ಬದುಕಿನ ಸವಿಯನಾವರಣ
ನನಸಾಗಿರಲು ಕಂಡ ಸವಿಗನಸುಗಳು
ಬೇಸರಿಕೆ ಕಾಣದೊಲ್ಲದು ಮನಸು!
ಅಂತರಾಳದಲಿ ಸವಿನೆನಪುಗಳ ದಿಬ್ಬಣ
ಸಾಗುತಿರಲು..ಬಾಳೆಂದಿಗೂ ಸೊಗಸು!!
ಕಂಬನಿ ಮಿಡಿದಿಹ ಕಂಗಳನೊರೆಸಿ
ಬಾಳಪುಟಕೆ ನೀ ಮುನ್ನುಡಿಯಾದೆ!
ಮೌನದ ಬದುಕಲಿ ನೀನಡಿಯನಿರಿಸಿ…
ಅರಿಯದ ಹರುಷಕೆ ನಾಂದಿಯಾದೆ!!
ನಿನ್ನೊಲವಿನ ಮಳೆಯ ಸಿಂಚನದಿ
ಭಾವಾಂತರಾಳದಲಿ ಧನ್ಯತೆಯ ಒನಪು!
ಜೀವಸಾಂಗತ್ಯದ ಭಾವಲಾಸ್ಯಕೆ..
ಒಲಿದ ಹೃದಯಾಂತರಾಳವೇ ಮುಡಿಪು!!
ಕಾಣದ ದೇವರ ಹಾರೈಕೆಯಲಿ
ನಮ್ಮೊಲವಿನ ನಂದನವನ ಅರಳಿದೆ!
ಸಂಕಟವು ಮರೆಯಾಗಿ ಬಾಳಲಿ..
ಸಂತಸದ ಕ್ಷಣಗಳೆಲ್ಲ ಮರಳಿದೆ!!
ಮನದಾಳದ ಆಸರೆಯೋ..ಆಸರೆಯ
ಮನದಾಳವೋ ಮನ ತಿಳಿಯದಾಗಿದೆ!
ಮಿಡಿದ ಜೀವ ಜೊತೆಯಲಿರಲು..
ಜೊತೆಯಲಿಹ ಜೀವ ನಿತ್ಯ ಮಿಡಿದಿದೆ!!
ಸುಮನಾ ರಮಾನಂದ