ಹಿಗ್ಗಿಸಿ ಮತ್ತು ಕುಗ್ಗಿಸಿ ವರ್ಣಕೋಶಗಳ ನಡುವಿನ ಅಂತರವು ಬದಲಾಗುವಂತೆ ಮಾಡಿ ನೋಡಿದಾಗಲೂ ಇದೇ ಬಗೆಯ ಬಣ್ಣದಲ್ಲಿನ ಬದಲಾವಣೆಯು ಕಂಡುಬಂದಿದೆ.

ಗೋಸುಂಬೆಗಳ ನೈಜ ಮೈಬಣ್ಣ ಯಾವುದು? ಗೋಸುಂಬೆಗಳು ಸಾಮಾನ್ಯವಾಗಿ ಮೈಸಡಿಲಿಸಿ ಕುಳಿತಿದ್ದಾಗ ಅವುಗಳ ಮೈಬಣ್ಣ ಎಲೆಗಳ ಹಸಿರು ಬಣ್ಣದಲ್ಲಿ ಇರುತ್ತದೆ ಎಂಬ ನಂಬಿಕೆಯಿದೆ. ಗೋಸುಂಬೆಗಳು ಮೈಸಡಿಲಿಸಿ ಕುಳಿತಾಗ ಅವುಗಳ ಮೈಯ ಚರ್ಮದಲ್ಲಿರುವ ಬೆಳಕನ್ನು ಪ್ರತಿಫಲಿಸಬಲ್ಲ ಹರಳುಗಳು ನೀಲಿ ಬಣ್ಣದ ಬೆಳಕನ್ನು ಪ್ರತಿಫಲಿಸುತ್ತವೆ. ಅದು ಹಳದಿ ಬಣ್ಣದ ವರ್ಣದ್ರವ್ಯದೊಂದಿಗೆ ಸೇರಿದಾಗ ನೀಲಿಬಣ್ಣದ ಬೆಳಕು ಹಸಿರಾಗಿ ಕಾಣುತ್ತದೆ. ಹೀಗಾಗಿ ಸಹಜವಾಗಿ ಮೈಸಡಿಲಿಸಿ ಕುಳಿತ ಗೋಸುಂಬೆಯ ಮೈಬಣ್ಣ ಹಸಿರಾಗಿ ಕಾಣುತ್ತದೆ. ಇನ್ನೊಂದು ಗಂಡು ಗೋಸುಂಬೆಯನ್ನು ಕಂಡು ಸಿಟ್ಟಿನಲ್ಲಿ ಬೆನ್ನಟ್ಟಿದಾಗ ಇಲ್ಲವೇ ಹೆಣ್ಣನ್ನು ಸೆಳೆಯಲು ಕೆರಳಿದಾಗ ಮಾತ್ರ ಅವುಗಳ ಮೈಬಣ್ಣ ಬದಲಾಗುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ. ಹೆಣ್ಣು ಮತ್ತು ಕಿರಿಯ ಗೋಸುಂಬೆಗಳ ಮೈಬಣ್ಣ ಮಂಕಾಗಿದ್ದು, ಇವುಗಳ ಮೈಯಲ್ಲಿ ಬಣ್ಣವನ್ನು ಪ್ರತಿಫಲಿಸುವ ಗ್ರಂಥಿಗಳು ಬಹಳ ಕಡಿಮೆ ಇದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮
ದೂ: 9742884160

Related post

Leave a Reply

Your email address will not be published. Required fields are marked *