ಬೆಂಕಿಯಲ್ಲಿ ಅರಳಿದ ಪಾರಿಜಾತ
ರಾಜೇನಹಳ್ಳಿ ಎಂಬ ಊರಿನಲ್ಲಿ ಗುಣಶೇಖರ ಮತ್ತು ರಾಜಶೇಖರ ಎಂಬ ಇಬ್ಬರು ಸಹೋದರರು ಒಟ್ಟಿಗೇ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಗುಣಶೇಖರನು ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿದ್ದನು. ಇವನ ಪತ್ನಿ ಸತ್ಯಾ ಅತ್ಯಂತ ಮೃದು ಸ್ವಭಾವದ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವ ಗೃಹಿಣಿಯಾಗಿದ್ದಳು. ಗುಣಶೇಖರನಿಗೆ ಪಾರಿಜಾತ ಎಂಬ ಒಬ್ಬಳೇ ಮಗಳಿದ್ದು, ಅತ್ಯಂತ ಚತುರೆ ಮತ್ತು ಓದಿನಲ್ಲೂ ಎಲ್ಲರಿಗಿಂತ ಮುಂದಿದ್ದಳು. ಈಕೆ ಚೆನ್ನಾಗಿ ಓದಿ ಪ್ರತೀ ಬಾರಿಯೂ ತರಗತಿಗೆ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದಳು.
ರಾಜಶೇಖರನು ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದು, ಇವನ ಪತ್ನಿ ನಿತ್ಯಾ ಗೃಹಿಣಿಯಾಗಿದ್ದಳು. ನಿತ್ಯಾಳು ತೀರಾ ಸೋಮಾರಿಯಾಗಿದ್ದು, ಮನೆಯ ಕೆಲಸಗಳನ್ನೆಲ್ಲ ಸತ್ಯಾಳಿಂದ ಮತ್ತು ಪಾರಿಜಾತಳಿಂದ ಮಾಡಿಸಿಕೊಂಡು ತಾನು ಮನೆಯೊಳಗೆ ಓಡಾಡಿಕೊಂಡು ನೆಮ್ಮದಿಯಾಗಿರುವ ಗುಣದವಳು. ರಾಜಶೇಖರನಿಗೆ ಜಯೇಂದ್ರ ಎನ್ನುವ ಪುತ್ರನಿದ್ದು, ಈತ ತೀರಾ ಸೋಮಾರಿ ಮಾತ್ರವಲ್ಲದೇ ಪುಸ್ತಕವೆಂದರೆ ಆತನಿಗೆ ಅಲರ್ಜಿ ಮತ್ತು ತರಗತಿಯಲ್ಲಿ ಯಾವಾಗಲೂ ಕೊನೆಯ ಸ್ಥಾನವನ್ನು ಪಡೆಯುತ್ತಿದ್ದ. ಪಾರಿಜಾತಾಳ ಜಾಣತನದ ಕಾರಣದಿಂದ ಆಕೆಯು ತನ್ನ ಸಂಭಂದಿಕರೆಲ್ಲರ ಪ್ರೀತಿಗೆ ಪಾತ್ರಳಾಗಿದ್ದು, ನೆರೆ ಮನೆಯವರೆಲ್ಲರೂ ಅತ್ಯಂತ ಅಕ್ಕರೆಯಿಂದ ಮಾತನಾಡಿಸುತ್ತಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಜಯೇಂದ್ರ ಮಾತ್ರ ದಿನವಿಡೀ ಆಟವಾಡುತ್ತಾ ಊರ ಹೊರಗಡೆ ಗೆಳೆಯರೊಂದಿಗೆ ಸಮಯವನ್ನು ಕಳೆಯುತ್ತಿದ್ದ.
ಗುಣಶೇಖರನು ವ್ಯಾಪಾರದಲ್ಲಿ ನಷ್ಟವನ್ನು ಹೊಂದಿ, ಸಾಲಕ್ಕೆ ಸಿಲುಕಿದ್ದರಿಂದ ತನ್ನ ಅಂಗಡಿಯನ್ನು ಉಳಿಸಿಕೊಳ್ಳಲು ಬೇರೆ ದಾರಿಯೇ ಕಾಣದೇ ತಮ್ಮನಾದ ರಾಜಶೇಖರನಿಂದ ಐದು ಲಕ್ಷ ರೂಪಾಯಿ ಬಡ್ಡಿಗೆ ಸಾಲವನ್ನು ಪಡೆದುಕೊಂಡು ವ್ಯಾಪಾರವನ್ನು ಮತ್ತೆ ಮುಂದುವರಿಸಿದ್ದನು. ತನ್ನ ಅಕ್ಕನ ಮಗಳಾದ ಪಾರಿಜಾತಳು ಓದಿನಲ್ಲಿ ಹೆಚ್ಚು ಹೆಚ್ಚು ಸಾಧನೆಯನ್ನು ಮಾಡುತ್ತಿದ್ದುದರಿಂದ ಆಕೆಯನ್ನು ಎಲ್ಲರೂ ಹೋಗಳುತ್ತಿದ್ದದ್ದನ್ನು ನಿತ್ಯಾಳಿಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಪಾರಿಜಾತಳ ಕಾರಣದಿಂದ ನನ್ನ ಮಗನಾದ ಜಯೇಂದ್ರನು ಯಾವುದರಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಎಲ್ಲರೂ ನನ್ನ ಮಗನನ್ನು ತಾತ್ಸಾರ ಭಾವದಿಂದ ನೋಡುತ್ತಿದ್ದಾರೆ ಎಂದು ಒಳಗಿಂದೊಳಗೇ ಪಾರಿಜಾತಳ ಬಗ್ಗೆ ಅಸೂಯೆ ಪಡುತ್ತಿದ್ದಳು. ಇದಕ್ಕಾಗಿ ನಿತ್ಯಳು ವಾಮಮಾರ್ಗವನ್ನು ಹಿಡಿಯಲು ನಿರ್ಧರಿಸಿದಳು. ಹೇಗಾದರೂ ಮಾಡಿ ಪಾರಿಜಾತಾಳನ್ನು ಓದಿನಲ್ಲಿ ಹಿಂದೆ ಬೀಳುವಂತೆ ಮಾಡಿ ತನ್ನ ಮಗನಾದ ಜಯೇಂದ್ರನೇ ಹೆಚ್ಚು ಜಾಣ ಮತ್ತು ಬುದ್ದಿವಂತನೆಂದು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ನಿರ್ಧರಿಸಿದಳು.
ನಿತ್ಯಾಳು, ಪಾರಿಜಾತಳನ್ನು ಗದರಿಸಿ ಸತ್ಯಾಳಿಗೆ ತಿಳಿಯದಂತೆ ಮನೆಯಲ್ಲಿ ಅತ್ಯಂತ ಕಠಿಣ ಕೆಲಸಗಳನ್ನು ನೀಡಲು ಪ್ರಾರಂಭಿಸಿ ಓದಲು ಸಮಯವೇ ಸಿಗದಂತೆ ಮಾಡುತ್ತಿದ್ದಳು. ಅಷ್ಟೇ ಅಲ್ಲದೇ ರಾತ್ರಿ ಎಂಟು ಗಂಟೆಯ ವೇಳೆಗೆ ಆಕೆಯನ್ನು ದೂರದ ಕಿರಾಣಿ ಅಂಗಡಿಗೆ ಹೋಗಿ ಮನೆಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ತರಲು ತಿಳಿಸಿ, ಊರಿನಲ್ಲಿದ್ದ ಕೆಲವು ಪುಡಿ ರೌಡಿಗಳನ್ನು ಪಾರಿಜಾತಳನ್ನು ಬೆನ್ನತ್ತಿ ಚುಡಾಯಿಸಲು ಬಿಟ್ಟಿದ್ದಳು. ಪುಡಿರೌಡಿಗಳ ಕಿರುಕುಳದಿಂದ ಮಾನಸಿಕವಾಗಿ ಆಘಾತಗೊಂಡು ಖಿನ್ನಳಾಗಿದ್ದರೂ ಪಾರಿಜಾತಳು ಓದಿನ ಮೇಲಿನ ಹಿಡಿತವನ್ನು ಕಳೆದುಕೊಳ್ಳಲಿಲ್ಲ. ಶಾಲೆ ಮುಗಿಸಿ ಮನೆಗೆ ಬಂದಾಕ್ಷಣ ಚಿಕ್ಕಮ್ಮ ಮೇಲಿಂದ ಮೇಲೆ ನೀಡುತ್ತಿದ್ದ ಕಠಿಣ ಮನೆಯ ಕೆಲಸಗಳೆಲ್ಲವನ್ನೂ ಶ್ರದ್ಧೆಯಿಂದ ಮಾಡುತ್ತಿದ್ದಳು. ಎಲ್ಲರೂ ಊಟ ಮಾಡಿದ ನಂತರ ಮಿಕ್ಕಿದ್ದನ್ನು ತಾನು ಊಟ ಮಾಡಿ ಎಲ್ಲಾ ಪಾತ್ರೆಗಳನ್ನು ತೊಳೆದಿಡುತ್ತಿದ್ದಳು. ಮೈದುನ ರಾಜಶೇಖರನು ತನ್ನ ಗಂಡನ ವ್ಯಾಪಾರಕ್ಕೆ ಹಣದ ಸಹಾಯ ಮಾಡಿದ್ದರಿಂದ ಮಗಳ ಮೇಲಿನ ನಿತ್ಯಾಳ ದೌರ್ಜನ್ಯವನ್ನು ಪ್ರತೀ ದಿನ ಸತ್ಯಾಳು ನೋಡಿಯೂ ಎದುರಿಸಲು ಸಾಧ್ಯವಾಗದೇ ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದಳು. ರಾತ್ರಿ ಎಲ್ಲರೂ ಮಲಗಿದ ನಂತರ ಈಕೆಯೂ ಕೋಣೆಯ ಎಲ್ಲಾ ದೀಪಗಳನ್ನೂ ನಂದಿಸಬೇಕಾದ್ದರಿಂದ ಹೋಂ ವರ್ಕ್ಸ್ ಮಾಡಲು ತಾಯಿಯ ಮೊಬೈಲ್ ಬೆಳಕನ್ನು ಬಳಸಿಕೊಂಡು ಅದೇ ಬೆಳಕಿನ ಮೂಲಕ ಚಿಕ್ಕಮ್ಮನಿಗೆ ಕಾಣಿಸದಂತೆ ಮಂಚದಡಿಯಲ್ಲಿ ಕುಳಿತು ಓದಲಾರಂಭಿಸಿದಳು. ಇದರಿಂದ ಈ ಬಾರಿ ನಡೆದ 9ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲೂ ಪಾರಿಜಾತಳು ಇಡೀ ತರಗತಿಗೇ ಪ್ರಥಮ ಸ್ಥಾನವನ್ನು ಪಡೆದಳು.
ಇಷ್ಟೆಲ್ಲಾ ಕಷ್ಟಗಳನ್ನು ನೀಡಿದರೂ ಪಾರಿಜಾತ ತನ್ನ ಪರೀಕ್ಷೆಯ ಫಲಿತಾಂಶದಲ್ಲಿ ಸ್ವಲ್ಪವೂ ಕುಗ್ಗದೇ ಮತ್ತೆ ಪ್ರಥಮ ಸ್ಥಾನವನ್ನು ಪಡೆದುದನ್ನು ನೋಡಿದ ನಿತ್ಯಾ ಅಕ್ಷಶಃ ಉರಿದು ಬಿದ್ದಳು. ತನ್ನ ಮಗನ ಭವಿಷ್ಯಕ್ಕೆ ಈಕೆಯೇ ಅಡ್ಡಗಾಲೆಂದು ಭಾವಿಸಿದ ನಿತ್ಯಳು ಪಾರಿಜಾತಳಿಗೆ ಈ ಬಾರಿ ಒಂದು ಗತಿಯನ್ನು ಕಾಣಿಸಲೇಬೇಕೆಂದು ನಿರ್ಧರಿಸಿದಳು. ಎಂದಿನಂತೆ ಶಾಲೆಯನ್ನು ಮುಗಿಸಿ ಮನೆಗೆ ಬಂದ ಪಾರಿಜಾತಳನ್ನು ಅಡುಗೆ ಮನೆಯ ಕೈ ತೊಳೆಯುವ ಬೇಸಿನ್ ಕಟ್ಟಿಕೊಂಡಿದ್ದು ಅದನ್ನು ತೆಗೆಯುವಂತೆ ನಿತ್ಯಾಳು ಹೇಳಿದಳು. ಮನೆಯ ಹೊರಗಡೆ ಕಟ್ಟಿಕೊಂಡ ಕಸ ಹೊರ ಬರುತ್ತಿದೆಯೇ ನೋಡಿರಿ ಎಂದು ಸತ್ಯಾಳನ್ನು ಜಾಣತನದಿಂದ ನಿತ್ಯಾ ಹೊರಗಡೆ ಕಳುಹಿಸಿದಳು. ಕಟ್ಟಿಕೊಂಡಿದ್ದ ಕಸ ಹೊರಬರದೇ ಇದ್ದಾಗ ಅದಾಗಲೇ ತಂದಿದ್ದ ಆಸಿಡ್ನ್ನು ಬೇಸಿನ್ಗೆ ಹಾಕು, ಕಸ ಹೊರ ಹೋಗುತ್ತದೆ ಎಂದು ಹೇಳಿ ಪಾರಿಜಾತಳ ಕೈಗೆ ಆಸಿಡ್ ಬಾಟಲಿಯನ್ನು ನೀಡಿದಳು. ಜಾಣೆಯಾದ ಪಾರಿಜಾತ ಒಂದಷ್ಟು ಅಸಿಡ್ನ್ನು ಬೆಸಿನ್ ಪೈಪ್ಗೆ ಹಾಕಿ ಉಳಿದ ಬಾಟಲಿಯನ್ನು ಪಕ್ಕಕ್ಕಿಟ್ಟಳು. ಇದೇ ಸಮಯಕ್ಕೆ ಕಾಯುತ್ತಿದ್ದ ನಿತ್ಯಾ ಆಸಿಡ್ ಬಾಟಲಿಯನ್ನು ಪಾರಿಜಾತಳ ಮೈಮೇಲೆ ಬೀಳುವಂತೆ ಕೆಳಗೆ ಬೀಳಿಸಿ ಬಿಟ್ಟಳು.
ಆಸಿಡ್ ಬಾಟಲಿ ಕೆಳಗೆ ಬಿದ್ದಾಗ ಭಯದಿಂದ ಪಾರಿಜಾತ ಜೋರಾಗಿ ಕಿರುಚಿಕೊಂಡಳು. ಇದನ್ನು ಕೇಳಿದ ಸತ್ಯಾಳು ಮಗಳಿಗೇನಾಯಿತು ಎಂದು ಗಾಬರಿಯಿಂದ ಮನೆಯೊಳಗೆ ಓಡಿ ಬಂದಳು. ಮನೆಯೊಳಗೆ ಬಂದು ನೋಡಿದಾಗ ನೀನು ಆಸಿಡ್ನ ಬಾಟಲಿಯನ್ನು ಸರಿಯಾಗಿ ಹಿಡಿದುಕೊಳ್ಳಲೂ ಬಾರದ ಬೇಜವಾಬ್ದಾರಿ ಹೆಣ್ಣು, ಯಾವುದಕ್ಕೂ ನೀನು ಲಾಯಕ್ಕಲ್ಲ ಎಂದು ನಿತ್ಯಾಳು ಪಾರಿಜಾತಳ ಮೇಲೆ ಕಿರುಚಾಡುತ್ತಿರುವುದನ್ನು ನೋಡಿದಳು. ಜಾಣೆಯಾದ ಪಾರಿಜಾತಳು ಆಸಿಡ್ ಬಾಟಲಿಯು ಮೇಲಿಂದ ಕೆಳಕ್ಕೆ ಉರುಳುತ್ತಿದ್ದಂತೆ ಆಸಿಡ್ ಮೈಮೇಲೆ ಬೀಳದಂತೆ ತಪ್ಪಿಸಿಕೊಂಡಿದ್ದಳು.
ಪಾರಿಜಾತಳಿಗೆ ಓದಿನ ಮೇಲಿದ್ದ ಹಿಡಿತ ಮತ್ತು ಏಕಾಗ್ರತೆಯನ್ನು ಭಂಗಗೊಳಿಸಲು ನಡೆಸಿದ ಪ್ರಯತ್ನಗಳೆಲ್ಲವು ವಿಫಲವಾದಾಗ ಆಕೆಯನ್ನು ಶಾಲೆಯಿಂದಲೇ ಹೊರಗೆ ಹಾಕಲು ವಿಭಿನ್ನವಾದಂತಹ ಯೋಜನೆಯನ್ನು ಹಾಕಿದಳು. ಅಂದು ಪಾರಿಜಾತಳ ತಂದೆ ರಾತ್ರಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಬಂದಾಗ, ನಿಮ್ಮ ಮಗಳು ೯ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಕಾಪಿ ಮಾಡಿ ರಾಜ್ಯಕ್ಕೇ ಪ್ರಥಮ ಸ್ಥಾನ ಬಂದಿದ್ದಾಳೆಂದು ನಿತ್ಯಾಳು ಕಥೆ ಕಟ್ಟಿ ಹೇಳಿದಳು. ತನ್ನ ತಮ್ಮ ತನಗೆ ಮಾಡಿದ ಹಣಕಾಸಿನ ಸಹಾಯದ ಋಣಕ್ಕಾಗಿ ಮತ್ತು ತಾನು ಹಣಕಾಸಿನ ವಿಷಯದಲ್ಲಿ ಸೋತಿದ್ದರಿಂದ ರಾಜಶೇಖರ ಅಥವಾ ನಾದಿನಿ ನಿತ್ಯಾ ಏನೇ ಹೇಳಿದರೂ ಅದನ್ನು ಗುಣಶೇಖರ ನಂಬಲೇ ಬೇಕಿತ್ತು. ಇದರಿಂದ ತನ್ನ ಮಗಳು ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ಸಿಟ್ಟಿಗೆದ್ದ ಗುಣಶೇಖರ ಪಾರಿಜಾತಳನ್ನು ಗದರಿಸಿ ವಿಚಾರಿಸಿದನು. ಮನೆಯಲ್ಲಿ ಚಿಕ್ಕಮ್ಮ ನೀಡುತ್ತಿದ್ದ ಕಠಿಣ ಮನೆಗೆಲಸಗಳನ್ನು ನಿರ್ವಹಿಸಿದ ನಂತರ ತಡ ರಾತ್ರಿ ಅಮ್ಮನ ಮೊಬೈಲ್ನ ಟಾರ್ಚ್ನ ಬೆಳಕಿನಲ್ಲಿಯೇ ಓದಿ ಪರೀಕ್ಷೆ ಬರೆದಿರುವುದಾಗಿ ಪಾರಿಜಾತ ಹೇಳಿದಳು. ಇದರಿಂದ ಮತ್ತಷ್ಟು ಕೆರಳಿದ ಗುಣಶೇಖರ ಮಗಳು ಸುಳ್ಳು ಹೇಳುತ್ತಿದ್ದಾಳೆಂದು ಆಕೆಯನ್ನು ಚೆನ್ನಾಗಿ ಹೊಡೆದನು.
ಇಷ್ಟಕ್ಕೇ ನಿಲ್ಲದ ನಿತ್ಯಾಳ ಸಂಚು ಮಾರನೆಯ ದಿನ ಪಾರಿಜಾತಳು ಶಾಲೆಯ ಮುಖ್ಯಸ್ಥರ ಮುಂದೆ ತಾನು ಕಾಪಿ ಹೊಡೆದು ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಗಳಿಸಿದ್ದೇನೆ ಎಂದು ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರಿದಳು. ಮಾರನೆಯ ದಿನ ಮನೆಯವರೆಲ್ಲರೂ ಶಾಲೆಯ ಮುಖ್ಯಸ್ಥರನ್ನು ಭೇಟಿಯಾಗಿ ನಮ್ಮ ಮಗಳು ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆಂದು ಹೇಳಿದರು. ಮನೆಯಲ್ಲಿ ಪಾರಿಜಾತಳನ್ನು ಹೊಡೆದು ಮತ್ತು ಗದರಿಸಿದ್ದರಿಂದ ಒಲ್ಲದ ಮನಸ್ಸಿನಿಂದ ಅಳುತ್ತಾ ಶಾಲೆಯ ಮುಖ್ಯಸ್ಥರಲ್ಲಿ ಆಕೆಯೂ ಪರೀಕ್ಷೆಯಲ್ಲಿ ತಾನು ಕಾಪಿ ಮಾಡಿದ್ದಾಗಿ ಒಪ್ಪಿಕೊಂಡಳು. ಪಾರಿಜಾತಳ ಓದು ಮತ್ತು ಕಲಿಕೆಯಲ್ಲಿನ ಬದ್ಧತೆಯನ್ನು ಚೆನ್ನಾಗಿ ಅರಿತಿದ್ದ ಶಾಲೆಯ ಆಡಳಿತ ಮಂಡಳಿಯು ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೇ, ಪರೀಕ್ಷೆಯಲ್ಲಿ ಪಾರಿಜಾತಳ ಅಕ್ಕಪಕ್ಕ ಕುಳಿತಿದ್ದ ಇತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಪರಿಶೀಲಿಸಿ, ಆಕೆ ಕಾಪಿ ಮಾಡಲು ಸಾಧ್ಯವೇ ಇಲ್ಲವೆಂದಿತು. ಆಗ ನಿತ್ಯಾಳೇ ಮಧ್ಯದಲ್ಲಿ ಮಾತು ಸೇರಿಸಿ ಅವಳು ಪರೀಕ್ಷಾ ಕೊಠಡಿಗೆ ಚೀಟಿ ತೆಗೆದುಕೊಂಡು ಹೋಗಿ ಉತ್ತರವನ್ನು ಕಾಪಿ ಮಾಡಿಯೇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ ಎಂದು ಹೇಳಿದಳು. ಈ ಮಾತಿಗೆ ಮನೆಯ ಇತರ ಸದಸ್ಯರೂ ದನಿಗೂಡಿಸಿದರು. ಇದನ್ನು ಕೇಳಿದ ಶಾಲೆಯ ಆಡಳಿತ ಮಂಡಳಿಯು ನೀನು ಈ ರೀತಿ ಮಾಡುತ್ತೀಯಾ ಎಂದು ನಾವು ಕನಸಲ್ಲೂ ಭಾವಿಸಿರಲಿಲ್ಲ ಎಂದು ಪಾರಿಜಾತಳಿಗೆ ಛೀಮಾರಿ ಹಾಕಿತು. ಆಗ ಗುಣಶೇಖರನು ನನ್ನ ಮಗಳು ಶಾಲೆಯನ್ನು ಮತ್ತು ಇಲ್ಲಿನ ಇತರ ವಿದ್ಯಾರ್ಥಿಗಳನ್ನೂ ತಪ್ಪು ಹಾದಿಗೆ ಎಳೆಯುತ್ತಾಳೆ, ಆದ್ದರಿಂದ ನಾಳೆಯಿಂದ ನನ್ನ ಮಗಳು ಶಾಲೆಗೆ ಬರುವುದಿಲ್ಲ ಎಂದು ಹೇಳಿ ಪಾರಿಜಾತಳನ್ನು ತನ್ನ ಮನೆಗೆ ಕರೆದೊಯ್ದು, ಆಕೆಯ ಶಾಲೆಯ ಪುಸ್ತಕ ಮತ್ತು ಬ್ಯಾಗನ್ನೇ ಸುಟ್ಟು ಹಾಕಿದನು.
ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕೆಂಬ ಹಂಬಲವನ್ನು ಹೊತ್ತಿದ್ದ ಪಾರಿಜಾತಳು ಶಾಲೆಗೆ ಹೋಗದಂತೆ ಆದಾಗ ಅಕ್ಷರಶಃ ಕುಸಿದುಹೋದಳು. ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು ಹಾಡಿನಲ್ಲಿಯೇ ಹೇಳಿರುವಂತೆ ತನ್ನ ಓದಿಗಾಗಿ ಏನಾದರೂ ಮಾಡಲೇಬೇಕೆಂದು ಪಾರಿಜಾತ ನಿರ್ಧರಿಸಿದಳು. ಅದರಂತೆ ಅಮ್ಮನ ಮೊಬೈಲ್ ಕೈಗೆತ್ತಿಕೊಂಡು ತನ್ನ ಸಹಪಾಠಿ ಶರತ್ಗೆ ಕರೆ ಮಾಡಿ ಶಾಲೆಯಲ್ಲಿ ನೀಡುವ ನೋಟ್ಸ್ಗಳನ್ನು ಪ್ರತೀ ದಿನ ಝೆರಾಕ್ಸ್ ಮಾಡಿ ತನ್ನ ಕೊಠಡಿಯ ಕಿಟಕಿಯ ಮೂಲಕ ಒಳಗೆಸೆಯುವಂತೆ ತಿಳಿಸಿದಳು. ಅದೇ ರೀತಿ ಶರತ್ ಪ್ರತೀ ದಿನವೂ ತಪ್ಪದೇ ನೋಟ್ಸ್ಗಳನ್ನು ಪಾರಿಜಾತಳಿಗೆ ನೀಡಲಾರಂಭಿಸಿದ. ಈ ಮೂಲಕವಾಗಿ ಪಾರಿಜಾತಳ ಹತ್ತನೇ ತರಗತಿಯ ಓದಿನ ತಯಾರಿ ಮತ್ತು ಪರೀಕ್ಷೆ ಬರೆಯುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದಳು. ಹೀಗೆ ಒಂದು ದಿನ ಸಂಜೆಯ ವೇಳೆಗೆ ಶರತ್ ಆ ದಿನದ ನೋಟ್ಸನ್ನು ಕಿಟಕಿಯ ಮೂಲಕ ಒಳಗೆ ಹಾಕುತ್ತಿದ್ದಾಗ ಅಚಾನಾಕ್ಕಾಗಿ ಅದನ್ನು ನೋಡಿದ ನಿತ್ಯಾಳು ಪಾರಿಜಾತಳ ಛಲಕ್ಕೆ ಅಚ್ಚರಿಗೊಂಡಳು. ಇವಳನ್ನು ಹೀಗೆಯೇ ಬಿಟ್ಟರೆ ಈಕೆಯ ಹತ್ತನೇ ತರಗತಿಯ ಪರೀಕ್ಷೆ ಬರೆಯುವ ಪ್ರಯತ್ನ ನಿಲ್ಲದು, ಹೇಗಾದರೂ ಮಾಡಿ ಈ ಬಾರಿ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆಯುತ್ತಾಳೆ, ಹಾಗೇನಾದರೂ ಆದರೆ ನನ್ನ ಮಗನನ್ನು ಕೇಳುವವರೇ ಇರಲ್ಲ ಎಂದು ನಿರ್ಧರಿಸಿ ಈಕೆಯ ಪರೀಕ್ಷೆ ಬರೆಯುವ ತಯಾರಿಯನ್ನೇ ಸ್ಥಗಿತಗೊಳಿಸಲು ಮತ್ತೊಂದು ವಿಭಿನ್ನವಾದ ಸಂಚನ್ನು ಹೆಣೆದಳು.
ಮಾರನೇ ದಿನ ನಿತ್ಯಾಳು ತನ್ನ ಮೊಬೈಲ್‌ನಲ್ಲಿ ಇದ್ದ ಪಾರಿಜಾತಳ ಫೋಟೋವನ್ನು ಬಳಸಿಕೊಂಡು ಮೇಕ್‌ಬುಕ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಪಾರಿಜಾತಳ ಹೆಸರಿನಲ್ಲಿ ಒಂದು ಸುಳ್ಳು ಖಾತೆಯನ್ನು ತೆರೆದಳು. ಅದರಲ್ಲಿ ಶಾಲಾ ಕಾಲೇಜು ಯುವಕ ಯುವತಿಯರಿಗೆ ಮಾದಕವಸ್ತುಗಳ ಪೂರೈಕೆಯ ಕುರಿತಾದ ಪೋಸ್ಟ್ಗಳನ್ನು ನಿತ್ಯಾಳೇ ಹಾಕಿ ಒಂದಷ್ಟು ಮಂದಿಗೆ ಪಾರಿಜಾತಳ ಹೆಸರಿನಲ್ಲಿ ಮಾದಕ ವಸ್ತುಗಳ ಪೂರೈಕೆಯನ್ನೂ ಮಾಡಿದಳು. ಈ ಸುದ್ದಿಯಂತೂ ಶರವೇಗದಲ್ಲಿ ನಗರದಾದ್ಯಂತ ಹರಡಿತು. ಈ ವಿಚಾರವನ್ನು ತಿಳಿದ ನಗರದ ಪೋಲೀಸರು ಪಾರಿಜಾತಳನ್ನು ಪಾರಿಜಾತಳನ್ನು ಆಕೆಯ ಮನೆಯಿಂದ ಬಂಧಿಸಿ ಪೋಲೀಸ್ ಠಾಣೆಗೆ ಕರೆದೊಯ್ದರು. ಇಂತಹ ಅಪರಾಧದಲ್ಲಿ ಸಿಕ್ಕಿಬಿದ್ದಿರುವ ಪಾರಿಜಾತಳನ್ನು ಬಿಡಿಸಲು ಯಾರೂ ಹೋಗಬಾರದು ಎಂದು ನಿತ್ಯಾ ಮನೆಯವರಿಗೆಲ್ಲ ಕಟ್ಟಪ್ಪಣೆಯನ್ನು ಮಾಡಿದಳು. ಯಾವುದೇ ಕಾರಣಕ್ಕೂ ಆಕೆಗೆ ಜಾಮೀನನ್ನೂ ನೀವು ಕೊಡಿಸಬಾರದು ಎಂದು ತನ್ನ ಗಂಡನಿಗೂ ನಿತ್ಯಾ ಶರತ್ತನ್ನು ವಿಧಿಸಿದಳು. ನನ್ನ ಮಗಳು ಯಾವುದೇ ತಪ್ಪು ಮಾಡಲು ಸಾಧ್ಯವಿಲ್ಲ ಅವಳು ಅಮಾಯಕಳು, ಅವಳನ್ನು ಬಿಡಿಸುವಂತೆ ಸತ್ಯಾಳು ಮನೆಯವರ ಮುಂದೆ ಅಂಗಲಾಚಿದಳು. ಈಕೆಯ ಒತ್ತಾಯಕ್ಕೆ ಮಣಿದು ಮನೆಯ ಸದಸ್ಯರೆಲ್ಲರೂ ಪೋಲೀಸ್ ಠಾಣೆಗೆ ಪಾರಿಜಾತಳನ್ನು ನೋಡಲು ಹೋದರು. ಅಲ್ಲಿ ನಿತ್ಯಾಳೇ, ಪಾರಿಜಾತ ಶಾಲೆಗೆ ಹೋಗುತ್ತಿದ್ದಾಗ ಡ್ರಗ್ಸ್ಗಳನ್ನು ಪೂರೈಕೆ ಮಾಡುತ್ತಿದ್ದು, ಅವಳನ್ನು ಶಾಲೆಗೆ ಹೋಗದಂತೆ ಮನೆಯಲ್ಲಿ ಕೂಡಿಹಾಕಿದ ನಂತರ ಅವಳ ಆದಾಯಕ್ಕೆ ಕತ್ತರಿ ಬಿದ್ದಿದ್ದು, ಅದಕ್ಕಾಗಿ ಈಗ ತಾಯಿಯ ಮೊಬೈಲ್ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕವೇ ತನ್ನ ಡ್ರಗ್ಸ್ ವ್ಯವಹಾರವನ್ನು ಮತ್ತೆ ಮುಂದುವರಿಸಿದ್ದಾಳೆ, ಈ ಹಿಂದೆಯೂ ನನಗೊಮ್ಮೆ ಮನೆಯಲ್ಲಿ ಬಿಳಿಯ ಪೌಡರ್ ರೀತಿಯ ಪೊಟ್ಟಣವೊಂದು ಸಿಕ್ಕಿತ್ತು ಎಂದು ಪೋಲೀಸ್ ಇನ್ಸ್ಪೆಕ್ಟರ್‌ಗೆ ದೂರನ್ನು ನೀಡಿದಳು.
ಮಹಿಳಾ ಪೋಲೀಸರು ಪಾರಿಜಾತಳ ವಿಚಾರಣೆಯನ್ನು ಪ್ರಾರಂಭಿಸಿ, ನೀನು ತಪ್ಪನ್ನು ಒಪ್ಪಿಕೊಂಡರೆ ನಿನಗೆ ಶಿಕ್ಷೆ ಕಡಿಮೆಯಾಗುತ್ತದೆ ಎಂದು ಹೇಳಿದರು. ಆದರೆ ಡ್ರಗ್ಸ್ ಕುರಿತು ಏನೂ ಅರಿಯದ ಮುಗ್ದೆ ಪಾರಿಜಾತಳು ನನಗೇನೂ ತಿಳಿದಿಲ್ಲ, ನಾನು ಯಾವುದೇ ತಪ್ಪನ್ನು ಮಾಡಿಲ್ಲವೆಂದು ಹೇಳಿ ಜೋರಾಗಿ ಅಳಲು ಪ್ರಾರಂಭಿಸಿದಳು. ಮಗಳ ಸ್ಥಿತಿಯನ್ನು ಕಂಡು ಹತಾಶಳಾದ ಸತ್ಯಾ ತನ್ನ ಗಂಡನಲ್ಲಿ ಮಗಳನ್ನು ಬಿಡಿಸುವಂತೆ ಬೇಡಿಕೊಂಡಳು. ಹಣಕಾಸಿನ ವಿಷಯದಲ್ಲಿ ಅದಾಗಲೇ ಸಂಪೂರ್ಣವಾಗಿ ಸೋತು ಹೋಗಿದ್ದ ಗುಣಶೇಖರ ಮಗಳಿಗೆ ಜಾಮೀನು ನೀಡುವಂತೆ ತನ್ನ ತಮ್ಮನಾದ ರಾಜಶೇಖರನಲ್ಲಿ ಕೇಳಿಕೊಂಡನು. ಮನೆಯ ಮಾನ ಮರ್ಯಾದೆಯನ್ನು ಬೀದಿಪಾಲು ಮಾಡಿದವಳಿಗೆ ನಾನೆಂದಿಗೂ ಜಾಮೀನು ಕೊಡಿಸಲಾರೆ ಎಂದು ರಾಜಶೇಖರ ಖಡಾಖಂಡಿತವಾಗಿ ಹೇಳಿದ. ಮೈದುನ ರಾಜಶೇಖರ ಮತ್ತು ತಂಗಿ ನಿತ್ಯಾಳು ನಡೆಸಿದ ಹಿಂದಿನೆಲ್ಲಾ ಕುತಂತ್ರಗಳೆಲ್ಲವನ್ನೂ ಚೆನ್ನಾಗಿ ಅರಿತಿದ್ದ ಸತ್ಯಾಳಿಗೆ ಇದೂ ನಿತ್ಯಾಳದ್ದೇ ಕುತಂತ್ರ ಎಂದು ತಿಳಿಯಿತು. ಹೀಗೇ ಬಿಟ್ಟರೆ ಎಲ್ಲರೂ ಸೇರಿ ಮಗಳು ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಿ ಜೈಲಿಗೆ ಕಳುಹಿಸಿದರು. ಎಂದು ತಿಳಿದ ಸತ್ಯಾಳು ಮಗಳ ಜೊತೆಗೆ ಮಾತನಾಡಬೇಕೆಂದು ಇನ್ಸ್ಪೆಕ್ಟರ್ರ ಅನುಮತಿಯನ್ನು ಪಡೆದು ಪಾರಿಜಾತಳಿದ್ದಲ್ಲಿಗೆ ಹೋಗಿ ಕಿವಿಯಲ್ಲಿ ಏನೋ ಹೇಳಿ ಬಂದಳು.
ಠಾಣೆಯ ಇನ್ಸ್ಪೆಕ್ಟರ್ ತಪ್ಪೊಪ್ಪಿಗೆಯ ಪತ್ರಕ್ಕೆ ಸಹಿಯನ್ನು ಹಾಕಿಸಿಕೊಳ್ಳಲು ಪಾರಿಜಾತಳ ಬಳಿಗೆ ಬಂದಾಗ, ತಾನು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಾ ಇದ್ದಿದ್ದು ಹೌದು, ಹಾಗೂ ಇದಕ್ಕೆ ಅಗತ್ಯವಿರುವ ಮಾದಕ ವಸ್ತುಗಳನ್ನು ನನಗೆ ನನ್ನ ಚಿಕ್ಕಮ್ಮನೇ ಪೂರೈಸುತ್ತಿದ್ದಳು, ಹೀಗೆಲ್ಲಾ ಮಾಡಿದರೆ ಹಣಗಳಿಸಬಹುದು ಎಂದು ಹೇಳಿದ್ದು ಅವರೇ ಎಂದು ಪೋಲೀಸರಿಗೆ ಹೇಳಿದಳು. ಅಚಾನಕ್ಕಾಗಿ ಪಾರಿಜಾತ ತನ್ನ ವಿರುದ್ಧ ದೂರು ನೀಡಿದಾಗ ಗಲಿಬಿಲಿಗೊಂಡ ನಿತ್ಯಾ, ನಾನು ಯಾವುದೇ ಮಾದಕ ವಸ್ತುಗಳನ್ನು ಪೂರೈಸಿಲ್ಲ, ಪಾರಿಜಾತಳು ತನ್ನ ಓದಿನಲ್ಲಿ ಇದೇ ರೀತಿ ಮುಂದೆ ಬಂದಲ್ಲಿ ನನ್ನ ಮಗ ಕುಟುಂಬದಲ್ಲಿ ಮೂಲೆ ಗುಂಪಾಗುತ್ತಾನೆ ಎನ್ನುವ ಕಾರಣದಿಂದ ನಾನು ಮತ್ತು ನನ್ನ ಗಂಡ ಅವಳ ಹೆಸರಿನಲ್ಲಿ ಫೇಕ್ ಎಕೌಂಟ್ನ್ನು ತೆರೆದು ಹೀಗೆಲ್ಲಾ ಮಾಡಿದೆವೆಂದು ಪೋಲೀಸರೆದುರು ಒಪ್ಪಿಕೊಂಡಳು. ನಿತ್ಯಾಳನ್ನು ಪೋಲೀಸರು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ ತಾನು ಗಂಡನೊAದಿಗೆ ಸೇರಿಕೊಂಡು ಪಾರಿಜಾತಳಿಗೆ ನೀಡಿದಂತಹ ಎಲ್ಲಾ ಕಿರುಕುಳಗಳನ್ನೂ ಒಪ್ಪಿಕೊಂಡಳು. ಸತ್ಯ ವಿಚಾರವನ್ನು ತಿಳಿದ ಪೋಲೀಸರು ಪಾರಿಜಾತಳನ್ನು ಬಿಡುಗಡೆ ಮಾಡಿ ನಿತ್ಯಾಳನ್ನು ಮತ್ತು ರಾಜಶೇಖರನನ್ನು ಬಂಧಿಸಿ ಜೈಲಿಗೆ ಅಟ್ಟಿದರು. ಇಬ್ಬರಿಗೂ ಕೋರ್ಟ್ 07 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು.
ತನ್ನೆಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆತದ್ದರಿಂದ ಖುಷಿಯಿಂದ ಮನೆಗೆ ಬಂದ ಪಾರಿಜಾತ ಹೆಚ್ಚಿನ ಪರಿಶ್ರಮದಿಮದ ಪರೀಕ್ಷೆಗೆ ಓದಲಾರಂಬಿಸಿದಳು. ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದು ಮತ್ತೆ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಆಡಳಿತ ಮಂಡಳಿ ತನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದಳು. ದುಡ್ಡಿನ ಅಡಚಣೆೆ ಎಲ್ಲರಿಗಿರುವುದು ಸಾಮಾನ್ಯ. ಆದರೆ ತಮ್ಮನಿಂದ ಪಡೆದ ದುಡ್ಡಿನ ಋಣಕ್ಕಾಗಿ ಗುಣಶೇಖರನು ಮಗಳ ಭವಿಷ್ಯವನ್ನೂ ಮರೆತು ತನ್ನ ತಮ್ಮ ಮತ್ತು ನಾದಿನಿ ನಡೆಸುತ್ತಿದ್ದ ದೌರ್ಜನ್ಯಗಳೆಲ್ಲವನ್ನು ನೋಡಿಯೂ ಕೈಕಟ್ಟಿ ಕುಳಿತಿದ್ದು ಮಾತ್ರ ಖೇದಕರ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-9742884160
ದೂ: 9742884160