ಬೆಳ್ಗಣ್ಣ! (Indian White-eye)

ಕಲ್ಗುಂಡಿ ನವೀನ್

ನಮ್ಮ ತೋಟಗಳಲ್ಲಿ, ಉದ್ಯಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಲ್ಲಿ ಬೆಳ್ಗಣ್ಣ ಸಹ ಒಂದು! ಪ್ರಧಾನವಾಗಿ ಹಸಿರು-ಹಳದಿ ಬಣ್ಣದ ಸರಿಸುಮಾರು ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಕಣ್ಣಿನ ಸುತ್ತ ಅಚ್ಚಬಿಳಿಬಣ್ಣದ ಉಂಗುರವಿರುತ್ತದೆ. ಅದೇ ಕಾರಣಕ್ಕೆ ಈ ಹಕ್ಕಿಯನ್ನು ಬೆಳ್ಗಣ್ಣ ಎಂದು ಕರೆಯುವುದು. ಇಂಗ್ಲಿಷಿನಲ್ಲಿಯೂ ಇದನ್ನು ವೈಟ್ ಐ (Indian White-eye Zosterops palpebrouses) ಎಂದೇ ಕರೆಯುತ್ತಾರೆ.

ದಕ್ಷಿಣ ಏಷ್ಯಾದಲ್ಲಿ ಎರಡು, ಜಗತ್ತಿನಾದ್ಯಂತ 94 ಬಗೆಯ ಬೆಳ್ಗಣ್ಣಗಳಿವೆ. ದಕ್ಷಿಣ ಏಷ್ಯಾದಲ್ಲಿನ ಎರೆಡು ಬಗೆಯವು ಎಂದರೆ ಭಾರತದಲ್ಲಿ ಕಂಡುಬರುವ ಬೆಳ್ಗಣ್ಣ ಮತ್ತು ತುಸು ಪೇಲವವಾಗಿರುವ ಶ್ರೀಲಂಕಾದಲ್ಲಿ ಕಂಡುಬರುವ ಬೆಳ್ಗಣ್ಣಗಳೇ ಆಗಿವೆ. ಭಾರತದ ಬೆಳ್ಗಣ್ಣವನ್ನು ಓರಿಯೆಂಟಲ್ ವೈಟ್ ಐ ಎಂದು ಕರೆಯುತ್ತಿದ್ದರು. ಆದರೆ ಇದು ಕಂಡುಬರುವ ಭೂಭಾಗದ ಸಮೇತ ಗುರುತಿಸಲು ಸುಲಭವಾಗಲಿ ಎಂಬ ಉದ್ದೇಶದಿಂದ ಇದರ ಹೆಸರನ್ನು ಇಂಡಿಯನ್ ವೈಟ್ ಐ ಎಂದೇ ಅಧಿಕೃತವಾಗಿ ಬದಲಿಸಲಾಗಿದೆ.

Photo Credit: Mohan Bala

ಕೀಟಹಾರಿ ಹಕ್ಕಿಯಾದರೂ ಜೇಡ ಮತ್ತು ಪುಟ್ಟ ಹಣ್ಣುಗಳನ್ನು ತಿನ್ನುತ್ತವೆ ಹಾಗೂ ಹೂವಿನ ಮಕರಂದವನ್ನೂ ಹೀರುತ್ತವೆ. ಆದ್ದರಿಂದ ಆಹಾರಚಕ್ರ ಹಾಗೂ ಪರಾಗಸ್ಪರ್ಷದಲ್ಲಿ ಇವಕ್ಕೆ ವಿಶೇಷವಾದ ಸ್ಥಾನವಿದೆ.

ಇದು ಮರಗಿಡಗಳ ಎಲೆಗಳ ನಡುವೆ ಅಡಗಿರುವ ಕೀಟಗಳನ್ನು ಹಿಡಿದು ತಿನ್ನಲು ತಲೆಕೆಳಗಾಗುವುದು, ತಿರುಗುವುದು, ಬಾಗುವುದು ಇತ್ಯಾದಿ ಸರ್ಕಸ್ ಮಾಡುತ್ತದೆ.

ಸಾಮಾನ್ಯವಾಗಿ  ಇವು ಗುಂಪಿನಲ್ಲಿರುತ್ತದೆ (5-20). ಇತರ ಹಕ್ಕಿಗಳ ಜೊತೆಯೂ ಕಂಡುಬರುತ್ತದೆ.  ಇದರ ದನಿಯೂ ಇಂಪು. ಅನೇಕ ಇಂಪಾದ ದನಿಗಳನ್ನು ಹೊರಡಿಸುತ್ತದೆ.

Photo Credit: Mohan Bala

ಇದರ ಇನ್ನೊಂದು ಅಂಶವೆಂದರೆ ಒಳಪ್ರಭೇದಗಳು. ಅನೇಕ ಒಳಪ್ರಭೇದಗಳು ಜಗತ್ತಿನಾದ್ಯಂತ ಕಂಡುಬರುತ್ತದೆ. ಇವುಗಳಲ್ಲಿ ವರ್ಣವ್ಯತ್ಯಾಸಗಳಿರುತ್ತವೆ. ಇಂತಹ ಒಂದು ಒಳಪ್ರಭೇದಕ್ಕೆ ಸಲೀಂ ಅಲಿಯವರ ಹೆಸರಿಡಲಾಗಿದೆ. ಭೌಗೋಳಿಕ ವ್ಯತ್ಯಾಸಗಳು ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಕಂಡುಬರುವ ಸಂತತಿ (ನಿಲಗಿರಿ) ಕುರಿತಾಗಿ  ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ ಪ್ರಭೇದಗಳನ್ನು ಕುರಿತಾಗಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು ಹಾಗೂ ಅಂಡಮಾನಿನ ಪ್ರಭೇದವನ್ನು ಇನ್ನು ವರ್ಣಿಸಿಲ್ಲ ಎನ್ನುತ್ತಾರೆ ಜಗತ್ತಿನ ಪಕ್ಷಿತಜ್ಞರಲ್ಲೊಬ್ಬರಾದ ಡಾ ಪಮೇಲ ಸಿ. ರಾಸ್ಮಿಸನ್.

ಈ ಹಕ್ಕಿಯ ನೈಸರ್ಗಿಕ ಶತ್ರುಗಳಲ್ಲಿ ಮೀಂಚುಳ್ಳಿ ಹಾಗೂ ಬಾವಲಿಗಳು ಸೇರಿವೆ. ಗಾತ್ರದಲ್ಲಿ ಪುಟ್ಟದಾಗಿರುವ ಇವು ಸುಲಭವಾಗಿ ಬಾವಲಿ ಹಾಗು ಮಿಂಚುಳ್ಳಿಗಳಿಗೆ ಆಹಾರವಾಗುತ್ತವೆ.

ಇಷ್ಟು ವೈಶಿಷ್ಟ್ಯಗಳಿರುವ ಹಕ್ಕಿ  ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ (ಶೀರ್ಷಿಕೆ ಚಿತ್ರ) ಮತ್ತು ಮೋಹನ್ ಬಾಲ

Related post

Leave a Reply

Your email address will not be published. Required fields are marked *