ಭೋರ್ಗರೆವ ಎರ್ಮಾಯಿ ಜಲಪಾತ

ಭೋರ್ಗರೆವ ಎರ್ಮಾಯಿ ಜಲಪಾತ

ಮಳೆಗಾಲ ಬಂತೆಂದರೆ ಸಾಕು ಮಳೆಗಾಲದುದ್ದಕ್ಕೂ ಇಲ್ಲಿನ ಪ್ರಕೃತಿಗೆ ಒಂಥರಾ ಹಬ್ಬವೆಂಬಂತಾಗಿ ಪ್ರಕೃತಿ ಮಾತೆಯು ಹಚ್ಚ ಹಸುರಿನಿಂದ ಮೈತುಂಬಿ ನಿಲ್ಲುತ್ತಾಳೆ. ಬತ್ತಿ ಹೋಗಿದ್ದ ತೊರೆ, ಕೆರೆ, ನದಿಗಳೆಲ್ಲವೂ ಮೈತುಂಬಿ ಮತ್ತೆ ಜೀವ ಪಡೆದುಕೊಳ್ಳುವುದರಿಂದ ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ.

ಪ್ರವಾಸಿಗರ ಕಣ್ಮನಗಳಿಗೆ ಆಹ್ಲಾದವನ್ನು ನೀಡುವ ಜಲಪಾತಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಬಹಳಷ್ಟು ಕಾಣ ಸಿಗುತ್ತವೆ. ಅಂತಹ ಜಲಪಾತಗಳ ಪೈಕಿ ಬೆಳ್ತಂಗಡಿ ತಾಲೂಕಿನ ದಿಡುಪೆಯ ಕಾಜೂರು ಸಮೀಪವಿರುವ “ಎರ್ಮಾಯಿ” ಜಲಪಾತವೂ ಒಂದು. ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಗ್ರಾಮದ ಸಮೀಪ ಎರ್ಮಾಯಿ ಎಂಬಲ್ಲಿ ದಟ್ಟ ಕಾನನ ನಡುವೆ ಪ್ರಶಾಂತ ವಾತಾವರಣದಲ್ಲಿರುವ ಈ ಜಲಪಾತ ಸುಮಾರು 80 ಅಡಿ ಎತ್ತರದ ಕಲ್ಲು ಬಂಡೆಗಳ ಮಧ್ಯದಿಂದ ಧುಮುಕಿ ಬರುವ ಈ ಜಲಪಾತವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ.

ಎರ್ಮಾಯಿ ಜಲಪಾತ ನೋಡಲು ಸುಂದರವಾಗಿದೆಯೇನೋ ನಿಜ ಆದರೆ ಈ ಜಲಪಾತಕ್ಕೆ ಸಾಗುವ ದಾರಿ ಹಾಗೂ ದಟ್ಟ ಕಾನನಗಳ ನಡುವಿನ ಕವಲು ದಾರಿಗಳು ಪ್ರವಾಸಿಗರನ್ನು ಇನ್ನಷ್ಟು ಪುಳಕಿತರನ್ನಾಗಿಸುತ್ತದೆ. ದಾರಿಯ ಮಧ್ಯದಲ್ಲಿ ಇರುವ ಹಳ್ಳ, ತೊರೆ, ಸೇತುವೆಗಳನ್ನು ದಾಟುತ್ತಾ ಸಾಗುವಾಗ ಆಗುವ ಅನುಭವವೇ ವಿಭಿನ್ನ. ಈ ಜಲಪಾತದಿಂದ ಹರಿದು ಬರುವ ನೀರಿನಿಂದ ಅಲ್ಲಲ್ಲಿ ಕಿರು ವಿದ್ಯುತ್ ಉತ್ಪಾದನಾ ಸ್ಥಾವರವನ್ನೂ ಸ್ಥಾಪಿಸಲಾಗಿದ್ದು ವರ್ಷಪೂರ್ತಿ ಇಲ್ಲಿನ ಸುತ್ತಮುತ್ತಲಿನ ಮನೆಗಳಿಗೆ ನಿರಂತರವಾಗಿ ವಿದ್ಯುತ್ ದೊರಕುವಂತೆ ಮಾಡಲಾಗಿರುವುದು ಈ ಸ್ಥಳದ ವಿಶೇಷತೆಗಳಲ್ಲೊಂದು. ಈ ಮೂಲಕ ಜಗತ್ಪ್ರಸಿದ್ಧ ಜೋಗ ಜಲಪಾತಕ್ಕೂ ಒಂದು ಹಂತದಲ್ಲಿ ಪೈಪೋಟಿ ನೀಡುವಂತೆ ಎರ್ಮಾಯಿ ಜಲಪಾತ ಮೈತಳೆದು ನಿಂತಿದೆ.

ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಪಟ್ಟಣದಿಂದ ಚಾರ್ಮಾಡಿ ಕೊಟ್ಟಿಗೆಹಾರ ರಸ್ತೆಯಲ್ಲಿ ಸಾಗುತ್ತಾ ಸೋಮಂತಡ್ಕ ಎಂಬಲ್ಲಿ ಎಡಗಡೆ ತಿರುವಿನ ರಸ್ತೆಯಲ್ಲಿ ಸುಮಾರು ಹದಿನೈದರಿಂದ ಹದಿನಾರು ಕಿಲೋಮೀಟರ್ ಸಾಗಿದಾಗ ಕಾಜೂರು ಎಂಬಲ್ಲಿ ಸ್ವಂತ ವಾಹನ ಅಥವಾ ಬಸ್ ನಿಂದ ಇಳಿದು ಕಾಡು ದಾರಿಯಲ್ಲಿ ಸುಮಾರು 2 ಕಿ.ಮೀ ಕ್ರಮಿಸಿದರೆ ಈ ಪ್ರಸಿದ್ಧ ಎರ್ಮಾಯಿ ಜಲಪಾತ ತಪ್ಪಲನ್ನು ತಲುಪಬಹುದು. ಕಾಜೂರು ಎಂಬ ಸ್ಥಳದಿಂದ ಈ ಜಲಪಾತದ ತಪ್ಪಲನ್ನು ತಲುಪುವ ದಾರಿಯು ಸಂಪೂರ್ಣ ಕಚ್ಚಾ (ಮಣ್ಣಿನ) ರಸ್ತೆಯಾಗಿದ್ದು ಇಲ್ಲಿಂದ ನಡೆದುಕೊಂಡೇ ಸಾಗಬೇಕಿದೆ. ಇಲ್ಲಿಗೆ ಸಾಗುವ ದಾರಿಯ ಮಧ್ಯದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ತುಂಬಿ ಹರಿಯುವ ನೀರಿನಲ್ಲೇ ನಡೆದುಕೊಂಡು ಹೋಗುವುದು ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಒಂದು ವಿಭಿನ್ನ ಅನುಭವವನ್ನು ನೀಡುತ್ತದೆ.

ಈ ಜಲಪಾತಕ್ಕೆ ಎರ್ಮಾಯಿ ಜಲಪಾತ ಎಂಬ ಹೆಸರು ಬಂದಿದ್ದು ಹೇಗೆ?

‘ಏಳುವರೆ ಹಳ್ಳ’ ಎಂಬ ಸ್ಥಳ ಎರ್ಮಾಯಿ ಜಲಪಾತದ ಉಗಮ ಸ್ಥಾನವೆಂದು ಹೇಳಲಾಗಿದ್ದು, ಹಿಂದಿನ ಕಾಲದಲ್ಲಿ ಏಳು ಮಂದಿ ಯುವಕರು ಗದ್ದೆಯ ಉಳುಮೆಯನ್ನು ಮಾಡಿ ಉಳುಮೆಯ ಎತ್ತುಗಳನ್ನು ಈಗ ಜಲಪಾತವಿರುವ ಸ್ಥಳದಲ್ಲಿ ನಿತ್ಯ ತೊಳೆಯುತ್ತಿದ್ದಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಈ ಎತ್ತುಗಳು ಇಲ್ಲಿ ಮಾಯವಾದವೆಂದು ಇಲ್ಲಿನ ಹಿರಿಯರು ಕಥೆಯೊಂದನ್ನು ಹೇಳುತ್ತಾರೆ. ಇಲ್ಲಿನ ಪ್ರಾದೇಶಿಕ ಭಾಷೆ ತುಳುವಾಗಿದ್ದು, ತುಳು ಭಾಷೆಯಲ್ಲಿ ಎತ್ತಿಗೆ ‘ಎರು’ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಎತ್ತುಗಳು ಮಾಯವಾದ ಕಾರಣದಿಂದ ‘ಎರು ಮಾಯ’ ಎಂದು ಜನರು ಕರೆಯುತ್ತಿದ್ದು, ಕ್ರಮೇಣ ಜನರ ಬಾಯಿ ಮಾತಿನಲ್ಲಿ ಎರು ಮಾಯ ಸ್ಥಳವು ‘ಎರ್ಮಾಯಿ’ ಎಂದು ಬದಲಾಯಿತೆಂದು ಸ್ಥಳ ಪುರಾಣ ತಿಳಿಸುತ್ತದೆ. ಈ ಜಲಪಾತದ ಸುತ್ತಮುತ್ತಲ ಪ್ರದೇಶವೇ ವಿಭಿನ್ನವಾಗಿದ್ದು, ಭೋರ್ಗರೆವ ಜಲಪಾತ ಒಂದೆಡೆಯಾದರೆ, ಹಚ್ಚ ಹಸುರಿನಿಂದ ಕಂಗೊಳಿಸುವ ಕಾಡು ಹಾಗೂ ಹಚ್ಚ ಹಸಿರಿನಿಂದ ತುಂಬಿರುವ ತೋಟಗಳು ಇನ್ನೊಂದೆಡೆ.

Ermayi Falls- Things you should be knowing about if you are planning your  Trek

ಪ್ರತಿ ವರ್ಷದ ಆಗಸ್ಟ್ ತಿಂಗಳಿಂದ ಡಿಸೆಂಬರ್ ತಿಂಗಳ ಮಧ್ಯದ ಅವಧಿಯಲ್ಲಿ ಇಲ್ಲಿನ ಜಲಪಾತಕ್ಕೆ ಭೇಟಿ ನೀಡುವುದು ಹೆಚ್ಚು ಉತ್ತಮ. ಏಕೆಂದರೆ ಈ ಅವಧಿಯಲ್ಲಿ ಜಲಪಾತ ಮೈತುಂಬಿ ಹರಿಯುವುದರ ಮೂಲಕ ಪ್ರವಾಸಿಗರು ಹೆಚ್ಚು ಖುಷಿ ಪಡಬಹುದಾಗಿದ್ದು, ಈ ಅವಧಿಯನ್ನು ಅಪಾಯವಿಲ್ಲದ ಅವಧಿ ಎಂದು ಹೇಳಬಹುದು. ದಟ್ಟ ಕಾನನದ ನಡುವೆ ಮೈತಳೆದು ನಿಂತಿರುವ ಎರ್ಮಾಯಿ ಜಲಪಾತವು ದಟ್ಟ ಕಾನನದ ಮಧ್ಯೆ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕಿ ಹರಿಯುತ್ತಿದ್ದರೆ ಗುಯ್ಗುಡುವ ಜೀರುಂಡೆಗಳ ಕಲರವ ಮತ್ತೊಂದೆಡೆ ಮನಸ್ಸಿಗೆ ಮುದ ನೀಡುತ್ತದೆ. ಈ ಎಲ್ಲಾ ಪ್ರಕೃತಿಯ ಸೌಂದರ್ಯದ ಸಮ್ಮಿಳಿತವನ್ನು ನೋಡಬೇಕೆಂದರೆ ಪ್ರವಾಸಿಗರು ಎರ್ಮಾಯಿ ಜಲಪಾತಕ್ಕೆ ಬರಬೇಕು.

ಈ ಜಲಪಾತವು ಪಟ್ಟಣದಿಂದ ಬಲು ದೂರದಲ್ಲಿ ಇರುವುದರಿಂದ ಇಲ್ಲಿ ಯಾವುದೇ ಹೋಟೆಲುಗಳ ಲಭ್ಯತೆ ಇರುವುದಿಲ್ಲ. ಆದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಉಜಿರೆ ಅಥವಾ ಸೋಮಂತಡ್ಕ ಪಟ್ಟಣದಿಂದಲೇ ಆಹಾರವನ್ನು ಕಟ್ಟಿಕೊಂಡು ಬರಬೇಕು. ಕುಡಿಯುವ ನೀರು ಇಲ್ಲಿ ಹೇರಳವಾಗಿ ಲಭ್ಯವಿರುವುದರಿಂದ ನೀರಿನ ಸಮಸ್ಯೆಯೇನೂ ಕಂಡುಬಾರದು. ಬೆಟ್ಟದ ತಪ್ಪಲಲ್ಲಿ ಈ ಜಲಪಾತವಿರುವುದರಿಂದ ಜೂನ್ ತಿಂಗಳಿಂದ ಎಪ್ರಿಲ್ ತಿಂಗಳವರೆಗೂ ಅಂದರೆ ಬಹುತೇಕ ವರ್ಷವಿಡೀ ಈ ಜಲಪಾತವು ತುಂಬಿ ಧುಮುಕುತ್ತದೆ. ಇಲ್ಲಿಗೆ ಸಾಗುವ ದಾರಿಯಲ್ಲಿ ಜಿಗಣೆಗಳು ಶತ್ರುವಿನಂತೆ ಪ್ರವಾಸಿಗರನ್ನು ಕಾಡುವುದರಿಂದ ಇವುಗಳಿಂದ ತಪ್ಪಿಸಿಕೊಳ್ಳಲು ಪ್ರವಾಸಿಗರು ನಶ್ಯ ಅಥವಾ ಸುಣ್ಣವನ್ನುತಮ್ಮ ಕಾಲುಗಳಿಗೆ ಸರಿಯಾಗಿ ಸವರಿಕೊಂಡು ಹೋಗುವುದರೊಂದಿಗೆ ಹೆಚ್ಚುವರಿಯಾಗಿ ಇವುಗಳನ್ನು ತಮ್ಮೊಂದಿಗೆ ಒಯ್ಯುವುದು ಉತ್ತಮ. ಈ ಜಲಪಾತವನ್ನು ನೋಡಲು ದೂರದ ಮೈಸೂರು, ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಿಂದ ಟೆಕ್ಕಿಗಳು ಮತ್ತು ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಾರೆ.

ಎರ್ಮಾಯಿ ಜಲಪಾತವನ್ನು ತಲುಪಲು ಇನ್ನೊಂದು ರಸ್ತೆ ಇದ್ದು ಬೆಳ್ತಂಗಡಿ ತಾಲೂಕಿನಿಂದ ಕಿಲ್ಲೂರು ಕೊಲ್ಲಿ ರಸ್ತೆಯ ಮೂಲಕ ಬಸ್ಸಿನಲ್ಲಿ ತಲುಪಿ ಅಲ್ಲಿಂದ ಖಾಸಗಿ ವಾಹನ ಅಥವಾ ಕಾಲ್ನಡಿಗೆ ಮೂಲಕ ನಡೆದು ತೆಪ್ಪದ ಮೂಲಕ ನದಿಯನ್ನು ದಾಟಿ ಈ ಎರ್ಮಾಯಿ ಜಲಪಾತವನ್ನು ತಲುಪಬಹುದಾಗಿದೆ. ಇಲ್ಲಿಗೆ ಇಲ್ಲಿನ ಜಲಪಾತದ ಅಕ್ಕಪಕ್ಕದ ಬಂಡೆ ಕಲ್ಲುಗಳು ಅತ್ಯಂತ ಆಳವಾಗಿ ಹಾಗೂ ಕಡಿದಾಗಿದ್ದು ನೋಡಲು ಅತ್ಯಂತ ನಯನ ಮನೋಹರವಾಗಿದ್ದರೂ ಸಾವನ್ನೇ ತಮ್ಮ ಮಡಿಲಲ್ಲಿ ಬಚ್ಚಿಟ್ಟುಕೊಂಡಿವೆ ಎನ್ನಬಹುದು. ಪ್ರವಾಸಿಗರು ತಮ್ಮ ಕೌಶಲ್ಯವನ್ನು ಈ ಬಂಡೆ ಕಲ್ಲುಗಳ ಮೇಲೆ ತೋರಲು ಹೋಗಿ, ಈ ಬಂಡೆ ಕಲ್ಲುಗಳ ಮೇಲೆ ಏರಿ ಅದೆಷ್ಟೋ ಮಂದಿ ಅಲ್ಲಿಂದ ಜಾರಿ ಕೆಳಗೆ ಬಿದ್ದು ಪ್ರಾಣಕ್ಕೆ ಸಂಚಕಾರ ಮಾಡಿಕೊಂಡ ಸಂದರ್ಭಗಳಿವೆ. ಆದ್ದರಿಂದ ಇಲ್ಲಿನ ಕಲ್ಲು ಬಂಡೆಗಳನ್ನು ಏರುವ ಸಾಹಸಕ್ಕೆ ಯಾವುದೇ ಕಾರಣಕ್ಕೂ ಚಾರಣಿಗರು ಅಥವಾ ಪ್ರವಾಸಿಗರು ಮಾಡಲೇಬಾರದು.

ಪ್ರಕೃತಿಯ ಅಚ್ಚರಿಗಳಲ್ಲೊಂದಾದ ಈ ಜಲಪಾತವು ನೋಡಲು ನಯನ ಮನೋಹರವಾಗಿದ್ದರೂ ಸ್ವಲ್ಪ ಎಚ್ಚರಿಕೆ ತಪ್ಪಿ ಮೈಮರೆತರೂ ಸಾವನ್ನೇ ಆಹ್ವಾನಿಸಬಹುದು. ಆದ್ದರಿಂದ ಇಂತಹ ಪ್ರದೇಶಗಳಿಗೆ ತೆರಳುವಾಗ ಸಾಕಷ್ಟು ಮಾನಸಿಕ ಸಿದ್ಧತೆಯೊಂದಿಗೆ ತೆರಳಿ ಇಲ್ಲಿ ಸಾಹಸಗಳನ್ನು ಮಾಡುವ ಹಾಗೂ ತೋರುವ ಹುಂಬುತನವನ್ನು ಮಾಡದೇ ಇಲ್ಲಿ ಸಂತೊಷವಾಗಿ ಸಮಯವನ್ನು ಕಳೆದು ಬರುವುದು ಉತ್ತಮ. ಪ್ರವಾಸಿಗರು ಇಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಬಂದು ಇಲ್ಲಿನ ಪರಿಸರವನ್ನು ಹಾಳು ಮಾಡುವ ಪ್ಲಾಸ್ಟಿಕ್, ನೀರಿನ ಬಾಟಲಿಗಳನ್ನು ಎಲ್ಲೆಂದರೆಲ್ಲಿ ಎಸೆದು ಇಲ್ಲಿನ ಪರಿಸರವನ್ನು ಹಾಳು ಮಾಡದೇ ನಿರುಪಯೋಗಿ ವಸ್ತುಗಳನ್ನು ಮತ್ತೆ ತಮ್ಮೊಂದಿಗೇ ಒಯ್ದು ಸೂಕ್ತವಾದ ಸ್ಥಳದಲ್ಲಿ ವಿಲೇವಾರಿ ಮಾಡುವ ಮನಸ್ಥಿತಿಯನ್ನು ತೋರಬೇಕಿದೆ.

ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು ದ,ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *