ಬದಲಾದರೆ ಯೋಚನೆ, ನಿಮ್ಮದೇ ಗೆಲುವು

ಸುಮಾರು ಎರಡು ವರ್ಷಗಳ ಹಿಂದಿನ ಸಂಗತಿ. ವ್ಯಕ್ತಿತ್ವ ವಿಕಸನ ಕುರಿತಾದ ಬರಹಗಳ, ಪುಸ್ತಕಗಳ ಕುರಿತಾಗಿ ಯೋಚಿಸುತ್ತಿದ್ದೆ. ಇಂತಹ ಬಹುತೇಕ ಎಲ್ಲ ಬರಹಗಳಲ್ಲಿಯೂ ‘ಉಪದೇಶ’ಗಳು ಸಾಮಾನ್ಯ. ಇಂತಹ ಉಪದೇಶಗಳನ್ನು ಹೊರಗಿಟ್ಟು, ವ್ಯಕ್ತಿತ್ವ ವಿಕಸನ ಬರಹವನ್ನು ಬರೆಯಬಹುದೇ ಎನ್ನುವ ಕುತೂಹಲ ಮೂಡಿತು. ಸ್ಫೂರ್ತಿದಾಯಕ ಕತೆಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂದೇಶವನ್ನು ನೀಡಬಹುದಲ್ಲವೇ ಎನ್ನಿಸಿತು. ಅಂತಹ ನಾಲ್ಕಾರು ವಿಭಿನ್ನ ಕತೆಗಳನ್ನು ಬರೆದು ಜನಪ್ರಿಯ ಸಾಪ್ತಾಹಿಕ ‘ಮಂಗಳ’ಕ್ಕೆ ಕಳುಹಿಸಿದೆ. ಕೇವಲ ಎರಡೇ ವಾರಗಳಲ್ಲಿ ಸಂಪಾದಕ ಶ್ರೀ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರಿಂದ ಇಂತಹ ಇನ್ನೂ ಕೆಲವು ಬರಹಗಳನ್ನು ಕಳಿಸುವಂತೆ ಕರೆ ಬಂತು. ಬರೆದು ಕಳಿಸಿದೆ. ‘ಸೋಪಾನ’ ಹೆಸರಿನಲ್ಲಿ ಅವರು ‘ಮಂಗಳ’ದಲ್ಲಿ ಅಂಕಣವನ್ನು ಆರಂಭಿಸಿದರು.

ಆರು ತಿಂಗಳಿಗೂ ಅಧಿಕ ಕಾಲ ‘ಸೋಪಾನ’ ಪ್ರಕಟವಾಯಿತು. ಉತ್ತಮ ಪ್ರತಿಕ್ರಿಯೆಗಳೂ ಬಂದವು. ವ್ಯಕ್ತಿತ್ವ ವಿಕಸನ ಬರಹವನ್ನು ಹೀಗೂ ಬರೆಯಬಹುದು ಎನ್ನುವುದಕ್ಕೆ ಓದುಗರ ಬೆಂಬಲ ವ್ಯಕ್ತವಾಯಿತು.

ಈ ಅಂಕಣ ಬರಹಗಳಿಗೆ ಪುಸ್ತಕ ರೂಪ ನೀಡಲು ಇದೀಗ ‘ಸಾಹಿತ್ಯ ಲೋಕ’ ಪ್ರಕಾಶನದ ಉತ್ಸಾಹಿ ಯುವಕ ಶ್ರೀ ರಘುವೀರ ಸಮರ್ಥ ಮುಂದೆ ಬಂದಿದ್ದಾರೆ. ಪುಸ್ತಕಕ್ಕಾಗಿ ಇನ್ನಷ್ಟು ಇಂತಹುದೇ ಬರಹಗಳನ್ನು ಹೊಸದಾಗಿ ಬರೆದು ಸೇರಿಸಿದ್ದೇನೆ.

ರಕ್ಷಾಪುಟ ಅಂತಿಮಗೊಳಿಸಿದ್ದಾರೆ. ಒಳಪುಟಗಳ ವಿನ್ಯಾಸ ಅಂತಿಮ ಹಂತದಲ್ಲಿದೆ. ಇನ್ನೆರಡು ವಾರಗಳಲ್ಲಿ ಪುಸ್ತಕವನ್ನು ಹೊರತರುವ ಉತ್ಸಾಹದಲ್ಲಿದ್ದಾರೆ.

Related post