ಅದೊಂದು ಮಲೆನಾಡಿನ ಸಣ್ಣ ಊರು. ಊರಿನ ಪಕ್ಕವೇ ಒಂದು ನದಿ ಹರಿಯುತ್ತಿತು. ಉತ್ತಿ ಬಿತ್ತಿ ಅಲ್ಲಿಯ ಜನ ಬಂಗಾರದಂಥಹ ಬೆಳೆ ತೆಗೆಯಬಹುದಿತ್ತು. ಆದರೆ ಬರುಬರುತ್ತಾ ಆ ಊರಿನ ಜನರೆಲ್ಲರೂ ಸೋಮಾರಿಗಳಾಗತೊಡಗಿದ್ದರು. ಎಷ್ಟರ ಮಟ್ಟಿಗೆ ಸೋಮಾರಿಗಳಾಗಿದ್ದರೆಂದರೆ ಬರೀ ಕುಳಿತು ಹರಟೆ ಹೊಡೆಯುವುದು, ಇಲ್ಲಾ ಮಲಗುವುದು, ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಸರಿಯಾಗಿ ನೀರು ಹಾಯಿಸದೆ ಹೊಲಗಳೆಲ್ಲಾ ಒಣಗತೊಡಗಿದ್ದವು. ಊರನ್ನು ಸ್ವಚ್ಛ ಮಾಡದೆ ಇದ್ದುದ್ದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಹರಡತೊಡಗಿದ್ದವು. ಹಂದಿಗಳ ಹಾವಳಿ ಜಾಸ್ತಿಯಾಗಿತ್ತು. ಊರಿನ ಕೆಲ ಹೆಂಗಸರು ಮಕ್ಕಳು ಸಹ ಸೋಮಾರಿಗಳಾಗತೊಡಗಿದ್ದರು. ಕೂಡಿಟ್ಟ ಹಣವೆಲ್ಲಾ ಖರ್ಚಾಗುತ್ತಾ ಬಂದಿತ್ತು. ಆದರೂ ಆ ಊರಿನ ಜನರಿಗೆ ಬುದ್ದಿ ಬರಲಿಲ್ಲ ಸೋಮಾರಿತನಕ್ಕೆ ಜೋತುಬಿದ್ದಿದ್ದರು.
ಇದನ್ನು ಕಂಡು ಊರಿನ ಹಿರಿಯರಿಗೆಲ್ಲರಿಗೂ ಯೋಚನೆಯಾಗತೊಡಗಿತು. ಇದು ಹೀಗೆ ಮುಂದುವರೆದರೆ ಹೊಟ್ಟೆಬಟ್ಟೆಗೆ ಏನು ಮಾಡುವುದು? ಊರಿಗೆ ಇದೇನು ಗ್ರಹಚಾರ ಬಂದಿದೆ, ಯಾಕೆ ಹೀಗಾಗಿದೆ ಎಂದು ಯೋಚಿಸತೊಡಗಿದರು. ನಮ್ಮ ಮಕ್ಕಳು ಇದೇಕೆ ಹೀಗೆ ಮಾಡುತ್ತಿದ್ದಾರೆ? ಊರಿನ ಹಿರಿಯರೆಲ್ಲರೂ ಸೇರಿ ಜನಗಳನ್ನು ಕರೆದು ಬುದ್ದಿ ಹೇಳಬೇಕೆಂದು ಕೊಂಡರು. ಆ ಊರಿನಲ್ಲಿ ನೀಲೇಶ ಎಂಬ ಬಾಲಕನಿದ್ದನು. ಬೇರೆ ಹುಡುಗರಿಗೆ ಹೋಲಿಸಿದರೆ ಸ್ವಲ್ಪ ಜಾಣನಾಗಿದ್ದನಲ್ಲದೇ, ಊರಿನ ಜನರ ವರ್ತನೆಯಿಂದ ಬೇಸರಗೊಂಡಿದ್ದನು. ತನ್ನ ಸ್ನೇಹಿತರಿಗೆ ನಾವು ನಮ್ಮ ತಂದೆ ತಾಯಿಯರಂತೆ ಸೋಮಾರಿಗಳಾಗುವುದು ಬೇಡ, ಕಷ್ಟಪಟ್ಟು ಹೊಲದಲ್ಲಿ ಕೆಲಸ ಮಾಡೋಣ, ಊರನ್ನು ಸ್ವಚ್ಚ ಮಾಡೋಣ ಬನ್ನಿ ಎಂದು ಕರೆದರೆ ಗೆಳೆಯರೆಲ್ಲರೂ ಇವನನ್ನು ಗೇಲಿ ಮಾಡುತ್ತಿದ್ದರು. ಇವನಿಗೆ ಹೇಗಾದರೂ ಮಾಡಿ ಜನರನ್ನು ಮತ್ತೆ ಸೋಮಾರಿತನದಿಂದ ಮುಕ್ತಿಗೊಳಿಸಬೇಕೆಂದು ಯೋಚಿಸುತ್ತಿದ್ದನು. ಅವನೊಂದು ನಾಯಿಯನ್ನು ಸಾಕಿದ್ದನು. ಅದರ ಹೆಸರು ಮೋತಿ. ನೀಲೇಶನಿಗೆ ತುಂಬಾ ವಿಧೇಯನಾಗಿದ್ದ ಆ ನಾಯಿ ಇವನು ಏನಾದರೂ ಕೆಲಸ ಮಾಡುತ್ತಿದ್ದರೆ ತಾನೂ ಮಾಡುತಿತ್ತು. ಯಾರು ಏನೇ ಗೇಲಿ ಮಾಡಲಿ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತೇನೆ ಎಂದು ನೀಲೇಶ ಪ್ರತಿದಿನ ಊರಿನ ಕಸ ಗುಡಿಸಲು ಪ್ರಾರಂಭಿಸಿದನು. ಇದನ್ನು ಕಂಡ ಕೆಲ ಊರ ಹಿರಿಯರು ಇವನ ಜೊತೆಗೂಡಿದರೂ, ಇದನ್ನು ನೋಡಿದರೂ ಊರಿನ ಜನ ತಮ್ಮ ಪಾಡಿಗೆ ತಾವಿದ್ದರು. ಇವನ ನಾಯಿ ಮೋತಿ ಕೂಡ ಕಸ ಕಡ್ಡಿಗಳನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ಗುಡ್ಡೆ ಮಾಡುತ್ತಿತ್ತು.
ಊರಿನ ಹಿರಿಯರೆಲ್ಲರೂ ಜನರನ್ನು ಕರೆದು ಬುದ್ದಿ ಹೇಳಿದರು. ಇದು ಹೀಗೇ ಮುಂದುವರೆದರೆ ಹಸಿವಿನಿಂದ ಎಲ್ಲರೂ ಸತ್ತು ಹೋಗುತ್ತೇವೆ ಎಂದರೂ ಯಾರೂ ಕೇಳಲಿಲ್ಲ. ಕಳೆದ ವರ್ಷದ ಬೆಳೆ ಇದೆ ಅದು ಖಾಲಿಯಾದ ಮೇಲೆ ನೋಡೋಣ ಎಂದು ಉಡಾಫೆಯ ಮಾತನಾಡಿದರು. ಸ್ವಚ್ಛತೆಯಿಲ್ಲದೇ ಊರಿನಲ್ಲಿ ರೋಗ ಹರಡಿ ಕೆಲವು ಮಂದಿ ಸತ್ತೇ ಹೋದರು. ಆದರೂ ಉಳಿದವರಿಗೆ ಬುದ್ದಿ ಬರಲಿಲ್ಲ! ಇದು ಹೀಗೆ ಮುಂದುವರೆದಿತ್ತು. ಊರಿನಲೆಲ್ಲಾ ಎಲ್ಲಿ ನೋಡಿದರೂ ಕಸ, ರೋಗ ರುಜಿನ. ಇನ್ನೇನು ಬೇಸಿಗೆ ಕಳೆಯುತ್ತಾ ಬಂದಿತ್ತು. ಒಂದು ದಿನ ಇದ್ದಕಿದ್ದಂತೆ ಸಂಜೆ ಧಾರಾಕಾರವಾದ ಮಳೆ ಸುರಿಯಲಾರಂಭಿಸಿತು. ಊರಿನಲ್ಲಿ ಹಲವು ಮರಗಳು ಬುಡಮೇಲಾದವು. ರಸ್ತೆಯ ತುಂಬಾ ಮರದ ಟೊಂಗೆಗಳು ಮುರಿದು ಬಿದ್ದವು. ಎಂಥಹ ಮಳೆ ಬಂದಿತೆಂದರೆ ಆವರೆಗೂ ಅಂಥಹ ಮಳೆಯನ್ನೇ ಆ ಊರಿನ ಜನ ನೋಡಿರಲಿಲ್ಲ.
ಊರಿನ ತುಂಬ ಎಲ್ಲೆಂದರಲ್ಲಿ ಕಸ, ಊರಿನ ಜನ ಎಷ್ಟು ಸೋಮಾರಿಗಳಾಗಿದ್ದರೆಂದರೆ ರಸ್ತೆಯಲ್ಲಿ ಬಿದ್ದ ಮರದ ಟೊಂಗೆಯನ್ನು ದಾಟಿಕೊಂಡು ಹೋಗುತ್ತಿದ್ದರೇ ವಿನಃ ಅದನ್ನು ಎತ್ತಿ ಹಾಕುತ್ತಿರಲಿಲ್ಲಾ!
ಊರಿನ ಜನರಿಗೆ ಕೊಳಕಾದ ತಮ್ಮ ಊರನ್ನು ಸ್ವಚ್ಛ ಮಾಡಬೇಕೆಂದು ಅನ್ನಿಸಲಿಲ್ಲ! ಹುಡುಗ ನೀಲೇಶ ಇನ್ನೇನು ಮಾಡುವುದು ನಾವೇ ಸ್ವಚ್ಛ ಗೊಳಿಸಬೇಕೆಂದುಕೊಂಡು ಊರಿನ ಕೆಲ ಹಿರಿಯರೊಂದಿಗೆ ಮಾತನಾಡಿ ಸ್ವಚ್ಛ ಮಾಡಲು ಮುಂದಾದನು. ಆತನೊಂದಿಗೆ ಆತನ ನಾಯಿ ಮೋತಿಯೂ ಕಸಕಡ್ಡಿಗಳನ್ನು ಎತ್ತಿ ಹಾಕಲಾರಂಭಿಸಿತು. ಹೀಗೆ ಸ್ವಚ್ಛ ಮಾಡುತ್ತಿರುವಾಗ ಮೋತಿ ಮಣ್ಣಿನಲ್ಲಿ ಎನನ್ನೋ ನೋಡಿ ಕುಯ್ ಕುಯ್ ಎನ್ನುತ್ತಿತ್ತು. ಇದನ್ನು ಗಮನಿಸಿದ ಬಾಲಕ ಹಾಗೂ ಊರಿನ ಕೆಲ ಹಿರಿಯರು ಅಲ್ಲಿಗೆ ಬಂದು ನೋಡಿದರೆ ನಾಲ್ಕೈದು ಚಿನ್ನದ ನಾಣ್ಯಗಳು. ಹಿಂದಿನ ದಿನ ಸುರಿದ ಭಾರಿ ಮಳೆಗೆ ಮಣ್ಣಿನಿಂದ ಮೇಲೆ ಬಂದಿದ್ದವು, ಸುದ್ದಿ ಹರಡಿದ್ದೇ ತಡ ಊರಿನ ಸೋಮಾರಿಗಳೆಲ್ಲಾ ಅಲ್ಲಿಗೆ ಜಮಾಯಿಸಿದರು. ಎಲ್ಲರೂ ಚಿನ್ನದ ನಾಣ್ಯಗಳನ್ನು ನೋಡಿ ನಾಲ್ಕೈದು ಇದೆ ಎಂದರೆ ಇನ್ನೂ ಬಹಳ ನಿಧಿ ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಬಾಲಕ ಹೌದು ನಮ್ಮಜ್ಜ ಈ ಊರಿನ ಹೊಲಗದ್ದೆಗಳಲ್ಲಿ ಹಾಗೂ ಊರಿನ ಸುತ್ತಮುತ್ತ ನಮ್ಮ ಪೂರ್ವಜರು ತುಂಬಾ ನಿಧಿ ಇಟ್ಟಿರುವುದಾಗಿ ನನಗೆ ಒಮ್ಮೆ ಹೇಳಿದ್ದರು ಎಂದದ್ದೇ ತಡ ಸೋಮಾರಿ ಜನರೆಲ್ಲಾ ಚಿನ್ನ ಸಿಕ್ಕರೆ ದುಡ್ದು ಬರುತ್ತದೆ. ಆರಾಂ ಆಗಿ ಇರಬಹುದೆಂದು ಎಲ್ಲರೂ ತಂತಮ್ಮ ಹೊಲಗಳತ್ತ ಗುದ್ದಲಿ ಪಿಕಾಸಿಗಳೊಂದಿಗೆ ನಡೆದರು. ಹೊಲವನ್ನೆಲ್ಲಾ ಅಗೆದು ಸ್ವಚ್ಛ ಮಾಡಿದರೂ ಯಾರಿಗೂ ಚಿನ್ನದ ಯಾವ ಸುಳಿವೂ ಸಿಗಲಿಲ್ಲಾ! ಹುಡುಗ ನೀಲೇಶನನ್ನು ಬೈಯ್ಯಲಾರಂಭಿಸಿದರು. ಅಲ್ಲಿಗೆ ಬಂದ ಊರಿನ ಹಿರಿಯರೂ ಹೇಗೂ ಜಮೀನನ್ನು ಅಗೆದು ಹಸನುಮಾಡಿರುವಿರಿ, ಹದವಾದ ಮಳೆಯೂ ಆಗಿದೆ ಬಿತ್ತನೆಯನ್ನು ಮಾಡಿ ಒಳ್ಳೆ ಬೆಳೆ ಬರುತ್ತದೆ ಎಂದರು. ಸರಿ ಎಂದು ಜನರು ಹಾಗೆಯೇ ಮಾಡಿದರು. ಊರಿನ ಹಿರಿಯ ನೀಲೇಶನ ಬಳಿ ಬಂದು ನಿನ್ನ ಅಜ್ಜ ನಿಜವಾಗಲೂ ನಿನಗೆ ಊರಿನ ಹೊಲಗದ್ದೆಗಳಲ್ಲಿ ನಿಧಿಯಿರುವುದಾಗಿ ಹೇಳಿದ್ದರೆ? ಎಂದು ಕೇಳಿದರು. ಅದಕ್ಕೆ ಇಲ್ಲಾ ನಾನು ಹಾಗೆ ಹೇಳಿರದಿದ್ದರೆ ಇವರಾರು ತಮ್ಮ ಸೋಮಾರಿತನವನ್ನು ಬಿಡುತ್ತಿರಲಿಲ್ಲಾ. ಚಿನ್ನ ಸಿಕ್ಕರೆ ಮಾರಿ ಇನ್ನೂ ಸೋಮಾರಿತನದಿಂದ ಇರಬಹುದೆಂದು ಎಲ್ಲರೂ ಚಿನ್ನ ಹುಡುಕಲು ತಮ್ಮ ಜಮೀನನ್ನು ಸ್ವಚ್ಛ ಮಾಡಿದರು ಎಂದನು. ನೀಲೇಶನ ಮಾತನ್ನು ಕೇಳಿದ ಜನ ತಲೆ ತಗ್ಗಿಸಿದರು. ಸುಖವಾಗಿರಬೇಕೆಂದರೆ ಮೈಮುರಿದು ದುಡಿಯಬೇಕು ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲುವುದಿಲ್ಲ ಎಂದು ಅವರಿಗೆ ಅರ್ಥವಾಗಿತ್ತು. ಅಂದಿನಿಂದ ಆ ಊರಿನ ಜನರೆಲ್ಲಾ ಸೋಮಾರಿತನ ಬಿಟ್ಟು ಕಷ್ಟಪಟ್ಟು ದುಡಿದು ಸುಖವಾಗಿದ್ದರು.
ಪ್ರಕಾಶ್ ಕೆ ನಾಡಿಗ್
ತುಮಕೂರು