ಬೆಳದಿಂಗಳ ಚುಂಬನ

ಬಾನಂಗಳದಲ್ಲಿ ಚಂದ್ರನು ಮೋಡಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತಿರಲು, ತುಂತುರು ಸೋನೆಯ ಹನಿಗಳು ಮುತ್ತಿನಂತೆ ಕಂಗೊಳಿಸುತ್ತಿದ್ದವು. ನಿಶ್ಯಬ್ದವಾದ ರಸ್ತೆಯುದ್ದಕ್ಕೂ ತೋರಣದಂತೆ ಬೆಳೆದು ನಿಂತ ಮರಗಳು. ಇಂತಹ ಪ್ರಕೃತಿ ಸೌಂದರ್ಯದ ಹಾದಿಯಲ್ಲಿ, ಸೋನೇ ಮಳೆಯಲ್ಲಿ ತೋಯ್ದು ನೆಡೆಯುತ್ತಿದ್ದವು ಜೋಡಿ ಹಕ್ಕಿಗಳು.

ಆಕೆಯಂತೂ ತಿಳಿ ನೀಲಿ ಸೀರೆಯನ್ನುಟ್ಟು ತನ್ನ ಬಲಗೈಯಲ್ಲಿ ಸೀರೆಯ ಸೆರಗನ್ನು ಹಿಡಿದು ನೆಡೆಯುತ್ತಿರಲು, ಕಾಲ್ಗೆಜ್ಜೆಯ ಸಪ್ಪಳ, ರೇಷ್ಮೆಯಂತ ಹರಡಿದ ಕೂದಲು ತಂಗಾಳಿಗೆ ಹಾರಾಡುತ್ತ, ಪದೇ ಪದೇ ಮುಂಗುರುಳು ಅವಳ ಕೆನ್ನೆಯನ್ನು ತೀಡುತ್ತಿರಲು, ಕಿವಿಯಲ್ಲಿ ಹರಳಿದ ಚುಮುಕಿ ಮಿನುಗುತ್ತಿದ್ದವು, ತನ್ನ ಅದರಗಳಿಗೆ ತಿಳಿ ಗುಲಾಬಿ ಬಣ್ಣವು ಅವಳ ಸೌಂದರ್ಯಕ್ಕೆ ಚಂದ್ರನನ್ನೇ ಸೆಳೆದಿದ್ದವು. ಅವಳ ಎಡಗೈ ಹಿಡಿದು ಅವಳೊಡನೆ ಹೆಜ್ಜೆ ಹಾಕುತ್ತಿದ್ದ ಪ್ರಿಯಕರನು ಅವಳ ರೂಪಕ್ಕೆ ಅಂದು ಬಹಳಷ್ಟು ಬೆರಗಾಗಿ, ಅವಳ ಮಾತನ್ನು ಕೇಳುವುದಕ್ಕಿಂತ, ಅವಳ ಅಂದವನ್ನು ಕಣ್ತುಂಬಿಕೊಳ್ಳುವುದರಲ್ಲಿ ತಲ್ಲೀನನಾಗಿದ್ದನು. ಮೃದು ಮನಸ್ಸಿನ, ನೇರ ನುಡಿಯ, ಒಪ್ಪುವ ಗುಣದ ಹುಡುಗನಾದರು ಅಂದು ಯಾಕೋ ಅವನ ಮನಸ್ಸು ಅವಳೆಡೆ ಆಕರ್ಷಿತವಾಗಿ ಅವಳನ್ನು ಅಪ್ಪಿ ಚುಂಬಿಸುವ ಹಂಬಲ.

ಅಲ್ಲೇ ಇದ್ದ ಒಂದು ಉದ್ಯಾನವನದಲ್ಲಿ ಮಕ್ಕಳ ಆಟ, ವೃದ್ಧರ ಮಾತುಗಳಿಂದ ಗಿಜಿಗುಡುತಿತ್ತು.ಅಲ್ಲಿ ಬಂದ ಈ ಜೋಡಿಯನ್ನು ಕಂಡು ಅವರ ಮನಸ್ಸುಗಳಲ್ಲಿ ನೂರೆಂಟು ಭಾವನೆಗಳು ಮೂಡಿರಲು, ಅದ್ಯಾವುದಕ್ಕೂ ತಲೆ ಕೊಡದ ಜೋಡಿ ಉದ್ಯಾನವನದ ಕೊನೆಯಲ್ಲಿದ್ದ ಬೆಂಚಿನತ್ತ ನಡೆದು ಕುಳಿತರು. ಸುತ್ತಲೂ ದೀಪಗಳು, ಜನಸಾಗರ, ತಂಪಾದ ಗಾಳಿ ಬೀಸುತ್ತಿರಲು ತಟ್ಟನೆ ವಿದ್ಯುತ್ ಕಡಿತಗೊಂಡು ಗಾಢ ಕಟ್ಟಲು ಆವರಿಸಿತು. ಆ ಕ್ಷಣ ಸಂಪೂರ್ಣ ನಿಶ್ಯಬ್ಧ, ಚಂದ್ರನ ಹೊರತು ಮತ್ತಾರು ಕಣ್ಣಿಗೆ ಕಾಣುತ್ತಿರಲಿಲ್ಲ.

ಈ ಸುಂದರ ಸಂಜೆಯು ಆ ಜೋಡಿಯ ಪಾಲಿಗೆ ಎಂದು ಮರೆಯದ ಸುಸಂಜೆಯಾಗಿತ್ತು. ಹಂಬಲಿಸುತ್ತಿದ್ದ ಪ್ರಿಯಕರ, ತನ್ನ ಪ್ರೇಯಸಿಯನ್ನು ಬಿಗಿದಪ್ಪಿ ಅವಳ ಕೆನ್ನೆಯನ್ನು ಚುಂಬಿಸಿರಲು, ಎಲ್ಲೆಡೆ ನೀರವ ಮೌನ.

ಚಂದ್ರ, ನಕ್ಷತ್ರ, ಕಗ್ಗತ್ತಲು, ತಂಗಾಳಿ ಸಾಕ್ಷಿಯಾದವು ಬೆಳದಿಂಗಳ ಚುಂಬನಕ್ಕೆ.

ಶಿಲ್ಪ

Related post