ಮೊನ್ನೆ ಸಂಜೆ ಪಕ್ಕದ ಮನೆಯ ಪೂರ್ಣಿಮಾ ಬಂದು “ ಅಂಕಲ್, ನಾಳೆ ರಾತ್ರಿ ಊಟ ಎಲ್ಲರೂ ಸೇರಿ ನಮ್ಮನೆ ಮಾಳಿಗೆ ಮೇಲೆ ಮಾಡೋಣ.ನೀವು ಮರೆತು ಬಿಟ್ಟೀರಿ ನಾಳೆ ಹುಣ್ಣಿಮೆ “ ಎಂದಳು.
“ ಆಂಟಿ ನೀವು ಚಿತ್ರನ್ನ, ಮೆಣಸಿನಕಾಯಿ ಮಾಡಿ , ಗಾಯತ್ರಿ ಆಂಟಿಗೆ ಚಪಾತಿ , ಬಜ್ಜಿ ಮಾಡೋಕೆ ಹೇಳಿದ್ದೀನಿ.ಸುಮಾ ಆಂಟಿ ಏನಾದ್ರೂ ಸ್ವೀಟ್ ಮಾಡ್ತಾರಂತೆ.” ಎಂದು ನನ್ನವಳಿಗೆ ಹೇಳ್ತ್ದ ಪೂರ್ಣಿಮಾ, ಸರ ಸರನೆ ಹೊರಟು ಹೋದಳು.
ನನಗೆ ಇಪ್ಪತ್ತು ವರ್ಷಗಳ ಹಿಂದಿನ ನೆನಪು ಕಾಡತೊಡಗಿದವು.ಬೆಳದಿಂಗಳ ಊಟದ ನನಪಾಯಿತು.ಪ್ರತೀ ಹುಣ್ಣಿಮೆಯ ರಾತ್ರಿ ಬೆಳದಿಂಗಳಿನ ಮಂದ ಬೆಳಕಿನಲ್ಲಿ ವಿಶಿಷ್ಟ…ವಿಭಿನ್ನ ಪಕ್ವಾನ್ನಗಳನ್ನು ಸಿದ್ಧಪಡಿಸುತ್ತಿದ್ದ ಅಂದಿನ ನನ್ನ ಮನೆಯ ಪಕ್ಕದ ಆಂಟಿಯ ನೆನಪಾಯಿತು.ಶಾರಕ್ಕ ಮಾಡುತ್ತಿದ್ದ ಹೋಳಿಗೆಯನ್ನು ನೆನೆದರೆ, ಸುಶೀಲಕ್ಕನ ಪೂರಿ- ಬಾಜಿ ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ !
ಹೌದು , ಬೆಳದಿಂಗಳಿನಲ್ಲಿ ಅಕ್ಕ – ಪಕ್ಕದ ಮನೆಯವರೆಲ್ಲ ಸೇರಿ ವಿಭಿನ್ನ ಬಗೆಯ ಹೊಸ ರುಚಿಗಳೊಂದಿಗೆ ಊಟ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ.ನೆರೆ – ಹೊರೆಯವರೊಂದಿಗಿನ ಆತ್ಮಿಯತೆಯನ್ನು ಹೆಚ್ಚಿಸುತ್ತದೆ.ಒಂದು ರೀತಿಯ ವಿಶಿಷ್ಟ ಅನ್ಹ್ಭವವನ್ನು ನೀಡುತ್ತದೆ.ಆದರೆ ಇತ್ತೀಚೆಗೆ ದೈನಂದಿನ ಯಾಂತ್ರಿಕ ಬದುಕಿನಲ್ಲಿ, ಹುಣ್ಣಿಮೆ ಅಮವಾಸ್ಯೆಗಳೂ ಅರಿವಿಗೆ ಬಾರದಿರುವುದು ನಿಜಕ್ಕೂ ವಿಪರ್ಯಾಸ !
ಬೆಳದಿಂಗಳು ಮಾತ್ರ ಎಂದಿನಂತೆ ಬರುತ್ತಲೇ ಇದೆ.ತನ್ನ ಅವಧಿ ಮುಗಿದ ನಂತರ ಮರಳುತ್ತಲೇ ಇದೆ.ಆದರೆ ನಾವೇ ಎಲ್ಲವನ್ನು ತ್ಯಜಿಸುತ್ತಿದ್ದೇವೆ.ಮರೆತು ಮೆರೆಯುತ್ತಿದ್ದೆವೆ !
ಬಿಡುವು ಮಾದಿಕೊಂಡು ಒಂದೇ ಒಂದು ಬೆಳದಿಂಗಳ ಊಟ ಮಾಡಿ.
ಅದರ ಅನುಭವವನ್ನು ಸ್ನೇಹಿತರ ಬಳಿ ಹೇಳಿ ಕೊಳ್ಳಿ !
ಡಾ. ಪರಮೇಶ್ವರಪ್ಪ ಕುದರಿ