ಬಿಕ್ಕಳಿಕೆ

ಬಿಕ್ಕಳಿಕೆ

ರೋಗಿಯ ಹೆಸರು ಮುನಿಸ್ವಾಮಿ. ಕೆಲಸ, ಇಷ್ಟವಾದಾಗ ಮತ್ತು ಕುಡಿಯುವ ಚಟದಿಂದ ಅಕಸ್ಮಾತ್ತಾಗಿ ಬಿಡುವಾದಾಗ, ಮಗನ ಅಂಗಡಿಯ ಗಲ್ಲಾದ ಮುಂದೆ ಕೂರುವುದು, ಇಲ್ಲ ಕುಡಿದು ಮನೆಯ ಹಾಸಿಗೆಯ ನಂಟನಾಗುವುದು – ಸದ್ಯ ಕುಡಿದು ಹೊರಗೆ ಗಲಾಟೆ ಮಾಡುವುದು ಮತ್ತು ಅಲ್ಲಿಲ್ಲಿ ಬಿದ್ದು ಬರುವುದು ಇರಲಿಲ್ಲ! ಹಾಗಂತ ಆತನಿಗೆ ತನ್ನದೆ ಆದ ವರಮಾನ ಇರಲಿಲ್ಲ ಎಂದಲ್ಲ. ಸರ್ಕಾರಿ ಕೆಲಸ ಇದ್ದು, ನಿವೃತ್ತನಾಗಿ ಪಿಂಚಣಿ ಎಣಿಸುತ್ತಾನೆ. ಹಾಗಾಗಿ ಕುಡಿತಕ್ಕೆ ದುಡಿದು ಗಳಿಸಲೇಬೇಕೆಂಬ ದರ್ದು ಇರಲಿಲ್ಲ. ಆದ್ದರಿಂದ ಆತನ ಕುಡಿತಕ್ಕೆ ಅಂಕೆ ಸಹ ಇರಲಿಲ್ಲ.

ಒಂದು ದಿನ ಆತನನ್ನು ನನ್ನ ಕ್ಲಿನಿಕ್ಕಿಗೆ ಆತನ ಮಡದಿ ಕರೆತಂದಾಗ, ಎರಡು ದಿನದಿಂದ ಊಟ ಸೇರದೆ, ವಾಂತಿ ಮತ್ತು ಬಿಕ್ಕಳಿಕೆಯಿಂದ ಸುಸ್ತಾಗಿದ್ದ. ಖಂಡಿತ ಆತನಿಗೆ ಡ್ರಿಪ್ ಮೂಲಕ ಗ್ಲೂಕೋಸ್ ಮತ್ತು ವಾಂತಿ ಹಾಗು ಬಿಕ್ಕಳಿಕೆ ಕಮ್ಮಿ ಮಾಡುವ ಔಷಧ ಮುಂತಾಗಿ ಹಾಕಬೇಕಿತ್ತು. ಹತ್ತಿರ ಇದ್ದ ಸಣ್ಣ ನರ್ಸಿಂಗ್ ಹೋಂಗೆ ದಾಖಲು ಮಾಡಿ, ಎರಡು ದಿನದ ನಂತರ ಡಿಸ್ಚಾರ್ಜ್ ಮಾಡಿಸಿ ಕಳಿಸಿದ್ದೆ. ಕುಡಿತ ನಿಲ್ಲಿಸುವಂತೆ ಭಾಷೆ ಕೊಡಿಸಿಯೂ ಸಾಗಿಸಿದ್ದೆ.

ಒಂದೆರಡು ವಾರದ ನಂತರ ಮತ್ತೆ ನಿಲ್ಲದ ಬಿಕ್ಕಳಿಕೆಯಿಂದ ಬಳಲುತ್ತಿದ್ದ ಮುನಿಸ್ವಾಮಿ ಹಾಜರಾದ. “ಎಲ್ಲಿ ನಿಮ್ಮ ಭಾಷೆ, ಮುನ್ಸ್ವಾಮಿ” ಅಂದು, ಆತನ ಉತ್ತರಕ್ಕೆ ಕಾಯದೆ, ನನ್ನ ಕಾಯಕ ಶುರು ಮಾಡಿಕೊಂಡಿದ್ದೆ. ಮುನಿಸ್ವಾಮಿಯಂಥ ರೋಗಿಗಳು ವಿರಳವೇನಲ್ಲ. ಕುಡಿತದಿಂದ ಬಿಕ್ಕಳಿಕೆ ಮಾತ್ರ ಅಲ್ಲದೆ, ಜಠರದುರಿತ ಮತ್ತು ಯಕೃತ್ತಿನ ಸಿರೋಸಿಸ್ ಎಂಬ ಮಾರಣಾಂತಿಕ ರೋಗ ಸಹ ಸಾಧ್ಯ. ಹಾಗಾದರೆ, ಬಿಕ್ಕಳಿಕೆಗೆ ಕುಡಿತ ಅಲ್ಲದೆ ಬೇರೆ ಇನ್ನೇನು ಕಾರಣಗಳಿರಬಹುದು?

ನಮ್ಮ ಎದೆಯ ಭಾಗವನ್ನು ಉದರದ ಭಾಗದಿಂದ ಬೇರ್ಪಡಿಸುವ ಅಗಲವಾದ ಸ್ನಾಯು/ಮಾಂಸಖಂಡದ ಹೆಸರು ಡೈಯಫ್ರ್ಯಾಮ್ ಎಂದು. ಇದು ನಮ್ಮ ಉಸಿರಾಟದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಡೈಯಫ್ರ್ಯಾಮಿನ ಸ್ನಾಯು ಅಕಸ್ಮಾತ್ತಾಗಿ ಅಥವ ಹಠಾತ್ತಾಗಿ ಕಂಪನಕ್ಕೆ ಒಳಗಾದರೆ, ಅಥವ ಪುನರಾವರ್ತಿತವಾಗಿ (ಮತ್ತೆಮತ್ತೆ) ಆ ಸ್ನಾಯುವಿನ ಸೆಳೆತ ಉಂಟಾದರೆ, ಆಗ ಬಾಧಿಸುವುದೆ ಬಿಕ್ಕಳಿಕೆ. ಇಂಥ ಸೆಳೆತದಿಂದ ಹೊರಡುವ ‘ಹಿಕ್’ ಶಬ್ದ ನಮ್ಮ ದನಿತಂತುಗಳು (vocal cords) ದಿಢೀರನೆ ಮುಚ್ಚಿಕೊಳ್ಳುವುದರಿಂದ ಉಂಟಾಗುತ್ತದೆ. ಬಿಕ್ಕಳಿಕೆಯಿಂದ ಕಿರಿಕಿರಿಯಾದರು, ಸಾಮಾನ್ಯವಾಗಿ ಅದು ಅಲ್ಪಕಾಲಿಕ. ಆದರು, ಕೆಲವರು ಆಗಿಂದಾಗ್ಗೆ ಬರುವ ಸುದೀರ್ಘಕಾಲದ ಬಿಕ್ಕಳಿಕೆ ಅನುಭವಿಸುತ್ತಾರೆ. ಇಂಥ ‘ಕ್ರಾನಿಕ್’ ಅಥವ ಎಡೆಬಿಡದೆ ಬರುವ ಬಿಕ್ಕಳಿಕೆ 48 ಘಂಟೆಗೂ ಮಿಕ್ಕಿ ಬಾಧಿಸಬಹುದು.

ಬಿಕ್ಕಳಿಕೆಗೆ ಸಾಮಾನ್ಯವಾದ ಕಾರಣಗಳು ಏನೆಂದರೆ, ಆತುರಾತುರವಾಗಿ ತಿನ್ನುವುದು ಮತ್ತು ಅತಿಯಾದ ಊಟದ ಸೇವನೆ, ಹಠಾತ್ತಾದ ಭಾವೋದ್ವೇಗಕ್ಕೆ ತುತ್ತಾಗುವುದು, ಮದ್ಯ ಮತ್ತು ಕಾರ್ಬೊನೇಟೆಡ್ ಪಾನೀಯಗಳ ಸೇವನೆ, ಅತಿಯಾದ ಧೂಮಪಾನ, ಗಮ್ ಅಗಿಯುವ ಅಭ್ಯಾಸ ಮುಂತಾಗಿ. ವ್ಯಕ್ತಿ ಬಳಲುತ್ತಿರುವ ಇತರೆ ಗಂಭೀರ ಕಾಯಿಲೆಗಳಿಂದ ಸಹ ಬಿಕ್ಕಳಿಕೆ ಸಾಧ್ಯ. ಅಲ್ಲದೆ ಬಿಕ್ಕಳಿಕೆ ಕೇವಲ ಕೆಲವು ನಿಮಿಷವಷ್ಟೆ ಬಂದು ಮಾಯ ಆಗುವುದು ಸಾಮಾನ್ಯವಾದರೂ ಅತಿ ವಿರಳವಾಗಿ ತಿಂಗಳುಗಳ ಕಾಲ ಬಿಕ್ಕಳಿಕೆಯ ತೊಂದರೆಯಾಗಬಹುದು; ಅಂತಹ ಸಂದರ್ಭ ಬಹಳ ಸುಸ್ತಿಗೆ ಹಾಗೂ ತೂಕ ಇಳಿಕೆಗೂ ಕಾರಣ ಆಗಬಹುದು.

ಬಿಕ್ಕಳಿಕೆಯ ಮುಖ್ಯ ಲಕ್ಷಣಗಳೆಂದರೆ, ಎದೆಯಲ್ಲಿ, ಹೊಟ್ಟೆಯ ಮೇಲಿನ ಭಾಗದಲ್ಲಿ ಹಾಗು ಗಂಟಲಿನಲ್ಲಿ ಬಿಗಿತ ಬಂದಂತಾಗುವುದು. ಅಲ್ಲದೆ, ಡೈಯಫ್ರ್ಯಾಮಿನ ಸ್ನಾಯು ಸೆಳೆತವಾಗುವುದರಿಂದ ಬಿಕ್ಕಳಿಕೆಯ ವಿಶಿಷ್ಟ ‘ಹಿಕ್’ ಎಂಬ ಸದ್ದು ಹೊರಡುವುದು. ಇಂಥ ಬಿಕ್ಕಳಿಕೆಯಿಂದ ತಿನ್ನಲು, ಮಲಗಲು ಮತ್ತು ಉಸಿರಾಟಕ್ಕೆ ತೊಂದರೆಯಾದರೆ ಮತ್ತು ಎರಡು ದಿನಕ್ಕೂ ಮಿಕ್ಕಿ ಕಡಿಮೆ ಆಗದಿದ್ದರೆ, ಖಂಡಿತ ವೈದ್ಯರ ಸಲಹೆ ಮುಖ್ಯ ಆಗುತ್ತದೆ.

ನಲವತ್ತೆಂಟು ಘಂಟೆಗಿಂತ ಕಮ್ಮಿ ಬಾಧಿಸುವ ಬಿಕ್ಕಳಿಕೆಯ ಮುಖ್ಯ ಕಾರಣಗಳು: ಅತಿಯಾದ ಮದ್ಯ ಸೇವನೆ, ಕಾರ್ಬೊನೇಟೆಡ್ ಪಾನೀಯದ ಕುಡಿತ, ಮಾನಸಿಕ ಒತ್ತಡ ಅಥವ ಆಕಸ್ಮಿಕ ಅತ್ಯುತ್ಸಾಹ, ಅತಿಯಾದ ತಿನ್ನುವಿಕೆ, ಧೂಮಪಾನ ಮಾಡುವಾಗ ಅಥವ ಬೇರೆ ಕಾರಣದಿಂದ ಗಾಳಿ ಕುಡಿಯುವುದು, ಇದ್ದಕ್ಕಿದ್ದ ಹಾಗೆ ಉಷ್ಣಾಂಶದಲ್ಲಿನ ಬದಲಾವಣೆ — ಉದಾಹರಣೆಗೆ ಅತಿಯಾದ ತಣ್ಣೀರಿನ ಸ್ನಾನ, ಶೇವ್ ಮಾಡುವ ಸಂದರ್ಭ ಕೆಲವೊಮ್ಮೆ ಕುತ್ತಿಗೆಯನ್ನು ಅತಿಯಾಗಿ ಚಾಚಿ ಬಿಗಿತವಾಗುವುದು ಮುಂತಾದವು.

ಆದರೆ 48 ಘಂಟೆಗೂ ಮೀರಿದ ಬಿಕ್ಕಳಿಕೆಗೆ ನರಗಳ ಕೆರಳುವಿಕೆ (irritation) ಅಥವ ಹಾನಿ, ಕೇಂದ್ರ ನರ ಮಂಡಲದ ಅಸ್ವಸ್ಥತೆಗಳು, ಮದ್ಯ ಮತ್ತು ಕೆಲವು ಔಷಧಗಳ ಸೇವನೆ, ಚಯಾಚಪಚಯ (metabolism) ಸಮಸ್ಯೆಗಳು ಇತ್ಯಾದಿ.ನರದ ಹಾನಿ ಅಥವ ಕೆರಳುವಿಕೆ ಎಂದರೆ, ಒಂದು ಕೂದಲು ಅಥವ ಬೇರೆ ಏನೋ ಕಿವಿ ತಮಟೆಗೆ ತಗುಲಿದರೆ ಆಗುವಂಥದ್ಡು, ಗಂಟಲು ಕೆರೆತ ಅಥವ ಧ್ವನಿಪೆಟ್ಟಿಗೆಯ (larynx) ಉರಿಯೂತ, ಕುತ್ತಿಗೆಯ ಥೈರಾಯ್ಡ್ ಗ್ರಂಥಿಯ ಮೇಲಿನ ಗೆಡ್ಡೆ (tumor) ಅಥವ ಕೋಶ (cyst), ಜಠರದಿಂದ ಅನ್ನನಾಳದ ಒಳಕ್ಕೆ ಜಠರಾಮ್ಲ ಪ್ರವೇಶಿಸುವುದು ಇತ್ಯಾದಿ.

ಕೇಂದ್ರ ನರ ಮಂಡಲದ ಉರಿಯೂತ ಅಥವ ಗೆಡ್ಡೆಯ ಬೆಳವಣಿಗೆ, ಅಥವ ನರಮಂಡಲದ ಹಾನಿ ಮುಂತಾದ ಕಾರಣಗಳಿಂದ ನಮ್ಮ ದೇಹದ ಬಿಕ್ಕಳಿಕೆ ತಡೆಯುವುದಕ್ಕೆ ಅಥವ ಹತೋಟಿಗೆ ತರುವುದಕ್ಕೆ ಖಂಡಿತ ತಡೆಯಾಗುತ್ತದೆ:ಮೆದುಳು ಅಥವ ಮೆದುಳಿನ ಸೋಂಕು (encephalitis), ಮೆದುಳು ಮತ್ತು ಮೆದುಳಬಳ್ಳಿಯನ್ನು ಸುತ್ತುವರಿದ ಪೊರೆಯ ಉರಿಯೂತ (meningitis), ಪಾರ್ಶ್ವವಾಯು, ಮೆದುಳಿನ ಗಂಭೀರ ಹಾನಿ, ಗಡ್ಡೆಗಳು, ಮೆದುಳು ಮತ್ತು ಮೆದುಳಬಳ್ಳಿಯ ಊತಕ (tissue) ಗಟ್ಟಿಗೊಳಿಸುವ ‘ಮಲ್ಟಿಪಲ್ ಸ್ಕ್ಲೀರೋಸಿಸ್’, ಕ್ಯಾನ್ಸರ್, ಹರ್ಪಿಸ್ ಅಥವ ಸರ್ಪಸುತ್ತು ಎಂಬ ರೋಗ ಇತ್ಯಾದಿ ಕಾರಣ. ಇಷ್ಟೇ ಅಲ್ಲದೆ, ಮಧುಮೇಹ , ಮೂತ್ರಪಿಂಡದ ರೋಗ ಮತ್ತು ಸೋಡಿಯಂ ಹಾಗು ಪೊಟ್ಯಾಸಿಯಮ್ ಮುಂತಾದುವುಗಳ ಅಸಮತೋಲನ ಸಹ ದೀರ್ಘಕಾಲದ ಬಿಕ್ಕಳಿಕೆಗೆ ಕಾರಣ. ನಿದ್ದೆ ಮಾತ್ರೆ, ಇನ್ನಿತರ ಅಂಥವೆ ಔಷಧಗಳು, ಅರಿವಳಿಕೆ, ಸ್ಟೀರಾಯ್ಡ್ ಮಾತ್ರೆ ಮತ್ತು ಇಂಜಕ್ಷನ್ ಹಾಗು ಮದ್ಯ ಸೇವನೆ ಕೂಡ ತಡೆ ಇಲ್ಲದ ಬಿಕ್ಕಳಿಕೆಗೆ ಕಾರಣ.

ಮಹಿಳೆಯರಿಗಿಂತ ಪುರುಷರಲ್ಲಿ ದೀರ್ಘ ಕಾಲದ ಬಿಕ್ಕಳಿಕೆಯ ಸಾಧ್ಯತೆ ಹೆಚ್ಚು. ಇನ್ನುಳಿದಂತೆ, ದುಗುಡ, ಒತ್ತಡ, ಅತ್ಯುತ್ಸಾಹ ಎಲ್ಲವೂ ಬಿಕ್ಕಳಿಕೆಗೆ ತಳಕು ಹಾಕಿಕೊಂಡಿವೆ. ಸಾಮಾನ್ಯ ಅರಿವಳಿಕೆ (general anaesthesia) ಮತ್ತು ಜಠರದ ಸುತ್ತಮುತ್ತಲಿನ ಅಂಗಾಂಗಗಳ ಶಸ್ತ್ರಚಿಕಿತ್ಸೆಯ ನಂತರ ಕೆಲವರು ಈ ಥರದ ಬಿಕ್ಕಳಿಕೆ ಅನುಭವಿಸುತ್ತಾರೆ.ಸುದೀರ್ಘ ಬಿಕ್ಕಳಿಕೆಯಿಂದ, ವಾಕರಿಕೆಯಾಗಬಹುದು, ಆಹಾರ ಮತ್ತು ಪಾನೀಯ ಸೇವನೆಗೆ, ನಿದ್ದೆಗೆ ಮತ್ತು ಮಾತಿಗೂ ಸಹ ತೊಡಕಾಗಬಹುದು. ಅದರಿಂದ ವ್ಯಕ್ತಿಯ ತೂಕ ಕೂಡ ಕಡಿಮೆಯಾಗಬಹುದು ಮತ್ತು ದೇಹದ ನಿರ್ಜಲೀಕರಣ ಆಗಬಹುದು. ಈ ಎಲ್ಲ ಬಾಧೆಗಳ ಜೊತೆಗೆ ವ್ಯಕ್ತಿ ಮುಜುಗರ ಸಹ ಪಡಬಹುದು.

ರೋಗನಿರ್ಣಯ: ದೈಹಿಕ ಪರೀಕ್ಷೆಯ ಸಮಯದಲ್ಲಿ ವೈದ್ಯರು ರೋಗಿಯ ನರವೈಜ್ಞಾನಿಕ ಸ್ಥಿತಿಯ ಪರೀಕ್ಷೆಯಲ್ಲಿ ವ್ಯಕ್ತಿಯ ಸಮತೋಲನ, ಸ್ನಾಯುಗಳ ಶಕ್ತಿ ಮತ್ತವುಗಳ ಸ್ಥಿತಿ, ದೃಷ್ಟಿ, ಸ್ಪರ್ಶ ಮುಂತಾಗಿ ತಿಳಿದುಕೊಳ್ಳುತ್ತಾರೆ., ಅದಲ್ಲದೆ ಪ್ರಯೋಗಾಲಯದ ಉಪಯೋಗ ಸಹ ಪಡೆದು, ಎಕ್ಸ್ -ರೆ, ಸಿ.ಟಿ. ಮತ್ತು ಎಂ.ಆರ್.ಐ. ಸ್ಕ್ಯಾನ್ ಗಳು ಹಾಗು ಎಂಡೋಸ್ಕೋಪಿಕ್ ಪರೀಕ್ಷೆ ಕೂಡ ಮಾಡಬಹುದು. ಎಂಡೋಸ್ಕೋಪ್ ಎಂಬುದೊಂದು ಬಾಗಿಸಬಹುದಾದ ಕೊಳವೆ; ಅದರೊಳಗೆ ಒಂದು ಅತಿಚಿಕ್ಕ ಕ್ಯಾಮೆರಾ ಇದ್ದು, ಆ ಕೊಳವೆಯನ್ನು ವ್ಯಕ್ತಿಯ ಗಂಟಲಿನ ಮೂಲಕ ಅನ್ನನಾಳದ ಒಳಗಿಳಿಸಿ ಅದರ ಮೂಲಚಿಕಿತ್ಸಕ ಅನ್ನನಾಳ, ಜಠರ, ಸಣ್ಣ ಕರುಳು ಮುಂತಾದ ಕಡೆಗಳಲ್ಲಿನ ಪರಿಸ್ಥಿತಿ ಹೇಗಿದೆ ಎಂದು ವೀಕ್ಷಿಸುವುದಲ್ಲದೆ, ಒಳಗಿನ ಚಿತ್ರಗಳನ್ನು ಸಹ ತೆಗೆಯುವುದರ ಸಹಾಯದಿಂದ ರೋಗ ನಿರ್ಣಯ ಸಾಧ್ಯ.

ಚಿಕಿತ್ಸೆ: ಬಹುತೇಕ, ಬಿಕ್ಕಳಿಕೆಗಳು ಚಿಕಿತ್ಸೆ ಇಲ್ಲದೆ ವಾಸಿಯಾಗುವುವು. ಇತರ ಕಾಯಿಲೆಗಳ ಕಾರಣದಿಂದ ಬರುವಂಥ ಬಿಕ್ಕಳಿಕೆಗೆ, ಅದಕ್ಕೆ ಕಾರಣವಾದ ಕಾಯಿಲೆಯ ಚಿಕಿತ್ಸೆ ಸಮರ್ಪಕವಾಗಿ ನಡೆದ ನಂತರ, ಬಿಕ್ಕಳಿಕೆ ಸಹ ಇಲ್ಲವಾಗುವುದು. ಅಕಸ್ಮಾತ್ ಎರಡು ದಿನಗಳ ನಂತರ ಕೂಡ ಬಾಧಿಸುವ ಬಿಕ್ಕಳಿಕೆಗೆ ಕೆಲವು ಔಷಧಗಳೂ ಬೇಕಾಗುವುದು. ಅಲ್ಲದೆ, ನರವನ್ನು ಪ್ರತಿಬಂಧಿಸುವ ಅರಿವಳಿಕೆ ಇಂಜಕ್ಷನ್ ಕೊಡುವ ಸಾಧ್ಯತೆ ಸಹ ಇದೆ. ಮತ್ತು ಶಸ್ತ್ರಚಿಕಿತ್ಸೆಯಿಂದ ನರದ ಉದ್ದೀಪನ ಮಾಡುವ ಬ್ಯಾಟರಿ ಅಳವಡಿಸುವುದೂ ಇದೆ.

ಇಷ್ಟಲ್ಲದೆ ವ್ಯಕ್ತಿಯ ಜೀವನ ಕ್ರಮ ಬದಲಾವಣೆ ಸಹ ಬಾಧೆ ಗುಣಪಡಿಸಲು ಸಹಾಯಕರ: ಕಾಗದದ ಚೀಲದೊಳಗೆ ಉಸಿರಾಡುವುದು (ಈ ರೀತಿ ಉಸಿರಾಟ, ವ್ಯಕ್ತಿಯ ಶ್ವಾಸದೊಳಗಿನ ಇಂಗಾಲದ ಡೈಯಾಕ್ಸೈಡ್ ಹೆಚ್ಚಿಸಿ, ಡೈಯಫ್ರ್ಯಾಮಿನ ಸೆಳೆತ ಕಮ್ಮಿ ಮಾಡಿ, ಅದನ್ನು ವಿಶ್ರಾಂತ ಸ್ಥಿತಿಗೆ ತರುತ್ತದೆ), ಅತಿ ತಣ್ಣಗಿನ ನೀರಿಂದ ಗಂಟಲು ಮುಕ್ಕಳಿಸುವುದು, ಉಸಿರು ಹಿಡಿದುಕೊಳ್ಳುವುದು, ತಣ್ಣನೆಯ ನೀರನ್ನು ನಿಧಾನ ಗುಟುಕಿಸುವುದು, ಸಕ್ಕರೆಯ ನುಂಗುವುದು, ನಿಂಬೆ ರಸ ಹೀರುವುದು, ತಣ್ಣನೆಯ ಬಟ್ಟೆಯಿಂದ ಮುಖ ಒತ್ತುವುದು. ಯಾರಾದರು ಹೆದರಿಸುವುದು ಕೂಡ ಇದರ ತಡೆಗೆ ಸಹಕಾರಿ. ಮಂಡಿಗಳನ್ನು ಎದೆಯತ್ತ ಎಳೆದು ಮುಂದಕ್ಕೆ ಬಾಗುವುದು ಇತ್ಯಾದಿ. ಇವುಗಳ ಸಂಗಡ ಕಾರ್ಬೊನೇಟೆಡ್ ಪಾನೀಯ ಸೇವನೆ ತ್ಯಜಿಸುವುದು, ಗಾಳಿ ಉತ್ಪತ್ತಿಸುವ ಆಹಾರ ತ್ಯಾಜ್ಯ ಮಾಡುವುದು, ಸಣ್ಣ ಸಣ್ಣ ಗಾತ್ರದ ಊಟ ಮಾಡುವುದೂ ಸಹ ಸಹಾಯಕರ.

ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 9844645459

Related post

1 Comment

  • Murthy, an unending problem with the drunkards.
    ಕುಡಿಯುವವ ಇದನ್ನೋದಲ್ಲ. ಕುಡಿಯದ ನಾವು ಇದರ ಭಾಷಣ ಮಾಡುವುದು ಬಿಡಲ್ಲ!

Leave a Reply

Your email address will not be published. Required fields are marked *