ಬದುಕಿನ ಪಯಣ ಮುಗಿಸಿದ ನಟ ಶಿವರಾಂ

ಕನ್ನಡ ಚಿತ್ರರಂಗದ ಇನ್ನೊಂದು ಹಿರಿಯ ಜೀವ ದೈವ ಪಾದ ಸೇರಿದೆ. ನಮ್ಮೆಲ್ಲರ ನೆಚ್ಚಿನ ಹಿರಿಯ ನಟ ಶಿವರಾಂ ಇನ್ನಿಲ್ಲ. 84 ವರ್ಷ ವಯಸ್ಸಾಗಿದ್ದ ನಟ ಶಿವರಾಂ ರವರಿಗೆ ಎರಡು ದಿನಗಳ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಪೆಟ್ಟಾಗಿ ಪ್ರಶಾಂತ್ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗು ಇಳಿ ವಯಸ್ಸಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಲು ಆಗದಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಇಂದು ಡಿಸೆಂಬರ್ 4 ರಂದು ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ ಹಳ್ಳಿಯಲ್ಲಿ ಜನಿಸಿದ ಶಿವರಾಂ ಗುಬ್ಬಿವೀರಣ್ಣನವರ ನಾಟಕಗಳ ಪ್ರಭಾವದಿಂದ ನಾಟಕಗಳಲ್ಲಿ ಅಭಿನಯಸಲು ಶುರು ಮಾಡಿ, 1965 ರಲ್ಲಿ ಕು. ರಾ. ಸೀತಾರಾಮಶಾಸ್ತ್ರಿ ಅವರ “ಬೆರೆತ ಜೀವ” ಚಿತ್ರದ ಮೂಲಕ ತೆರೆಗೆ ಪರಿಚಯವಾದರು. ಅದಕ್ಕೂ ಮುಂಚೆ 1958 ರಿಂದಲೂ ಅನೇಕ ಚಿತ್ರ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಮುಂದೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಅವರ ಹಾಸ್ಯ ಪ್ರವೃತ್ತಿ ಅವರ ನಟನೆಯನ್ನು ಹೆಚ್ಚು ಆಕರ್ಷಕವಾಗಿಸಿತ್ತು. 1980 ರಲ್ಲಿ ತೆರೆಗೆ ಬಂದ “ಡ್ರೈವರ್ ಹನುಮಂತು” ಎಂಬ ಚಿತ್ರದಲ್ಲಿ ಇವರದ್ದೇ ಪ್ರಮುಖ ಪಾತ್ರ. ಪುಟ್ಟಣ್ಣವರ ಚಿತ್ರಗಳಲ್ಲಿ ಇವರಿಗೆ ಗಮನಾರ್ಹ ಪಾತ್ರವಿರುತ್ತಿತ್ತು. ಹೆಚ್ಚು ಕಡಿಮೆ ಅವರು ಚಲನಚಿತ್ರದ ಎಲ್ಲ ನಿರ್ದೇಶಕರ ಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ.

1970 ರಲ್ಲಿ ಶಿವರಾಂ ತಮ್ಮ ಸಹೋದರ ಎಸ್ ರಾಮನಾಥನ್ ಅವರೊಟ್ಟಿಗೆ “ರಾಶಿ ಬ್ರದರ್ಸ್” ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ “ಗೆಜ್ಜೆ ಪೂಜೆ, ಉಪಾಸನೆ, ನಾನೊಬ್ಬ ಕಳ್ಳ, ಡ್ರೈವರ್ ಹನುಮಂತು, ಬಹಳ ಚೆನ್ನಾಗಿದೆ” ಎಂಬ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದರು ಹಾಗು ಡಾII ರಾಜಕುಮಾರ್ ರವರ “ಹೃದಯ ಸಂಗಮ” ಚಿತ್ರವನ್ನು ನಿರ್ದೇಶಿಸಿದ್ದರು. ಡಾII ರಾಜಕುಮಾರ್ ರವರ “ಲಗ್ನಪತ್ರಿಕೆ” ಚಿತ್ರದಲ್ಲಿನ ಪ್ರಸಿದ್ಧ ಹಾಡು ಬಲು ಅಪರೂಪ ನಮ್ ಜೋಡಿ ಹಾಡಿಗೆ ಸೀನು ಸುಬ್ಬು ರಲ್ಲಿ ಒಬ್ಬರಾಗಿ ಕುಣಿದಿದ್ದನ್ನು ಮರೆಯಲಾದೀತೆ.

ಶಿವರಾಂ ಡಾ. ರಾಜಕುಮಾರ್ ಕುಟುಂಬವರ್ಗಕ್ಕೆ ಬಹಳ ಆತ್ಮೀಯರಾಗಿದ್ದರು ಹಾಗು ಚಿತ್ರರಂಗದ ಅನೇಕ ನಟ ನಟಿಯರ ಕಷ್ಟಗಳಲ್ಲಿ ಪಾಲ್ಗೊಂಡು ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿದ್ದರು. ಅನೇಕ ಚಿತ್ರನಟರಿಗೆ ವಿಶೇಷವಾಗಿ ಡಾII ರಾಜಕುಮಾರ್ ಕುಟುಂಬದವರು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಮಾಲೆ ಹಾಕುತ್ತಿದವರಿಗೆ ಶಿವರಾಂ ಗುರು (ಹಿರಿಯ) ಸ್ವಾಮಿ ಯಾಗಿದ್ದರು.

ಇಂದು ತಮ್ಮ ಬದುಕಿನ ಪಯಣ ಮುಗಿಸಿ ಇಹಲೋಕ ತ್ಯಜಿಸಿದ್ದಾರೆ.

ಶಿವರಾಂ ರವರ ಅಗಲಿಕೆ ಚಲನಚಿತ್ರರಂಗದ ಬಂದುಗಳಿಗೆ ಹಾಗು ಅವರ ಮನೆಯವರಿಗೆ ಆ ಭಗವಂತ ಮಾನಸಿಕ ಶಕ್ತಿ ಕೊಡಲಿ ಎಂದು ಸಾಹಿತ್ಯಮೈತ್ರಿ ಪತ್ರಿಕಾ ತಂಡ ಬೇಡುತ್ತದೆ.

ಸಾಹಿತ್ಯಮೈತ್ರಿ ತಂಡ

Related post

1 Comment

  • 🙏👌👍❤️

Leave a Reply

Your email address will not be published. Required fields are marked *