ಭಾನು – ಬಾನು
ನಿಗಿ ನಿಗಿ ಹೊಳೆಯುತಿಹನು ಭಾನು
ಮೂಡಣದಿ ಬೇಗ ಉದಯಿಸಿಹನು
ದಿನವಿಡೀ ಚೆಂದದಿ ಹೊಳೆಯುತಿಹನು
ಇಳಿಸಂಜೆ ಪಡುವಣದಿ ಮುಳುಗುತಿಹನು
ಭಾನಿನ ತಾಪಕೆ ನಡುಗುತಿಹರು ದಿಕ್ಪಾಲಕರು
ಅವಿತು ಕುಳಿತಿಹನು ವಾಯುದೇವನು
ಬಲು ದೂರ ಓಡಿಹನು ವರುಣದೇವನು
ಹಿರಿಯಕ್ಕನ ಸೆರಗಂಚಿನಲಿ ಅಡಗಿಹ ಚಂದಿರನು
ಗ್ರಹಣಕೆ ಬೆಚ್ಚಿನಿಂತಂತೆ ನಿಂತ ಗಿಡಮರಗಳು
ಬೀಸುವುದನೇ ಮರೆತ ರೆಂಬೆ ಕೊಂಬೆಗಳು
ಕಣ್ತಪ್ಪಿ ಓಡುತಿಹ ಮಳೆ ಮೋಡಗಳು
ಮಳೆರಾಯನ ನಿರೀಕ್ಷೆಯಲಿ ಕೆರೆತೊರೆಗಳು
ಪಡುವಣದಿ ತಣ್ಣನೇ ಮುಳುಗುವ ಈ ಭಾನು
ಮೆಲ್ಲನೇ ಹೊರಬರುತಿಹ ಚಂದಿರನು
ತಾರೆ ಚುಕ್ಕಿಗಳ ಸಾಗರದಿ ಕಾಣುವ ಬಾನು
ಇದ ಕಾಣಲು ಹಂಬಲಿಸುತಿಹೆ ನಾನು
ಸಿ.ಎನ್. ಮಹೇಶ್