ಬಿಲದ್ವಾರ ಗುಹೆ – ಸ್ಕಂದಪುರಾಣ

ಸ್ಕಂದಪುರಾಣದಲ್ಲಿ ಉಲ್ಲೇಖಿತ ಬಿಲದ್ವಾರ ಗುಹೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯೂ ಒಂದು. ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ಸರ್ಪಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು ಅವಿತುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡನೆಂದು ಹೇಳಲಾಗಿದೆ. ಈ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು, ಪ್ರವೇಶ ಮತ್ತು ನಿರ್ಗಮದ್ವಾರವನ್ನು ಹೊಂದಿದೆ. ಈ ಗುಹೆಯು 10 ಮೀ ಉದ್ದ ಮತ್ತು 30 ಅಡಿ ಆಳವಿದೆ.

ಕಶ್ಯಪ ಎಂಬ ಮುನಿಗಳಿಗೆ ವಿನುತ ಮತ್ತು ಕದ್ರು ಎಂಬ ಇಬ್ಬರು ಹೆಂಡತಿಯರಿದ್ದು, ವಿನುತಳ ಮಗನೇ ಗರುಡ ಮತ್ತು ಕದ್ರುವಿನ ಮಕ್ಕಳೇ ಸರ್ಪಗಳಾಗಿದ್ದವು. ಒಂದು ಬಾರಿ ಗರುಡನಿಗೂ ಸರ್ಪಗಳಿಗೂ ಯಾವುದೋ ಕಾರಣಕ್ಕೆ ಮನಸ್ತಾಪವುಂಟಾಗಿ ಸಹಸ್ರಾರು ಸರ್ಪಗಳನ್ನು ಗರುಡನು ಕೊಂದು ಬಿಡುತ್ತಾನೆ. ಸರ್ಪಗಳು ಗರುಡನ ತಾಪದಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಅವಿತುಕೊಳ್ಳುತ್ತವೆ. ಸರ್ಪಗಳ ರಾಜನಾದ ವಾಸುಕಿಯು ಈ ಸಂದರ್ಭದಲ್ಲಿ ಸಹ್ಯಾದ್ರಿ ಮಡಿಲಿನ ಧಾರಾ ನದಿಯ ಪಕ್ಕದ ಬಿಲದ್ವಾರ ಗುಹೆಯೊಳಗೆ ಅವಿತುಕೊಳ್ಳುತ್ತಾನೆ. ಈ ವಿಚಾರವನ್ನು ಅರಿತ ಗರುಡನು ವಾಸುಕಿಯನ್ನು ಕೊಲ್ಲಲು ಬಿಲದ್ವಾರದ ಬಳಿ ತೆರಳುತ್ತಾನೆ. ಗರುಡ ಮತ್ತು ವಾಸುಕಿಯ ಕದನದ ವಿಚಾರ ತಿಳಿದ ಇವರ ತಂದೆಯಾದ ಕಶ್ಯಪ ಮಹಾಮುನಿ ಮಧ್ಯ ಪ್ರವೇಶಿಸುತ್ತಾನೆ. ವಾಸುಕಿಯು ಶಿವಭಕ್ತನಾಗಿದ್ದು, ಆತನಿಂದ ಅನೇಕ ಲೋಕಕಲ್ಯಾಣ ಕಾರ್ಯಗಳು ಆಗಬೇಕಿರುವುದರಿಂದ ಆತನನ್ನು ಕೊಲ್ಲದಂತೆ ಕಶ್ಯಪ ಮಹಾಮುನಿಗಳು ಗರುಡನಿಗೆ ತಿಳಿಸುತ್ತಾರೆ. ಗರುಡನ ಕೋಪದ ಬೇಗೆಯಿಂದ ತಪ್ಪಿಸಿಕೊಂಡ ವಾಸುಕಿಯು ಸರ್ಪಗಳನ್ನೆಲ್ಲಾ ಗರುಡನಿಂದ ರಕ್ಷಿಸಲು ಸುಬ್ರಹ್ಮಣ್ಯ ದೇವಾಲಯ ಇರುವ ಜಾಗದಲ್ಲಿ ಶಿವನ ಕುರಿತು ತಪಸ್ಸನ್ನು ಮಾಡುತ್ತಾನೆ. ವಾಸುಕಿಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು ತನ್ನ ಮಗನಾದ ಸುಬ್ರಹ್ಮಣ್ಯನನ್ನು ಸರ್ಪಗಳ ರಕ್ಷಕನಾಗಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೆಲೆಯಾಗಲು ತಿಳಿಸುತ್ತಾನೆ. ಅದರಂತೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಾಸುಕಿಯೊಂದಿಗೆ ಸುಬ್ರಮಣ್ಯ ದೇವರು ನೆಲೆ ನಿಂತರು.

ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ನಾಗ ಸ್ವರೂಪಿಯಾಗಿ ಪೂಜಿಸಿದರೆ, ವಾಸುಕಿಯನ್ನು ದೈವೀ ಸ್ವರೂಪವಾಗಿ ಪೂಜಿಸುತ್ತಾರೆ. ಗರುಡನ ದರ್ಶನವಾಗದೇ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವದಂದು ರಥವನ್ನು ಎಳೆಯುವುದಿಲ್ಲ. ಗರುಡನ ಭಯದಿಂದ ವಾಸುಕಿಯು ಅಡಗಿ ಕುಳಿತಿದ್ದ ಬಿಲದ್ವಾರ ಗುಹೆಗೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹತ್ವವಿದ್ದು, ವಾಸುಕಿಯ ಅನುಗ್ರಹ ಪಡೆಯಲು ಭಕ್ತಾದಿಗಳು ಬಿಲದ್ವಾರ ಗುಹೆಗೆ ಆಗಮಿಸುತ್ತಾರೆ.

ಈ ಗುಹೆಗೆ ಎರಡು ದಾರಿಗಳಿದ್ದು, ಒಂದು ದಾರಿ ದಕ್ಷಿಣಕ್ಕಿದ್ದರೆ ಇನ್ನೊಂದು ದಾರಿ ಉತ್ತರಕ್ಕಿದೆ. ಉತ್ತರಕ್ಕೆ ಸಾಗುವ ಹಾದಿಯು ಕಾಶಿಗೆ ಹೋಗುತ್ತದೆ ಎಂಬ ನಂಬಿಕೆಯಿದೆ. ಪ್ರಾಚೀನ ಕಾಲದಲ್ಲಿ ಈ ದಾರಿಯ ಮೂಲಕ ಹಲವಾರು ಮಂದಿ ಕಾಶಿಗೆ ತೆರಳಿದ್ದು, ಇತ್ತೀಚಿನ ದಿನಗಳಲ್ಲಿ ಮಣ್ಣು ಜರಿದು ಹೋಗಿದ್ದರಿಂದ ಹೋಗಲು ಆಗುತ್ತಿಲ್ಲ ಎನ್ನುವ ಪ್ರತೀತಿಯಿದೆ. ಈ ಗುಹೆಯೊಳಗೆ ಸಂಪೂರ್ಣ ಕತ್ತಲಿನಿಂದ ಆವರಿಸಿದ್ದು, ಬಿಲದ್ವಾರ ಗುಹೆ ಪವಿತ್ರ ಗುಹೆಯಾಗಿರುವುದರಿಂದ ಭಕ್ತಾದಿಗಳು ಚಪ್ಪಲಿ ಹಾಕಿಕೊಂಡು ಅಲ್ಲಿಗೆ ಹೋಗುವಂತಿಲ್ಲ. ಈ ಗುಹೆಯು ಮಳೆಗಾಲದಲ್ಲಿ ಕೆಸರಿನಿಂದ ಮುಚ್ಚಿಹೋಗುವುದರಿಂದ ಬೇಸಿಗೆಯಲ್ಲಿ ಗುಹೆಯ ಒಳಗೆ ಹೋಗಬಹುದು.

ಬಿಲದ್ವಾರ ಗುಹೆಯ ಎದುರಿಗೆ ವಾಸುಕಿ ಉದ್ಯಾನವನವಿದ್ದು, ಉದ್ಯಾನವನದಲ್ಲಿ ಸುಂದರ ನಾಗಶಿಲ್ಪ, ವಾಸುಕಿ ಮತ್ತು ಗರುಡ ಕಾದಾಡುವ ಸನ್ನಿವೇಶವನ್ನು ಬಿಂಬಿಸುವ ಶಿಲ್ಪಗಳಿವೆ. ಸುಬ್ರಮಣ್ಯ ದೇವಾಲಯಕ್ಕೆ ಹೋದಾಗ ತಪ್ಪದೇ ಬಿಲದ್ವಾರ ಗುಹೆಯನ್ನು ವೀಕ್ಷಿಸಬೇಕು. ಈ ಬಿಲದ್ವಾರ ಗುಹೆಯ ಬಗ್ಗೆ ಶ್ರೀಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವುದು ವಿಶೇಷ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-5174198
ದೂ: 9741884160

Related post

Leave a Reply

Your email address will not be published. Required fields are marked *