ಬಿಳಿ ಕೊರಳಿನ ಕೊಕ್ಕರೆ – Woolly-necked Stork

ಕೊಕ್ಕರೆಗಳು ದೊಡ್ಡ ಗಾತ್ರದ ಹಕ್ಕಿಗಳು. ಈಗಾಗಲೇ ಈ ಅಂಕಣದಲ್ಲಿ ಕೆಲವು ಕೊಕ್ಕರೆಗಳನ್ನು ಪರಿಚಯ ಮಾಡಿಕೊಂಡಿದ್ದೀವಿ. ಇದು ಅದರ ಮುಂದುವರೆದ ಭಾಗ. ನೀವು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪಯಣಿಸುತ್ತಿರುವಾಗ ಕಿಟಕಿ ಪಕ್ಕದಲ್ಲಿ ಕೂತಿದ್ದರೆ ಈ ಪಕ್ಷಿ ನಿಮ್ಮ ಕಣ್ಣಿಗೆ ಬೀಳುವ ಸಾಧ್ಯತೆಯಿದೆ. ಗಂಟಲಿನ ಮೇಲೆ ದಟ್ಟವಾದ ಬಿಳಿ ಗರಿಗಳಿರುವ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು. ದೇಹದ ಮೇಲ್ಭಾಗ ಬಹುತೇಕ ಕಪ್ಪು. ಕುತ್ತಿಗೆಯ ಸಮೀಪದ ಗರಿಗಳು ಹೊಳೆಯುತ್ತವೆ. ಈ ಹೊಳೆಯುವ ಗರಿಗಳು ಉದ್ದವಾಗಿದ್ದು ಪ್ರದರ್ಶನ ಮಾಡುವಾಗ ಈ ಗರಿಗಳನ್ನು ಹಕ್ಕಿ ಎದ್ದುನಿಲ್ಲಿಸುತ್ತದೆ.

ಇಂಗ್ಲಿಷಿನಲ್ಲಿ Woolly-necked Stork Ciconia episcopus ಎಂದು ಕರೆಯಲಾಗುವ ಇದು 85 ಸೆಂ.ಮೀ. ಗಾತ್ರದ್ದು. ಮೀನು, ಕಪ್ಪೆ, ಸರಿಸೃಪಗಳು, ಏಡಿ, ಮೃದ್ವಂಗಿ, ದೊಡ್ಡಗಾತ್ರದ ಕೀಟಗಳನ್ನು ತಿನ್ನುತ್ತದೆ. ರೈತನ ಮಿತ್ರ ಎನ್ನಲಡ್ಡಿಯಿಲ್ಲ. ಬಿಸಿಗಾಳಿ ಒದಗಿಸುವ ಸೌಲಭ್ಯವನ್ನು ಬಳಸಿಕೊಂಡು ಅತಿ ಎತ್ತರದಲ್ಲಿ “ತೇಲು”ತ್ತದೆ. ಬಿಸಿಗಾಳಿ ಮೇಲೆ ಹೋದಾಗ ಅದನ್ನು ಬಳಸಿಕೊಂಡು ಹದ್ದು, ಗರುಡ ಇತ್ಯಾದಿ ಹಕ್ಕಿಗಳು ಕಡಿಮೆ ಶಕ್ತಿಯನ್ನು ವ್ಯಯಿಸಿ ತೇಲುತ್ತವೆ. ಇದನ್ನು ಈ ಕೊಕ್ಕರೆಯೂ ಮಾಡುತ್ತದೆ. ಇತರ ಹಕ್ಕಿಗಳು ಹಾಗೂ ರಣಹದ್ದುಗಳೊಂದಿಗೂ ಇವು ಹೀಗೆ ತೇಲುವುದು ಕಂಡುಬಂದಿದೆ.

ಡಿಸೆಂಬರ್‍ ನಿಂದ ಮಾರ್ಚ್‍ವರೆಗೆ ಮರಿಮಾಡುವ ಇವುಗಳು ಬೂರುಗ ಮರದ ಮೇಲೆ ಗೂಡುಕಟ್ಟುತ್ತವೆ. ಮರಿಗಳಿಗೆ ಪೂರ್ವಜೀರ್ಣಿತ ಆಹಾರವನ್ನು ಕೊಡುತ್ತದೆ (ಪೋಷಕ ಹಕ್ಕಿ ಮರಿಗಳಿಗೆ ಜೀರ್ಣಿಸಿಕೊಳ್ಳಲು ಅನುಕೂಲವಾಗುವಂತೆ ಜೀರ್ಣಿಸಿ ಗೂಡಿನಲ್ಲಿ ಕಕ್ಕುತ್ತದೆ. ಅದೇ ಮರಿಗಳಿಗೆ ಆಹಾರ. ಈ ಪದ್ಧತಿ ಅನೇಕ ನೀರಹಕ್ಕಿಗಳಲ್ಲಿ ಇದೆ. ಅನೇಕ ನೀರಹಕ್ಕಿಗಳಲ್ಲಿ ಮರಿಗಳು ಪೋಷಕ ಹಕ್ಕಿಗಳ ಗಂಟಲಿಗೆ ಕೊಕ್ಕನ್ನು ಹಾಕಿ ವಾಂತಿಯನ್ನು ಪ್ರಚೋದಿಸಿ ಆಹಾರ ಪಡೆಯುತ್ತವೆ). ಗೂಡು ಕಟ್ಟುವುದರಿಂದ ತೊಡಗಿ ಮರಿಗಳ ಪಾಲನೆಯ ವರೆಗೂ ಗಂಡು ಹೆಣ‍್ಣು ಭಾಗವಹಿಸುತ್ತವೆ. ಬೇಸರದ ಸಂಗತಿಯೆಂದರೆ ಈ ಹಕ್ಕಿ ಅಳಿವಿನಂಚಿನಲ್ಲಿದೆ.

ಜಿ ಎಸ್ ಶ್ರೀನಾಥ

ನಮಗೆ ಹಕ್ಕಿಗಳ ಸುಂದರ ಚಿತ್ರಗಳನ್ನು ಒದಗಿಸುತ್ತಿರುವ ಶ್ರೀ ಜಿ ಎಸ್ ಶ್ರೀನಾಥರಿಗೆ ಈ ಬಾರಿ ಎರಡು ವಿಷಯಗಳಿಗೆ ಧನ್ಯವಾದಗಳನ್ನು ಹೇಳಬೇಕು. ಒಂದು, ಇಂತಹ ಅಳಿವಿನಂಚಿನಲ್ಲಿರುವ ಹಕ್ಕಿಯ ಚಿತ್ರ ಒದಗಿಸಿದ್ದಕ್ಕೆ ಎರಡು, ಇದು ಅವರು ನಮಗೆ ಕೊಟ್ಟಿರುವ 35ನೆಯ ಚಿತ್ರ! ಧನ್ಯವಾದಗಳು, ಶ್ರೀನಾಥ!

ಇದನ್ನು ನೀವು ಕಂಡರೆ ಇದು ಗಂಡಾಂತರದಂಚಿನಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಪರಿಸರ ಸಂರಕ್ಷಣೆಯನ್ನು ಕುರಿತಾಗಿ ಯೋಚಿಸಿ ಹಾಗೂ ಮತ್ತು ನಮ್ಮ ksn.bird@gmail.com ಮೇಲ್ ಐಡಿಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು: ಜಿ ಎಸ್ ಶ್ರೀನಾಥ ಹಾಗು ಜೋಯ್ ಕೃಷ್ಣ ಪೊಡ್ಡರ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post