ಬಾಲರಾಮನ ಆಗಮನ

ಬಾಲರಾಮನ ಆಗಮನ

ರಾಮನ ಹುಟ್ಟೂರಾದ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೆ ಎಲ್ಲೆಲ್ಲೂ ಶ್ರೀರಾಮನಾಮ ಜಪಿಸಲ್ಪಡುತಿದೆ. ಇಂಥದೊಂದು ಐತಿಹಾಸಿಕ ಕ್ಷಣಕ್ಕೆ ಭಾರತಿಯರು ಇದೇ ತಿಂಗಳು ಜನವರಿ 22 ರಂದು ಶ್ರೀರಾಮನನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ.

ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಅವರ ಕೈಚಳಕದಲ್ಲಿ , ಕೃಷ್ಣ ಶಿಲೆಯ ಕಲ್ಲಿನಲ್ಲಿ ಅರಳಿದ ಸುಂದರ ಶಿಲ್ಪಿಯು ಎಲ್ಲರ ನಿರೀಕ್ಷೆಗೂ ಮೀರಿ, ಕಣ್ಮನ ಸೆಳೆಯುವಂತಿದೆ. ಮೂರ್ತಿಯಲ್ಲಿ ಸುತ್ತಲೂ ವಿಷ್ಣುವಿನ ದಶಾವತಾರದ ಚಿತ್ರಣ ಇದ್ದು, ತಲೆಯ ಮೇಲೆ ಸೂರ್ಯ, ಹಾಗೆ ಶಂಖ ಚಕ್ರ, ಗರುಡ, ಮತ್ಸ್ಯ, ಕೂರ್ಮ, ವಾಮನ, ಗಣೇಶ ಓಂಕಾರ, ಸ್ವಸ್ತಿಕ್ ಚಿಹ್ನೆಗಳು ರಾರಾಜಿಸುತ್ತಿವೆ. ಹನುಮಂತನಿಂದ ಕೂಡಿರುವ ನಗುಮೊಗದ ಸೌಮ್ಯವದನ ಹೊಂದಿರುವ ಶ್ರೀರಾಮನು ಬಿಲ್ಲುಬಾಣಗಳ ಹಿಡಿದು ಕಮಲದ ಮೇಲೆ ಅಲಂಕೃತನಾಗಿದ್ದಾನೆ. ಇದು ಕನ್ನಡಿಗನೊಬ್ಬನ ಕೈಚಳಕ ಮತ್ತು ವಿಗ್ರಹವು ನಮ್ಮ ಮೈಸೂರಿನ ಹಾರೋಹಳ್ಳಿಯಲ್ಲಿ ಸಿಕ್ಕ ಕೃಷ್ಣಶಿಲೆಯಲ್ಲಿ ಕೆತ್ತಲ್ಪಟ್ಟಿದ್ದಾದರಿಂದ ಸಹಜವಾಗಿ ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಇಂದು ಇಡೀ ದೇಶವೇ ನಮ್ಮ ಕರುನಾಡಿನತ್ತ ನೋಡುತ್ತಿದೆ. ಶಿಲ್ಪಿ ಅರುಣ್ ಯೋಗರಾಜ್ ರವರು ಅಂಥ ಮುಗ್ಧ ಬಾಲರಾಮನನ್ನು ಮನದಲ್ಲಿ ಕಲ್ಪಿಸಿ ಚಿತ್ರಿಸಲು ಎಳೆಂಟು ತಿಂಗಳುಗಳೇ ಬೇಕಾಯಿತು. ಭಾರತೀಯರಿಗಂತೂ ಸುಂದರ ರಾಮಲಲ್ಲನನ್ನು ಬರಮಾಡಿಕೊಳ್ಳಲು ಯುಗಗಳೇ ಬೇಕಾಯಿತು. ಈ ಕಲಿಯುಗದಲ್ಲೂ ಶ್ರೀರಾಮ ಮತ್ತೆ ಹುಟ್ಟಿ ಬಂದನೇನೋ ಎಂಬಂತೆ ಎಲ್ಲೆಡೆ ಸಡಗರ, ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯಲ್ಲಂತೂ ಸಾಕ್ಷಾತ್ ಶ್ರೀ ರಾಮನ ಆಗಮನದಿಂದ ಸ್ವರ್ಗದ ವಾತಾವರಣ ನಿರ್ಮಾಣವಾಗಿದೆ.

ರಾಮನ ತತ್ವಗಳು ಸರ್ವಕಾಲಕ್ಕೂ ಅನ್ವಯವಾಗುವ ಹಾಗೂ ಮಾದರಿಯಾಗುವ ಅಪೂರ್ವ ಸಂಪತ್ತು. ಶ್ರೀ ರಾಮನು ತನ್ನ ಬದುಕಿನುದ್ದಕ್ಕೂ ಸಂಘರ್ಷಗಳನ್ನು ಎದುರಿಸಿಯೂ ಸ್ವಲ್ಪವೂ ವಿಚಲಿತಗೊಳ್ಳದೆ, ಸಹನಾ ಮೂರ್ತಿಯಾಗಿ ನಗುಮೊಗದಿಂದ ಎಲ್ಲವನ್ನೂ ಎದುರಿಸಿದ್ದು, ಅವನ ತಾಳ್ಮೆಗೆ ನಿದರ್ಶನ. ಹಿರಿಯರ ಅಣತಿಯಂತೆ ರಾಜ್ಯತ್ಯಾಗ ಮಾಡಿ ವನವಾಸ ಅನುಭವಿಸಿದ್ದು, ಪ್ರೀತಿಯ ಪತ್ನಿ ಸೀತಾಮಾತೆಗೆ ಏಕಪತ್ನಿ ವ್ರತಸ್ತನಾಗಿದ್ದು, ಸಹೋದರರಿಗೆ ಸ್ವಂತ ಮಕ್ಕಳಂತೆ ಅನಿಯಮಿತ ಪ್ರೀತಿ ನೀಡಿದ್ದು, ಹಾಗೂ ಶಬರಿಯ ಪ್ರೀತಿ, ಭಕ್ತಿಗೆ ಮೆಚ್ಚಿ ದರ್ಶನ ಕೊಟ್ಟು, ಎಂಜಲು ಹಣ್ಣನ್ನು ತಿಂದದ್ದು, ಹೀಗೇ ಅವನ ವರ್ಣನೆಗೆ ಕೊನೆಯೇ ಇಲ್ಲ.

ವಾಸ್ತವವಾಗಿ ಸನಾತನ ಧರ್ಮದ ಪ್ರತಿಯೊಬ್ಬ ನಾಗರಿಕನೂ ರಾಮನ ಕಥೆಗಳಿಂದ ಪ್ರೇರೇಪಿತನಾದವನೇ. ರಾಮನೆಂದರೆ ಬರೀ ದೇವರಲ್ಲ. ತ್ಯಾಗ, ಸಮರ್ಪಣೆ, ನಂಬಿಕೆ, ಪ್ರೀತಿ, ಭಕ್ತಿ, ಧೈರ್ಯ, ಶಕ್ತಿ, ಚೈತನ್ಯ, ಬೆಳಕು, ಉಸಿರು ಹೀಗೆ ಸರ್ವಸ್ವವೂ ಸರ್ವಶ್ರೇಷ್ಟನಾದ ರಾಮನೇ ಆಗಿದ್ದಾನೆ. ರಾಮನೆಂದರೆ ಒಬ್ಬೊಬ್ಬರದು ಒಂದೊಂದು ರೀತಿ ವ್ಯಾಖ್ಯಾಯನ ಹಾಗೂ ಒಂದೊಂದು ಥರದ ಅಭಿವ್ಯಕ್ತಿ. ಅವನ ಬದುಕೇ ನಮ್ಮೆಲ್ಲರ ನಿತ್ಯದ ನೀತಿ ಪಾಠ. ಅದು ಸ್ಪೂರ್ತಿ ಅಷ್ಟೇ ಅಲ್ಲದೆ ವಿವಿಧ ಅನುಭವಗಳ ಸರಮಾಲೆಯೇ ಆಗಿದೆ.

ನಾವೆಲ್ಲರೂ ಬಾಲ್ಯದಿಂದಲೂ ಅಜ್ಜ ಅಜ್ಜಿಯರಿಂದ ರಾಮ ಹಾಗೂ ಕೃಷ್ಣರ ಕಥೆಗಳನ್ನು, ಹಾಗೂ ಅವರ ಆದರ್ಶಗಳನ್ನು ಮೈಯೆಲ್ಲಾ ಕಿವಿಯಾಗಿಸಿ ಬೆರಗಿನಿಂದ ಕೇಳಿ ರೋಮಾಂಚನಗೊಂಡು ಅವರ ಮೂರ್ತಿಯನ್ನು ಮನಸ್ಸಿನ ಮೂಲೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕಲ್ಪಿಸಿ ಕೊಂಡದ್ದುಂಟು. ಅಂದಿನಿಂದ ಇಂದಿನವರೆಗೂ ಸರ್ವಗುಣ ಸಂಪನ್ನನಾದ ಶ್ರೀರಾಮನು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ.

ಅಯೋಧ್ಯೆಯಂಥ ಪುಣ್ಯ ಸ್ಥಳದಲ್ಲಿ ರಾಮಮಂದಿರ ಕಟ್ಟುವ ಕೋಟಿ ಕೋಟಿ ಭಕ್ತರ ಕನಸು ಇದೀಗ ನನಸಾಗಿದೆ. ವೇದ ಮಂತ್ರಗಳ ಜೊತೆ ಸರ್ವಾಲಂಕೃತಗೊಂಡ ಮುದ್ದಾದ ಪುಟ್ಟ ಶ್ರೀರಾಮನನ್ನು ಪದ್ಮಪೀಠದಲ್ಲಿ ಪ್ರತಿಷ್ಟಾಪಿಸಿ ಕಣ್ತುಂಬಿಕೊಳ್ಳೋಣ. ಮತ್ತೊಮ್ಮೆ ರಾಮರಾಜ್ಯದ ನಿರೀಕ್ಷೆಯೊಂದಿಗೆ, ರಾಮನ ನೆನೆಯುತ್ತ ಅವನ ಆದರ್ಶಗಳನ್ನು ಪರಿಪಾಲಿಸೋಣ.

ಶೈಲಾ

ಬೆಂಗಳೂರು

Related post

Leave a Reply

Your email address will not be published. Required fields are marked *