ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ
ಬೆಟ್ಟದಪುರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಒಂದು ಸುಂದರ ಊರು. ಸುಮಾರು ಹತ್ತು ಸಾವಿರದಷ್ಟು ಜನಸಂಖ್ಯೆ ಈ ಊರಿನಲ್ಲಿದೆ. ಈ ಊರಿನ ಅಧಿದೈವ ಸಿಡಿಲು ಮಲ್ಲಿಕಾರ್ಜುನ. ಮಲ್ಲಿಕಾರ್ಜುನ ಸ್ವಾಮಿಯು ಪಾರ್ವತಿ ದೇವಿ ಮತ್ತು ವಿಘ್ನೇಶ್ವರ ಸ್ವಾಮಿಯ ಜೊತೆಯಲ್ಲಿ ನೆಲೆಸಿದ್ದಾನೆ.
ಹೆಸರೇ ಹೇಳುವಂತೆ ಈ ಊರಿಗೆ ತಾಗಿದಂತೆ ಬೆಟ್ಟವೊಂದಿದೆ. ಸುಮಾರು ಮೂರು ಸಾವಿರದ ಎಂಟುನೂರು ಮೆಟ್ಟಿಲುಗಳನ್ನು ಏರಿದರೆ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಮೂಲಸ್ಥಾನ ನೋಡಬಹುದು. ಬಹುಕಾಲದ ಹಿಂದೆ ಈ ಪ್ರಾಂತ್ಯದಲ್ಲಿ ಶಿಡಿಲು ಎಂಬ ರಕ್ಕಸನಿದ್ದನಂತೆ, ಆತನ ಉಪಟಳ ವಿಪರೀತ, ಸ್ಥಳೀಕರಿಗೆ ಬಹಳಷ್ಟು ತೊಂದರೆಗಳನ್ನೂ ಆ ರಾಕ್ಷಸ ನೀಡುತ್ತಿದ್ದ. ಆ ಸಮಯದಲ್ಲಿ ಪರಶಿವನು ಪ್ರತ್ಯಕ್ಷನಾಗಿ ಆ ಅಸುರನ ಸಂಹರಿಸಿ ಪ್ರತಿ ಹದಿನೈದು ವರ್ಷಗಳಿಗೊಮ್ಮೆ ಸಿಡಿಲಿನ ರೂಪದಲ್ಲಿ ಆಗಮಿಸಿ ಪರಮೇಶ್ವರನ ದರ್ಶನ ಪಡೆಯುವಂತೆ ಆದೇಶಿಸುತ್ತಾನೆ.
ಅಂದಿನಿಂದ ಇಂದಿನವರೆಗೂ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಶಿಡಿಲು ಸಿಡಿಲಿನ ರೂಪದಲ್ಲಿ ಪ್ರತಿ ಹದಿನೈದು ವರ್ಷಗಳಿಗೊಮ್ಮೆ ಬರುತ್ತಾನೆ ಎಂಬ ಪ್ರತೀತಿ ಇದೆ. ಹಾಗೂ ಸಾಕಷ್ಟು ಜನ ಈ ವಿಸ್ಮಯವನ್ನು ನೋಡಿದವರಿದ್ದಾರೆ. ಈ ಪ್ರದೇಶದ ಮಾಂಡಲೀಕನಾಗಿದ್ದ ಗಂಗರಾಜನು ಈ ಸ್ವಾಮಿಯ ದೇಗುಲವನ್ನು ನಿರ್ಮಿಸಿದ್ದಾನೆ ಎಂದು ನಂಬಲಾಗಿದೆ. ಕಡಿದಾದ ಬೆಟ್ಟವನ್ನು ಏರಲು ಮೆಟ್ಟಿಲುಗಳನ್ನು ನಿರ್ಮಿಸಿದ್ದಾನೆ. ಅಲ್ಲಲ್ಲಿ ಮಂಟಪಗಳನ್ನೂ ಕಟ್ಟಿಸಿದ್ದಾನೆ. ( ಏಳು ಮಂಟಪಗಳು ಸಿಗುತ್ತವೆ. ) ಬೆಟ್ಟದ ಮೇಲೊಂದು ಸಿಹಿನೀರಿನ ಹೊಂಡವೂ ಇದೆ. ಗಂಗರಾಜನ ಸೇವೆಯನ್ನು ಗುರುತಿಸಿ ಆತನ ವಿಗ್ರಹವನ್ನು ದೇವಾಲಯದ ಒಳಭಾಗದಲ್ಲಿ ಕೆತ್ತಿಸಲಾಗಿದೆ.
ಮಂದಿರದ ಒಳಭಾಗದಲ್ಲಿ ಲಿಂಗರೂಪಿ ಸಿಡಿಲು ಮಲ್ಲಿಕಾರ್ಜುನ, ಆದಿಶಕ್ತಿ ಗಿರಿಜೆ ಹಾಗೂ ವಿನಾಯಕನ ಸನ್ನಿಧಾನಗಳ ಜೊತೆಗೆ ನಂದಿಯ ವಿಗ್ರಹ ಸಹ ಇದೆ. ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಸುಪರ್ದಿಯಲ್ಲಿದ್ದು ನವೀಕರಣದ ಹಂತದಲ್ಲಿದೆ. ಸುತ್ತ ಮುತ್ತಲು ಯಾವುದೇ ಬೆಟ್ಟವೂ ಕಾಣದೇ ಈ ಬೆಟ್ಟವು ಮಾತ್ರಾ ಏಕಾಂಗಿಯಾಗಿ ನಿಂತಿದ್ದು, ಬೆಟ್ಟದ ತುದಿಯನ್ನೇರಿದಾಗ ಕಾಣುವ ಪರಿಸರವು ನಿಜಕ್ಕೂ ವರ್ಣಿಸಲಳದಳ. ಪ್ರತೀವರ್ಷ ಮಾಘಮಾಸದ ಹುಣ್ಣಿಮೆ ಮತ್ತು ಪಾಡ್ಯಗಳಂದು ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ ಜರುಗುತ್ತದೆ.
ಮೊದಲ ದಿನ ಎಂದರೆ ಹುಣ್ಣಿಮೆಯಂದು ವಿಧಿವತ್ತಾಗಿ ಗಿರಿಜಾ ಕಲ್ಯಾಣ ನಡೆಸುತ್ತಾರೆ. ಹಾಗೆಯೇ ಮರುದಿನ ಕೃಷ್ಣಪಕ್ಷದ ಪಾಡ್ಯದಂದುರಾಜ್ಯದಲ್ಲಿ ನಂಜನಗೂಡು ಹೊರತುಪಡಿಸಿ ಬೆಟ್ಟದಪುರದಲ್ಲಿ ಮೂರು ತೇರುಗಳನ್ನು ಎಳೆಯಲಾಗುತ್ತದೆ. ಮೊದಲ ತೇರು ಶಿವನ ವಾಹನ ನಂದಿಯದ್ದಾಗಿದ್ದು, ಎರಡನೇ ತೇರಿನಲ್ಲಿ ಸಕಲ ವಿಘ್ನ ನಿವಾರಕ ಗಣಪತಿಯು ಆಸೀನನಾಗುತ್ತಾನೆ. ಮೂರನೆಯ ಬ್ರಹ್ಮ ರಥದಲ್ಲಿ ಮಲ್ಲಿಕಾರ್ಜುನ ಸ್ವಾಮಿಯು ಸಪತ್ನೀಕನಾಗಿ ಆಸೀನನಾಗುತ್ತಾನೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರು ಬಹು ಶ್ರದ್ಧೆಯಿಂದ ಈ ಮೂರು ತೇರುಗಳನ್ನೆಳೆದು ಪುನೀತರಾಗುತ್ತಾರೆ…
ಸಿ.ಎನ್. ಮಹೇಶ್
2 Comments
ಮಹೇಶ್ ಅವರ ಸಿಡಿಲು ಮಲ್ಲಿಕಾರ್ಜುನ ದೇವಸ್ಥಾನದ ಬಗ್ಗೆ ಬರೆದ ಲೇಖನ ಸೊಗಸಾಗಿದೆ.
ನಿಮ್ಮ ಲೇಖನದ ಮುಲಕ ಬಹಳ ಸುಂದರವಾಗಿ ವರ್ಣಿಸಿದ್ದೀರ..