ಭವಬಂಧನವೋ.. ಸಂಸಾರ ಬಂಧನವೋ ?

ಶ್ರೀನಾಥನ ತಲೆಯಲ್ಲಿ ಒಂದೇ ಸಮನೇ ತನ್ನ ತಾಯಿಯ ಮಾತು ಕೊರೆಯುತ್ತಿತ್ತು. ತಂದೆ-ತಾಯಿಯರ ಮಾತು ದೇವರ ನುಡಿಗಳಂತೆ ಎಂಬುದು ಹಿರಿಯರ ನುಡಿ. ಅದು ಸರಿ ಎನ್ನೋಣ. ಆದರೆ ಶ್ರೀನಾಥನ ಬಗ್ಗೆ ಇವನ ಅಮ್ಮ ಮಾತಾಡುವ ಮಾತುಗಳು ಶ್ರೀನಾಥನ ನಡತೆಯನ್ನು ತಪ್ಪಿಸುವಂತಿತ್ತು. ಹೀಗಿದ್ದಾಗ ಅಮ್ಮನ ಮಾತು ದೇವರ ಮಾತು ಹೇಗಾದೀತು?

ಅಪ್ಪನಂತೂ ಹೆಚ್ಚಿಗೆ ಮಾತಾಡೊಲ್ಲ. ತನ್ನ ಆಫೀಸ್ ಕೆಲಸವಾಯ್ತು, ಸಂಜೆಯಾದರೆ ಕ್ಲಬ್‍ನಲ್ಲಿ ಇಸ್ಪೀಟ್ ಆಟವಾಯ್ತು.

ಆದರೆ ಶ್ರೀನಾಥನ ಅಮ್ಮನಿಗೆ ಪ್ರತಿಕ್ಷಣವೂ ಇವನ ನಡವಳಿಕೆಯ ಮೇಲೆಯೇ ಕಣ್ಣು. ಹಾಗಂತ ಶ್ರೀನಾಥ ದಡ್ಡನೇನಲ್ಲ, ತಿಳುವಳಿಕಸ್ತನಲ್ಲ ಎಂದೂ ಅಲ್ಲ. ಅತಿ ಬುದ್ಧಿವಂತ. ಯಾರ ಸಹವಾಸಕ್ಕೂ ಹೋಗದೇ ತಾನಾಯ್ತು ತನ್ನ ಓದಾಯ್ತು ಎಂದಿರುತ್ತಿದ್ದ. ಅಷ್ಟಕ್ಕೆ ಸುಮ್ಮನಿದ್ದಿದ್ದರೆ ಇವನ ಅಮ್ಮನಿಗೆ ಎಳ್ಳಷ್ಟು ಆತಂಕವಿರುತ್ತಿರಲಿಲ್ಲ. ಆದರೆ ಸಮಸ್ಯೆ ಇದ್ದದ್ದು ಶ್ರೀನಾಥನ ಮತ್ತೊಂದು ಅಭ್ಯಾಸದ ಬಗ್ಗೆ.

ತಮಗಿರುವುದು ಒಬ್ಬನೇ ಮಗ. ಒಬ್ಬನೇ ಮಗಳು! ಮಗಳು ಹೇಗೂ ಕುಲಕ್ಕೆ ಹೊರಗು! ಮದುವೆ ಮಾಡಿದರೆ ಆಯ್ತು. ಅವರ ಅತ್ತೆ ಮನೆಯಲ್ಲಿ ಮಗಳು ಹೊಂದಿಕೊಂಡು ಹೋದರಾಯ್ತು. ಆದರೆ ತಮ್ಮ ವಂಶವನ್ನು ಉದ್ಧಾರ ಮಾಡಬೇಕಾಗಿರೋದು ಈ ಶ್ರೀನಾಥನೇ ಅಲ್ವಾ? ಏಕೈಕ ಪುತ್ರ ಹೀಗೆ ತಪ್ಪು ದಾರಿ ತುಳಿದರೆ ಸಹಿಸುವುದಾದರೂ ಹೇಗೆ?

ದಿನ ಬೆಳಗಾದರೆ ಶ್ರೀನಾಥನ ಅಮ್ಮನಿಗೆ ಇವನನ್ನು ತಿದ್ದುವುದೇ ಕೆಲಸವಾಗಿತ್ತು. ತನಗೆ ಇಷ್ಟವಿಲ್ಲದ ಕೆಲಸಕ್ಕೆ ಕೈ ಹಾಕಿರುವ ತನ್ನ ಮಗನ ಮನಃ ಪರಿವರ್ತನೆ ಮಾಡುವುದೇ ಈಕೆಗೆ ದೊಡ್ಡ ಕೆಲಸವಾಗಿ ಹೋಗಿತ್ತು.

ಅಪ್ಪನಂತೂ ಏನನ್ನೂ ಕಿವಿಯ ಮೇಲೆ ಹಾಕಿಕೊಳ್ಳದೇ ಇರುತ್ತಿದ್ದರು. ಮೊದಲಿಂದ ಈ ಮನುಷ್ಯ ಹೀಗೆ. ತನ್ನ ಸಂಸಾರದ ಆಗು-ಹೋಗುಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಎಲ್ಲವನ್ನೂ ನಿಭಾಯಿಸುತ್ತಾ ಬಂದವಳು ಅಮ್ಮನೇ. ಹಾಗಾಗಿ ಈ ಮಗನ ಪೂರ್ಣ ಜವಾಬ್ದಾರಿಯು ಅಮ್ಮನ ಮೇಲೇ ಬಿದ್ದಿತ್ತು. ಆದಕಾರಣ ಆಗಾಗ ಶ್ರೀನಾಥನು ತನ್ನಮ್ಮನ ಕೊರೆತಕ್ಕೆ ಸಿಕ್ಕಿ ಪಾತಾಳ ಸೇರುತ್ತಿದ್ದ.

ಅಷ್ಟಕ್ಕೂ ಶ್ರೀನಾಥನ ಆ ಮತ್ತೊಂದು ಅಭ್ಯಾಸವೇನು? ಮಾಡಬಾರದ ಯಾವ ಕೆಲಸವನ್ನು ಮಾಡುತ್ತಿದ್ದ ಎಂಬ ಬಗ್ಗೆ ಕುತೂಹಲ ಉಂಟಾಗುವುದು ಸಹಜ ಅಲ್ವೇ? ಶ್ರೀನಾಥನಿಗೆ ಓದುವುದರಲ್ಲಿ ಇದ್ದ ಆಸಕ್ತಿಯಷ್ಟೇ ಆಸಕ್ತಿ ಇದ್ದದ್ದು ರಾಮಕೃಷ್ಣ ಆಶ್ರಮ ಹಾಗೂ ವಿವೇಕಾನಂದರ ಜೀವನದ ಬಗ್ಗೆ. ಹಾಗಾಗಿ ಮಠದ ಸಂಪರ್ಕ ಹೆಚ್ಚಿತ್ತು. ಬೆಳಗ್ಗೆ ಯೋಗ-ಪ್ರಣಾಯಾಮ-ಧ್ಯಾನಗಳಲ್ಲೂ, ಸಂಜೆ ಮತ್ತೆ ಭಜನೆ-ಧ್ಯಾನ-ಪ್ರವಚನಗಳಲ್ಲೂ ಭಾಗಿಯಾಗುತ್ತಿದ್ದ. ತನ್ನ ಓದಿಗೆ ಸ್ವಲ್ಪವೂ ಕುಂದು ಮಾಡಿಕೊಳ್ಳದೇ, ಕಾಲೇಜಿಗೆ ತಪ್ಪದೇ ಹೋಗುತ್ತಾ ಎಲ್ಲಾ ಶಿಕ್ಷಕರಿಗೂ ಪ್ರಿಯ ಶಿಷ್ಯನಾಗಿ ಓದಲ್ಲಿ ಸೈ ಎನಿಸಿಕೊಂಡು ಎಲ್ಲರದರಲ್ಲೂ ಮುಂದಿದ್ದ ಈ ಶ್ರೀನಾಥ.

ಬಹುಶಃ ಮಗನಲ್ಲಿ ಏನೂ ತೊಂದರೆ ಇಲ್ಲದಿದ್ದರೂ ಆಕಾಶವೇ ತನ್ನ ತಲೆಯ ಮೇಲೆ ಬಿದ್ದಂತೆ ಶ್ರೀನಾಥನ ಅಮ್ಮ ಇದ್ದಾರೆಂಬುದೇ ಇಲ್ಲಿ ಪ್ರಶ್ನಾರ್ಥಕ?

ವಂಶೋದ್ಧಾರಕ ಇವನೇ, ಇವನಿಂದಲೇ ತಮ್ಮ ವಂಶ ಉದ್ಧಾರವಾಗಬೇಕು. ಆಶ್ರಮದ ಸಹವಾಸಕ್ಕೆ ಬಿದ್ದ ಮಗ ಎಲ್ಲಿ ತಮ್ಮಿಂದ ಕೈಜಾರಿ ಹೋಗುತ್ತಾನೋ. ಮದುವೆಯಾಗದೇ ಸನ್ಯಾಸಿಯಂತೆಯೇ ಇದ್ದು ಬಿಟ್ಟರೆ! ಮೊಮ್ಮಕ್ಕಳ ಕನಸೆಲ್ಲಿ! ಆ ಮಾರ್ಗವನ್ನು ಮೊದಲು ಬದಲಿಸಬೇಕು. ಎಲ್ಲಾ ಕಾಲೇಜು ವಿದ್ಯಾರ್ಥಿಗಳಂತೆ ಬೈಕು ಬೇಕೆಂಬ ಕೋರಿಕೆ ಮುಂದಿಟ್ಟರೂ ಪರವಾಗಿಲ್ಲಾ! ಮಾಲೂ-ಚಾಟೂಗಳ ಎಡತಾಕುವಿಕೆ ಇಲ್ಲ. ಆಗಾಗ ಟ್ರಿಪ್ಪು-ಫಿಲ್ಮ್ ಗಳೆಂದು ಎಂಜಾಯ್ ಕೂಡ ಮಾಡದ ಮಗನನ್ನು ನೋಡುತ್ತಾ ಚಿಂತಾಕ್ರಾಂತಳಾಗಿದ್ದಾಳೆ. ಹೀಗಿದ್ದ ತನ್ನ ಮಗನ ಮನಸ್ಸನ್ನು ಪರಿವರ್ತಿಸಿ ಒಂದು ಒಳ್ಳೆಯ ಒಂದು ಹುಡುಗಿಯನ್ನು ಕಟ್ಟಿ ಬಿಡಬೇಕು. ಎಲ್ಲರಂತೆ ಇವನೂ ಸಂಸಾರಿಯಾಗಬೇಕು. ತಮ್ಮ ವಂಶದ ಕುಡಿಗೆ ಕಾರಣನಾಗಬೇಕು. ಎಂಬುದೇ ಶ್ರೀನಾಥನ ತಾಯಿಯ ಆಶಯ,

ಅದಕ್ಕಾಗಿಯೇ ದಿನವೂ ಇಷ್ಟೆಲ್ಲಾ ಪ್ರಲಾಪ!

ದಿನ ಕಳೆದಂತೆ ಅಕ್ಕ ಶ್ರೀಷಾಳಿಗೂ ಮದುವೆಯಾಯ್ತು. ಗಂಡಿಗೆ ಅಮೆರಿಕಾದಲ್ಲಿ ಕೆಲಸ, ಹಾಗಾಗಿ ಮದುವೆಯಾದ ನಂತರ ಅಕ್ಕನು ಅಮೆರಿಕಾ ಸೇರಿಬಿಟ್ಟಳು. ಈಗ ಶ್ರೀನಾಥನ ಅಮ್ಮನಿಗೆ ಮತ್ತೊಂದು ಚಿಂತೆ ಕಾಡ ಹತ್ತಿತ್ತು. ಅಳಿಯ-ಮಗಳು ಅಮೆರಿಕಾದಲ್ಲಿದ್ದಾರೆ. ಮಗನಿಗೂ ಅಲ್ಲೇ ಒಂದು ಕೆಲಸ ಸಿಕ್ಕರೆ, ಇವನೂ ಅಲ್ಲೇ ಇದ್ದರೆ ನಾವೂ ಅಲ್ಲೇ ಹೋಗಬಹುದು. ಅಲ್ಲದೇ ಮಗಳನ್ನು ಆಗಾಗ ನೋಡಬಹುದು.

ಆದರೆ ಮಗ ನೋಡಿದರೆ ಆಶ್ರಮದಲ್ಲೇ ಹೆಚ್ಚು ಹೊತ್ತು ಇರೋದು ರೂಢಿ ಮಾಡಿಕೊಂಡಿದ್ದಾನೆ. ಓದಲ್ಲೇನು ಹಿಂದೆ ಬಿದ್ದಿಲ್ಲ. ಒಳ್ಳೇ ಮಾಕ್ರ್ಸ್ ಸಿಕ್ಕುವುದರಿಂದ ಒಳ್ಳೆಯ ಕೆಲಸವೇನೋ ಸಿಗುತ್ತೆ. ಆದರೆ ಮದುವೆಯೇ ಆಗದಿದ್ದರೆ ಎಂದೆಲ್ಲಾ ಚಿಂತಿಸುತ್ತಿದ್ದಳು.

ಹೀಗಿದ್ದ ಶ್ರೀನಾಥ ಅಮ್ಮನ ಸತತ ಪ್ರಯತ್ನ ಹಾಗೂ ಗೋಳಾಟಗಳ ಫಲವಾಗಿ ಸ್ವಲ್ಪ ಸ್ವಲ್ಪವೇ ಬದಲಾಗಲು ಆರಂಭಿಸಿದ. ಅಮ್ಮನಿಗೆ ಸ್ವಲ್ಪ ಸಮಾಧಾನವಾಯ್ತು.

ದಿನಕಳೆದಂತೆ ಶ್ರೀನಾಥನ ಓದು ಒಂದು ಹಂತಕ್ಕೆ ಬಂತು. ಒಳ್ಳೆಯ ಐಟಿ ಕಂಪನಿಯಲ್ಲಿ ಕೆಲಸವೂ ಸಿಕ್ತು. ಆಗ ಶ್ರೀನಾಥನ ಅಮ್ಮನಿಗೆ ತನ್ನ ಮಗನನ್ನು ಹೇಗಾದ್ರೂ ಮಾಡಿ ಅಮೆರಿಕಾಗೆ ಕಳಿಸಬೇಕೆಂಬ ಆಸೆ ಚಿಗುರೊಡೆಯಿತು.

ಶ್ರೀನಾಥನಿಗೆ ಅಮೆರಿಕಾದಲ್ಲಿದ್ದ ಅಕ್ಕನ ಮನೆಗೆ ಹೋಗಿ ಬರುಲು ಪುಸಲಾಯಿಸಿದಳು. ಅದೂ ಆಯ್ತು.

ಅಲ್ಲಿನ ಪರಿಸರ, ಜನರ ನಡೆ-ನುಡಿ, ಕಾರ್ಯವೈಖರಿಗಳು ಶ್ರೀನಾಥನಿಗೆ ಇಷ್ಟವಾಯ್ತು. ಅಕ್ಕನಿಗೆ ಅಮ್ಮನಿಂದ ಶ್ರೀನಾಥನಿಗೊಂದು ಕೆಲಸವನ್ನು ಅಲ್ಲೇ ನೋಡೆಂದು ಒಳಗೊಳಗೇ ಕಿವಿಮಾತಗಳನ್ನೂ ಹೇಳುತ್ತಿದ್ದಳು.

ಹಾಗಾಗಿ ಅಲ್ಲಿಗೆ ಹೋಗಿದ್ದ ಶ್ರೀನಾಥನು ಒಂದೆರಡು ಕಂಪನಿಗಳಲ್ಲಿ ಇಂಟರ್‍ವ್ಯೂಗಳನ್ನು ಮುಗಿಸಿ ಬಂದಿದ್ದ.

ಅಮೆರಿಕಾದ ಕಂಪನಿಯಿಂದ ಆಫರ್ ಲೆಟರ್ ಕೂಡ ಬಂತು. ಅತಿ ಬುದ್ಧಿವಂತರನ್ನೇ ಆಯ್ಕೆ ಮಾಡುವ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಸಿಕ್ತು. ಆ ಸುದ್ದಿ ಶ್ರೀನಾಥನ ತಾಯಿಗೆ ಎಲ್ಲಿಲ್ಲದ ಸಂತೋಷ ತಂತು.

ತಾನೂ ಮತ್ತು ತನ್ನ ಗಂಡ ಇಬ್ಬರೇ ಇಲ್ಲಿ ಇದ್ದರೂ ಪರವಾಗಿಲ್ಲ, ಶ್ರೀನಾಥ ಅಮೆರಿಕಾಗೆ ಹೋಗಲು ಒಪ್ಪಿದ್ನಲ್ಲ ಎಂಬ ಖುಷಿಯು ಅಮ್ಮನದಾಗಿತ್ತು.

ಒಂದು ದಿನ ಶ್ರೀನಾಥ ಅಮೆರಿಕಾಗೆ ಕೆಲಸದ ನಿಮ್ಮಿತ್ತ ಹೊರಟೇ ಬಿಟ್ಟ. ಅಮ್ಮನಿಗೆ ಆಗ ಸ್ವಲ್ಪ ಅಳುಕೂ ಇತ್ತು. ಅಲ್ಲಿ ಅದೆಷ್ಟು ದಿನಗಳು ಇರುತ್ತಾನೋ? ಮತ್ತೆ ಆಶ್ರಮದ ನೆನಪಾಗಿ ಎಲ್ಲಿ ಓಡಿ ಬರುತ್ತಾನೋ ಆತಂಕದಿಂದಲೇ ಶ್ರೀನಾಥನನ್ನು ಏರ್‍ಪೋರ್ಟ್‍ನಲ್ಲಿ ಬೀಳ್ಕೊಟ್ಟಳು.

ಅಕ್ಕನ ಊರಿಗೆ ಸಮೀಪವೇ ಶ್ರೀನಾಥನ ಕೆಲಸವಿದ್ದದ್ದು ಒಂದು ಸಮಾಧಾನ ತಂದಿತ್ತು. ಹಲವು ವರ್ಷಗಳಲ್ಲೆ ಮತ್ತೆರಡು ಕಂಪನಿಗಳನ್ನು ಬದಲಾಯಿಸಿದ. ಉನ್ನತ ಹುದ್ದೆಯೂ ದೊರಕಿತ್ತು. ಐಶಾರಾಮಿ ಕಾರು-ಬಂಗಲೆಗಳನ್ಮು ಕೊಂಡಿದ್ದ. ಇದೇ ಸಮಯವೆಂದು ಅಕ್ಕನ ಮೂಲಕ ಶ್ರೀನಾಥನಿಗೊಂದು ಹುಡುಗಿಯನ್ನೂ ಹುಡುಕಿಸಿದರು. ಹುಡುಗಿಯ ಕಡೆಯವರು ಸ್ವಲ್ಪ ಬಡವರಾಗಿದ್ದರು.

ಮೊದ ಮೊದಲು ಈಗಲೇ ಮದುವೆ ಬೇಡವೆನ್ನುತ್ತಿದ್ದ ಶ್ರೀನಾಥ ಒಲೆಯ ಮುಂದೆ ನಿಂತು ಕೈ ಸುಟ್ಟುಕೊಳ್ಳುವುದಕ್ಕಿಂತ ಮದುವೆಯೇ ಒಳಿತೆನಿಸಿ ಮದುವೆಗೆ ಒಪ್ಪಿಗೆ ಕೊಟ್ಟ. ಮದುವೆಯು ಸರಳವಾಗಿ ಆಯ್ತು.

ಆ ಹುಡುಗಿ ತುಂಬಾ ಸಂಕೋಚದ ಸ್ವಭಾವದವಳಾಗಿದ್ದು ಅಮೆರಿಕಾದಲ್ಲಿ ಒಬ್ಬಳೇ ಇರಲು ಭಯ ಪಡುತ್ತಿದ್ದಳು. ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕಾರಣ ದಿನಕ್ರಮೇಣ ಸರಿ ಹೋಗುತ್ತೆ ಎಂಬ ನಂಬಿಕೆ ಇತ್ತು. ಆದರೆ ಅಮೆರಿಕಾಗೆ ಹೋದ ಮೇಲೆ ಏಕಾಂತದಲ್ಲಿ ಇರಲಾರದೇ ಡಿಪ್ರೆಷನ್‍ಗೆ ಹೋಗುತ್ತಿದ್ದಳು. ಯಾರಾದರೂ ಒಬ್ಬರು ಜತೆಗಿರಬೇಕೆಂದು ಬಯಸುತ್ತಿದ್ದಳು. ಶ್ರೀನಾಥನು ಹೆಚ್ಚಿನ ಸಮಯವನ್ನು ಆಫೀಸ್‍ನಲ್ಲಿಯೇ ಕಳೆಯದೇ ಆಗಾಗ ವರ್ಕ್ ಫ್ರಮ್ ಹೋಮ್ ಪಡೆದು ಮಡದಿಗೆ ಕಂಪನಿ ಕೊಡುತ್ತಿದ್ದ.

ಪುಟ್ಟ ಸಂಸಾರ ಚೆನ್ನಾಗಿಯೇ ನಡೆದಿತ್ತು. ಪುಟ್ಟ ಕಂದಮ್ಮ ಬರುವ ಸೂಚನೆಯೂ ಸಿಕ್ಕಿತು. ಸ್ವದೇಶದಲ್ಲಿದ್ದ ಅಮ್ಮನಿಗೆ ಈ ವಿಷಯ ತಿಳಿಸಲು ಸಂಕೋಚ. ಅಂತೂ ತಿಳಿಸಿ ಆಯ್ತು. ಅಮೆರಿಕಾದಲ್ಲೇ ಮಗುವಿನ ಜನನವೂ ಆಯ್ತು. ಹೆಣ್ಣು ಮಗು, ಶ್ರೀನಾಥನ ಅಮ್ಮ ಹಾಗೂ ಹೆಂಡತಿಯ ಅಮ್ಮ ಇಬ್ಬರೂ ಒಬ್ಬರ ನಂತರ ಒಬ್ಬರಂತೆ ಬಂದು ತಾಯಿ-ಮಗುವಿನ ಕ್ಷೇಮವನ್ನು ನೋಡಿಕೊಂಡರು. ಮಗುವಿಗೆ ಒಂದು ವರ್ಷವಾಯ್ತು. ಅಕ್ಕ-ಭಾವರ ಸಮೇತ ಎಲ್ಲರೂ ಸೇರಿ. ಮೊದಲ ವರ್ಷದ ಬರ್ತ್‍ಡೇ ಅನ್ನು ಭರ್ಜರಿಯಾಗಿ ಆಚರಿಸಿದರು. ಆನಂತರ ಯಥಾ ಪ್ರಕಾರ ಜೀವನ ನಡೆಯುತಿತ್ತು.

ಮಗುವಿನೊಂದಿಗೆ ಅಮ್ಮ-ಅಪ್ಪ ಚೆನ್ನಾಗಿ ಎಂಜಾಯ್ ಮಾಡುತ್ತಾ ಖುಷಿಯಲ್ಲಿದ್ದರು.

ವರ್ಷ ಕಳೆದ ನಂತರ ಒಮ್ಮೆ ಶ್ರೀನಾಥನ ಹೆಂಡತಿಗೆ ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿತು. ಚೆಕಪ್ ಕೂಡ ಆಯ್ತು. ಏನೂ ತೊಂದರೆ ಇಲ್ಲ ಎಂದಾಯ್ತು. ಆದರೆ ಒಮ್ಮೆ ಶ್ರೀನಾಥ್ ಆಫೀಸ್ನಿಂದ ಮನೆಗೆ ಬಂದು ನೋಡಿದರೆ ಮಗು ಅಮ್ಮನ ಮುಂದೆ ಕೂತು ಅಳ್ತಿದೆ. ಅಮ್ಮನು ಯಾವುದೇ ಪ್ರತಿಕ್ರಿಯೆ ತೋರುತ್ತಿಲ್ಲ.

ಕೂಡಲೇ ಆ್ಯಂಬುಲೆನ್ಸ್‍ಗೆ ಫೋನ್ ಮಾಡಿ ಕರೆಸಿ ಹಾಸ್ಪಿಟಲ್ ಹೋದಾಗ ಗೊತ್ತಾಯ್ತು. ಆಕೆಗೆ ಜೀವ ಹೋಗಿ ಕೆಲವು ಗಂಟೆಗಳು ಆಗಿವೆ ಎಂದು.

ಎರಡು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಅಮ್ಮ ಇಲ್ಲವಾಗಿದ್ದಳು. ಶ್ರೀನಾಥನಿಗೆ ಏನೂ ತೋಚದಾಯ್ತು. ಅಕ್ಕನಿಗೆ ಫೋನ್ ಮಾಡಿದಾಗ ಗೊತ್ತಾಗಿದ್ದು ಅವರು ಟ್ರಿಪ್‍ಗೆಂದು ಹೊರ ದೇಶದಲ್ಲಿದ್ದಾರೆಂದು. ಅವರ ಸಹಾಯವೂ ಸಿಗಲಿಲ್ಲ.

ಅಮ್ಮನಿಗೆ ಫೋನ್ ಮಾಡಿ ತಿಳಿಸಿದ. ಅಮ್ಮ ಬೀಗರಿಗೆ ತಿಳಿಸಿದಳು. ಕೊನೆಗೆ ನಿರ್ಧಾರವಾಗಿದ್ದು ಬಾಡಿಯನ್ನು ಬೀಗರ ಊರಿಗೆ ತರಬೇಕೆಂದೂ, ಅವರೆಲ್ಲ ಕೊನೆಯ ಬಾರಿಗೆ ಆಕೆಯನ್ನು ನೋಡಬೇಕೆಂದಾಗಿತ್ತು. ಮಗೂ ಹಾಗೂ ಹೆಂಡತಿಯ ಶವದೊಂದಿಗೆ ಶ್ರೀನಾಥ್ ಭಾರತಕ್ಕೆ ಬಂದನು. ಶವವನ್ನು ಆಕೆಯ ಊರಿಗೆ ಸಾಗಿಸಿ ಅಲ್ಲೇ ಮಣ್ಣು ಮಾಡಿದನು. ಅಮ್ಮ-ಅಪ್ಪ ಹಾಗೂ ಬಂಧು-ಬಳಗವೆಲ್ಲಾ ಅಲ್ಲಿಗೇ ಬಂದು ಶ್ರೀನಾಥ ಹಾಗೂ ಮಗುವಿಗೆ ಸಮಾಧಾನ ಹೇಳಿದರು.

ಮಗುವಿಗೆ ಏನೂ ಗೊತ್ತಾಗುತ್ತಿಲ್ಲ. ಏನೋ ಆಗುತ್ತಿದೆ ಎಂಬುದು ಗೊತ್ತಾದರೂ ಏನೂ ಎನ್ನುವ ಖಚಿತ ಮಾಹಿತಿ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಮಗುವಿತ್ತು. ಅಮ್ಮನಿಗೆ ಏನೇನೋ ಮಾಡುತ್ತಿದ್ದಾರೆ ಎಂದು ತಿಳಿದು ಅಳುತ್ತಿತ್ತಷ್ಟೆ.

ಆಫೀಸ್ ಕೆಲಸದ ಒತ್ತಡಕ್ಕೆ ಮಣಿದ ಶ್ರೀನಾಥ್ ಮಗುವನ್ನು ಅಮ್ಮನ ಹತ್ತಿರ ಬಿಟ್ಟು. ಹೆಂಡತಿ ಹಾಗೂ ಮಗುವಿಲ್ಲದೇ ವಿಮಾನ ಏರಿ ಅಮೆರಿಕ ಸೇರಿಕೊಂಡ. ಹಲವು ತಿಂಗಳು ಕಳೆದರೂ ಕೆಲಸದ ಮಧ್ಯೆ ಬಿಡುವಾಗದೇ ಭಾರತಕ್ಕೆ ಬಂದು ಹೋಗಲೂ ಆಗಲಿಲ್ಲ. ಒಂದೆರಡು ಬಾರಿ ಶ್ರೀನಾಥ ಇದ್ದ ಜಾಗಕ್ಕೆ ಅಕ್ಕ-ಭಾವ ಬಂದು ಸಮಾಧಾನ ಹೇಳಿ ಹೋಗುತ್ತಿದ್ದರು. ಆಗಾಗ ಅಮ್ಮ ಹಾಗೂ ಮಗಳ ಜೊತೆ ಫೋನ್‍ನಲ್ಲಿ ಮಾತಾಡುತ್ತಿದ್ದ. ವಿಡಿಯೋ ಕಾಲ್‍ಗಳಲ್ಲಿದ ಕಾಲ ಅದಾಗಿದ್ದರಿಂದ ಮಗಳು ಮುಖ ಜ್ಞಾಪಕ ಬಂದು ಅಳುತ್ತಾ ಕೂರುತ್ತಿದ್ದ. ಅಲ್ಲದೇ ಹೆಂಡತಿಯ ಮುಗ್ಧತನಗಳು ಶ್ರೀನಾಥನನ್ನು ಕಾಡುತ್ತಿದ್ದವು.

ಮಗುವಿಗೆ ಶ್ರೀನಾಥನ ಅಮ್ಮನೇ ಅಮ್ಮನಾಗಿದ್ದಳು!

ಮಗುವಿಗೆ ತನ್ನ ಅಮ್ಮ ಅಷ್ಟಾಗಿ ನೆನಪಿಲ್ಲದ ಕಾರಣ ಅಜ್ಜಿಯನ್ನೇ ಅಮ್ಮ ಎಂಬಂತೆ ಅಭ್ಯಾಸವಾಗಿ ಬಿಟ್ಟಿತ್ತು.

ಈ ಮಧ್ಯೆ ಶ್ರೀನಾಥನ ಅಪ್ಪನ ಸಾವು ಮತ್ತೊಂದು ಅಘಾತ ತಂದಿತ್ತು. ಸಂಸಾರದಲ್ಲಿ ಮಿಳಿತವಾಗಿಲ್ಲದಿದ್ದರೂ ಒಬ್ಬ ಗಂಡಸಿನ ಆಸರೆ ಇದ್ದದ್ದು ದಿಢೀರ್ ಎಂದು ಕಳಚಿಕೊಂಡದ್ದು ಅಮ್ಮನಿಗೆ ದೊಡ್ಡ ವಿಪತ್ತು ಒದಗಿತ್ತು.

ಶ್ರೀನಾಥ್ ಅಮೆರಿಕಾದಿಂದ ಬರುವವರೆಗೆ ಅಪ್ಪನ ಬಾಡಿಯನ್ನು ಆಸ್ಪತ್ರೆಯಲ್ಲೇ ಇಟ್ಟಿದ್ದರು. ಹಲವು ದಿನಗಳ ನಂತರ ಬಂದು ಅಂತಿಮ ಕಾರ್ಯಗಳನ್ನು ಮುಗಿಸಿ ತರಾತುರಿಯಲ್ಲೇ ಹೊರಟು ಬಿಟ್ಟ.

ಅಮ್ಮನಿಗೆ ಈಗ ನಿಜಕ್ಕೂ ಏಕಾಂತ ಕಾಡ ಹತ್ತಿತ್ತು. ಮೊಮ್ಮಗುವಿನ ಜವಾಬ್ದಾರಿ ಹೆಚ್ಚಿತ್ತು. ಶಾಲೆಗೆ ಸೇರಿಸಿದ್ದರಿಂದ ಓದು, ಆಟ ಪಾಠಗಳನ್ನೆಲ್ಲಾ ಒಬ್ಬಳೇ ನಿಭಾಯಿಸಬೇಕಾಗಿತ್ತು.

ಇಳಿ ವಯಸ್ಸೂ ಹತ್ತಿರವಾಗುತ್ತಿದ್ದು ಆಕೆಯ ದೇಹ ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಅಪ್ಪ ಹಾಗೂ ಮಗುವನ್ನು ಒಂದು ಮಾಡುವ ಸಲುವಾಗಿ ಮತ್ತೆ ಅಕ್ಕನ ಮೂಲಕ ಶ್ರೀನಾಥನಿಗೆ ಹೆಣ್ಣನ್ನು ನೋಡಲು ಆರಂಭಿಸಿದಳು. ಮಗುವಿನ ಭವಿಷ್ಯಕ್ಕಾಗಿ ಒಲ್ಲದ ಮನಸ್ಸಿನಿಂದ ಶ್ರೀನಾಥ್ ಈ ಮದುವೆಗೆ ಒಪ್ಪಿದ.

ಮದುವೆಯ ನಂತರ ಸ್ವಲ್ಪ ದಿನ ಇಬ್ಬರೇ ಇರಲಿ, ಆನಂತರ ಮಗುವನ್ನು ಅಮೆರಿಕಾಗೆ ಕಳಿಸಿದರಾಯ್ತೆಂದು ಶ್ರೀನಾಥನ ಅಮ್ಮ ಮಗುವನ್ನು ತನ್ನೊಂದಿಗೆ ಇಟ್ಟುಕೊಂಡಳು. ತಿಂಗಳುಗಳು ಕಳೆದರೂ ಹೊಸ ಹೆಂಡತಿ ಮಗುವನ್ನು ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ. ಶ್ರೀನಾಥನೂ ಈ ವಿಷಯದಲ್ಲಿ ಏನೂ ಮಾಡಲಾಗದೇ ಹೋದ.

ಈ ಬೆಳವಣಿಗೆಯು ಅಮ್ಮನಿಗೆ ನುಂಗಲಾರದ ತುತ್ತಾಯ್ತು. ತನ್ನ ಆರೋಗ್ಯವೂ ಕೆಡುತ್ತಿತ್ತು. ದೊಡ್ಡದಾಗುತ್ತಿದ್ದ ಮಗುವಿನ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನೂ ಆಕೆ ಕಳೆದುಕೊಂಡಿದ್ದಳು. ಈ ಎಲ್ಲಾ ವಿಷಯ ಶ್ರೀನಾಥನಿಗೆ ತಿಳಿಯುತ್ತಿತ್ತು. ಆದರೆ ಏನೂ ಮಾಡಲು ತೋಚದಾಗಿದ್ದ.  ಅಮ್ಮನ ಆರೋಗ್ಯ ಕೆಟ್ಟು ಒಂದು ದಿನ ಆ ಮಗುವನ್ನು ಅನಾಥ ಮಾಡಿ ಹೋಗೇ ಬಿಟ್ಟಳು.

ಮತ್ತೆ ಶ್ರೀನಾಥನ ಬರುವಿಕೆಗಾಗಿ ಅಮ್ಮನ ಶವ ಆಸ್ಪತ್ರೆಯಲ್ಲಿತ್ತು. ಹಲವು ದಿನಗಳ ನಂತರ ಬಂದು ಅಂತ್ಯಕ್ರಿಯೆ ಮುಗಿಸಿದನು.

ಆದರೆ ತನ್ನ ಕುಡಿಯನ್ನು ಕರೆಯದೊಯ್ಯಲು ಹೊಸ ಹೆಂಡತಿಯು ಸಮ್ಮತಿಸಲಿಲ್ಲ. ಯಾರು ಎಷ್ಟೇ ಹೇಳಿದರೂ ಕೇಳಲಿಲ್ಲ. ಕಟ್ಟ ಕಡೆಯ ನಿರ್ಧಾರವಾಗಿ ತನ್ನ ಐದು ವರ್ಷದ ಮಗುವನ್ನು ಟೇಕ್ ಕೇರ್ ಕಂ ಕಾನ್ವೆಂಟ್‍ನಲ್ಲಿ ಸೇರಿಸಿ ಹೆಂಡತಿಯ ಸಮೇತ ವಿಮಾನದಲ್ಲಿ ಅಮೆರಿಕಾಗೆ ಹಾರಿದನು. ಆ ಪ್ರಯಾಣದಲ್ಲಿ ಶ್ರೀನಾಥನ ಮನಸ್ಸು ಹಿಂದು ಹಿಂದಕ್ಕೆ ಓಡಿತು.

ತಾನಾಯ್ತು ತನ್ನ ಓದಾಯ್ತು, ತನ್ನ ಆಶ್ರಮ-ಭಜನೆ-ಧ್ಯಾನಗಳಲ್ಲಿ ನೆಮ್ಮದಿಯಿಂದ ಇದ್ದೆ. ಆದರೆ ಅಮ್ಮನು ಹೀಗಿದ್ದ ನನ್ನನ್ನು ಸಂಸಾರದಿಂದ ಹೊರಬರದಂತೆ ಗೋಜಲಲ್ಲಿ ಸಿಕ್ಕಿಸಿ ತಾನು ಮಾತ್ರ ನೆಮ್ಮದಿಯಿಂದ ಮಣ್ಣಲ್ಲಿ ಮಲಗಿದ್ದಾಳೆ.

ನಾವೆಲ್ಲಾ ಮಾಡಿದ ತಪ್ಪಿಗೆ ಆ ಹೆಣ್ಣು ಮಗುವು ಒಬ್ಬಂಟಿಯಾಗಿ ಅಪ್ಪ-ಅಮ್ಮನ ಪ್ರೀತಿಯಿಲ್ಲದೇ ಯಾರದೋ ಮಡಿಲು ಸೇರಿದೆ. ನಾವೆಲ್ಲಾ ಇದ್ದೂ ಕೂಡ ಅದು ಅನಾಥವಾಗಿದೆ! ಎಂದು ಮನದಲ್ಲೇ ಮರುಗಿದ.

ತುಂಕೂರ್ ಸಂಕೇತ್!

Related post