ಭಾರತದ ಘೇಂಡಾಮೃಗಗಳು

ಭಾರತದ ಘೇಂಡಾಮೃಗಗಳು

ನಮ್ಮ ಭಾರತದ ಘೇಂಡಾಮೃಗ ಅಳಿವಿನಂಚಿನಲ್ಲಿರುವ ಒಂದು ವಿಶಿಷ್ಟವಾದ ಪ್ರಾಣಿ. ಇದಕ್ಕಿರುವ ಒಂಟಿಕೊಂಬಿನಿಂದಾಗಿ ನೋಡಲು ವಿಶಿಷ್ಟವಾಗಿ ಕಾಣುತ್ತದೆ. ಏಷ್ಯಾದಲ್ಲಿರುವ ಮೂರು ಪ್ರಮುಖ ಘೇಂಡಾಮೃಗಗಳಲ್ಲಿ” ನಮ್ಮ ಭಾರತದ ಒಂಟಿಕೊಂಬಿನ ಘೇಂಡಾಮೃಗ ದೊಡ್ಡದು. ಇನ್ನುಳಿದೆರಡು “ಸುಮಾತ್ರಾ ಘೇಂಡಾಮೃಗ” ಸುಮಾತ್ರ ಹಾಗು ಬೊರ್ನಿಯೊ ದ್ವೀಪಗಳಲ್ಲಿ ಕಂಡುಬಂದರೆ, “ಜಾವಾ ಘೇಂಡಾಮೃಗ” ಇಂಡೋನೇಷ್ಯಾ ಹಾಗು ಜಾವಾ ದ್ವೀಪಗಳಲ್ಲಿ ಮಾತ್ರ ಕಂಡುಬರುತ್ತದೆ. ನಮ್ಮ ಭಾರತದಲ್ಲಿನ ಘೇಂಡಾಮೃಗಗಳು ಹೆಚ್ಚು ಕಡಿಮೆ ಆಫ್ರಿಕಾದ ಬಿಳಿ ಘೇಂಡಾಮೃಗದಷ್ಟೇ ಗಾತ್ರದಲ್ಲಿ ಸಮನಾಗಿವೆ. ಇದನ್ನು ಖಡ್ಗಮೃಗ ಎಂದು ಸಹ ಕರೆಯಲಾಗುತ್ತದೆ. ಇದರ ದೇಹಕ್ಕಿರುವ ವಿಶಿಷ್ಟ ರಚನೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದಾಗಿದ್ದು ಇವುಗಳು ತೂಕದಲ್ಲಿ1800 ರಿಂದ 2700 ಕೆ ಜಿ ವರೆಗೂ ತೂಗುವ ಧಡೂತಿಗಳಾದರು ಚೆನ್ನಾಗಿ ಓಡಬಲ್ಲವು.

RM28 ತನ್ನ ಮರಿಯೊಂದಿಗೆ

ಎತ್ತರದ ಹುಲ್ಲುಗಾವುಲುಗಳಲ್ಲಿ ಜೀವಿಸುವ ಇವುಗಳು ಸಂಪೂರ್ಣ ಸಸ್ಯಾಹಾರಿಗಳಾಗಿದ್ದು ಗಿಡಗಳ ಎಲೆಗಳ ಚಿಗುರುಗಳನ್ನು, ಹಣ್ಣು ಹಾಗು ಕೆಲವೊಮ್ಮೆ ಅಪರೂಪಕ್ಕೆ ರೈತರ ಬೆಳೆಗಳನ್ನು ತಿನ್ನುತ್ತವೆ. ಭಾರತದಲ್ಲಿ ಘೇಂಡಾಮೃಗಗಳು ಉತ್ತರಪ್ರದೇಶ, ಅಸ್ಸಾಂ ಹಾಗು ಪಶ್ಚಿಮ ಬಂಗಾಲ ದಲ್ಲಿ ಮಾತ್ರ ಕಾಣಸಿಗುವವು. ಅತಿ ಹೆಚ್ಚು ಘೇಂಡಾಮೃಗಗಳನ್ನು ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನೋಡಬಹುದು. ನಿಶಾಚರ ಪ್ರಾಣಿಗಳಾದ ಇವು ಸಂಜೆಯಿಂದ ಮುಂಜಾನೆಯವರೆಗೂ ಮೇಯ್ದು ಹಗಲಿನಲ್ಲಿ ಚೆನ್ನಾಗಿ ನಿದ್ರಿಸುತ್ತವೆ. ಹಣ್ಣುಗಳನ್ನು ತಿಂದು ಬೀಜಗಳನ್ನು ಮಲವಿಸರ್ಜನೆಯ ಮೂಲಕ ಬಯಲು ಪ್ರದೇಶಗಳಲ್ಲಿ ವಿಸರ್ಜಿಸುವುದರಿಂದ ಆ ಪ್ರದೇಶಗಳಲ್ಲಿ ಗಿಡ ಮರಗಳು ಬೆಳೆದು ಅರಣ್ಯ ಸಂಪತ್ತು ಹೆಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಘೇಂಡಾಮೃಗದ ದೇಹ ಬಲು ಸ್ಥೂಲ, ಖಡ್ಗಮೃಗದ ದೇಹ ಬಲು ಸ್ಥೂಲ (ಪೂರ್ಣ ಬೆಳೆದ ಗಂಡು ಖಡ್ಗಮೃಗದ ಉದ್ದ ಸುಮಾರು 2-4.2 ಮೀ., ಎತ್ತರ ಸುಮಾರು 1-2 ಮೀ. ತೂಕ 1-3.5 ಮೆಟ್ರಿಕ್ ಟನ್ನುಗಳು). ಆನೆಯನ್ನು ಬಿಟ್ಟರೆ ಆಫ್ರಿಕದ ಸೆರಟೊತೀರಿಯಮ್ ಸೈಮಸ್ ಪ್ರಭೇದವೇ ಬಲು ದೊಡ್ಡ ಭೂವಾಸಿ ಪ್ರಾಣಿಯೆನ್ನಲಾಗಿದೆ. ಹೆಣ್ಣು ಗಂಡಿಗಿಂತ ಚಿಕ್ಕದು. ಚರ್ಮ ಬಹಳ ದಪ್ಪ ಹಾಗೂ ಗಡುಸು. ಆಫ್ರಿಕದ ಪ್ರಭೇದಗಳಲ್ಲಿ ಚರ್ಮ ನಯವಾಗಿದೆ. ಆದರೆ ಭಾರತ ಹಾಗೂ ಜಾವದಲ್ಲಿನ ಖಡ್ಗಮೃಗಗಳ ಚರ್ಮ ಕತ್ತು ಹಾಗೂ ಕಾಲುಗಳ ಬಳಿ ಮಡಿಚಿಕೊಂಡಿದ್ದು ಒಂದು ಬಗೆಯ ಯುದ್ಧ ಕವಚದಂತೆ ಕಾಣುತ್ತದೆ. ಕಿವಿಯ ಅಂಚು, ಬಾಲದ ತುದಿ ಇವುಗಳನ್ನು ಬಿಟ್ಟರೆ ದೇಹದ ಮೇಲೆ ಎಲ್ಲೂ ಕೂದಲುಗಳಿಲ್ಲ. ದೇಹದ ಬಣ್ಣ ಬೂದಿ ಇಲ್ಲವೆ ಕಂದು. ಎರಡೂವರೆ ವರ್ಷಕ್ಕೊಮ್ಮೆ ಒಂದು ಅಥವಾ ಎರಡು (ಒಮ್ಮೆಮ್ಮೆ ಅವಳಿ ಜವಳಿ) ಮರಿಹಾಕುವ ಘೇಂಡಾಮೃಗಗಳ ಮರಿಗಳನ್ನು ಅವು ಚಿಕ್ಕವಿದ್ದಾಗಲೇ ಹುಲಿಗಳು ಕಬಳಿಸಿಬಿಡುವ ಕಾರಣ ಆ ಹಂತವನ್ನು ಮೀರಿ ಬೆಳೆಯುವ ಮರಿಗಳು ಮಾತ್ರ ಉಳಿದುಕೊಳ್ಳುತ್ತವೆ. ಇದರ ಕೊಂಬು ಮರಿಗಳು ಬೆಳೆದು 6 ವರ್ಷಗಳ ನಂತರ ರೂಪುಗೊಳ್ಳುತ್ತವೆ.  2022 ರ ಗಣತಿಯ ಪ್ರಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಒಂದರಲ್ಲೇ 2613 ಘೇಂಡಾಮೃಗಗಳು ಎಣಿಸಲ್ಪಟ್ಟಿವೆ ಹಾಗು ಮಿಕ್ಕ ಪ್ರದೇಶಗಳ ಗಣತಿಯನ್ನು ಒಟ್ಟುಹಾಕಿದರೆ ಇವುಗಳ ಸಂಖ್ಯೆ 3700 ದಾಟಿಲ್ಲ.

ವಿಶಿಷ್ಟವಾದ ಒಂಟಿ ಕೊಂಬು ಘೇಂಡಾಮೃಗಕ್ಕೆ ಶಾಪವಾಗಿದೆ. ಕೊಂಬಿನಲ್ಲಿ ಔಷಧೀಯ ಗುಣ ಕ್ಯಾನ್ಸರ್ ಗುಣಪಡಿಸುತ್ತದೆ ಎಂಬ ಕುರುಡು ನಂಬಿಕೆಯಿಂದ ಇವುಗಳನ್ನು ಅಕ್ರಮವಾಗಿ ಬೇಟೆಯಾಡಿ ಚೀನಾ ಹಾಗು ಹಲವು ದೇಶಕ್ಕೆ ಕೊಂಬುಗಳನ್ನು ಕದ್ದು ಮಾರಾಟಮಾಡಲಾಗುತ್ತಿದೆ, ಹಾಗು ಇದರ ಕೊಂಬಿನಿಂದ ಹಲವು ಅಲಂಕಾರಿಕ ಕೆತ್ತನೆಗಳನ್ನು ಮಾಡಿ ಮಾರಲಾಗುತ್ತಿದೆ. ಪ್ರಪಂಚಾದ್ಯಂತ ಇದರ ಉಳಿವಿಗೆ ಈಗ ಅನೇಕ ಪ್ರಯತ್ನಗಳು ಸಾಗುತ್ತಿದ್ದು ದಕ್ಷಿಣ ಆಫ್ರಿಕಾ ಸರ್ಕಾರ 2010 ರಲ್ಲಿ ಇದರ ಉಳಿವಿಗಾಗಿ ವಿಶ್ವಸಂಸ್ಥೆಗೆ ಮನವಿ ಇಟ್ಟ ಕಾರಣ ಪ್ರತಿ ವರ್ಷ ಸೆಪ್ಟೆಂಬರ್ 22 ನ್ನು ವಿಶ್ವ ಘೇಂಡಾಮೃಗಗಳ ದಿನವಾಗಿ ಎಲ್ಲಾ ದೇಶಗಳಲ್ಲಿ ಇದರ ಉಳಿವಿಗಾಗಿ ಆಚರಿಸಲಾಗುತ್ತಿದೆ.

ನಮ್ಮ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಳೆದ ಜನವರಿ 30 ರಲ್ಲಿನ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೂಡ ಘೇಂಡಾಮೃಗಗಳ ಉಳಿವಿಗಾಗಿ ಹೀಗೆ ಪ್ರಸ್ತಾಪಿಸಿರುತ್ತಾರೆ

ಅಸ್ಸಾಂ ಹೆಸರು ಕೇಳುತ್ತಿದ್ದಂತೆಯೇ ಅಲ್ಲಿನ ಚಹಾ ತೋಟಗಳು ಮತ್ತು ಅನೇಕ ರಾಷ್ಟ್ರೀಯ ಉದ್ಯಾನವನಗಳ ನೆನಪು ಮೂಡುತ್ತದೆ. ಅದರೊಂದಿಗೆ, ಒಂದು ಕೊಂಬಿನ ಘೇಂಡಾ ಮೃಗ ಅಂದರೆ one horn Rhino ದ ಚಿತ್ರವೂ ಕೂಡಾ ಮನದಲ್ಲಿ ಮೂಡುತ್ತದೆ. ಒಂದು ಕೊಂಬಿನ ಘೇಂಡಾಮೃಗ ಯಾವಾಗಲೂ ಅಸ್ಸಾಂ ಸಂಸ್ಕೃತಿಯ ಭಾಗವಾಗಿದೆ ಎಂದು ನಿಮಗೆಲ್ಲಾ ತಿಳಿದೇ ಇದೆ. ಅಸ್ಸಾಮಿನ ವಿಶ್ವ ಪ್ರಸಿದ್ಧ ಕೈಮಗ್ಗದಲ್ಲಿ ನೇಯ್ದ ಮೂಗ ಮತ್ತು ಏರಿ ಉಡುಪುಗಳಲ್ಲಿ ಕೂಡಾ ಘೇಂಡಾ ಮೃಗದ ಆಕೃತಿಯನ್ನು ನೋಡಬಹುದು. ಅಸ್ಸಾಮಿನ ಸಂಸ್ಕೃತಿಯಲ್ಲಿ ಯಾವ ಘೇಂಡಾಮೃಗದ ಇಷ್ಟೊಂದು ಪ್ರಾಮುಖ್ಯತೆ ಇದೆಯೋ ಆ ಘೇಂಡಾ ಮೃಗಗಳು ಕೂಡಾ ಕಷ್ಟಗಳನ್ನು ಎದುರಿಸಬೇಕಾಯಿತು. 2013 ರಲ್ಲಿ 37 ಮತ್ತು 2014 ರಲ್ಲಿ 32 ಘೇಂಡಾ ಮೃಗಗಳನ್ನು ಪ್ರಾಣಿ ಕಳ್ಳಸಾಗಣೆದಾರರು ಕೊಂದು ಹಾಕಿದ್ದರು.  ಈ ಸವಾಲನ್ನು ಎದುರಿಸಲು, ಕಳೆದ ಏಳು ವರ್ಷಗಳಲ್ಲಿ ಅಸ್ಸಾಂ ಸರ್ಕಾರವು ವಿಶೇಷ ಪ್ರಯತ್ನಗಳನ್ನು ಕೈಗೊಂಡಿತು. ಘೇಂಡಾಮೃಗಗಳ ಬೇಟೆಯ ವಿರುದ್ಧ ಬಹು ದೊಡ್ಡ ಅಭಿಯಾನ ನಡೆಸಿತು. ಕಳೆದ ಸೆಪ್ಟೆಂಬರ್ 22 ರಂದು World Rhino Day ಸಂದರ್ಭದಲ್ಲಿ, ಕಳ್ಳ ಸಾಗಣೆದಾರರಿಂದ ವಶಪಡಿಸಿಕೊಂಡ  2400 ಕ್ಕೂ ಹೆಚ್ಚು ಘೇಂಡಾಗಳ ಕೊಂಬುಗಳನ್ನು ಸುಡಲಾಯಿತು. ಇದು ಕಳ್ಳ ಸಾಗಾಣಿಕೆದಾರರಿಗೆ ಒಂದು ಸ್ಪಷ್ಟ ಸಂದೇಶವಾಗಿತ್ತು. ಇಂತಹ ಪ್ರಯತ್ನಗಳ ಫಲವಾಗಿ ಈಗ ಅಸ್ಸಾಂನಲ್ಲಿ ಘೇಂಡಾ ಮೃಗಗಳ ಬೇಟೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. 2013 ರಲ್ಲಿ 37 ಘೇಂಡಾ ಮೃಗಗಳು ಕೊಲ್ಲಲ್ಪಟ್ಟಿದ್ದರೆ, 2020 ರಲ್ಲಿ 2 ಮತ್ತು 2021 ರಲ್ಲಿ ಕೇವಲ ಒಂದು ಘೇಂಡಾಮೃಗದ ಬೇಟೆಯ ಪ್ರಕರಣ ಕಂಡು ಬಂದಿತು. ಘೇಂಡಾ ಮೃಗಗಳನ್ನು ಕಾಪಾಡಲು ಅಸ್ಸಾಂ ಸರ್ಕಾರದ ಈ ಸಂಕಲ್ಪವನ್ನು ನಾನು ಪ್ರಶಂಸಿಸುತ್ತೇನೆ“.

ಘೇಂಡಾಗಳ ಕೊಂಬುಗಳನ್ನು ಸುಟ್ಟ ಅಸ್ಸಾಂ ಸರ್ಕಾರ

ಘೇಂಡಾಗಳ ಕೊಂಬುಗಳನ್ನು ಯಾಕೆ ಸುಡಲಾಯಿತೆಂದರೆ ಅವೆಲ್ಲಾ ಅಕ್ರಮ ಕಳ್ಳಸಾಗಾಣೆದಾರರಿಂದ ವಶಪಡಿಸಿಕೊಂಡವು. ಅವೆಲ್ಲವನ್ನು ಸಾರ್ವಜನಿಕವಾಗಿ ಸುಡುವ ಮೂಲಕ ಅಸ್ಸಾಂ ಸರ್ಕಾರವು ‘ಘೇಂಡಾಮೃಗಗಳು ಸತ್ತಾಗ ಕೊಂಬುಗಳಿಗೆ ಬೆಲೆಯಿಲ್ಲ ಎಂದು ಕಳ್ಳಕಾಕರಿಗೆ ಕೊಟ್ಟ ಸ್ಪಷ್ಟ ಸಂದೇಶ ಇದಾಗಿತ್ತು’. ಘೇಂಡಾಮೃಗವು ಅಸ್ಸಾಂನ ರಾಜ್ಯ ಪ್ರಾಣಿ ಎಂದು ಗುರುತಿಸಲಾಗಿದೆ. ಇಪ್ಪತ್ತನೇ ಶತಮಾನದಲ್ಲಿ ಪ್ರಪಂಚಾದ್ಯಂತ ಇವುಗಳ ಸಂಖ್ಯೆ ಸುಮಾರು 5 ಲಕ್ಷ, ಆದರೆ ಈಗ ಇವುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರ ಉಳಿವಿಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರನ್ನು ಹಾಗು ಸಂಘ ಸಂಸ್ಥೆ ಹಾಗು ಸರ್ಕಾರಗಳನ್ನು ಪ್ರಶಂಶಿಸೋಣ.

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *