ಬದಲಾವಣೆ ಜಗದ ನಿಯಮ – ಡಿ ವಿ ಜಿ

ಬದಲಾವಣೆ ಜಗದ ನಿಯಮ

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ॥
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ – ಮಂಕುತಿಮ್ಮ ॥

ನಾನು ಮತ್ತೆ ಮತ್ತೆ ಓದಿಕೊಳ್ಳುವ,ಪ್ರತಿ ಬಾರಿಯೂ ಹೊಸ ಹೊಳಹನ್ನು ಕಂಡುಕೊಳ್ಳುವಂತೆ ಮಾಡುವ ಕಗ್ಗ ಇದು.

ಪ್ರಕೃತಿಯಲ್ಲಿ ಕಾರ್ಯಕಾರಣ ಸಂಬಂಧ ಎನ್ನುವುದು ಸಹಜ ಪ್ರಕ್ರಿಯೆ.
ಹುಟ್ಟನ್ನು ಹಿಂಬಾಲಿಸುವ ಸಾವು;ಅದು ಕೊಡಬಹುದಾದ ನೋವು,ಸ್ವಲ್ಪ ಸಮಯದಲ್ಲೇ ಬರುವ ಮರೆವು ಇವೆಲ್ಲವೂ ನಮ್ಮ ಬದುಕಿನ ಅಗತ್ಯವೂ ಹೌದಲ್ಲವೇ!!!..
ಇಂದು ಒಂದು ದೇಹದಲ್ಲಿದ್ದ ಜೀವಕಣ…ದೇಹಾವಸಾನದ ನಂತರ ಮತ್ತೊಂದು ದೇಹಕ್ಕೆ ಜೀವ ಕೊಡುವ ವಿಸ್ಮಯ ಈ ಪ್ರಕೃತಿ ತಾನೇ ಮಾಡಿಕೊಂಡ ನಿಯಮ.
ಜೀವ ಕಳೆದುಕೊಂಡ ದೇಹ ಮಣ್ಣಲ್ಲಿ ಮಣ್ಣಾಗಿ ಮುಂದೆ ಚಿಗುರೊಡೆವ ಸಸಿಗೆ ಗೊಬ್ಬರವಾಗುವ ಪರಿ , ಬದಲಾವಣೆ ಜಗದ ನಿಯಮ ಹೌದಾದರೂ..ಪ್ರಕೃತಿ ತನ್ನದೇ ಆದ ಚೌಕಟ್ಟಿನೊಳಗೆ ಇದೆಲ್ಲವನ್ನೂ ನಿರ್ವಹಿಸಿಕೊಳ್ಳುತ್ತದೆ.

ಅಮಾವಾಸ್ಯೆಯ ನಂತರ ಬರುವ ಹುಣ್ಣಿಮೆ….ವಸಂತದಿಂದ ಹೇಮಂತದವರೆಗಿನ ಋತು ಇವೆಲ್ಲವೂ ಪ್ರಕೃತಿಯ ವಿಸ್ಮಯಗಳು.

ಸತತ ಕೃಷಿಯೋ ಪ್ರಕೃತಿ….

ಸೃಷ್ಟಿಯ ಆದಿಯಿಂದ ಇಂದಿನವರೆಗೂ ಪ್ರತಿ ಕ್ಷಣ ಸಾವಿರಾರು ಜೀವಿಗಳು ಈ ಜಗತ್ತಿನಲ್ಲಿ ಜನಿಸುತ್ತಿವೆ ಮತ್ತು ಅಳಿಯುತ್ತಿವೆ.
ಕೋಟ್ಯಂತರ ಜೀವಿಗಳ ಸೃಷ್ಟಿ ಮತ್ತು ಅಳಿವು ಪ್ರತಿಕ್ಷಣವೂ ನಡೆಯುತ್ತಿದೆ. ಪ್ರಾಣಿಗಳು ಪಕ್ಷಿಗಳು ಕೀಟಗಳು ಮಾನವರು ಮತ್ತು ಜಲಚರಗಳಲ್ಲಿ ನಿರಂತರ ಈ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನು ಅರಿತಲ್ಲಿ ನಮಗೆ ದೊರಕಿರುವ ಈ ಬದುಕನ್ನು ಸಾರ್ಥಕಪಡಿಸಿಕೊಳ್ಳಲೇಬೇಕೆನಿಸುತ್ತದೆ ಅಲ್ಲವೇ!?
ಆದರೆ ಅದು ಹೇಗೆ!?
ಇದು ವ್ಯಕ್ತಿಗತವಾಗಿ ಕಂಡುಕೊಳ್ಳಬೇಕಾದ ಉತ್ತರ…

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *