ಬ್ಲ್ಯಾಕ್ ಹೋಲ್

ಬ್ಲ್ಯಾಕ್ ಹೋಲ್

ಚೆಲ್ವಿ ಅಲ್ನೋಡುsss ನಿನ್ ಮಗ್ಳು ಐನೋರ್ ರೂಮ್ ಬಾಗ್ಲು ತಗಿತಾವ್ಳೆ“- ಎಲ್ಲಿಂದಲೋ ಗಾಳಿಯಲ್ಲಿ ನುಸುಳಿ ಬಂದ ಸ್ವರಗಳು ಕರ್ಣನಾಳದ ತಮಟೆಗೆ ಬಡಿದದ್ದೆ ತಡ ಮಡಿಲಲ್ಲಿದ್ದ ಬಸಳೆ ಸೊಪ್ಪನ್ನು ನೆಲಕ್ಕೆ ಸುರಿದು ಬಿರುಸಿನ ಹೆಜ್ಜೆ ಇಟ್ಟು, ಬಾಗಿಲನ್ನು ತಳ್ಳಿ ಒಳಗೋಗುತ್ತಿದ್ದ ಕಾವೇರಿಯನ್ನು ಎರಡೂ ಕೈಗಳಿಂದ ಗೋರಿಕೊಳ್ಳಲು ಮುಂದಾದಳು ಚೆಲ್ವಿ.

ಹಗಲಿರುಳಿನ ಪರಿವೆಯೇ ಇಲ್ಲದೆ ಹಸಿವಾದಾಗ ಕುಡಿಯುವುದು; ದಣಿವಾದಾಗಲೂ ಸಹ ಕುಡಿಯುವುದು; ಹೀಗೆ ಕಂಠಪೂರ್ತಿ ಕುಡಿಯುವ ಚಾಳಿಯನ್ನು ದಿನಪೂರ್ತಿ ಇಟ್ಟುಕೊಂಡಿದ್ದ ಐನೋರಿಗೆ  ಬಿಸಿಲಿನ ಕಿರಣಗಳೆಲ್ಲಿ ಕಣ್ಣಿಗೆ ಬಿದ್ದು ಇರಿಯುತ್ತವೆಂದು ಕೋಣೆಯ ಎಲ್ಲಾ ದಿಕ್ಕಿಗೂ ಕಪ್ಪನೆಯ ಕರ್ಟನ್ ಹೊದ್ದಿಸಿ- “ಜಗತ್ತೇ ಮುಳುಗಿ ಹೋದರು ಬಾಗಿಲು ತಟ್ಟಿ ನನಗ್ಯಾರು ಡಿಸ್ಟರ್ಬ್ ಮಾಡಬಾರದು. ಬೇಕಾದಾಗ ನಾನೇ ಹೊರಗಡೆ ಬರುತ್ತೇನೆ. ತುಂಬಾ ದಿನಗಳಾದರು ನಾನು ಈಚೆಗೆ ಬರಲಿಲ್ಲವೆಂದಾಗ ಬಾಗಿಲು ಮುರಿಯಬೇಕೆನ್ನುವ ವಿಷಾದ ನಿನಗೆ ಬೇಡ. ನಾನೇನು ಬಾಗಿಲ ಚಿಲಕ ಹಾಕಿರುವುದಿಲ್ಲ. ಅಕಸ್ಮಾತ್ ನಾನು ಸತ್ತು ಹೋಗಿದ್ದರೆ “ತಾರಾ” ಪಕ್ಕದಲ್ಲೇ ಮಣ್ಣು ಮಾಡಿ ಎಂದು ಮಾತು ಮಾತಿನ ನಡುವೆ ಗಂಟಲಿಗೆ ಇಳಿಸಿಕೊಳ್ಳುತ್ತಿದ್ದ ವಿಸ್ಕಿಯ ಗುಳಗುಳ ಸದ್ದಿಗು ಐನೋರ ಮಾತಿಗೂ ಮುಖಾಮುಖಿಯಾಗಿ ಹುರುಳಿಲ್ಲದ ಮಾತುಗಳ ಅರ್ಥ ತಿಳಿಯದೆ ಮಂಕಾಗಿ ನಿಂತಿದ್ದ ಸಿದ್ದಣ್ಣ ಸುಮ್ಮನೆ ತಲೆಯಾಡಿಸಿ ಬಾಗಿಲನು ಬಲವಾಗಿ ಎಳೆದು ಐನೋರ ಒಂಟಿತನಕ್ಕೆ ನೀರವತೆಯ ಧಾರೆ ಎರೆದ.
ಅಲ್ಲಿಂದೀಚೆಗೆ ಯಾರೂ ಆ ರೂಮಿನ ಅಕ್ಕಪಕ್ಕವು ಸುಳಿಯುತ್ತಿರಲಿಲ್ಲ. ಇದ್ದ ಹನ್ನೆರಡು ಎಕರೆ ತೋಟದಲ್ಲಿ ಕೆಲಸಕ್ಕಿದ್ದವರು ಎಂಟುವರೆ ಮಂದಿ, ಅದರಲ್ಲಿ ಚೆಲ್ವಿ ಮತ್ತವಳ ಆರು ವರ್ಷದ ಮಗಳು ಕಾವೇರಿ ತಿಂಗಳ ಹಿಂದಷ್ಟೇ ಬಂದು ಸೇರಿಕೊಂಡವರು. ಇವರಿಬ್ಬರಿಗೆ ಇರಲು ಜಾಗವಿಲ್ಲದ ಕಾರಣ ಯಾರೂ ಬಳಸದೆ ಹಿತ್ತಲಿನಲ್ಲಿ ಅನಾಥವಾಗಿದ್ದ ಕಕ್ಕಸು ಮನೆಗೆ ಸಿಮೆಂಟಿನ ನೆಲ ಹಾಕಿಸಿ ಒಪ್ಪ ಮಾಡಿಕೊಟ್ಟಿದ್ದು ಸಿದ್ದಣ್ಣನೇ.

ತಂದೆ ತಾಯಿ ತೀರಿಕೊಂಡ ಮೇಲೆ ಐನೋರು ಈ ಊರನ್ನು ಮರೆತೇ ಬಿಟ್ಟಿದ್ದರು. ಮತ್ತೇ ಐನೋರು ಊರಿನ ಕಡೆ ಬರೋದಿಕ್ಕೆ ಅವರ ಹೆಂಡತಿ ತಾರಾ ಸಾಯಬೇಕಾಯಿತು.ಇಷ್ಟು ವರ್ಷವಿಲ್ಲದ ಐನೋರು ಹೆಂಡತಿಯ ಕಾರ್ಯ ಮುಗಿಸಿ ಎರಡು ತಿಂಗಳ ಕಾಲ ತೋಟದ ಮನೆಯಲ್ಲೆ ಬಿಡಾರ ಹೂಡಿದ್ದು ಅಚ್ಚರಿಯ ಸಂಗತಿಯೆ, ಅದರಲ್ಲೂ ಆ ರೂಮನ್ನ ಬಿಟ್ಟು ಎಲ್ಲಿಯೂ ಕದಲುತ್ತಿರಲಿಲ್ಲ. ಹೊತ್ತು ಹುಟ್ಟುವ ಮುಂಚೆ ಸಿದ್ದಣ್ಣ ಎಣ್ಣೆ, ಸೋಡಾ, ನೀರಿನ ಜೊತೆಗೆ ಊಟದ ವ್ಯವಸ್ಥೆಯನ್ನು ಮಾಡಿಟ್ಟು ಗದ್ದೆ ಕೆಲಸಕ್ಕೆ ಹೋಗುತ್ತಿದ್ದ. ಚೆಲ್ವಿಯ ಮಗಳು ಕಾವೇರಿಗೆ ಏನು ಹೇಳಿದರು ತಿಳಿಯುವುದಿಲ್ಲ. ಇನ್ನು ಚಿಕ್ಕ ವಯಸ್ಸು.  ಇದೇನು ಮೊದಲಲ್ಲ  ಈ ಹಿಂದೆ ಮೂರ್ನಾಲ್ಕು ಬಾರಿ ಐನೋರ ಬಾಗಿಲು ತೆಗೆಯಲು ಹೋಗಿದ್ದಾಳೆ. ಆ ಕತ್ತಲೆಯ ಕೋಣೆಯೊಳಗಿರುವ ರಹಸ್ಯ ತಿಳಿಯಲು ಅವಳಿಗ್ಯಾವ ಕುತೂಹಲವೋ ಗೊತ್ತಿಲ್ಲ! ಚೆಲ್ವಿ ಮತ್ತು ಸಿದ್ದಣ್ಣನ ಹೆಂಡತಿ ದೊಡ್ಡಿ ಇಬ್ಬರು ಸಂಜೆಯ ಸಾರಿಗೆ ಬಸಳೆ ಸೊಪ್ಪು ಬಿಡಿಸುತ್ತ ಕುಳಿತಿರುವಾಗ ಸದ್ದಿಲ್ಲದೆ ಕಾವೇರಿಯು ಐನೋರ ಕೋಣೆಯ ಕಡೆ ಹೆಜ್ಜೆ ಹಾಕಿದ್ದಾಳೆ.  ಸಿದ್ದಣ್ಣನ ಮಗನಾದ ಕುಮಾರ ತನ್ನ ಹೆಂಡತಿಯ ಜೊತೆ ತೆಂಗಿನ ಮರಗಳ ಬುಡ ಅಗೆದು ಬೇಕಾದಷ್ಟು ಉಪ್ಪು, ಗೊಬ್ಬರ, ಗುಮ್ಮಾಯಾವೆಲ್ಲ ಹಾಕುತ್ತಿದ್ದ. ಸಿದ್ದಣ್ಣ ಎಳನೀರಿನ ಗೊನೆಗಳನ್ನು ಇಳಿಸಲು ಮರ ಹತ್ತಿದ್ದಾಗ ಕಾವೇರಿಯು ಐನೋರ ಕೋಣೆಯ ಬಾಗಿಲು ತಳ್ಳಲು ಕಷ್ಟಪಡುತ್ತಿದ್ದನ್ನು  ಮರದ ಮೇಲಿನಿಂದಲೇ ನೋಡಿ – “ಚೆಲ್ವಿsss ಅಲ್ನೋಡು ನಿನ್ ಮಗ್ಳು ಐನೋರ್ ರೂಮ್ ಬಾಗ್ಲು ತಗಿತಾವ್ಳೆ” ಎಂದು ಜೋರಾಗಿ ಕೂಗಾಕಿದ.

ಕತ್ತಲೆಯೊಳಗೆ ಕರಗಿ ಹೋಗಿದ್ದ ಐನೋರಿಗೆ ಬಾಗಿಲಿನ ಸಂದಿಯಲ್ಲಿ ಬಂದ ಬೆಳಕಿನ ನೂಲುಗಳು ಒಮ್ಮೆಲೇ ಸುತ್ತಿಕೊಂಡವು. ಕತ್ತಲೆಯ ಬಾವಿಯೊಳಗೆ ಮುಳುಗುತ್ತಿದ್ದವನನ್ನು ಬೆಳಕಿನ ನೂಲುಗಳು ಮೇಲಕ್ಕೆ ಎಳೆಯುತ್ತಿದ್ದದ್ದು ಉಸಿರುಗಟ್ಟಿಸುವಷ್ಟು ಕಿರಿಕಿರಿ ಉಂಟು ಮಾಡಿತ್ತು. ಮೊದಲೇ ಎದೆಗುದಿಯಲ್ಲಿದ್ದವನು ತಕ್ಷಣ ಕೋಪಗೊಂಡು ಟೇಬಲ್ಲಿನ ಮೇಲಿದ್ದ ಖಾಲಿ ವಿಸ್ಕಿ ಬಾಟಲಿಯನ್ನು ಬೆಳಕು ಬಂದ ದಿಕ್ಕಿಗೆ ಬೀಸಿದ. ಚೆಲ್ವಿ ಓಡಿಬಂದು ಕಾವೇರಿಯನ್ನು ತಬ್ಬಿಕೊಳ್ಳುವುದಕ್ಕೂ ಆ ಬಾಟಲ್ ಗಾಳಿಯಲ್ಲಿ ತೂರಿ ಬಂದು ಚೆಲ್ವಿಯ ಹಣೆಗೆ ಬಡೆಯುವುದಕ್ಕೂ ಒಂದೇ ಆಯಿತು.  ಸಧ್ಯ ಮಗಳಿಗ್ಯಾವ ಏಟು ಬಿದ್ದಿಲ್ಲ ಎನ್ನುವ ಸಮಾಧಾನ ಚೆಲ್ವಿಗಾದರೆ, ಗುರಿ ತಪ್ಪಿತ್ತೆಂಬ ನಿರಾಶೆ ಐನೋರದ್ದು, ಎಸೆದ ವಿಸ್ಕಿ ಬಾಟಲ್ ಕಾವೇರಿಯ ಹಣೆಗೆ ತಗುಲಿ ತೂತಾಗಿದ್ದಿದ್ದರೆ ಬಹುಶಃ ಐನೋರ ಕರುಬುವಿಕೆ ತಣಿಯುತ್ತಿತ್ತೇನೊ? ಚೆಲ್ವಿಯ ಹಣೆಯಲ್ಲಿ ರಕ್ತ ಜಿನುಗಿತು. ಸೀರೆಯ ತುದಿಯಲ್ಲಿ ಹಣೆಯನ್ನು ಒತ್ತಿ ಹಿಡಿದುಕೊಂಡಳು. ಓಡಿಹೋಗಿ ಡಬ್ಬಿಯನ್ನು ತಂದ ದೊಡ್ಡಿಯು  ಚೆಲ್ವಿಯ ಹಣೆಗೆ ಅರಿಶಿನ ಹಚ್ಚಿದಳು. ಗಾಬರಿಯಿಂದ ಐನೋರ ಕೋಣೆಗೆ ಓಡಿಬಂದ ಸಿದ್ದಣ್ಣ ತಲೆಯ ಮೇಲಿನ ಟವೆಲ್ಲನ್ನು ಕಂಕುಳಿನಲ್ಲಿ ಇರಿಸಿಕೊಂಡು “ತಪ್ಪಾಯ್ತಯ್ಯ ಮಗೀಗೆ ಗೊತ್ತಾಗ್ನಿಲ್ಲ” ಎಂದ. ಸಿದ್ದಣ್ಣನಿಗೆ ಬಾಯಿಗೆ ಬಂದ ಹಾಗೆ ಬೈದು ಹೊರದಬ್ಬಿದರು ಐನೋರು.

ಮಧ್ಯರಾತ್ರಿಯ ಸಮಯಕ್ಕೆ ಐನೋರಿಗೆ ವಿಪರೀತ ಹಸಿವು ಕಾಣಿಸಿಕೊಂಡಿತು. ಕೈಗೆ ಸಿಕ್ಕಿದ್ದನ್ನು ತಿನ್ನುವಂತಹ ದಾವಂತದಲ್ಲಿದ್ದವರ ಅಕ್ಕಪಕ್ಕದ ಟೇಬಲ್ಲಿನ ಮೇಲೆ ಮುಗಿದ ಚಿಪ್ಸ್ ಪ್ಯಾಕೆಟು, ತೊಳೆಯದೆ ವಾಸನೆ ಹೊಡೆಯುತ್ತಿದ್ದ ಊಟದ ಡಬ್ಬಿ, ಬಾಗಿಲಿಗೆ ಒರಗಿ ಬಿದ್ದಿದ್ದ ನೀರಿನ ಖಾಲಿ ಬಾಟಲು ಮಾತ್ರವಿತ್ತು. ಹೊರಗೆ ಹೋಗಲು ಕಾಲುಗಳಲ್ಲಿ ತ್ರಾಣವಿರಲಿಲ್ಲ. ಸಿದ್ದಣ್ಣss ಸಿದ್ದಣ್ಣss ಎಂದು ನಿಮಿಷಕ್ಕೆರಡು ಸಲ ದಮ್ಮು ಕಟ್ಟಿ ಕೂಗಿದರು. ಇತ್ತ ಸಿದ್ದಣ್ಣ ಮತ್ತವನ ಇಡೀ ಕುಟುಂಬ ಕೊಪ್ಪಲಿಗೆ ಹರಿಕಥೆ ಕೇಳಲು ಹೊತ್ತಿಗಿಂತ ಮುಂಚೆಯೇ ಹೋಗಿ ಜಮಖಾನ ಹಾಸಿ ಕುಳಿತಿದ್ದರು. ಒಂದು ಹಂತ ತಲುಪುವವರೆಗೂ ಇದ್ದ ಹಸಿವು ಒಮ್ಮೆಲೇ ದೈತ್ಯ ಶೂಲೆಯಾಗಿ ಮಾರ್ಪಟ್ಟಿತು. ಆ ನೋವಿಗೆ ನಲುಗಿಹೋದ ಐನೋರು  ಕುರ್ಚಿಗೆ ಅಂಟುಕೊಂಡಿದ್ದ ದೇಹವನ್ನು ಬಿಡಿಸಿಕೊಂಡು ಎದ್ದು ನಿಂತರು. ಅಲೆಗಳ ಮೇಲೆ ಹುಟ್ಟು ಹಾಕುವ ಅಂಬಿಗನ ತೊಡರು ಹೆಜ್ಜೆಗಳಂತೆ ಐನೋರ ನಡಿಗೆ ಸ್ಥಿರವಾಗಿರದೆ, ಚಲಿಸುವ ಭೂಮಿಯ ವೇಗಕ್ಕೆ ಸ್ಪಂದಿಸಿ ಇಡೀ ದೇಹವೇ ವಾಲಾಡುತ್ತಿತ್ತು. ಬಾಗಿಲನ್ನು ತಳ್ಳಿ ಹೊರಬಂದ ಕಾಲುಗಳಿಗೆ ಹೊಸ್ತಿಲು ಸಿಕ್ಕಾಗ ಮುಗ್ಗರಿಸಿದಂತಾಗಿ ತಲೆಯೊಳಗಿನ ದಿಮ್ಮು ಹೊಟ್ಟೆಯೊಳಗೆ ಇಳಿದು ತೊಳಸಿದಂತಾಯಿತು. ವ್ಯಾಕ್sss ವ್ಯಾಕ್sss ಎಂದು ಮೂರು ಸಲ ವಾಂತಿ ಮಾಡಿಕೊಂಡರು. ಗಬ್ಬೆಂದು ಮೂಗಿಗೆ ಬಡಿದ ವಾಸನೆಯಿಂದ ತಲೆ ತಿರುಗಿದಂತಾಗಿ ಕಣ್ಣು ಮೆಳ್ಳಿದವು. ಹೊರಗಡೆ ಗುಡುಗು ಸಿಡಿಲಿನ ಜೊತೆಗೆ ಮಳೆಯು ಜೋರಾಯಿತು. ಮಳೆಗೆ ಮುಖವೊಡ್ಡಿ ಹೆಂಚಿಗೆ ಬಡಿದು ಉದುರುತ್ತಿದ್ದ ಪಿಚಕಾರಿ ಹನಿಗಳಿಗೆ ನಾಲಿಗೆ ಚಾಚಿದರೂ ಆ ತಂಬೆಲರಿನಿಂದ ಅಷ್ಟೇನೂ ಸಮಾಧಾನವಾಗಲಿಲ್ಲ. ನಾಲಿಗೆಯ ಮೇಲಿದ್ದ ಒಂದು ಮಣ ಬಿಳಿ ಜಿಡ್ಡಿನ ಕೊಳಕು, ಬಿದ್ದ ಹನಿಗಳನ್ನು ಜಿಹ್ವಾತೊಟ್ಟುಗಳಿಗೆ  ಮುಟ್ಟಲು ಬಿಡದೆ ತಡೆಯೊಡ್ಡಿತ್ತು. ತೂರಾಡುತ್ತಲೇ ಮನೆಯಿಂದ ಹೊರಗೆ ಬಂದ ಐನೋರು ಮಳೆಗೆ ಮುಖ ಮಾಡಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದು ಮೂರ್ಛೆ ಹೋದರು.

ಕಣ್ಣು ಬಿಟ್ಟು ನೋಡಿದಾಗ ಐನೋರು ತನ್ನ ಸ್ನೇಹಿತ ಮೈಲಾರಲಿಂಗನ ಆಸ್ಪತ್ರೆಯ ಐಸಿಯು ಒಳಗೆ ಮಲಗಿದ್ದರು. ಒಂದು ದಿನಪೂರ್ತಿ ಪ್ರಜ್ಞೆಯೇ ಇದ್ದಿರಲಿಲ್ಲ. ಹೊರಗೆ ಸಿದ್ದಣ್ಣ ಚಡಪಡಿಕೆಯಲ್ಲಿಯೇ ಕಾಲ ತಳ್ಳುತ್ತಿದ್ದ.
ಡಾಕ್ಟರ್ ಮೈಲಾರಿ ಬಂದು “ಏನ್ ಐನೋರೆ ಹೇಗಿದೆ ಈಗ. ಆರಾಮು  ಅನ್ನಿಸ್ತಿದಿಯ. ಎನಿಥಿಂಗ್  ಪೇಯ್ನ್ ಆರ್ ಫೀಲಿಂಗ್ ಡ್ರೌಜಿ಼ನೆಸ್ ” ಎಂದರು. “ಇಲ್ಲ ಪರವಾಗಿಲ್ಲ, ನೀನು ಹೇಗಿದ್ಯೋ ಮೈಲಾರಿ” ಸ್ನೇಹಿತನನ್ನು ನೋಡಿದ ಖುಷಿಯಲ್ಲಿ ಕೇಳಿದರು. “ಐನೋರೇ ದಿಸ್ ಇಸ್ ಮೈ ಹಾಸ್ಪಿಟಲ್, ಇಲ್ಲಿ ನಾನು ಡಾಕ್ಟರ್. ನೀವು ಪೇಷಂಟ್. ಇಲ್ಲಿಗೆ ಬಂದವರ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಬೇಕಾಗಿರುವುದು ನಾನು…” ಎಂದು ಕುಹಕವಾಡಿದ. ಐನೋರು ಗಂಭೀರವಾಗಿ ಮೈಲಾರಿಯನ್ನೊಮ್ಮೆ ನೋಡಿದರು. ಮೈಲಾರಿಗೆ ಹುಟ್ಟಿದ ನಗು  ಎರಡೇ ಸೆಕೆಂಡಿಗೆ ಸತ್ತುಹೋಯಿತು. ಶಾಲೆಯಲ್ಲಿ ಓದುವಾಗ ಮಗನನ್ನು ಹೆಸರಿಡಿದು ಕರೆದನೆಂಬ ಕೋಪಕ್ಕೆ ಐನೋರ ತಂದೆ ಕಾದ ಕಬ್ಬಿಣದ ಸಲಾಕೆಯಿಂದ ಮೈಲಾರಿಯ ಕುಂಡಿಯ ಮೇಲೆ ಬಲವಾಗಿ ಒತ್ತಿ ಬರೆಯನ್ನೆಳದಿದ್ದರು ಆ ಘಟನೆಯ ಬಳಿಕ ಮೈಲಾರಿ ಮಾತ್ರವಲ್ಲ ಮೈಲಾರಿಯ ತಾತ ಮುತ್ತಾತನು ಕೂಡ ಸರಿಯಾಗಿ ಚಡ್ಡಿ ಹಾಕಲು ಬರದ ಹುಡುಗನನ್ನು ನೋಡಿ ಐನೋರೆsss ಐನೋರೆsss ಅಂತಲೇ ಸಂಭೋದಿಸುತ್ತಿದ್ದರು. ಕನ್ನಡಿಯ ಮುಂದೆ ನಿಂತು ಮಂಡಿಯ ತನಕ ಚಡ್ಡಿ ಜಾರಿಸಿ ಎಷ್ಟೇ ಕಷ್ಟಪಟ್ಟರು ಮೈಲಾರಿಗೆ ಮಾತ್ರ ತನ್ನ ಗಾಯ ಎಷ್ಟರ ಮಟ್ಟಿಗಾಗಿದೆ ಎಂಬುದ ನೋಡಿಕೊಳ್ಳಲು ಆಗುತ್ತಿರಲಿಲ್ಲ; ಈಗಲೂ ಸಹ.  ಐನೋರ ತಂದೆ ಮೈಲಾರಿಗೆ ಅಕ್ಷರಶಃ ಮುಟ್ಟಿನೋಡಿಕೊಳ್ಳುವ ಹಾಗೆ ಮಾಡಿದ್ದರು. ಅದೇ ಕೋಪಕ್ಕೆ ಮೈಲಾರಿ ಘನವಾಗಿ ಓದಿ, ಡಾಕ್ಟರ್ ಪದವಿ ಪಡೆದು ಅದೇ ಊರಿನಲ್ಲಿ ಆಸ್ಪತ್ರೆ ತೆರೆದ. ಐನೋರ ತಂದೆ ಸಾಯುವ ಕಾಲಕ್ಕೆ ಬಿ ಪಿ ಡಯಾಬಿಟಿಸ್ನಿಂದ ಬಳಲುತ್ತಿದ್ದರು. ಆ ಸಮಯಕ್ಕೆ ಮಗನಂತೆ ಜೊತೆಯಲ್ಲಿ ನಿಂತು ಉಪಚರಿಸಿದ್ದು ಇದೇ ಮೈಲಾರಿ. ಕೊನೆಗಳಿಗೆಯಲ್ಲಿ ಮೈಲಾರಿ ಅವರ ಪಾಲಿಗೆ ಸಾಕ್ಷಾತ್ ದೇವರಾಗಿದ್ದ. ಐನೋರ ತಂದೆ ಮೈಲಾರಿಯನ್ನು ಹೆಸರಿಡಿದು ಕರೆಯುತ್ತಲೇ ಇರಲಿಲ್ಲ. ಎದುರಾದಾಗಲೆಲ್ಲ ವೈದ್ಯೋ ನಾರಾಯಣೋ ಹರಿ ಎಂದು ಮನಃಪೂರ್ವಕವಾಗಿ ಎರಡೂ ಕೈಗಳನ್ನು ಜೋಡಿಸಿ ಶ್ರದ್ಧಾಪೂರ್ವಕವಾಗಿ ಮುಗಿಯುತ್ತಿದ್ದರು. ಐನೋರು ಸ್ನೇಹಿತನೇ ಆಗಿದ್ದರು ಈಗಲೂ ಹೆಸರಿಡಿದು ಕರೆಯುವುದಿಲ್ಲ ಡಾಕ್ಟರ್ ಮೈಲಾರಿ.

ತಾನಾಡಿದ ಕೊಂಕು ಮಾತಿಗೆ ಐನೋರ ನೋಟ ಕೊಕ್ಕೆಹಾಕಿತ್ತು, ಒಳೆಗೆದ್ದ ದಿಗಿಲನ್ನು ಹಾಗೆಯೇ ನುಂಗಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕುಂಡಿಯನ್ನೊಮ್ಮೆ ಸವರಿಕೊಂಡು ಹ್ಮುಂಕರಿಸಿ ಗಂಟಲು ಸರಿ ಮಾಡಿ
“ನೋಡಿ ಐನೋರೆ ವಿಪರೀತ ಕುಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ. ರಿಪೋರ್ಟ್ ಎಲ್ಲಾ ನೋಡಿದೀನಿ ಸೀರಮ್ ಅಮೋನಿಯ ಲೆವೆಲ್ ತುಂಬಾ ಜಾಸ್ತಿ ಇದೆ. ಸದ್ಯಕ್ಕೆ ಲಿವರ್ ಫಂಕ್ಷನ್ ಇಂಪ್ರೂ ಆಗೋಕೆ ಸಿಲಿಮರೀನ್ ಮತ್ತು ಟಿಶ್ಯೂಗಳಲ್ಲಿರೋ ಆಲ್ಕೋಹಾಲ್ ಕಂಟೆಂಟ್ ಎಲಿಮಿನೇಟ್ ಮಾಡೋಕೆ ಮೆಟಡಾಕ್ಸಿನ್ ಕೊಟ್ಟಿದ್ದೇವೆ, ಭಯಪಡಬೇಕಾಗಿಲ್ಲ ನೀವೀಗ ನಾರ್ಮಲ್ ಆಗಿದ್ದೀರಾ. ಇವತ್ತೇ ಡಿಸ್ಚಾರ್ಜ್ ಮಾಡಬಹುದು ಆದರೆ… ನಾನು.. ಮಾಡಲ್ಲ… ನಿಮ್ಮ ಪರಿಸ್ಥಿತಿ ನನಗೆ ಅರ್ಥ ಆಗುತ್ತೆ. ನೀವೀಗ ನಿಮ್ಮ ಹೆಂಡತಿಯನ್ನು ಕಳೆದುಕೊಂಡಿರುವ ದುಃಖದಲ್ಲಿದ್ದೀರಾ. ಮನೆಗೆ ಹೋದರೆ ಮತ್ತೆ ಕುಡಿತೀರಾ ಹಾಗಾಗಿ ನಿಮ್ಮನ್ನು ಹದಿನೈದು ದಿನ ರೀಹ್ಯಾಬಿಲಿಟೇಷನ್ ಅಲ್ಲಿ  ಇಡಬೇಕಾಗಿದೆ. ಇವತ್ತೆ ವಾರ್ಡಿಗೆ ಶಿಫ್ಟ್ ಮಾಡ್ತೀವಿ. ಮನೆಯಿಂದ ಊಟ ತರೋದಿಕ್ಕೆ ಸಿದ್ದಣ್ಣನಿಗೆ ಹೇಳಿ ವ್ಯವಸ್ಥೆ ಮಾಡಿದ್ದೇನೆ. ನಿಮ್ಮ ಆರೋಗ್ಯ ನಮಗೆ ಬಹಳ ಮುಖ್ಯ ಐನೋರೆ” ಎಂದು ಬೆಡ್ಡಿನ ತುದಿಯಲ್ಲಿ ನೇತಾಡುತ್ತಿದ್ದ ಫೈಲಿಗೊಂದು ಸಹಿ ಹಾಕಿ ಪಕ್ಕದ ವಾರ್ಡಿಗೆ ಹೊರಟು ಹೋದರು. ಸಿದ್ದಣ್ಣ ಓಡಿ ಬಂದು ಮಾತ್ರೆಯ ಡಬ್ಬಿ,ಬಟ್ಟೆ,ಬ್ಯಾಗು, ಫೈಲುಗಳನ್ನು ಹಿಡಿದು ನರ್ಸಿನ ಜೊತೆ ವಾರ್ಡಿಗೆ ಶಿಫ್ಟ್ ಆದರು.

ಸಂಜೆ ವೇಳೆಗೆ ಸಿದ್ದಣ್ಣ, ದೊಡ್ಡಿ, ಕುಮಾರ ಮತ್ತವನ ಹೆಂಡತಿ, ಮಕ್ಕಳಾದ ರಾಜಿ, ಲತಾ, ಮಂಗ್ಳಿ ಬಂದು ನೋಡಿಕೊಂಡು ಹೋದರು. ತೋಟದ ಕೆಲಸಗಳಿದ್ದ ಕಾರಣ ಪ್ರತಿದಿನ ಬರುವುದು ಎಲ್ಲರಿಗೂ ಕಷ್ಟವಾಗಿತ್ತು. ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ ಚೆಲ್ವಿಗೆ ಮಾಡಲು ಯಾವ ಕೆಲಸವನ್ನು ನಿಶ್ಚಯಿಸಿರಲಿಲ್ಲ. ಎಲ್ಲರಿಗೂ ಸಹಾಯ ಮಾಡುತ್ತಿದ್ದಳು ಅಷ್ಟೇ. ಈಗ ಐನೋರಿಗೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತ ಕಾಫಿ, ತಿಂಡಿ, ಊಟ, ಒಯ್ಯುವುದೇ ಚಾಕರಿ ಆಯ್ತು. ಚೆಲ್ವಿ ಆಸ್ಪತ್ರೆಗೆ ಹೊರಟಳೆಂದರೆ ಕಾವೇರಿ ನೋಡಿಕೊಂಡು ಸುಮ್ಮನೆ ಕೂರುವವಳಲ್ಲ. ತನ್ನನ್ನು ಕರೆದುಕೊಂಡು ಹೋಗುವಂತೆ ರಚ್ಚೆ ಹಿಡಿಯುತ್ತಾಳೆ. ಮರುದಿನ ಚೆಲ್ವಿ ಊಟ ತಂದುಕೊಟ್ಟಳು. ಐನೋರು ಚೆಲ್ವಿಯನ್ನು ನೋಡಿದ್ದು ಇದೇ ಮೊದಲು, ತಲೆಗೆ ಬಾಟಲಿ ಎಸೆದ ದಿನ ಕುಡಿದ ನಶೆಯಲ್ಲಿದ್ದವರಿಗೆ ಹಳೆಯದ್ಯಾವುದು ನೆನಪಿನಲ್ಲಿ ಇರಲಿಲ್ಲ. ಕಪ್ಪು ಬಣ್ಣದ ಚೆಲ್ವಿ ನೋಡಲು ಸಾಧಾರಣವಾಗಿದ್ದಳು. ಮಾತಿನ ನಡುವೆ ತಮಿಳು ಭಾಷೆಯ ಶೈಲಿ ನುಸುಳಿ ಬರುತ್ತಿದ್ದರೂ ಅವಳ ಬಾಯಿಂದ ಉದುರುವ ಕನ್ನಡವನ್ನು ಕೇಳುವುದೇ ಆಹ್ಲಾದಕರ.

ಪ್ರತಿದಿನ ಹೀಗೆ ಊಟ ಉಪಚಾರ ನೋಡಿಕೊಳ್ಳುತ್ತಿದ್ದ ಚೆಲ್ವಿ ಐನೋರ ಸಲುಗೆಗೆ ಪಾತ್ರವಾದಳು. ಜೊತೆಗೆ ಅವಳ ಮಗಳು ಕಾವೇರಿ ಅಂತೂ ಇನ್ನಿದ್ದು ಅಚ್ಚು ಮೆಚ್ಚು ಎನಿಸಿಕೊಂಡಳು. ಕಾವೇರಿಯ ಮುಗ್ಧ ನೋಟ, ಅವಳ ನಗು, ತುಂಟಾಟ ಎಲ್ಲವೂ ಐನೋರ ಜೊತೆ ಸ್ನೇಹದ ಬಂಧವನ್ನು ಬೆಸೆಯಲು ಸಹಾಯ ಮಾಡಿತು. ಕಾವೇರಿಯ ಪುಟ್ಟ ಬೆರಳುಗಳನ್ನು ತಮ್ಮ ಕೈಯಲ್ಲಿಡಿದು ಖುಷಿಪಡುತ್ತಿದ್ದರು. ಅವಳಿಂದ ಇದ್ದ ಖಿನ್ನತೆಯು ಕಡಿಮೆಯಾಯಿತು. ಒಂದು ದಿನ ಐನೋರಿಗೆ ಕೆಲಸದೊತ್ತಡದಿಂದ ಅಧಿಕ ಕರೆಗಳು ಬಂದವು. ಅದರ ನಿಮಿತ್ತ ತಾನು ಮನೆಗೆ ಹೋಗಿ ತನಗೆ ಬಂದಿದ್ದ ಪತ್ರಗಳನ್ನು ಸಂಗ್ರಹಿಸಿಕೊಳ್ಳಬೇಕಾಯಿತು. ಈ ಕೆಲಸವನ್ನು ಚೆಲ್ವಿಗೆ ಒಪ್ಪಿಸೋಣವೆಂದು ತೀರ್ಮಾನಿಸಿ. “ಚೆಲ್ವಿ ನನಗೆ ಒಂದಷ್ಟು ಲೆಟರ್ ಬಂದಿವೆ. ನನ್ನ ಹೆಸರಿಗೆ ಬಂದಿರುವ ಲೆಟರ್ ತರ್ತಿಯಾ”
“ಸರಿ ಐನೋರಾ  ತರ್ತೀನಿ, ನನಗೆ ನಿಮ್ಮ ಹೆಸರು ಗೊತ್ತು. ಎಷ್ಟೋ ಸಲ ಪತ್ರ ಬಂದಾಗ ಇಂಗ್ಲೀಷಿನಲ್ಲಿದ್ದರೂ ನಾನೇ ಅದನ್ನ ಓದಿದ್ದೇನೆ”
“ಹೌದಾ ಹಾಗಾದರೆ ನನ್ನ ಹೆಸರೇನು? ಹೇಳು ನೋಡೋಣ” ಎಂದರು. ಒಂದೊಂದೇ ಪದಗಳನ್ನು ಮನಸ್ಸಿನಲ್ಲಿ ಜೋಡಿಸಿಕೊಂಡು ನುಡಿದಳು “ಹರೀಶ್ ಚಂದ್ರ ಉಪಾಧ್ ಅಯ್ಯ” ಎಂದು. ಐನೋರಿಗೆ ನಗು ತಡೆಯಲಾಗದೆ ಜೋರಾಗಿ ನಕ್ಕುಬಿಟ್ಟರು.

ಮಾರನೆಯ ದಿನ ಚೆಲ್ವಿ ಎಲ್ಲಾ ಪತ್ರಗಳನ್ನು ತಂದುಕೊಟ್ಟಳು ಆ ಕೆಲಸವನ್ನು ಪೂರ್ಣಗೊಳಿಸಿ ಪ್ರತಿಯಾಗಿ ಐನೋರು ಮತ್ತೊಂದಿಷ್ಟು ಪತ್ರಗಳನ್ನು ಪೋಸ್ಟ್ ಮಾಡಲು ಚೆಲ್ವಿಯ ಕೈಗೆ ಇಟ್ಟರು. ಕೊಟ್ಟ ಕೆಲಸವನ್ನೆಲ್ಲ ಆಕೆ ಸಮರ್ಪಕವಾಗಿ ನಿಭಾಯಿಸಿದಳು.
“ಚೆಲ್ವಿ ನೀನು ಎಲ್ಲಿಯವರೆಗೂ ಓದಿದ್ದೀಯಾ”
“ಒಂಬತ್ತು ಅಷ್ಟೇಯ ನಾನ್ ಚೆನ್ನಾಗೇ ಓದ್ತಾ ಇದ್ದೆ ಐನೋರಾ. ನಮ್ಮನೆಯ ಬಡತನದಿಂದ ಮುಂದುಕ್ಕೆ ಓದ್ಸೋಕೆ ಆಗ್ಲಿಲ್ಲ. ಅದಿಕ್ಕೆ ನಮ್ಮ ಮಾವನಿಗೆ ಕೊಟ್ಟು ಮದುವೆ ಮಾಡಿಬಿಟ್ರು, ಅವನು ಹತ್ತನೇ ಕ್ಲಾಸ್ ಪಾಸಾಗಿದ್ದರು ಯಾವ ಒಳ್ಳೆಯ ಕೆಲಸವೂ ಸಿಕ್ತಾ ಇರಲಿಲ್ಲ. ನಮ್ಮ ಬಡತನಾನು ಮುಗಿತಾ ಇರ್ಲಿಲ್ಲ”.
“ಎಲ್ಲಿದ್ದಾನೆ ನಿನ್ನ ಗಂಡ? ಏನ್ ಕೆಲಸ ಮಾಡ್ತಾನೆ?”
“ಅವ್ನಾ ನನ್ನ… ಈ ಮಗೀನಾ ತಬ್ಲಿ ಮಾಡಿ ಶಿವನ ಪಾದ ಸೇರ್ಕಂಡ.. ಆಕ್ಸಿಡೆಂಟ್ ಆಗಿ ಸತ್ತೋದ ಐನೋರ”
“ಅಯ್ಯೋ ಸಾರಿ ಚೆಲ್ವಿ” ಎಂದು ಸಪ್ಪಗಾದರು.
“ನೀನ್ಯಾಕೆ ಮುಂದಕ್ಕೆ ಓದ್ಬಾರದು? ಈ ಮಗುನ ಇಟ್ಕೊಂಡು ಇನ್ನು ಎಷ್ಟು ದಿನ ಅಂತ ಹೀಗೆ ಇರ್ತಿಯ. ಎಸ್ ಎಸ್ ಎಲ್ ಸಿ ಪರೀಕ್ಷೆ ಕಟ್ಟು, ನಿನ್ನ ಡಿಟೈಲ್ಸ್ ಎಲ್ಲ ಊರಿಂದ ತರಿಸ್ಕೊ. ಓದೋಕೆ ಪುಸ್ತಕ ಎಲ್ಲಾ ನಾನೇ ಅರೆಂಜ್ ಮಾಡ್ತೀನಿ ಆಯ್ತಾ” ಎಂದರು.
ಆ ದಿನ ಕಾವೇರಿ ಮನೆಗೆ ಹೋಗದೆ ಹಠ ಮಾಡಿ ಐನೋರ ಬಳಿಯೇ  ಉಳಿದುಬಿಟ್ಟಳು. ಐನೋರು ಬೇರೆ “ಇರಲಿ ಬಿಡು ಹೇಗಿದ್ರು ನಾಳೆ ಡಿಸ್ಚಾರ್ಜ್ ಮಾಡ್ತಾರಲ್ಲ. ಇವಳಿದ್ರೆ ನನಗೂ ಟೈಮ್ ಹೋಗುವುದೇ ಗೊತ್ತಾಗಲ್ಲ” ಎಂದು ಬಿಟ್ಟರು.

ರಾತ್ರಿ ಮನೆಗೆ ಬಂದವಳು ಹಳೆಯ ನ್ಯೂಸ್ ಪೇಪರ್ ಗಳನ್ನು ತಂದು ಓದುವುದನ್ನ ನೆನಪಿಸಿಕೊಳ್ಳುತ್ತಿದ್ದಳು. ಬೆಳಿಗ್ಗೆ ಬೇಗನೆ ಎದ್ದವಳೇ ಒಂದೇ ಉಸಿರಿಗೆ ಎಲ್ಲಾ ಕೆಲಸ ಮುಗಿಸಿ ಆಸ್ಪತ್ರೆಗೆ ಬಂದಳು. ವಾರ್ಡಿನಲ್ಲಿ ಐನೋರು ಇರಲಿಲ್ಲ.  ಬೆಡ್ಡಿನ ಮೇಲೆ ಕಾವೇರಿ ಮಲಗಿದ್ದಳು‌. ಟಾಯ್ಲೆಟಿನಿಂದ ಹೊರಗೆ ಬಂದ ಐನೋರು ಚೆಲ್ವಿಯನ್ನು ನೋಡಿ, “ಎಬ್ಬಿಸಬೇಡ ಮಲಗಿರಲಿ ಡಿಸ್ಚಾರ್ಜ್ ಮಾಡುವುದು ಮಧ್ಯಾಹ್ನಕ್ಕೆ” ಎಂದರು.
“ಐನೋರಾ ದಯವಿಟ್ಟು ಕ್ಷಮಿಸಿ ತೊಂದರೆ ಏನಾದ್ರು ಕೊಟ್ಳಾ” “ಹಾಗೇನಿಲ್ಲ ಬಿಡು ಚೆಲ್ವಿ” ಎಂದು ನಕ್ಕು ಸುಮ್ಮನಾದರು. ಆ ಒಂದು ಸಣ್ಣ ನಗು ಚೆಲ್ವಿಯ  ರಾತ್ರಿಯನ್ನೆಲ್ಲ ಕಾಡಿದ ಆತಂಕವನ್ನು ಕೊಂದುಹಾಕಿತು. ತುಟಿಯಂಚಿನ ಹುಸಿನಗೆಯೊಂದಿಗೆ ತಾನು ನಿಟ್ಟುಸಿರು ಬಿಟ್ಟಳು. ಬ್ಯಾಗು, ಫೈಲ್, ಮಾತ್ರೆ ಡಬ್ಬಿಗಳನ್ನೆಲ್ಲ ತುಂಬಿಕೊಂಡು ಡಿಸ್ಚಾರ್ಜ್ ಸಮ್ಮರಿ ತರಲು ರಿಸೆಪ್ಶನ್ ಬಳಿ ಹೋದಳು. “ಅದೇನ್ ಮಗು ಅಂತ ಎತ್ತಿದ್ದೀಯಮ್ಮ ಮಧ್ಯರಾತ್ರಿಲಿ ಎದ್ದು ನನಗೆ ಅಮ್ಮ ಬೇಕು? ಅಮ್ಮ ಬೇಕು? ಅಂತ ಅತ್ತು ರಂಪಾಟ ಮಾಡಿ ಆಸ್ಪತ್ರೆಯನ್ನೆ ಅಲ್ಲೋಲಕಲ್ಲೋಲ ಮಾಡಿಬಿಟ್ಲು. ಪಾಪ ಐನೋರು ರಾತ್ರಿ ಎಲ್ಲಾ ನಿದ್ದೆ ಮಾಡದೆ ಹೆಗಲ ಮೇಲೆ ಮಲಗಿಸಿಕೊಂಡು ಕಾರಿಡಾರ್ ಎಲ್ಲಾ ಓಡಾಡಿದ್ದಾರೆ. ಮಲಗಿಸೋಕೆ ಹೋದರೆ ಮತ್ತೆ ಕಿರುಚೋದು, ಯಪ್ಪಾ ಯಪ್ಪಾ ಇಂತ ಸೀಮೆಗಿಲ್ದಿರೋ ಮಗುನ ನಾನೆಲ್ಲೂ ನೋಡಿಲ್ಲ. ಸಮ್ಮರಿ ಫೈಲ್ನಾ ನಮ್ಮ ಡಾಕ್ಟರೇ ಬಂದು ಕೊಡ್ತಾರೆ  ವಾರ್ಡಿಗೆ ಹೋಗಿರು” -ನರ್ಸೊಬ್ಬಳು ಹೇಳಿದಳು. ಪಾಪ ಐನೋರು ಚೇರ್ ಮೇಲೆ ಕುಳಿತು ತೂಕಡಿಸುತ್ತಿದ್ದರು. ಅಂತೂ ಡಿಸ್ಚಾರ್ಜ್ ಆಯಿತು. ಐನೋರು ಮನೆಗೆ ಬಂದರು. ತನ್ನ ಕೋಣೆಗೆ ಕಾಲಿಟ್ಟ ಕೂಡಲೇ ಮೂಗಿಗೆ ದುರ್ನಾಥ ಬಡಿಯಿತು. ಮತ್ತೆ ಕುಡಿಯಲು ಅಲ್ಲಿದ್ದ ಯಾವ ಬಾಟಲಿಯಲ್ಲೂ ಮದ್ಯವಿರಲಿಲ್ಲ. ಆ ರೂಮನ್ನು ಬಿಟ್ಟು ತಂದೆಯ ರೂಮಿಗೆ ಶಿಫ್ಟ್ ಆದರು. ಸಿದ್ದಣ್ಣ ಮೊದಲಿಗಿಂತ ಹೆಚ್ಚು ಶಿಸ್ತುಬದ್ಧವಾಗಿ ಕೆಲಸ ಮಾಡ್ತಾ ಇದ್ದ. ಎರಡು ದಿನ ಯಾಕೋ ಚೆಲ್ವಿ ಐನೋರ ಕೋಣೆ ಕಡೆ ಬರಲೇ ಇಲ್ಲ. ಅದು-ಇದು ಕೆಲಸ ಮಾಡಿಕೊಂಡು ತೋಟದ ಔಟ್ ಹೌಸಿನಲ್ಲಿಯೇ ಉಳಿದುಬಿಟ್ಲು.ಆಗಾಗ ಮಗಳ ಸ್ಲೇಟಿಡಿದು ಅಕ್ಷರಗಳನ್ನು ಬರೆಯುತ್ತಿದ್ದಳು. ನ್ಯೂಸ್ ಪೇಪರಿನಲ್ಲಿದ್ದ ಅಕ್ಷರಗಳ ಜೋಡಿಸಿ ಓದುತ್ತಿದ್ದಳು.

ಒಂದು ಮುಂಜಾನೆ ಚೆಲ್ವಿಯನ್ನು ನೋಡಲು ಔಟ್ ಹೌಸಿಗೆ ಬಂದರು. ಅಲ್ಲಿರದ ಚೆಲ್ವಿಯು ಹಿತ್ತಲಿನಲ್ಲಿ ಪುನರ್ ನಿರ್ಮಾಣವಾದ ಕಕ್ಕಸು ಮನೆಯಲ್ಲಿರುತ್ತಾಳೆ ಎಂಬುದು ಐನೋರ ಊಹೆಗೂ ಬಂದಿರಲಿಕ್ಕಿಲ್ಲ. ಬಹಳ ಚಿಕ್ಕದಾದ ಜಾಗ ಅದರಲ್ಲಿ ಸಿದ್ದಣ್ಣ, ದೊಡ್ಡಿ, ಕುಮಾರ ಅವನ ಹೆಂಡತಿ ಅಲ್ಲದೆ ರಾಜಿ, ಲತಾ, ಮಂಗ್ಳಿ ಹೀಗೆ ಏಳು ಮಂದಿಯ ಇಕ್ಕಟ್ಟಿನ ಬದುಕು ನೋಡಿ ಬೇಸರವಾಯಿತು. ಏನೂ ಮಾತನಾಡದೆ ಸುಮ್ಮನೆ ಹೋಗಿ ಆರಾಮ ಕುರ್ಚಿಗೆ ತಲೆಹಾಕಿ ಆಕಾಶ ನೋಡುತ್ತಾ ಕುಳಿತುಬಿಟ್ಟರು. ಕಾವೇರಿಯದ್ದು ಮತ್ತದೇ ಚಾಳಿ ಸೀದಾ ಐನೋರ ಮನೆಯೊಳಗೆ ಹೋಗಿ ಉಯ್ಯಾಲೆಯ ಮೇಲೆ ಅಲಂಕರಿಸಿಕೊಂಡು ನಿಂತಿದ್ದ ಶ್ರೀಕೃಷ್ಣ ಪರಮಾತ್ಮನನ್ನು ನೋಡುತ್ತಾ ನಿಂತಿದ್ದಳು. ಐನೋರು ಕಾವೇರಿಯನ್ನು ಗಮನಿಸಿ ಅವಳ ಮನಸ್ಸನ್ನು ಅರ್ಥ ಮಾಡಿಕೊಂಡು ಶ್ರೀಕೃಷ್ಣ ಪರಮಾತ್ಮನ ವಿಗ್ರಹವನ್ನು ನೆಲದ ಮೇಲಿಟ್ಟು ಕಾವೇರಿಯನ್ನು ಉಯ್ಯಾಲೆಯ ಮೇಲೆ ಕೂರಿಸಿ ತೂಗಿದರು. ಕಿಟಕಿಯಲ್ಲಿ ನೋಡಿದ ಸಿದ್ದಣ್ಣ ಕಾವೇರಿಗೆ ಬಯ್ಯುತ್ತಾ ಬಾಗಿಲಿಗೆ ಬಂದ.  ಐನೋರು ಸಿದ್ದಣ್ಣನಿಗೆ “ಹೋಗಿ ರಾಜಿಯನ್ನು ಕರೆದುಕೊಂಡು ಬಾ”ಎಂದೇಳಿ ಕಳುಹಿಸಿದರು. ಮುಖ ಸಿಂಡರಿಸಿಕೊಂಡೇ ಎದುರಿಗೆ ಬಂದು ನಿಂತಳು ರಾಜಿ. ಪಕ್ಕದಲ್ಲಿದ್ದ ಸಿದ್ದಣ್ಣ ಭುಜವಿಳಿಸಿ ನಿಲ್ಲುವಂತೆ ನಟಿಸಿ ತೋರಿಸುತ್ತಿದ್ದ. ಅಪ್ಪನ ಸಂಜ್ಞೆಗೆ ಸೊಪ್ಪಾಕದ ರಾಜಿ, ಎದೆ ನಿಮಿರಿಸಿಕೊಂಡೇ ನಿಂತಿದ್ದಳು.
  “ಏನ್ ರಾಜಿ ಹೇಗ್ ನಡೀತಿದೆ ನಿನ್ನ ವಿದ್ಯಾಭ್ಯಾಸ”
“ಹ್ಮು ಚೆನ್ನಾಗಿ ಓದ್ತಾ ಇದೀನಿ” ಎಂದು ಬಿಗಿದ ಮಾತುಗಳಾಡಿದಳು.
“ಎಂ ಎ ಫೈನಲ್ ಇಯರ್ ಅಲ್ವಾ”
“ಹೌದು”
“ಮುಂದೆ ಏನ್ ಮಾಡಬೇಕು ಅಂತ ಇದಿಯಾ”
“ಲಾ ಮಾಡಬೇಕು ಅಂತ ಇದ್ದೀನಿ”
“ಓಹೋ ನನ್ನನ್ನೇ ಫಾಲೋ ಮಾಡ್ತಾ ಇದ್ದೀಯಾ” ಎಂದು ನಕ್ಕರು.
ಹಲ್ಲು ಕಚ್ಚಿ ಮೂಗರಳಿಸಿ  “ನಿಮ್ಮ ತರ ಅಲ್ಲ ನಿಮಗೆ ಸರಿಸಮಾನವಾಗಿ ಕೂರಬೇಕು ಅನ್ನೋದಕ್ಕೋಸ್ಕರ ಲಾ ಮಾಡ್ಬೇಕು ಅಂತಿದ್ದೀನಿ, ನಮಗೆ ಇನ್ಯಾವ ದಾರಿಯು ಇಲ್ವಲ್ಲ ಅದಿಕ್ಕೆ”
“ಅಷ್ಟೇ ತಾನೇ ಬೇರೆ ದಾರಿಯಾಕಿಲ್ಲ ಅಲ್ನೋಡು ನಿನ್ನ ಪಕ್ಕದಲ್ಲೇ ಚೇರ್ ಇದೆ ಎಳೆದುಕೊಂಡು ಕುತ್ಕೋ “
ಸಿದ್ದಣ್ಣನ ಜಂಘಾಬಲವೇ ಉಡುಗಿಹೋಯ್ತು 
“ಏನ್ ಮಾತಾಡ್ತಿದಿಯಾ ರಾಜಿ ಐನೋರ ಎದುರಿಗೆ ನಿಂತು ಎದುರುತ್ತರ ಕೊಡ್ತಿಯಾ. ಹಾಕ್ತೀನಿ ನೋಡು ಕಪಾಲಕ್ಕೆ” ಅಂತ ಹೊಡೆಯಲು ಬಂದ. ಐನೋರು ಸಿದ್ದಣ್ಣನಿಗೆ ಸುಮ್ಮನೆ ನಿಲ್ಲುವಂತೆ ಕಣ್ಣಿನಲ್ಲೇ ಆದೇಶಿಸಿದರು.
ಐನೋರನ್ನ ಕಂಡರೆ ಉರಿದು ಬೀಳ್ತಾ ಇದ್ದ ರಾಜಿ ಯಾಕೋ ಅಂದು ಮೆತ್ತಗಾದಳು. ಪಕ್ಕದಲ್ಲಿದ್ದ ಚೇರ್ ಎಳೆದುಕೊಂಡು ಕುಳಿತೇ ಬಿಟ್ಟಳು. ಇಷ್ಟು ದಿನ ಇದ್ದ ಅವಳ ಕಾಲುನೋವು ಕುಳಿತೊಡನೆ ಮಂಗಮಾಯವಾಯಿತು.
“ಇಷ್ಟೇ ತಾನೇ ನಿನಗೆ ಬೇಕಾಗಿದ್ದು ಇದನ್ನ ನೀನು ಮೊದಲೇ ಕೇಳಬೇಕಿತ್ತು ಅಲ್ವಾ, ನನಗ್ತಾನೆ ನಿಮ್ಮನ್ನ ಬಿಟ್ಟರೆ ಯಾರಿದ್ದಾರೆ ಹೇಳು, ಇನ್ಮೇಲೆ ನೀವು ಅಲ್ಲಿರೋದು ಬೇಡ, ಹೋಗಿ ನಿನ್ನ ಬಟ್ಟೆ ಬುಕ್ಕು ಎಲ್ಲಾ ತಗೊಂಡು ನಿನಗಿಷ್ಟ ಬಂದ ರೂಮಿಗೆ ಶಿಫ್ಟಾಗು ಚೆನ್ನಾಗಿ ಓದು, ಆದ್ರೆ ನನ್ನ ತರ ಕರಪ್ಟೆಡ್ ಲಾಯರ್ ಮಾತ್ರ ಆಗ್ಬೇಡ”  ಎಂದು ಗಹಗಹಿಸಿ ನಕ್ಕರು. ರಾಜಿಯ ಕಣ್ಣುಗಳು ತುಂಬಿ ಬಂದವು ಜೋರಾಗಿ ಅತ್ತುಬಿಟ್ಟಳು. ಐನೋರ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡಳು ರಾಜಿಯ ಕಣ್ಣೀರಿನ ಶಾಖ ತಗುಲಿ ಐನೋರ ಕೈ ಬಿಸಿಯಾಯಿತು‌. ಇದ್ದ ಎಂಟುವರೆ ಮಂದಿ ಐನೋರ ಮನೆಯೊಳಗೆ ಕಾಲಿಟ್ಟರು ತಮಗೆ ಬೇಕಾದ ಕೋಣೆಗಳನ್ನು ಆರಿಸಿಕೊಂಡರು. ಕುಮಾರ ಮತ್ತವನ ಹೆಂಡತಿ ಒಂದು ಕೋಣೆಯನ್ನು ಆಯ್ಕೆ ಮಾಡಿಕೊಂಡು ತಮ್ಮ ಪಾಲಿಗೆ ಅದೇ ತಾಜ್ಮಹಲ್ ಎಂದು ಭಾವಿಸಿ ಆ ಕೋಣೆಯನ್ನು ಸುತ್ತಿಬಂದು  ಆ ಕೋಣೆಗಿದ್ದ ಬಾಗಿಲ ಚಿಲಕದ ಬಳಿ ನಿಂತು ಚಿಲಕವನ್ನು ಸವರಿ ಇಬ್ಬರು ಭಾವುಕರಾದರು. ಎಷ್ಟೋ ವರುಷಗಳ ನಂತರ ಆ ಮನೆಯ ಒಲೆಗೆ ಬೆಂಕಿಯ ಕಾವು ಸೋಕಿತು. ಹಸನಾದ ಬಾಳೆಯ ಎಲೆಯಲ್ಲಿ ರುಚಿರುಚಿಯಾದ ಊಟ. ಆ ದಿನ ಎಲ್ಲರೂ ಅಂಗಳದಲ್ಲಿ ಕುಳಿತು ಒಟ್ಟಿಗೆ ಊಟ ಮಾಡಿದರು. ಐನೋರ ಮನೆಗೆ ಮುಂಚಿತವಾಗಿಯೇ ಸುಗ್ಗಿ ನುಗ್ಗಿತು.

ಎರಡು ತಿಂಗಳಿನವರೆಗೂ ಬಿಸಿಲಿನಲ್ಲಿ ಬಸವಳಿದು ಧೂಳು ಹಿಡಿದು ನಿಂತಿದ್ದ ಕಾರಿಗೊಂಚೂರು ನೀರು ತೋರಿಸಿ ಸಂತೆಬೀದಿಯ ಕಡೆಯಿಂದ ಚನ್ನಪಟ್ಟಣದ ಕಡೆಗೆ ಕೆಲಸದ ವಿಷಯವಾಗಿ ಹೊರಟು ನಿಂತರು. ಬರಲೇಬೇಕೆಂದು ಹಠ ಮಾಡಿ ಕರೆಸಿಕೊಳ್ಳುತ್ತಿದ್ದ ತಮ್ಮ ಜೂನಿಯರ್ ಲಾಯರ್ ಈ ದಿನದ ಕೇಸನ್ನು ಗೆದ್ದು ಐನೋರಿಗೆ ಸಿಹಿ ತಿನ್ನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದ. ಆಚಾನಕ್ಕಾಗಿ ಸಂತೆ ಬೀದಿಯಲ್ಲಿ ಚೆಲ್ವಿ ಕಾವೇರಿಯನ್ನು ಕಂಕುಳಲ್ಲಿ ತುಂಬಿಸಿಕೊಂಡು ಬಸ್ಸಿಗಾಗಿ ನಿಂತಿದ್ದಳು.
“ಎಲ್ಲಿಗೆ ಚೆಲ್ವಿ ಮನೆಗೆ ಹೋಗುವುದಾದರೆ ಬಾ ನಾನೇ ಬಿಟ್ಟು ಬರ್ತೀನಿ”
“ಇಲ್ಲ ಕಣ್ರಯ್ಯ , ನಾನು ಚನ್ನಪಟ್ಟಣಕ್ಕೆ ಹೋಗ್ತಾ ಇದೀನಿ ನೀವು ಹೋಗಿ ಪರವಾಗಿಲ್ಲ”
” ಹಾಗಾದ್ರೆ ಬಾ ನಾನೂ ಚನ್ನಪಟ್ಟಣಕ್ಕೆ ಹೋಗ್ತಾ ಇರೋದು”ಎಂದರು.
ಚೆಲ್ವಿ ಕೊಂಚ ಯೋಚಿಸಿದಳು. ಅವಳ ಮನಸ್ಯಾಕೋ ಒಲ್ಲೆ ಎನ್ನುತ್ತಿತ್ತು. ಆದರೂ ಐನೋರ ಮಾತಿಗೆ ಕಟ್ಟುಬಿದ್ದು ಕಾರು ಹತ್ತಿದಳು. ದಾರಿಯುವುದಕ್ಕೂ ಬರೀ ಮೌನ ಕಾವೇರಿ ಯಾಕೋ ಕಾರಿಗೆ ಹತ್ತಿದ ಸ್ವಲ್ಪ ಹೊತ್ತಿಗೆ ನಿದ್ದೆ ಹೋದಳು.
“ಚೆಲ್ವಿ ನಾನು ಹೇಳಿದ್ದ ವಿಷಯ ಏನು ಮಾಡಿದೆ” ಎಂದು ಮೌನ ಮುರಿದರು ಐನೋರು.
ಯಾವುದೋ  ಆಲೋಚನೆಯಲ್ಲಿ ಮುಳುಗಿದ್ದ ಚೆಲ್ವಿಗೆ ಐನೋರ ಮಾತು ಬೆಚ್ಚಿಸಿತು‌. ಅರ್ಥವಾಗದೆ ಕುಂತಲ್ಲೇ ನಡುಗಿದಳು.
“ಚೆಲ್ವಿ ನಾನು ಹೇಳಿದ್ದ ವಿಷಯ ಏನು ಮಾಡ್ದೆ ನಿನ್ನ ಡಾಕ್ಯುಮೆಂಟ್ಸ್ ಎಲ್ಲಾ ತಂದ್ಯಾ ? ಎಸ್ ಎಸ್ ಎಲ್ ಸಿ ಪರೀಕ್ಷೆ ಕಟ್ಟುವಿಯಂತೆ”.
” ಹ್ಮು… ಹ್ಮು…ಅದಕ್ಕೆ ಹೋಗ್ತಾ ಇದೀನಿ ಐನೋರ”
ಇವರ ಪ್ರಯಾಣದಲ್ಲಿ ಮತ್ತದೆ ಮೌನ ಆವರಿಸಿಕೊಂಡಿತು. ಬಿಗಿ ಮೌನವನ್ನು ಸ್ವಲ್ಪ ಸಡಲಿಸಿದ್ದು ‘ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ’ ಎಂಬ ಚಲನಚಿತ್ರ ಗೀತೆ.
ಚನ್ನಪಟ್ಟಣದ ಕೆ ಎಸ್ ಆರ್ ಟಿ ಸಿ ಡಿಪೋ ಬಳಿ ಚೆಲ್ವಿ  ಮತ್ತು ಕಾವೇರಿಯನ್ನು ಬಿಟ್ಟು ಐನೋರು ತಮ್ಮ ಕೆಲಸದ ಹಾದಿ ಹಿಡಿದರು.
ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ  ಐನೋರು ಕೋರ್ಟಿನೊಳಗೆ ಬಂದರು. ಆಗಲೇ ವಾದ ವಿವಾದಗಳಿಂದ ಕಟಕಟೆಯಲ್ಲಿ ಕಥಕಳಿ ಶುರುವಾಗಿತ್ತು. ಕೋರ್ಟಿನ ಮೌನವನ್ನು ಸೀಳಿ ಸೆಲ್ವಿsss ಸೆಲ್ವಿsss ಸೆಲ್ವಿsss ಎಂದು ಕೂಗಿದ ಧ್ವನಿಯು ಮಾರ್ದನಿಸಿತು. ಎಡಭಾಗದ ಕಟಕಟೆಯಲ್ಲಿ ಮಗುವಿನ ಜೊತೆಗೆ ಬಂದು ನಿಂತಳು ಚೆಲ್ವಿ. ಐನೋರಿಗೆ ಒಂದು ಕ್ಷಣ ತಮ್ಮ ಕಣ್ಣನ್ನೇ ತಾವು ನಂಬಲಾಗಲಿಲ್ಲ. ಈಗ ನಿಧಾನವಾಗಿ ಅರ್ಥವಾಯಿತು. ಬೇಡವೆಂದರೂ ಅವಳ ಬಾಯಿಂದ ಬರುವ ತಮಿಳು ಪದಗಳು ಸರಿಯಾಗಿ ಕಿವಿ ಕೇಳಿಸದ ಸಿದ್ದಣ್ಣ ಎಲ್ಲರ ಬಳಿ ಇವಳನ್ನು ಚೆಲ್ವಿ ಎಂದಿದ್ದು. ಒಂದಕ್ಕೊಂದು ಕೊಂಡಿ ಬೆಸೆದುಕೊಂಡು ತಲೆಯೊಳಗಿನ ರಾಡಿ ಕದಡಿತು.

ಸೆಲ್ವಿಯ ಕುಟುಂಬದಲ್ಲಿ ಇದ್ದದ್ದು ಮೂರೇ ಜನ. ಸೆಲ್ವಿ, ಅವಳ ಗಂಡ ಮುತ್ತು, ಮಗಳು ಕಾವೇರಿ ಅಷ್ಟೇ. ಕಾಸಿಮೇಡು ಬಿಟ್ಟು ಕರ್ನಾಟಕ ಸೇರಿಕೊಂಡು ವರ್ಷವಾಗಿತ್ತು. ಇಲ್ಲಿ ಮುತ್ತುವಿಗೆ ಯಾವ ಕೆಲಸವೂ ಸಿಗದೇ ಒಪ್ಪತ್ತಿನ ಊಟಕ್ಕೆ ನೀರು ಕುಡಿದು ಮಲಗುತ್ತಿದ್ದ. ತನ್ನನ್ನು ನಂಬಿಕೊಂಡು ಬಂದ ಹೆಂಡತಿಯ ಹಸಿವಿಗೆ ನ್ಯಾಯ ಒದಗಿಸಬೇಕೆಂದು ತಲತಲಾಂತರದಿಂದ ತನ್ನ ತಂದೆ ಮಾಡಿಕೊಂಡು ಬಂದಂತಹ ಡ್ರೈನೇಜ್ ಕ್ಲೀನಿಂಗ್ ಕೆಲಸವನ್ನು ಮಾಡಲು ಶುರು ಮಾಡಿದ. ಅದು ಸೆಲ್ವಿಗೆ ಇಷ್ಟವಿರಲಿಲ್ಲ.
“ನೀವು ಯಾಕೆ ಈ ಕೆಲಸ ಮಾಡುವುದು ನಮ್ಮ ಊರಲ್ಲಿ ಯಾರೂ ಮರ್ಯಾದೆ ಕೊಡ್ತಿಲ್ಲ ಪ್ರತಿಯೊಂದು ವಿಷಯಕ್ಕೂ ಕೀಳಾಗಿ ನೋಡುತ್ತಾರೆ, ಅಂತ ತಾನೇ ನಾವು ಆ ಊರು ಬಿಟ್ಟು ಇಲ್ಲಿಗೆ ಬಂದದ್ದು. ಮುಂದೆ ನಮ್ಮ ಮಗಳ ಭವಿಷ್ಯಕ್ಕೆ ನೀವು ಮಾಡುವ ಕೆಲಸ ತೊಡಕಾಗಬಾರದು ಅಲ್ವಾ”
“ಸೆಲ್ವಿ ನಿನ್ನ ಗಂಡ ಓದಿರೋ ಹತ್ತನೇ ಕ್ಲಾಸಿಗೆ ಎಸಿ ರೂಮಿನಲ್ಲಿ ಕೂರಿಸಿ ಯಾರ್ ತಾನೆ ಕೆಲಸ ಕೊಡ್ತಾರೆ. ನಾನು ಡ್ರೈನೇಜ್ ಕ್ಲೀನಿಂಗ್ ಮಾಡೋದು ನಿನಗೆ ಇಷ್ಟ ಇಲ್ಲದೇ ಇರಬಹುದು ಆದರೆ ಹೊಟ್ಟೆಪಾಡಿಗೆ ನಾನು ಮಾಡಲೇಬೇಕು ಒಂದಂತೂ ಅರ್ಥ ಆಯ್ತು ನಾವು ಎಷ್ಟೇ ದೂರ ಓಡಿಹೋದರು ನಮ್ಮ ಪರಿಸ್ಥಿತಿ ಇದೇ. ಅಲ್ಲಿಯು ಇದೇ ಕೆಲಸ ಇಲ್ಲಿಯೂ ಇದೆ ಕೆಲಸ.
ನಮ್ಮಪ್ಪಾನು ಇದೇ ಕೆಲಸ ಮಾಡಿ ನನ್ನನ್ನು ಇಷ್ಟುದ್ದ ಬೆಳೆಸಿದ್ದಾನೆ‌ ನಿನ್ನ ಕಣ್ಣಿಗದು ಕಕ್ಕಸು ಅನಿಸಬಹುದು ಆದರೆ ನನಗೆ ಅದೇ ಅನ್ನ.. ಅದೇ ಕಾಸು… ಅದೇ ಬದುಕು!…”
” ಸರಿ ಇವತ್ತು ಕೆಲಸ ಮುಗಿಸಿಕೊಂಡು ಬೇಗ ಮನೆಗೆ ಬನ್ನಿ” ಎಂದು ಮರುಮಾತಾಡದೇ ಸಪ್ಪಗಾದಳು.
ರಾತ್ರಿ ಕೆಲಸಕ್ಕೆ ಹೋದ ಮುತ್ತು ಮುಂಜಾನೆಯಾದರೂ ಇನ್ನೂ ಬಂದಿರಲಿಲ್ಲ. ಅದು ತುಂಬಾ ಬಿಜ಼ಿ ರೋಡು.  ಪಕ್ಕದಲ್ಲೊಂದು ದೊಡ್ಡ ಕಟ್ಟಡದ ಕಾಮಗಾರಿ ಮುಗಿದು ಬಣ್ಣ ಹಚ್ಚುವ ಕೆಲಸವೂ ಮುಗಿದಿತ್ತು, ಅದರ ಕೆಲಸದಲ್ಲಿ ಬಂದ ಕಲ್ಲು,ಮಣ್ಣು, ಇಟ್ಟಿಗೆ ಪಕ್ಕದ ರೋಡಿನ ಮ್ಯಾನ್ ಹೋಲಿನಲ್ಲಿ ಕಟ್ಟಿಕೊಂಡು ಅಮೇಧ್ಯ, ಉಚ್ಚೆ, ಮುಸುರೆ, ಮಯ್ನೀರು ಜಿಡ್ಡಿನ ಪಸೆಯೆಲ್ಲ ರಸ್ತೆಗಿಳಿದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಿತ್ತು.ಹಾಗಾಗಿ ಇದರ ಕೆಲಸವನ್ನು ರಾತ್ರಿ ವೇಳೆಯೆ ಮಾಡಬೇಕಾಗಿ ಬಂತು. ಮುತ್ತುವಿನ ಜೊತೆಗೆ ವೆಂಕಟರಾಜು ಕೂಡ ಈ ಕೆಲಸ ವಹಿಸಿಕೊಂಡ.

ಮುಂಜಾನೆ ಬಾಗಿಲಿಗೆ ತಲೆ ಕೊಟ್ಟು ತೂಕಡಿಸುತ್ತಿದ್ದ ಸೆಲ್ವಿಗೆ ಅಳುತ್ತ ಓಡಿ ಬಂದ ವೆಂಕಟರಾಜು -ಮುತ್ತು ಸತ್ತುಹೋದ ವಿಷಯ ತಿಳಿಸಿದ. ಆ ಮಾತು ಕೇಳಿದ ಸೆಲ್ವಿಗೆ ಚೂಪಾದ ಸೂಜಿಯು ಕಿವಿಯೊಳಗೆ ಇಳಿದಷ್ಟು ನೋವಾಯಿತು. ಬೊಬ್ಬೆ ಹೊಡೆದು ಬಾಯಿ ಬಾಯಿ ಬಡಿದುಕೊಂಡು ಅಯ್ಯೋsss ಅಯ್ಯೋsss ಕಡವುಳೇ ಎಂದು ರೋಧಿಸಿದಳು. ರಾತ್ರಿ ಮುತ್ತು ಮತ್ತು ವೆಂಕಟರಾಜು ಇಬ್ಬರೂ ರಿಪೇರಿ ಮಾಡಬೇಕಾದ ಡ್ರೈನೇಜ್ ಬಳಿಗೆ ಬಂದಿದ್ದಾರೆ. ಪ್ರತಿ ಸಲ ವೆಂಕಟರಾಜು ಡ್ರೈನೇಜ್ಗೆ ಇಳಿಯುವ ಮುನ್ನ ಕುಡಿಯುವುದು ಅಭ್ಯಾಸ. ಅಂತೆಯೇ ಆ ದಿನವೂ ಕುಡಿದಿದ್ದಾನೆ. ಇವತ್ತು ಸ್ವಲ್ಪ ಬೇಗ ಕೆಲಸ ಮುಗಿಸಿ ಮನೆಗೆ ಹೋಗಬೇಕು ಎಂದ ಮುತ್ತು; ವೆಂಕಟರಾಜು ಬಳಿ ಹೇಳಿ ಆತ ಪಕ್ಕದ ರೋಡಿನಲ್ಲಿದ್ದ ಟ್ಯಾಂಕಿನಲ್ಲಿ ನೀರು ಹಿಡಿದುಕೊಂಡು ಬರಲು ಹೋಗಿದ್ದಾಗ ತಾನೇ ಮುಂಚಿತವಾಗಿ ಡ್ರೈನೇಜ್ ಒಳಗೆ ಇಳಿದು ಕಟ್ಟಿಕೊಂಡಿದ್ದ ಕಸ, ಮುಸುರೆ, ಕಲ್ಲು, ಮಣ್ಣು ಎಲ್ಲವನ್ನು ಗೋರಿ ಮೇಲಕ್ಕೆ ಎಸೆಯುತ್ತಿದ್ದ. ಮಧ್ಯರಾತ್ರಿ ಒಂದು ಗಂಟೆ ಯಾವುದೋ ಕಾರೊಂದು ಕಸ ಸುರಿಯಲು ಮೇಲೆದ್ದ  ಮುತ್ತುವಿಗೆ ಗುದ್ದಿಕೊಂಡು ಹೊರಟುಹೋಗಿದೆ. ಮುತ್ತು ಕಿರುಚಿಕೊಂಡ ಸದ್ದು ಕೇಳಿ ವೆಂಕಟರಾಜು ಅಲ್ಲಿಗೆ ಓಡಿಬಂದ. ಆ ಕಾರು ಇನ್ನೂ ವೇಗವಾಗಿ ಆ ರಸ್ತೆಯ ತಿರುವಿನಲ್ಲಿ ಕಾಣದಾಯಿತು. ಮುತ್ತುವಿನ ದೇಹ ಡ್ರೈನೇಜ್ ಒಳಗೆ ಬಿದ್ದಿತ್ತು. ವೆಂಕಟರಾಜು ಕೆಳಗಿಳಿದು ನೋಡಿದರೆ ಉಸಿರಾಟವಿರಲಿಲ್ಲ. ಒಂದಷ್ಟು ಸಮುದಾಯದ ನಾಯಕರು ನೊಂದ ಸೆಲ್ವಿಗೊಂದು ದಾರಿ ಮಾಡಿಕೊಡಲು ವೆಂಕಟರಾಜುವಿಗೆ ಸಾಕ್ಷಿ ಹೇಳುವಂತೆ ತಯಾರಿ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೆಲ್ವಿಯಿಂದ ಸಹಿ ಪಡೆದರು. ಐದಾರು ತಿಂಗಳಾದರೂ ಕೋರ್ಟಿನಲ್ಲಿ ಕೇಸ್ ನಿಲ್ಲದೆ ಕುಂಟುತ್ತಲೇ ಇತ್ತು. ನ್ಯಾಯದೇವತೆ ಗಾಂಧಾರಿಯಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾಗಿದ್ದಳು. ಪ್ರತಿಪಕ್ಷದ ವಾದಗಳಿಂದ ವಾಯ್ದೆ ಮೇಲೆ ವಾಯ್ದೆ ಪಡೆದು ಕೇಸನ್ನು ಮುಂದೂಡಲಾಗುತ್ತಿತ್ತು. ಶ್ರೀಮಂತರ ಮಗ ಐನೋರ ಶಿಷ್ಯನನ್ನು ತನ್ನ ಲಾಯರಾಗಿ ನೇಮಿಸಿಕೊಂಡ. ಆ  ಜೂನಿಯರ್ ಲಾಯರಿನ ಪ್ರತಿ ಹೆಜ್ಜೆಗೂ ಐನೋರೇ ದಾರಿ ತೋರಿಸುತ್ತಿದ್ದದ್ದು.

ಮೊದಲಿಗೆ ಮುತ್ತುವಿನ ಹೆಂಡತಿಯನ್ನು ಹೆದರಿಸಿ ಊರು ಬಿಡುವಂತೆ ಮಾಡಲು ಹೇಳಿದ್ದು  ಐನೋರೆ. ನಂತರ ಒಂದಷ್ಟು ಪಾಯಿಂಟ್ ಗಳನ್ನ ನೋಟ್ ಮಾಡಿ ಕಳುಹಿಸಿಕೊಟ್ಟಿದ್ದರು. ಅದರಂತೆಯೇ ಜೂನಿಯರ್ ಲಾಯರ್ ಧಾರ್ಷ್ಟ್ಯತನದಿಂದ ವಾದ ಮಾಡಿ ಸೈ ಎನಿಸಿಕೊಳ್ಳುತ್ತಿದ್ದ. ಮೊದಲನೆಯದಾಗಿ ಪ್ರತ್ಯಕ್ಷ ಸಾಕ್ಷಿಯಾಗಿದ್ದ ವೆಂಕಟರಾಜು ಆ ದಿನ ಕುಡಿದಿದ್ದ ಮತ್ತು ಅವನಿಗೆ ಇದೇ ಕಾರು ಅಂತ ಗುರುತಿಸಲು ಸಾಧ್ಯವಾಗುತ್ತಿಲ್ಲ. ಎರಡನೆಯದು ನನ್ನ ಕಕ್ಷಿದಾರನ ಕಾರು ಆ ದಿನ ಆ ಸಮಯಕ್ಕೆ ಅದೇ ರಸ್ತೆಯಲ್ಲಿ ಹೋಗಿದೆ ಅದನ್ನು ನಾವು ಸುಳ್ಳು ಅಂತ ಹೇಳ್ತಾ ಇಲ್ಲ. ಯಾಕೆಂದರೆ ಅದೇ ರಸ್ತೆಯಲ್ಲಿರುವ ಒಂದು ಗಿರವಿ ಅಂಗಡಿಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇವರು ಹೇಳುವ ರೀತಿ ಮುತ್ತು ಕಾರ್ ಆಕ್ಸಿಡೆಂಟಿನಿಂದ ಸತ್ತಿರೋದಿಲ್ಲ. ಆತ ಒಬ್ಬನೇ ಮ್ಯಾನ್ ಹೋಲಿಗೆ ಇಳಿದು ಅಲ್ಲಿನ ವಿಷಾನಿಲ ಸೇವಿಸಿ ಮೃತಪಟ್ಟಿರುವುದನ್ನು ಈ ಮೆಡಿಕಲ್ ರಿಪೋರ್ಟ್ಗಳೇ ಹೇಳ್ತಾ ಇದ್ದಾವೆ. ಒಂದು ವಾರದಿಂದಲೂ ಪಕ್ಕದ ರಸ್ತೆಯಲ್ಲಿ ಕಾಮಗಾರಿಯಲ್ಲಿದ್ದ ಕಟ್ಟಡಗಳ ಕಲ್ಲು, ಮಣ್ಣು, ಇಟ್ಟಿಗೆ ಅಲ್ಲಿ ಕಟ್ಟಿಕೊಂಡಿದ್ದರಿಂದ ಈತ ಬಿದ್ದಾಗ ಮೂಗು, ಹಣೆ,ಬಾಯಿಗೆ ಬಲವಾಗಿ ಪೆಟ್ಟು ಬಿದ್ದು ರಕ್ತ ಸ್ರಾವವಾಗಿದೆ. ಬಾಡಿಯನ್ನು ಮೇಲೆ ತೆಗೆಯಲು ಅಸಾಧ್ಯವೆಂಬ ಸ್ಥಿತಿಯಲ್ಲಿದ್ದ ಕಾರಣ ಆಸ್ಪತ್ರೆಯ ಸಿಬ್ಬಂದಿಗಳು ಡಾಕ್ಟರ್ ಅಶೋಕ್ ಶೆಟ್ಟಿ ಅವರ ಸೂಚನೆಯ ಮೇರೆಗೆ ದೇಹವನ್ನು ಮ್ಯಾನ್ ಹೋಲ್ ನಿಂದ ಹೊರಗೆ ತೆಗೆಯುವಾಗ ಸೊಂಟದ ಭಾಗ ಮುರಿದಿದೆ. ಸೋ ನನ್ನ ಕಕ್ಷಿದಾರ ನಿರಪರಾಧಿ, ಮುತ್ತುವಿನ ಸಾವಿಗೆ ಅವನ ನಿರ್ಲಕ್ಷ್ಯತನವೇ ಕಾರಣ” ಎಂದು  ಜೂನಿಯರ್ ಲಾಯರ್ ಜೋರಾಗಿಯೇ ವಾದ ಮಾಡಿ ತನ್ನ ಮಾತು ಮುಗಿಸಿದ.
ಇವಿಷ್ಟೂ ಕುತಂತ್ರಗಳನ್ನು ರೂಪಿಸಿದ್ದು ಐನೋರೇ ವಿಪರ್ಯಾಸವೆಂದರೆ ಐನೋರು ಆಸ್ಪತ್ರೆಯಲ್ಲಿದ್ದಾಗ ಕೇಸ್ ಸ್ಟಡಿ ಮಾಡಿ ಈ ಪಾಯಿಂಟ್ಗಳನ್ನು ಬರೆದು ಕಳುಹಿಸುವ ಪತ್ರಗಳನ್ನೆಲ್ಲ ಸೆಲ್ವಿ ತಾನೇ ತನ್ನ ಕೈಯಾರೆ ಪ್ರತಿದಿನ ಪೋಸ್ಟ್ ಮಾಡಿ ಬರುತ್ತಿದ್ದಳು. “ದುಡ್ಡಿಗೋಸ್ಕರ ಈ ವೆಂಕಟರಾಜು ಮತ್ತು ಆ ಸಂಘದವರು ಸೇರಿಕೊಂಡು ನನ್ನ ಕಕ್ಷಿದಾರರ ಬಳಿ ಹಣ ಕೀಳಲು ಮಾಡುತ್ತಿರುವ ನಾಟಕ. ಈಕೆ ತನ್ನ ಗಂಡನ ಸಾವನ್ನ ಬಂಡವಾಳವಾಗಿಟ್ಟುಕೊಂಡು ವ್ಯಾಪಾರ ಮಾಡ್ತಾ ಇದ್ದಾಳೆ. ನನ್ನ ಕಕ್ಷಿದಾರ ಮನಸ್ಸು ಮಾಡಿದ್ರೆ ಇವರ ಮೇಲೆ ಕೇಸ್ ಹಾಕಬಹುದು ಆದರೆ ಅವರು ಹಾಗೆ ಮಾಡಲ್ಲ. ಯಾಕೆ ಹೇಳಿ? ಯಾಕಂದ್ರೆ ಅವರಲ್ಲಿನ್ನು ಮಾನವೀಯತೆ ಜೀವಂತವಾಗಿದೆ!” ಜೂನಿಯರ್ ಲಾಯರ್ ನ ವಾದಕ್ಕೆ ಒಂದಷ್ಟು ಜನ ಕೈ ತಟ್ಟಿದರು.
ಸೆಲ್ವಿಯ ಅಂತಃಕರಣಕ್ಕೆ ಬಹಳ ನೋವಾಯ್ತು. ದುಃಖ ತಡೆಯಲಾಗದೆ ಕಟಕಟೆಯಲ್ಲಿಯೇ ಜೋರಾಗಿ ಅಳಲು ಶುರು ಮಾಡಿದಳು. ಅವಳನ್ನು ನೋಡಿ ಕಾವೇರಿಯು ರಚ್ಚೆ ಹಿಡಿದಳು. ನ್ಯಾಯಾಧೀಶರು ಆಕೆಯನ್ನು ಹೊರಗೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳಲು ಆದೇಶ ಹೊರಡಿಸಿದರು. ಸರಿಯಾದ ಸಾಕ್ಷಿಗಳಿಲ್ಲದ ಕಾರಣ ಕೇಸನ್ನು ಅಮಾನತ್ತುಗೊಳಿಸಲಾಯಿತು.

ಗೆದ್ದ ಸಂಭ್ರಮದಲ್ಲಿ ಎಲ್ಲರೂ ಸಿಹಿ ಹಂಚಿ ಬೀಗುತ್ತಿದ್ದರೆ ಐನೋರು ಬಾಯಿಗಿಟ್ಟ ಸಿಹಿಯನ್ನು ಉಗಿದು ಹೊರಗಡೆ ಓಡಿಬಂದು ಸೆಲ್ವಿಯನ್ನು ಹುಡುಕಿದರು. ಆಕೆ ಎಲ್ಲಿಯೂ ಇರಲಿಲ್ಲ. ಕೂಡಲೇ ಕಾರ್ ತೆಗೆದುಕೊಂಡು ಬಸ್ ಸ್ಟ್ಯಾಂಡಿನಲ್ಲಿ ಹುಡುಕಾಡಿದರು. ಆಕೆ ಅಲ್ಲಿಯೂ ಇರಲಿಲ್ಲ. ಹೊತ್ತು ಪಡಿ ತಿರುಗಿ ಆಕಾಶ ಕೆಂಪಾಗತೊಡಗಿದರು ಸೆಲ್ವಿ ಮಾತ್ರ ಪತ್ತೆ ಇಲ್ಲ. ಸುತ್ತಲಿನ ವಾತಾವರಣವನ್ನು ರಾತ್ರಿಯ ಕತ್ತಲು ಆವರಿಸತೊಡಗಿತು. ಐನೋರು ತೋಟದ ಮನೆಗೆ ಬಂದು “ಸಿದ್ದಣ್ಣ ಸೆಲ್ವಿ ಬಂದ್ಲಾ” ಎಂದು ಕೇಳಿದರು‌. ಸಿದ್ದಣ್ಣ “ಇಲ್ಲ ಕಣ್ರಯ್ಯ” ಅಂದ. “ಸರಿ ಸೆಲ್ವಿ ಬಂದ್ರೆ ನನಗೇಳು ಎಂದು ಒಳಗೆ ಹೋದರು. ಮಧ್ಯರಾತ್ರಿ ಸಮಯ ಒಂದು ಗಂಟೆ ಆಗಿತ್ತು ಮನೆಯಲ್ಲಿ ಎಲ್ಲರೂ ನಿದ್ದೆ ಹೋಗಿದ್ದರು ಸೆಲ್ವಿ ಇನ್ನೂ ಮನೆಗೆ ಬಂದಿರಲಿಲ್ಲ. ಐನೋರಿಗಿದ್ದ ಆತಂಕ ಅಧಿಕವಾಗುತ್ತಲೆ ಇತ್ತು. ನಿದ್ದೆ ಮಾಡದೆ ಮನೆಯ ಬಾಗಿಲಿನ ಒಳಗೆ ಕುರ್ಚಿ ಹಾಕಿಕೊಂಡು ಹೊರಗಿನ ಗೇಟ್ ನೋಡುತ್ತಾ ಕುಳಿತಿದ್ದರು.
ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದೆ. ಐನೋರ ಕಣ್ಣಿನ ರೆಪ್ಪೆಗಳು ಬಲವಂತವಾಗಿ ನಿದ್ದೆಗೆ ಎಳೆದು ಹತ್ತು ನಿಮಿಷ ನಿದ್ದೆ ಹೋಗಿರಬಹುದೇನೋ ಅಷ್ಟೇ ತಕ್ಷಣ ಕಣ್ಣು ಬಿಟ್ಟ ನೋಡಿದರೆ ಆ ಜೋರು ಮಳೆಯಲ್ಲಿ ಸೆಲ್ವಿ  ಒಳಗೆ ಬರದೆ ಕಾವೇರಿಯ ಜೊತೆಗೆ ಗೇಟಿನ ಬಳಿಯೇ ನಿಂತಿದ್ದಾಳೆ. ಅವಳನ್ನು ನೋಡಿ ಐನೋರಿಗೆ ಭಯವಾಯಿತು. ಓಡಿ ಹೋಗಿ ಆಕೆಯನ್ನು ಕರೆದುಕೊಂಡು ಮನೆಗೆ ಬಂದರು. ಸೆಲ್ವಿ ಮನೆಯ ಹೊಸ್ತಿಲಿನಿಂದ ಈಚೆಯೇ ಕುಳಿತುಕೊಂಡಳು. “ಎಲ್ಲೋಗಿದ್ದೆ ಸೆಲ್ವಿ ಈ ಮಗುನಾ ಮಳೆಯಲ್ಲಿ ನೆನೆಸ್ತಾ ಇದ್ಯಲ್ಲ  ಬುದ್ಧಿ ಬೇಡ್ವಾ ನಿನಗೆ”
“ಐನೋರೆ ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕು ಕುತ್ಕೊಳ್ರಯ್ಯ” ಎಂದಳು.
ಐನೋರು ಸೆಲ್ವಿಗೊಂದು ಟವೆಲ್ ನೀಡಿ ಹೊಸ್ತಿಲಿನ ಒಳಗೆ ಇಟ್ಟಿದ್ದ ಕುರ್ಚಿಯಲ್ಲಿ ಕುಳಿತುಕೊಂಡರು.
“ಐನೋರೆ ನಿಮಗೆ ನಮ್ಮ ಕಷ್ಟ ಅರ್ಥ ಆಗದೇ ಇರಬಹುದು ಆದರೂ ಹೇಳ್ತೀನಿ…ನಾವು ಇವತ್ತು ರಸ್ತೆಯಲ್ಲಿ ಓಡಾಡ್ತಾ ಇದ್ದೀವಿ ಅಂದ್ರೆ ಅದರ ಹಿಂದೆ ಎಷ್ಟೋ ಜನರು ಅದೇ ರಸ್ತೆಯಲ್ಲಿ ರಕ್ತ ಹರಿಸಿದ್ದಾರೆ. ನಾವು ಇವತ್ತು ಅನ್ನ ತಿಂತಾ ಇದ್ದೀವಿ ಅಂದ್ರೆ ಅದರ ಹಿಂದೆ ಎಷ್ಟೋ ಜನರು ಹಸಿವಿನಿಂದಲೇ ನರಳಿದ ದಿನಗಳಿವೆ. ಇವತ್ತು ನಾವು ನೆಮ್ಮದಿಯಾಗಿ ಉಸಿರಾಡೋಕೆ ಎಷ್ಟೋ ವರ್ಷಗಳಿಂದೆ ನಮ್ಮ ಜನರು ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ನಿಮಗಿರುವ ಪ್ರತಿಯೊಂದು ಸೌಕರ್ಯದ ಹಿಂದೆ ನಿಮ್ಮ ತಂದೆ ತಾಯಿಯ ಶ್ರಮ ಇರಬಹುದು ಆದರೆ ನಮಗಿರುವ ಸಣ್ಣ ಪುಟ್ಟ ಸೌಕರ್ಯದ ಹಿಂದೆ ಯುದ್ಧ ಯುದ್ಧಗಳೇ ನಡೆದು ಹೋಗಿವೆ. ಇತಿಹಾಸದಲ್ಲಿ ಯಾವುದೂ ದಾಖಲಾಗದೆ ಎಲ್ಲವೂ ಅಸ್ಪಷ್ಟವಾಗಿರಬಹುದು ಆದರೆ ಈಗಿನ ಜನಸಾಮಾನ್ಯರ ಬದುಕು ನೋಡಿದ್ರೆ ಅರ್ಥವಾಗುತ್ತೆ. ನಾವು ಪ್ರತಿಯೊಂದನ್ನು ಕೇಳಿsss ಕೇಳಿsss ಪಡೆದುಕೊಳ್ಳಬೇಕು.  ನಮಗೆ ಸಿಕ್ಕಿರುವ ಮೂಲಭೂತ ಸೌಕರ್ಯಗಳು ಕೂಡ ಹೋರಾಟಗಳಿಂದಲೇ ಸಿಕ್ಕಿವೆ.  ನಿರಾಯುಧನ ಮೇಲೆ ಯುದ್ಧ ಮಾಡುವುದು ಧರ್ಮವಲ್ಲ ಅಂತಾರೆ ಆದರೆ ಈ ವ್ಯವಸ್ಥೆ ಏನ್ ಮಾಡಿದೆ? ಕಾಲಕಾಲಕ್ಕೂ ದುಡ್ಡಿರುವವನು ಬಡವರ ಮೇಲೆ ದರ್ಪ ಮೆರೆಯುತ್ತಲೆ ಬಂದಿದ್ದಾನೆ. ಐನೋರೇ ಇಲ್ಲಿರೋ ಎಷ್ಟೋ ಜನ ತಮ್ಮ ಜೊತೆ ಬದುಕುತ್ತಿರುವವರನ್ನು ಕನಿಷ್ಠ ಪಕ್ಷ ಮನುಷ್ಯರನ್ನಾಗಿಯು ಸಹ ಪರಿಗಣಿಸುತ್ತಿಲ್ಲ.

ಇವತ್ತು ನನ್ನ ಗಂಡನ ಸಾವಿಗೆ ನ್ಯಾಯ ಸಿಗುತ್ತೆ ಅಂತ ಕೋರ್ಟ್ ಮೆಟ್ಟಲೇರಿದ್ದೆ ಆದರೆ ಆ ನ್ಯಾಯಾನ ದುಡ್ಡಿರೋ ಜನ ಮೊದಲೇ ಖರೀದಿಸಿಬಿಟ್ಟಿದ್ದರು. ಸಾಕ್ಷಿಗಳೆಲ್ಲ ಅವಶೇಷ ಆಗೋಗಲಿ ಎಂದು ನೆಕ್ಸ್ಟ್ ಇಯರಿಂಗ್ ನೆಕ್ಸ್ಟ್ ಇಯರಿಂಗ್ ಅಂತ ಹೇಳಿ ಆರು ತಿಂಗಳು ಕೇಸನ್ನು ಮುಂದೆ ತಳ್ಳಿದ್ರು. ಕುಪ್ಪೆ ಕುಪ್ಪೆಯಾಗಿ ಪೇಪರ್ ತುಂಬಿ; ಅದರಲ್ಲಿರುವ ಸಾಕ್ಷಿಯೂ ಕೂಡ ಮುಚ್ಚಿಹೋಯಿತು. ಸತ್ಯ ಅಸತ್ಯವಾಯಿತು. ಈಗದು ಎಷ್ಟೇ ಹುಡುಕಿದರೂ ಸಿಕ್ತಾ ಇಲ್ಲ. ನಮ್ಮಂತ ಬಡವರ ಪಾಲಿಗೆ ಕೋರ್ಟು, ಕೇಸೂ ಅನ್ನೋದು ಡಯಾಬಿಟಿಸ್, ಸ್ಟ್ರೋಕ್ ತರ ವಾಸಿಯಾಗದೇ ಇರೋ ಖಾಯಿಲೆ. ಇವತ್ತು ಕೋರ್ಟಿನಲ್ಲಿದ್ದ ಜನರೆಲ್ಲ ನನ್ನ ಗಂಡನ ಸಾವು ಆಕ್ಸಿಡೆಂಟ್ ಅಲ್ಲ ಎಂದು ಸಾಬೀತುಪಡಿಸಿದಾಕ್ಷಣ ನೆಮ್ಮದಿಯಾಗಿ ನಿಟ್ಟುಸಿರು ಬಿಟ್ಟರು, ಸಿಹಿ ಹಂಚಿ ಸಂಭ್ರಮಿಸಿದರು, ಕೇಕೇ ಹಾಕಿ ಹಸ್ತ ಲಾಘವಿಸಿದರು. ಅವರ್ಯಾರಿಗೂ ತಮ್ಮ ಜೊತೆ ಬದುಕುತ್ತಿದ್ದ ಒಬ್ಬ ವ್ಯಕ್ತಿ ಮ್ಯಾನ್ ಹೋಲಿನಲ್ಲಿ ಉಸಿರುಗಟ್ಟಿ ಸತ್ತ ಅನ್ನೋದು ಸಮಸ್ಯೆನೇ ಅಲ್ಲ. ನೋಡಿ ಐನೋರ ವಿಪರ್ಯಾಸ ಎಂದರೆ ಅದಕ್ಕೆ ಹೆಸರನ್ನೂ ಕೂಡ ಮ್ಯಾನ್ ಹೋಲ್ ಅಂತಲೇ ಇಟ್ಟಿದ್ದಾರೆ. ಇದು ಯಾವ ಮನುಷ್ಯನ ಘನತೆ ಗೌರವಕ್ಕೂ ಧಕ್ಕೆಯುಂಟು ಮಾಡ್ತಾ ಇಲ್ಲ. ನಾನು ಕೇಸ್ ಹಾಕಲು ಒಪ್ಪಿಕೊಂಡಿದ್ದು ನನಗೇನೋ ಜೀವನಾಂಶ ಸಿಗುತ್ತೆ, ಹಣ ಸಿಗುತ್ತೆ ಅಂತಲ್ಲ. ನನಗಾಗಿರುವ ನಷ್ಟ ಮುಂದೆ ಬೇರೆ ಯಾರಿಗೂ ಆಗದೇ ಇರಲಿ ಅಂತ. ಆದರೆ ನನ್ನನ್ನ  ಕೋರ್ಟಲ್ಲಿ ಆ ಲಾಯರ್ …..” ಬಿಕ್ಕಳಿಸಿ ಬಿಕ್ಕಳಿಸಿ ಅತ್ತಳು.
“ವಿಜ್ಞಾನ ಎಷ್ಟೆಲ್ಲ ಮುಂದುವರೆದಿದೆ ಆದರೆ ಏನು ಪ್ರಯೋಜನ ಐನೋರೆ, ಇವತ್ತು ಮನುಷ್ಯ ಚಂದ್ರಗ್ರಹ ಮಂಗಳಗ್ರಹದ ಮೇಲೆಲ್ಲಾ ಕಾಲಿಡುತ್ತಿದ್ದಾನೆ. ಆದರೆ ಮ್ಯಾನ್ ಹೋಲಿಗೆ ಮಾತ್ರ ಇನ್ನೂ ಮನುಷ್ಯಾನೇ ಇಳಿಯುತ್ತಿದ್ದಾನೆ” ಎಂದು ಮತ್ತೂ ಬಿಕ್ಕಳಿಸಿ ಅತ್ತಳು. ಆ ಕ್ಷಣಕ್ಕೆ ತನ್ನ ಗಂಡನ ದೇಹ ಕಣ್ಮುಂದೆ ಬಂದಿತು. ಮೈತುಂಬ ಕೊಳಕು ಮೆತ್ತಿಕೊಂಡು ಹಣೆ, ಮೂಗು, ತುಟಿಯಲ್ಲ ಹೊಡೆದು ರಕ್ತ ಹೆಪ್ಪುಗಟ್ಟಿ. ಕಣ್ಣು ಮತ್ತು ಬಾಯಿಯ ತುಂಬಾ ಮರಳು, ಕಸ ತುಂಬಿಕೊಂಡು. ಆಕಾರವಿಲ್ಲದವರಂತೆ ಬಿದ್ದಿದ್ದ ದೇಹ ನೆನಪಾಯಿತು. ಐನೋರಿಗೆ ಮಾತುಗಳಿರಲಿಲ್ಲ.ಅವರಿಗೆ ಗೊತ್ತಿಲ್ಲದ ಹಾಗೆ ತಮ್ಮ ಕಣ್ಣೀರು ಕೆನ್ನೆ ಸವರಿತ್ತು. ಸೆಲ್ವಿಯನ್ನು ಸಮಾಧಾನ ಮಾಡಿ ರೂಮಿಗೆ ಕಳುಹಿಸಿದರು. ತಾವು ಮಾಡಿದ ತಪ್ಪಿಗೆ ಪಶ್ಚಾತಾಪಪಟ್ಟರು. ತಮ್ಮ ರೂಮಿಗೆ ಬಂದು ಸಿಕ್ಕಸಿಕ್ಕಿದ್ದನ್ನೆಲ್ಲಾ ಹೊಡೆದು ಹಾಕಿದರು. ರೂಮಿನ ತುಂಬ ಪತ್ರಗಳೆಲ್ಲ ಹರಡಿಕೊಂಡವು. ಆ ಪತ್ರಗಳ ಮೇಲೆಯೆ ಐನೋರು ನಿದ್ರೆ ಹೋದರು.

ತಾರಾ ಸದಾ ಹೇಳುತ್ತಿದ್ದ ಮಾತೊಂದು ನೆನಪಾಯಿತು. ಯು ಆರ್ ಎ ಪರ್ಸನ್ ಊ ಸ್ಟ್ರಗ್ಲಿಂಗ್ ಇನ್ ಎ ಹೋಲ್! ನೀನು ಗುರಿ ಇಲ್ಲದೆ ಅಲೆದಾಡುತ್ತಿರುವ ವ್ಯಕ್ತಿ ನಿನ್ನಂತಯೆ ಈ ಸಮಾಜದಲ್ಲಿ ಬದಲಾವಣೆ ಬಯಸುವ ಎಷ್ಟೋ ಜನರು ಬಿಡಿಸಲಾಗದ ಕಗ್ಗಂಟಿನೊಳಗೆ ಸಿಲುಕಿ ಈ ವ್ಯವಸ್ಥೆ ಎಂಬ ರಂದ್ರದಿಂದ ಹೊರಬರಲು ಹೆಣಗಾಡುತ್ತಿದ್ದಾರೆ ಎಂದಿದ್ದಳು. ಆ ಮಾತಿನಿಂದ ತಲೆಯೊಳಗಿನ ದ್ವಂದ್ವವು   ದ್ವಿಗುಣವಾಗಿ ಗುಣಮುಖವಾಗದ ಖಿನ್ನತೆಯನ್ನು ಉಂಟು ಮಾಡಿತು. ಬಿದ್ದಿದ್ದ ಪೇಪರಿನೊಳಗೆ ಸಿದ್ದಣ್ಣನ ತಂದೆ ತನ್ನ ಹೆಂಡತಿಯ ಆಸ್ಪತ್ರೆಯ ಖರ್ಚಿಗೆ ಮೂನ್ನೂರು ರೂಪಾಯಿ ಸಾಲ ಪಡೆದು ಇಡೀ ಆಸ್ತಿಯನ್ನು ಐನೋರ ತಂದೆಗೆ ಬರೆದುಕೊಟ್ಟ ಪತ್ರವೂ ಇತ್ತು.  ದಾರಿಯೇ ತೋಚದೆ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ನಿದ್ದೆ ಬಾರದೇ ಕುಳಿತಿದ್ದ ಸೆಲ್ವಿಗೆ ಹಿತ್ತಲಿನ ಹೊಂಗೆಮರದಲ್ಲಿ ಕಾವೇರಿಗಾಗಿ ಕಟ್ಟಿದ್ದ ಉಯ್ಯಾಲೇ ಗಾಳಿಗೆ ತೊಯ್ದಾಡುತ್ತಿರುವುದು ಕಾಣಿಸಿತು.

ಶಿವಾಗ್
ಮೊಬೈಲ್ : 9739998917
ಇಮೇಲ್ : shivaag93@gmail.com

Related post

Leave a Reply

Your email address will not be published. Required fields are marked *