ಭಾವಾಲಿಂಗನದ ಲಹರಿ
ಪ್ರೇಮದಾ ಅಭಿವ್ಯಕ್ತಿಗೆ ಎಂದೂ
ದೇಹದ ಸ್ಪಂದನೆ ಮಾನದಂಡವಲ್ಲ..!
ಹೃದಯಾಂತರಾಳದ ಭಾವ ಲಹರಿಗೆ..
ಯಾರ ಅಪ್ಪಣೆಯೂ ಬೇಕಿಲ್ಲ!!
ಮೀರಾಳ ಭಕ್ತಿಯ ಪರವಶತೆಗೆ
ಆ ಕೃಷ್ಣನ ವೇಣುಗಾನವೇ ತೃಪ್ತಿ..!
ಶಬರಿಯ ಕಾಯುವಿಕೆಯ ತಪಸ್ಸಿನ ಪರಿಗೆ..
ಆ ರಾಮನ ದಿವ್ಯಾಗಮನವೇ ಶಕ್ತಿ!!
ಸತ್ಯದ ಪ್ರೀತಿಯ ನಿತ್ಯ ರೂಪಕೆ
ನಲ್ಮೆಯ ಭಾವಾಲಿಂಗನವೇ ಸ್ಪೂರ್ತಿ..!
ನೋವಿನ ಕುಲುಮೆಯಲಿ ನರಳಿದ ಭಾವಕೆ..
ಒಲುಮೆಯ ನೆರಳಿನ ಕಲ್ಪವೃಕ್ಷವೇ ದೀಪ್ತಿ!!
ಜ್ವಾಲಾಮುಖಿಯ ಜ್ವಲಿಸುವ ಭಾವವು
ಮುಗಿಲಿನ ವರ್ಷಧಾರೆಗೆ ತಣಿಯಿತು..!
ನಾಗನಂತೆ ಬುಸುಗುಡುತಿದ್ದ ಮನವು…
ಒಲವಿನ ಆತ್ಮದಾಲಿಂಗನಕೆ ಮಣಿಯಿತು!!

ಸುಮನಾ ರಮಾನಂದ