ಎಲ್ಲೆಂದಲ್ಲಿ,
ಸಾರ್ವಜನಿಕರ ಸಿಸಿಟಿವಿ ಕಣ್ಣುಗಳಿರುವ
ಹಾದಿ-ಬೀದಿಯ ಇಕ್ಕೆಲಗಳನ್ನು
ಹೊರತುಪಡಿಸಿ,
ತಂಪು ಎಸಿಯ ರೂಮಿನೊಳಗೆ
ನಾಲ್ಕು ಕಾಲುಳ್ಳ ಖುರ್ಚಿಯ ಕೆಳಗೆ
ಎರಡು ಕೈಗಳು ಬೆರಳೆಣಿಸುತ್ತಾ
ಒಂದಕ್ಕೊಂದು ಹೊಂದಿಕೊಂಡು
ಮಿಸುಕಾಡುತ್ತಿದ್ದವು
ದೊಡ್ಡ ದೊಡ್ಡ ನೋಟುಗಳ
ಹಸಿ-ಬಿಸಿ ಸುಗಂಧವನ್ನು ಹೀರಲು
ಕಾತುರದಿಂದ ಮೂಗುಗಳಲ್ಲಿಯೂ
ಎಡೆಬಿಡದೆ ಕಡಿತ ಶುರುವಾಗಿತ್ತು
ಬಲಗಾಲು ಕಡಿದಂತೆ
ಕಂತೆಗಳ ಅದೃಷ್ಟದ ಕನಸಂತೆ
ಅದಾರು ಮಲಗಿದ್ದರೋ.. ಕೆಲಸದ ನಡುವೆ
ಸನ್ನೆಗಳ ಸುಳಿವಿಗೆ ಎಚ್ಚರವಾದರು
ಸುಡುಸುಡು ಮಧ್ಯಾಹ್ನ
ಕಪ್ಪು-ತಂಪು ಚಾಳೀಸು ಏರಿಸಿಕೊಂಡು
ಇಬ್ಬಿಬ್ಬರು ಕಳ್ಳರು ವಸೂಲಿಗೆ ನಿಂತಿದ್ದರು
ಜೋಲ್ಲು ಸುರಿಸುತ್ತಾ.. ನೆಕ್ಕಿಕೊಳ್ಳುತ್ತಾ
ಯಾರನ್ನೂ ಬಿಡದೆ ರಕ್ತ ಹೀರುತ್ತಿದ್ದರು
ಡಬಲ್ ಸಂಬಳ ಅವರಿಗೆ; ಅದೃಷ್ಟವಂತರು
ಅಲ್ಲಿಯವರೆಗೂ ಶಿಸ್ತಿನಿಂದಿದ್ದವರು
ನೋಟುಗಳು ಕಂಡಾಕ್ಷಣ
ಬಾಯಿಬಿಟ್ಟು ನಿಲ್ಲತ್ತಿದ್ದರು;
ಕೀಲು ಗೊಂಬೆಗಳಂತೆ
ಅಯ್ಯೋ! ಅವರಿಗೇನೇನು ಕಷ್ಟಗಳೋ..
ದೇವರು ಸರಿಯಿಲ್ಲ!
ಎಲ್ಲರಿಗೂ ಕಷ್ಟಗಳನ್ನು ಕೊಡುತ್ತಾನೆ
ಕೆಲವರಿಗೆ ಕಮ್ಮಿ ಕೋಡುತ್ತಾನೆ
ಯಾವುದೋ ಜನ್ಮದ ಪುಣ್ಯವಿರಬೇಕು
ಹಸಿದು ವ್ಯಾಘ್ರಗಳಾಗಿ
ಒಮ್ಮೊಮ್ಮೆ ಅಸಹಾಯಕರಾಗಿ
ಅಲ್ಲಿಬ್ಬರು ಮತ್ತು ದೂರದಲ್ಲಿಬ್ಬರು
ಬೇಡುತ್ತಾ ನಿಂತಿದ್ದರು
ಅನ್ನಕ್ಕಾಗಿ ಅಲ್ಲ; ನೋಟಿಗಾಗಿ
ಪಾಪ! ಯಾರೋ ಭಿಕ್ಷುಕರಿರಬೇಕು
ಅಯ್ಯಯ್ಯೋ ಅವರು ಭಿಕ್ಷುಕರಲ್ಲಾ,
ಭ್ರಷ್ಟರು!!
ಹೀಗೊಂದು ಹುದ್ಧೆ ಇದೆ ಎಂದು
ನನಗೀಗಲೇ ಗೊತ್ತಾಗಿದ್ದು
ಕ್ಷಮೆಯಿರಲಿ ಪ್ರಮಾದಕ್ಕೆ
ಮತ್ತೊಮ್ಮೆ ಒತ್ತಿ ಹೇಳುವೆ
ಅವರು ಭಿಕ್ಷುಕರಲ್ಲಾ, ಭ್ರಷ್ಟರು!!
ಅನಂತ ಕುಣಿಗಲ್