ಕವಿ ಕಲಾವಿದ : ಸಿದ್ದಾಪುರ ಶಿವಕುಮಾರ್
ಬಿಡುಗಡೆ : ಕಗ್ಗೆರೆ ಪ್ರಕಾಶನ
ಪ್ರಕಾಶ್ ರವರ ಕಗ್ಗೆರೆ ಪ್ರಕಾಶನಕ್ಕೆ 20 ವರ್ಷ ತುಂಬಿದ ಸವಿನೆನಪಿನಲ್ಲಿ ಕವಿ ಹಾಗು ಕಲಾವಿದ ಸಿದ್ದಾಪುರ ಶಿವಕುಮಾರ್ ರವರ “ಭಾವ ರೇಖೆಗಳ ನಡುವೆ” ಹನಿಗವಿತೆಗಳ ಸಂಕಲನವು ಮಾರ್ಚ್ 19 ರ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಚಾಮರಾಜಪೇಟೆಯ ಸಭಾಂಗಣದಲ್ಲಿ ಬಿಡುಗಡೆಯಾಯಿತು.
ಕವಿ ಹಾಗು ಶಿಕ್ಷಕರಾದ ಡಾII ಪರಮೇಶ್ವರಪ್ಪ ಕುದರಿ ಯವರ ನಿರೂಪಣೆಯಲ್ಲಿ ಹಾಗು ಶ್ರೀ ಡಾII ಸಂತೋಷ್ ಸು ಹಾನಗಲ್ (ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು) ಹಾಗು ಶ್ರೀ ಎಂ. ಪ್ರಕಾಶ್ ಮೂರ್ತಿ (ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು) ಯವರ ಉಪಸ್ಥಿತಿಯಲ್ಲಿ ಖ್ಯಾತ ಲೇಖಕ ಶ್ರೀ ಗಿರೀಶ್ ರಾವ್ ಅತ್ವಾರ್ (ಜೋಗಿ) ರವರು ಹನಿಗವಿತೆ ಸಂಕಲವನ್ನು ಬಿಡುಗಡೆ ಮಾಡಿದರು.
ಕೃತಿಯನ್ನು ಬಿಡುಗಡೆ ಮಾಡಿ ಜೋಗಿ ಯವರು
“ಪೀಳಿಗೆಯ ಅನೇಕ ಲೇಖಕರು ಸದಾ ಕನ್ನಡಕ್ಕಾಗಿ ಒಂದಿಲ್ಲೊಂದು ರೂಪದಲ್ಲಿ ಕೆಲಸ ಮಾಡುತ್ತಾ ಸಾಹಿತ್ಯ ಸೇವೆ ಮಾಡುತ್ತಿರುತ್ತಾರೆ ಹಾಗಾಗಿ ಹೊಸಬರ ಕೃತಿಗಳನ್ನು ಬಿಡುಗಡೆ ಮಾಡಲು ನಿಜಕ್ಕೂ ಖುಷಿಯಾಗುತ್ತದೆ, ಭಾಷೆಯ ಜೊತೆ ಸಂಭಾಷಿಸುವುದು ಯಾವಾಗಲೂ ಕವಿತೆಯೇ ಅದು ಲಂಕೇಶರ ನೀಲು ಕಾವ್ಯವಾಗಿರಬಹುದು ಅಥವಾ ಅಕ್ಕಮಹಾದೇವಿಯು ರಚಿಸಿದ ಸಾಲುಗಳೂ ಇರಬಹುದು, ಕವಿತೆಗಳನ್ನು ಓದಿದ ಮೇಲೆ ಅದರ ಎಳೆಗಳು ನಮ್ಮಲ್ಲಿ ಬೀಜ ಬಿತ್ತಿ ಮೊಳಕೆ ಹೊಡೆದು ಮತ್ತೊಂದು ರೂಪದಲ್ಲಿ ಬರುತ್ತದೆ. ಭಾವವಿರುವುದೇ ಕವಿತೆಗಳಲ್ಲಿ, ಭಾವಗಳನ್ನು ಕವಿತೆಯ ಮೂಲಕ ಚೆನ್ನಾಗಿ ಹೇಳಿದರೆ ಜೊತೆಯಲ್ಲಿನ ರೇಖಾ ಚಿತ್ರಗಳಿಂದ ಇನ್ನು ಚೆನ್ನಾಗಿ ಓದುಗರ ಮನಸಿನಲ್ಲಿ ಬಿತ್ತಿಸಬಹುದು, ಈ ಕೃತಿಯಲ್ಲಿನ ಹನಿ ಸಾಲುಗಳಿಗೆ ತಕ್ಕಂತೆ ಶಿವಕುಮಾರ್ ರವರೆ ರಚಿಸಿರುವ ರೇಖಾಚಿತ್ರಗಳು ಅರ್ಥಗರ್ಭಿತವಾಗಿ ಮೂಡಿಬಂದಿದೆ“
ಎಂದು ಪುಸ್ತಕದಲ್ಲಿನ ಶ್ರದ್ದೆ ಎಂಬ ಹನಿಗವಿತೆಯನ್ನು ಓದಿದರು.
ಮುಖ್ಯ ಅಥಿತಿಗಳಾದ ಡಾII ಸಂತೋಷ್ ಹಾನಗಲ್ ರವರು
“ನಮ್ಮ ಮನಸಿಗೆ ಅನಿಸಿದ್ದನ್ನು ಕೂಗಿ ಹೇಳಿದರೆ ಯಾರಾದರೂ ಹುಚ್ಚನೆನ್ನಬಹುದು ಆದರೆ ಅದನ್ನೇ ಸಾಲುಗಳ ಮೂಲಕ ಬರಹದಲ್ಲಿ ಕೊಟ್ಟರೆ ಜನ ಮನಸ್ಪೂರ್ತಿಯಾಗಿ ಓದುತ್ತಾರೆ, ಶಿವಕುಮಾರ್ ಅನೇಕ ಕಷ್ಟಗಳ ನಡುವೆಯೇ ಬೆಳೆದು ಬಂದವರು, ಕಷ್ಟವನ್ನೇ ಉಂಡು ಜೀವಿಸುವುದನ್ನು ಕಲಿತವರು ಆದ್ದರಿಂದ ಈ ಕೃತಿಯಲ್ಲಿ ಅವರ ಅನೇಕ ಕಷ್ಟಗಳು ನೋವು ನಲಿವುಗಳು ಹನಿಸಾಲುಗಳಾಗಿ ಪರಿಣಾಮಕಾರಿಯಾಗಿ ಹೊರಬಂದಿವೆ. ಇಲ್ಲಿ ತಾಯಿಯ ಬಗ್ಗೆ ಅಂತಃಕರಣ, ಅಪಕ್ವತೆ – ಪಕ್ವತೆ ಬಂದು ಬಾಂದವರು ಇವೆಲ್ಲಗಳ ಕುರಿತು ಹನಿ ಸಾಲುಗಳ ರೂಪದಲ್ಲಿ ಪ್ರಕಟವಾಗಿವೆ “ಎಂದು ಪುಸ್ತಕದಲ್ಲಿನ ತಾಯಿಯ ಬಗ್ಗೆ ರಚಿತವಾಗಿರುವ ಸಾಲುಗಳನ್ನು ವಾಚಿಸಿದರು.
ಕಗ್ಗೆರೆ ಪ್ರಕಾಶ್ ರವರು
“ಈ ಹನಿಕವಿತೆಗಳ ಸಂಕಲವನ್ನು ಹೊರತರಲು ಬಹಳ ಹಿಂದೆಯೇ ಪ್ರಯತ್ನ ಪಟ್ಟಿದ್ದುಂಟು ಆದರೆ ಆ ಸಮಯ ನಮ್ಮ ಕಗ್ಗೆರೆ ಪ್ರಕಾಶನ 20 ವರ್ಷ ಪೂರೈಸಿದ ಸಂದರ್ಭದಲ್ಲಿ ಬಂದಿದೆ. ಇಲ್ಲಿವರೆಗೂ ಕಗ್ಗೆರೆ ಪ್ರಕಾಶನದಿಂದ ಎಲ್ಲಾ ಸಾಹಿತ್ಯ ಪ್ರಾಕಾರಗಳನ್ನು ಪ್ರಕಟಿಸಿದ್ದೇವೆ” ಎಂದು ಓದುಗರ ಪ್ರೀತಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿನ ಮುಖ್ಯ ಆಕರ್ಷಣೆಯೆಂದರೆ ಅದು ಡಾII ಪರಮೇಶ್ವರಪ್ಪ ಕುದರಿ ಯವರ ನಿರೂಪಣೆಯದ್ದು.
ತಮ್ಮ ಚುರುಕಿನ ನಿರೂಪಣೆಯನ್ನು ಕಾರ್ಯಕ್ರಮದುದ್ದಕ್ಕೂ ಬಿತ್ತರಿಸುತ್ತ ಗೆಳೆಯ ಶಿವಕುಮಾರ್ ರವರ ಪರಿಚಯವಾಗಿ ಸ್ನೇಹ ತಿರುಗಿದ್ದು ಹಾಗು ಅವರ ಸಾಹಿತ್ಯದಲ್ಲಿನ ಸೃಜನಶೀಲತೆಯನ್ನು ಹೊಗಳಿದರು.
ಬಹಳ ಸಂಕೋಚ ಸ್ವಭಾವದ ಶಿವಕುಮಾರ್ ಜಾಸ್ತಿ ಮಾತನಾಡದೆ ಎಲ್ಲಾ ಓದುಗರಿಗೂ ಹಾಗು ಕೃತಿಯನ್ನು ಹೊರತಂದ ಪ್ರಕಾಶ್ ಹಾಗು ಕಗ್ಗೆರೆ ಪ್ರಕಾಶನದ ತಂಡಕ್ಕೆ ಕೃತಜ್ಞತೆ ಅರ್ಪಿಸಿದರು.
ಕಾರ್ಯಕ್ರಮದ ಇನ್ನೊಂದು ಆಕರ್ಷಣೆಯೆಂದರೆ ಶಿವಕುಮಾರ್ ರವರ ಸಿದ್ದಾಪುರ ಗ್ರಾಮ ಹಾಗು ಚಳ್ಳಕೆರೆ ತಾಲೂಕಿನ ಹಲವು ಗಣ್ಯರು ಮುಖಂಡರು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅಷ್ಟು ದೂರದಿಂದ ಬಂದು ಉಪಸ್ಥಿತರಿದದ್ದು.
ಕನ್ನಡ ಪುಸ್ತಕಗಳನ್ನು ಕೊಂಡು ಓದಿ ಇನ್ನಷ್ಟು ಓದುಗರಿಗೆ ತಲುಪಿಸಿ ಹಾಗು ಕನ್ನಡ ಸಾಹಿತ್ಯವನ್ನು ಬೆಳಿಸಿ ಎಂದು ಸಾಹಿತ್ಯಮೈತ್ರಿ ತಂಡವು ಕಗ್ಗೆರೆ ಪ್ರಕಾಶ್ ಹಾಗು ಕವಿ ಕಲಾವಿದ ಸಿದ್ದಾಪುರ ಶಿವಕುಮಾರ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಆಸಕ್ತರು “ಭಾವ ರೇಖೆಗಳ ನಡುವೆ” ಹನಿಗವಿತೆ ಸಂಕಲವನ್ನು ಕೊಳ್ಳಲು 9663412986 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತರಿಸಿಕೊಳ್ಳಬಹುದು.
ಸಾಹಿತ್ಯಮೈತ್ರಿ ತಂಡ