ಬಹುಮುಖ ಪ್ರತಿಭೆಯ ರಾಕೆಟ್ ತಂತ್ರಜ್ಞ –ಸಿ.ಆರ್.ಸತ್ಯ

ಬಹುಮುಖ ಪ್ರತಿಭೆಯ ರಾಕೆಟ್ ತಂತ್ರಜ್ಞ – ಸಿ.ಆರ್.ಸತ್ಯ

ಇಸ್ರೋದ ಹಿರಿಯ ರಾಕೆಟ್ ತಂತ್ರಜ್ಞ ಶ್ರೀ ಸಿ ಆರ್ ಸತ್ಯ ಅವರು ಮಂಗಳವಾರ ಸಂಜೆ(04.04.2023) ನಿಧನರಾದರು..
ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಈ ಪರಿಚಯ ಲೇಖನ….

ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ.ವಿಕ್ರಮ್ ಸಾರಭಾಯಿ ಅವರ ಆಹ್ವಾನದ ಮೇರೆಗೆ ಕೇರಳದ “ತುಂಬಾ” ರಾಕೆಟ್ ನೆಲೆಯಲ್ಲಿಅಂದಿನ ಪ್ರಧಾನಿ ಇಂದಿರಾಗಾಂಧಿ ಬಂದು ಆ ಯುವ ವಿಜ್ಞಾನಿ ವಿನ್ಯಾಸಗೊಳಿಸಿದ ಯಂತ್ರವನ್ನು ಉದ್ಘಾಟಿಸಿದರು.

ಭಾರತ ದೇಶ ಆಗಿನ್ನೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಂಬೆಗಾಲಿಡುತಿತ್ತು.ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿತ್ತು, ರಾಕೆಟ್ ನ ಮೂತಿಯನ್ನ ( Nose Cone) ಇಬ್ಬರು ಉತ್ಸಾಹಿ ಯುವಕರು ನರಪಿಳ್ಳೆಯೂ ಕಾಣದ ತಿರುವನಂತಪುರ ಸಮೀಪದ ಕಡಲ ತೀರದ ರಸ್ತೆಯಲ್ಲಿ ಗಾಳಿ ಇಲ್ಲದ ಹಳೆಯ ಸೈಕಲ್ ಕ್ಯಾರಿಯರ್ ನಲ್ಲಿ ಏರಿಸಿ ತಳ್ಳಿಕೊಂಡು ಬರುತಿದ್ದರು, ಅಲ್ಲಿಗೆ ಬಂದ ಫ್ರಾನ್ಸ್ ನ ಖ್ಯಾತ ಛಾಯಾಗ್ರಾಹಕ ಹೆನ್ರಿ ಕಾರ್ಟಿಯರ್ ಬ್ರೆಸ್ಸೋನ್ ಚಿತ್ರ ಕ್ಲಿಕ್ಕಿಸಿದ. ಮುಂದೆ ಆ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಭಾರತದ ತಾಂತ್ರಿಕ ಪ್ರಗತಿಗೆ ಇದೊಂದು ಮೈಲಿಗಲ್ಲು ಎಂಬ ಹೆಗ್ಗಳಿಕೆ ಪಡೆಯಿತು.

ಪ್ರಗತಿಯ ಸಂಕೇತ ಈ ಚಿತ್ರ

ಇಷ್ಟೆಲ್ಲ ಹೇಳಲು ಕಾರಣ ರಾಕೆಟ್ ಮೂತಿ ಕೊಂಡೊಯ್ಯುತಿದ್ದ ಆ ಚಿತ್ರದಲ್ಲಿ ಇದ್ದವರು ನಮ್ಮ ಹೆಮ್ಮೆಯ ವಿಜ್ಞಾನಿ ಶ್ರೀ ಸಿ.ಆರ್.ಸತ್ಯ , ಮತ್ತೊಬ್ಬರು ಅವರ ಸಹಾಯಕ ಶ್ರೀ ವೇಲಪ್ಪನ್ ನಾಯರ್.

1942 ರಲ್ಲಿ ಸಿ.ಕೆ.ರಾಮಚಂದ್ರರಾವ್, ಲಲಿತಮ್ಮ ದಂಪತಿಗಳ ಪುತ್ರರಾಗಿ ಮೈಸೂರಿನಲ್ಲಿ ಜನಿಸಿದ ಸತ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಎ.ಆರ್.ಕೃಷ್ಣಶಾಸ್ತ್ರಿಗಳ ಮೊಮ್ಮಗನೂ ಹೌದು. ಬಾಲ್ಯದಿಂದಲೇ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಸಿ.ಆರ್.ಸತ್ಯ ಬೆಂಕಿ ಕಡ್ಡಿಯ ಸ್ಪೋಟಕ ಪುಡಿ ಉಪಯೋಗಿಸಿ ರಾಕೆಟ್ ತಯಾರಿಸಿದ್ದರು. ಎರಡನೇ ಮಹಾಯುದ್ದದ ಕಾಲದ ಹೆಡ್ ಫೋನ್ ಅಳವಡಿಸಿಕೊಂಡು ರೇಡಿಯೋ ತಯಾರಿಸಿದ್ದರು. ಇಂದು ಜನಪ್ರಿಯ ಮಕ್ಕಳ ಗೀತೆಯಾಗಿರುವ “ಆಚೆ ಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ” ಸತ್ಯ ಅವರು ತಮ್ಮ ಹದಿನೇಳನೇ ವಯಸ್ಸಿನಲ್ಲಿ ಬರೆದು “ಕೊರವಂಜಿ” ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಎಂಜಿನಿಯರಿಂಗ್ ನಂತರ ಅವರು ಆರಿಸಿಕೊಂಡದ್ದು ಬಾಹ್ಯಾಕಾಶ ವಿಜ್ಞಾನವನ್ನು. ಅವರಿಗೆ ಹಿರಿಯ ಸಹೋದ್ಯೋಗಿ ಆಗಿದ್ದವರು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.

ಸತ್ಯ ರವರ ಕುಟುಂಬ ಡಾ. ಅಬ್ದುಲ್ ಕಲಾಂ ರೊಂದಿಗೆ

ಭಾರತದ ಪ್ರಥಮ ಉಡಾವಣಾ ರಾಕೆಟ್ SLV 3, ನಂತರದ PSLV, GSLV ರಾಕೆಟ್ ಗಳಲ್ಲಿ , 2010 ರ ಚಂದ್ರಯಾನ ಯೋಜನೆಯಲ್ಲೂ ಸತ್ಯ ಅವರ ತಂಡ ನಿರ್ಮಿಸಿದ ಯಂತ್ರದ ಭಾಗಗಳು ಉಪಯೋಗಿಸ್ಪಟ್ಟಿದ್ದವು. ಪ್ರಖ್ಯಾತ TATA ADVANCED MATERIALS LIMITED ನಲ್ಲಿಯೂ 20 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ–ಕೇರಳ ರಾಜ್ಯಗಳ ಸಾಂಸ್ಕೃತಿಕ ಕೊಂಡಿಯಾಗಿ ಅವರ ಸಾಧನೆ ಗಣನೀಯ. ಬರಹಗಾರರಾಗಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಅವರ “ಅಳಿವಿಲ್ಲದ ಸ್ಥಾವರ” ಕೇರಳದ ಅನಂತಪದ್ಮನಾಭಸ್ವಾಮಿ ದೇವಾಲಯ ನಿರ್ಮಾಣದ ಹಿಂದಿನ ತಂತ್ರಗಾರಿಕೆಯನ್ನು ಕುರಿತು ಬೆಳಕು ಚೆಲ್ಲುತ್ತದೆ.

ಅವರ ಇತ್ತೀಚಿನ ಪುಸ್ತಕ “ತ್ರಿಮುಖಿ” ಅವರ ಜೀವನಾನುಭವವನ್ನು ಕುರಿತಾದ ಪುಸ್ತಕ.
ಇಲ್ಲಿಯ ವಿಷಯಗಳನ್ನು ಮೂರು ವಿಭಾಗವಾಗಿ ವಿಂಗಡಿಸಿ ಈ ಪುಸ್ತಕವನ್ನು ಬರೆದಿದ್ದಾರೆ. ಮೊದಲನೆಯದಾಗಿ ವಿಜ್ಞಾನಿಯಾಗಿ ತಿರುವನಂತಪುರದಲ್ಲಿ ಕೆಲಸ ಮಾಡುತ್ತಾ ಹೊರನಾಡು ಕನ್ನಡಿಗನಾಗಿ ಗಳಿಸಿದ ಅನುಭವಗಳು, ಎರಡನೆಯದಾಗಿ ಪ್ರವಾಸಿಗನಾಗಿ ಹಾಗೂ ವೃತ್ತಿ ಸಂಬಂಧವಾಗಿ ವಿದೇಶಗಳಿಗೆ ಹೋದಾಗ ಉಂಟಾದ ಅನುಭವಗಳು, ಮೂರನೆಯದಾಗಿ ಮರಳಿ ಬೆಂಗಳೂರಿಗೆ ಬಂದಾಗ ವೃತ್ತಿ ಸಂಬಂಧವಾಗಿ ವಿವಿಧ ವ್ಯಕ್ತಿಗಳೊಂದಿಗೆ ಒಡನಾಡಿದ ಅನುಭವಗಳು ಹೀಗೆ ಮೂರು ವಿಭಾಗಗಳಲ್ಲಿ ಸಿ.ಆರ್.ಸತ್ಯ ಅವರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.

ಪರಿಸರ ಸಂರಕ್ಷಣೆಯಲ್ಲೂ ಅವರು ಆಸಕ್ತಿ ಹೊಂದಿದ್ದು ಬೆಂಗಳೂರಿನ ಹೆಬ್ಬಾಳ ಕೆರೆಯ ಪುನಶ್ಚೇತನಕ್ಕೆ ಅವರು ಕೊಟ್ಟ ಕೊಡುಗೆ ಅಪಾರ.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *