ಶ್ರೀ ಕ್ಷೇತ್ರ ಬಿಚ್ಚಾಲೆ, ಬಿಚ್ಚಾಲಿ ಅಥವಾ ಭಿಕ್ಷಾಲಯ
ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ನಾನ್ಣುಡಿ ಇದೆ. ಈ ಇಬ್ಬರನ್ನು ನೋಡಲು ತಿರುಪತಿಗೆ ಹಾಗೂ ಮಂತ್ರಾಲಯಕ್ಕೆ ಲಕ್ಷಾಂತರ ಮಂದಿ ಹೋಗಿ ದರ್ಶನ ಪಡೆದು ಪುನೀತಾರಾಗುತ್ತಾರೆ. ಆದರೆ ಮಂತ್ರಾಲಯಕ್ಕೆ ಹೋದ ಬಹಳ ಮಂದಿ ಗುರುರಾಯರ ದರ್ಶನ ಪಡೆದು ಮತ್ತೆ ಕೆಲವರು ಗಾಣದಾಳ್ ನಲ್ಲಿರುವ ಪಂಚಮುಖಿ ಅಂಜನೇಯನ ದರ್ಶನ ಪಡೆದು ವಾಪಸ್ ಹೋಗಿ ಬಿಡುತ್ತಾರೆ. ಮಂತ್ರಾಲಯದ ಹತ್ತಿರದಲ್ಲೇ ಇನ್ನೊಂದು ಪರಮ ಪವಿತ್ರವಾದ ಕ್ಷೇತ್ರವಿದೆ. ಅದೇ ಬಿಚ್ಚಾಲೆ, ಬಿಚ್ಚಾಲಿ ಅಥವಾ ಹಿಂದೆ ಭಿಕ್ಷಾಲಯ ಎಂದು ಕರೆಯಲ್ಪಡುತ್ತಿದ್ದ ಕ್ಷೇತ್ರ.
ಇದು ಶ್ರೀ ಗುರು ರಾಘವೇಂದ್ರರ ತಪೋಭೂಮಿ ಎಂದರೆ ತಪ್ಪಾಗಲಾರದು. ಶ್ರೀ ಗುರು ರಾಘವೇಂದ್ರರ ಪರಮಾಪ್ತರಾಗಿದ್ದ ಶ್ರೀ ಅಪ್ಪಣ್ಣಾಚಾರ್ಯರ ಊರು ಇದು.
ಮಂತ್ರಾಲಯದಿಂದ ಕೇವಲ 22 ಕಿಲೋ ಮೀಟರ್ ದೂರದಲ್ಲಿರುವ ಇದು ಪರಮ ಪಾವನ ಕ್ಷೇತ್ರ. ರಾಯರ ಪರಮಾಪ್ತರಾಗಿದ್ದ ಅಪಾರ ಪಾಂಡಿತ್ಯವನ್ನು ಹೊಂದಿದ್ದ ಅಪ್ಪಣ್ಣಾಚಾರ್ಯರು ಇಲ್ಲಿ ಸಾವಿರಾರು ವಿಧ್ಯಾರ್ಥಿಗಳಿಗೆ ವಿದ್ಯಾಧಾನ ಮಾಡಿದ ಸ್ಥಳ. ದೇಶದ ನಾನಾ ಮೂಲೆಗಳಿಂದ ಅಪ್ಪಣ್ಣಾಚಾರ್ಯರ ಬಳಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಲು ಸಾವಿರಾರು ವಿಧ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರಂತೆ. ತುಂಗಭದ್ರಾ ನದಿಯ ತೀರದ ದಡದಲ್ಲಿದ್ದ ಅಶ್ವಥ ವೃಕ್ಷದ ನೆರಳಿನಲ್ಲಿದ್ದ ಅಪ್ಪಣ್ಣಾಚಾರ್ಯರು ನೆಡೆಸುತ್ತಿದ್ದ ಗುರುಕುಲ ಒಂದು ತೆರೆದ ವಿಶ್ವವಿಧ್ಯಾನಿಲಯದಂತಿತ್ತು. ಇಲ್ಲಿಗೆ ಬರುವ ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ವಿಧ್ಯಾರ್ಥಿಗಳು ಭಿಕ್ಷೆ ಬೇಡಿ ಅಕ್ಕಿಯನ್ನು ತರುತ್ತಿದ್ದರು. ವಿಧ್ಯಾಭ್ಯಾಸಕ್ಕಾಗಿ ಭಿಕ್ಷೆ ಬೇಡುವುದು ಅಂದಿನ ದಿನಗಳಲ್ಲಿ ಮಹತ್ತರ ಕಾರ್ಯವೆನಿಸಿತ್ತು. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಭಿಕ್ಷೆ ಬೇಡಲು ಬಂದರೆ “ಭವತಿ ಭಿಕ್ಷಾಂದೇಹಿ “ಎನ್ನುವ ಮೊದಲೇ ಅವರ ಜೋಳಿಗೆಗೆ ಭಿಕ್ಷೆ ಹಾಕುತ್ತಿದ್ದರಂತೆ ಇಲ್ಲಿನ ಗೃಹಣಿಯರು. ಹೀಗೆ ತಂದ ಅಕ್ಕಿಯನ್ನು ತುಂಗಭದ್ರಾ ನದಿಯಲ್ಲಿ ತೊಳೆದು ಗಂಟು ಕಟ್ಟಿ ಇಲ್ಲಿದ್ದ ಅರಳಿ ಮರಕ್ಕೆ ಕಟ್ಟುತ್ತಿದ್ದರು. ದಿನವೂ ವಿದ್ಯಾಭ್ಯಾಸ ಮುಗಿದ ಮೇಲೆ ಅಪ್ಪಣ್ಣಾಚಾರ್ಯರು ಶ್ರೀ ಅನ್ನಪೂರ್ಣೇಶ್ವರಿಯನ್ನು ಧ್ಯಾನಿಸಿ ತೀರ್ಥವನ್ನು ಪ್ರೋಕ್ಷಿಸಿದರೆ ಗಂಟಿನಲ್ಲಿ ಕಟ್ಟಿಟ್ಟಿದ್ದ ಅಕ್ಕಿ ಅನ್ನವಾಗಿರುತ್ತಿತ್ತಂತೆ. ಶ್ರೀಮದ್ವಾಚಾರ್ಯರ ಪೂಜೆ, ನೈವೇದ್ಯ, ವೈಶ್ವದೇವ ಹಸ್ತೊದಕದ ನಂತರ ಗುರುಕುಲದ ತಮ್ಮ ಪೀತಿಯ ಶಿಷ್ಯರೊಂದಿಗೆ ಭೋಜನ ಮಾಡುತ್ತಿದ್ದರು ಅಪ್ಪಣ್ಣಾಚಾರ್ಯರು.
ಒಮ್ಮೆ ಇಲ್ಲಿಗೆ ಬಂದ ಶ್ರೀ ಗುರುರಾಯರು ಪವಿತ್ರವಾದ ಜಪದ ಕಟ್ಟೆ, 60 ವರ್ಷ ಹಳೆಯದಾಗಿದ್ದ ಅಪ್ಪಣ್ಣಾಚಾರ್ಯರ ಮನೆ ಹಾಗೂ ಅಪ್ಪಣ್ಣಾಚಾರ್ಯರು ನೆಡೆಸುತ್ತಿದ್ದ ಗುರುಕುಲದ ಬಗ್ಗೆ ತಿಳಿದು ಪ್ರಭಾವಿತರಾಗುತ್ತಾರೆ. ಮೊದಲ ಬೇಟಿಯಲ್ಲೇ ಆಪ್ತರಾದ ಇವರ ಸ್ನೇಹ ಎಷ್ಟರ ಮಟ್ಟಿಗೆ ಬೆಳೆಯುತ್ತದೆಂದರೆ ಶ್ರೀ ಗುರುರಾಯರು ಅಪ್ಪಣ್ಣಾಚಾರ್ಯರ ಮನೆಯಲ್ಲೇ 13 ವರ್ಷಗಳ ಕಾಲ ತಂಗುತ್ತಾರೆ. ಶ್ರೀ ಅಪ್ಪಣ್ಣಾಚಾರ್ಯರ ಮನೆ ಇಗಲೂ ಇದ್ದು ರಾಯರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವನ್ನು ಈಗಲೂ ಇಲ್ಲಿ ನೋಡಬಹುದು.ಅಪ್ಪಣ್ಣಾಚಾರ್ಯರ ಗುರುಭಕ್ತಿ, ಪ್ರಾಮಾಣಿಕತೆ, ಪ್ರತಿ¥sóÀಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದ ರಾಯರ ಸೇವೇ ರಾಯರನ್ನು ಅಪ್ಪಣ್ಣಾಚಾರ್ಯರನ್ನು ಇನ್ನೂ ಹತ್ತಿರವಾಗಿಸುತ್ತದೆ. ರಾಯರಿಗೆ ಬೇಳೆಯ ಚಟ್ನಿ ಇಷ್ಟವಾದ್ದರಿಂದು ಅಪ್ಪಣ್ಣಾಚಾರ್ಯರು ತಮ್ಮ ಕೈಯ್ಯಾರೆ ರುಬ್ಬಿ ಚಟ್ನಿ ಮಾಡಿ ರಾಯರಿಗೆ ಬಡಿಸುತ್ತಿದ್ದರು. ಚಟ್ನಿ ತಿರುವಲು ಬಳಸುತ್ತಿದ್ದ ಒರಳಕಲ್ಲು ಇಲ್ಲಿ ಈಗಲೂ ನೋಡಲು ಲಭ್ಯ. ರಾಯರು ಜಪದಕಟ್ಟೆಯಲ್ಲೇ ಹೆಚ್ಚು ಹೊತ್ತು ಧ್ಯಾನಾಸಕ್ತರಾಗಿರುತ್ತಿದ್ದರು.
ಸುಮಾರು ಹದಿಮೂರು ವರ್ಷಗಳ ಕಾಲ ಜಪತಪಾದಿಗಳನ್ನು ಮಾಡಿದ್ದರು. ಜಪದ ಕಟ್ಟೆಯಲ್ಲಿ ರಾಯರು ಕುಳಿತಿದ್ದರೆ ಅಪ್ಪಣ್ಣಾಚಾರ್ಯರು ಅವರ ಕಾಲನ್ನು ಒತ್ತುತ್ತಿದ್ದರಂತೆ. ಅಶುಕವಿಯಾಗಿದ್ದ ಅಪ್ಪಣ್ಣಾಚರ್ಯರು ಕುಳಿತಲ್ಲೇ ಶ್ಲೋಕಗಳನ್ನು ರಚಿಸುತ್ತಿದ್ದದ್ದು ಮತ್ತು ಅವರಿಗಿದ್ದ ಪಾಂಡಿತ್ಯ ಹಾಗೂ ಅವರು ತೋರುತ್ತಿದ್ದ ಗುರುಭಕ್ತಿ ರಾರಯನ್ನು ಬಹಳ ಪ್ರಭಾವಿತರನ್ನಾಗಿಸಿತ್ತು. ಅಪ್ಪಣ್ಣಾಚಾರ್ಯರ ಮನೆಯ ಬಿಲದಲ್ಲಿದ್ದ ನಾಗರ ಹಾವು ಕೂಡ ರಾಯರಿಗೆ ಪರಮಾಪ್ತವಾಗಿತ್ತು. ಶೇಶದೇವರು ಎಂಬ ಹೆಸರಿನಲ್ಲಿ ರಾಯರ ಹಸ್ತದಿಂದ ಕಲ್ಲಿನರೂಪದಲ್ಲಿ ಇಗಲೂ ಅಪ್ಪಣ್ಣಾಚಾರ್ಯರ ಮನೆಯಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವುದನ್ನು ನೋಡಬಹುದು. ರಾಯರ ಬಗ್ಗೆ ಬಹಳ ಸ್ತೋತ್ರಗಳನ್ನು ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ಅಪ್ಪಣ್ಣಾಚಾರ್ಯರು ಬರೆದಿದ್ದಾರೆ.
ರಾಯರ ಅಪ್ಪಣೆ ಪಡೆದು ತೀರ್ಥಯಾತ್ರೆಗೆ ಹೋಗಿದ್ದ ಅಪ್ಪಣ್ಣಾಚಾರ್ಯರಿಗೆ ರಾಯರು ಬೃಂದಾವನಸ್ಥರಾಗುವ ವಿಷಯ ತಿಳಿದು ಕೊನೆಯ ಬಾರಿ ದರ್ಶನ ಮಾಡೋಣವೆಂದು ಹೊರಡುತ್ತಾರೆ. ಅದರೆ ಮಳೆಗಾಲದ ಕಾರಣ ತುಂಗಭದ್ರ ನದಿ ತುಂಬಿ ಹರಿಯುತ್ತಿರುತ್ತದೆ, ಅದರೂ ಲೆಕ್ಕಿಸದೆ ಗುರುರಾಯರ ಸ್ಮರಣೆ ಮಾಡುತ್ತಾ ಮನದಲ್ಲಿ ಅವರನ್ನೇ ತುಂಬಿಕೊಂಡ ಅಪ್ಪಣ್ಣಾಚಾರ್ಯರಿಂದ ಗುರುಸ್ತೋತ್ರವು ತಾನಾಗಿಯೇ ಹೊರಬರುತ್ತಿರಲು ಅದನ್ನೇ ಉಚ್ಚರಿಸುತ್ತಾ ನದಿಯನ್ನು ದಾಟಿ ತೀರ ಸೇರುತ್ತಾರೆ. ಅದರೆ ಇವರು ಬರುವಷ್ಟರಲ್ಲಿ ಬೃಂದಾವನಕ್ಕೆ ಕೊನೆಯ ಶಿಲೆಯನ್ನು ಸೇರಿಸಿಬಿಡುತ್ತಾರೆ. ಇದರಿಂದ ದುಖಃ ಉಮ್ಮಳಿಸಿ ಬಂದು ಅವರು ರಚಿಸುತ್ತಿದ್ದ ಶ್ಲೋಕದ ಕೊನೆಯ ಏಳು ಅಕ್ಷರಗಳು ಹಾಗೆಯೇ ಉಳಿದುಕೊಂಡಾಗ ಬೃಂದಾವನದೊಳಗಿಂದಲೇ ರಾಯರು “ಸಾಕ್ಷೀಹಯಾಸ್ಯೋತ್ರಹಿ” ಎಂದು ರಾಯರು ಕೊನೆಯ ಶ್ಲೋಕವನ್ನು ಪೂರ್ತಿಮಾಡುತ್ತಾರೆ. ನೀವು ಭಕ್ತಿಯಿಂದ ಪಠಿಸಿದ ಸ್ತೋತ್ರಕ್ಕೆ ನಾವು ಜಪ ಮಾಡುತ್ತಿರುವ ಹಯಗ್ರೀವದೇವರೇ ಸಾಕ್ಷಿ ಎಂದು ಇದರ ಅರ್ಥ. ಅಂದಿನಿಂದ ಅಪ್ಪಣ್ಣಾಚಾರ್ಯರು ರಚಿಸಿದ ಈ ಸ್ತೋತ್ರವನ್ನು 108 ಭಾರಿ ಭಕ್ತಿಯಿಂದ ಪಾರಾಯಣ ಮಾಡುವವರು ಸಕಲ ಅಭಿಷ್ಟವನ್ನು ಹೊಂದುತ್ತಾರೆ ಎಂದು ನಂಬಿಕೆ.
ನಂತರ ಬಿಚ್ಚಾಲೆಯಲ್ಲಿ ರಾಯರು ಕುಳಿತು ಜಪತಪ ಮಾಡುತ್ತಿದ್ದ ಸ್ಥಳದಲ್ಲಿ ಅಪ್ಪಣ್ಣಾಚಾರ್ಯರು ಕೆತ್ತಿಸಿ ಪ್ರತಿಷ್ಟಾಪಿಸಿದ ಏಕಶಿಲಾ ಬೃಂದಾವನವಿದ್ದು ರಾಯರು ಇಲ್ಲಿಯೂ ಸಹ ಬಂದು ಸೇವೆಮಾಡುವ ಭಕ್ತರ ಅಭಿಷ್ಟಗಳನ್ನು ನೆರವೇರಿಸುತ್ತಿದ್ದಾರೆ. ಬಹಳ ಪವಿತ್ರ ಸ್ಥಳವಾದ ಇಲ್ಲಿ ಅನೇಕ ಮಹಾಮಹಿಮರು ಬೇಟಿ ಕೊಟ್ಟಿದ್ದಾರೆ. ಶ್ರೀಪಾದರಾಜರು ಸ್ಥಾಪಿಸಿದ ಉಗ್ರನಾರಸಿಂಹ ದೇವರ ಸನ್ನಿಧಾನವಿದೆ. ರಾಯರೇ ಸ್ಥಾಪಿಸಿದ ಮುಖ್ಯ ಪ್ರಾಣ ದೇವರು, ವ್ಯಾಸರಾಜರಿಂದ ಸ್ಥಾಪಿತ ಮುಖ್ಯಪ್ರಾಣದೇವರು ಇಲ್ಲಿಗೆ ಬರುವ ಭಕ್ತರನ್ನು ಆಶೀರ್ವದಿಸುತ್ತಾರೆ. ಇಲ್ಲಿರುವ ಸಾವಿರಾರು ನಾಗಪ್ರತಿಮೆಗಳು ಇಲ್ಲಿ ಹಿಂದೆ ನಾಗಕ್ಷೇತ್ರವಿತ್ತೆಂಬುದಕ್ಕೆ ಸಾಕ್ಷಿಯಾಗಿದೆ. ಶ್ರಾವಣಮಾಸ ಮಳೆಗಾಲವಾದ್ದರಿಂದ ತುಂಗಭದ್ರೆ ಉಕ್ಕಿ ಗುರುರಾಯರಿಗೆ ಜಲಾಭಿಷೇಕ ಮಾಡುತ್ತಿರುತ್ತಾಳೆ ಆಗ ಇಲ್ಲಿ ಗುರುರಾಯ ಆರಾಧನೆಯನ್ನು ಆಚರಿಸಕ್ಕೆ ಅಗುವುದಿಲ್ಲವಾದ ಕಾರಣ ಪುಷ್ಯಮಾಸದಲ್ಲಿ ಪುರಂದರ ಆರಾಧನೆಯ ಸಮಯದಲ್ಲಿ ವಿಜೃಂಭಣೆಯಿಂದ ಅಪ್ಪಣ್ಣಾಚಾರ್ಯರ ವಂಶಿಕರು ಆಚರಿಸುತ್ತಾರೆ. ಝುಳು ಝುಳು ಹರಿಯುವ ತುಂಗಭದ್ರೆ ಹಸಿರಿನಿಂದ ಅವರಿಸಿರುವ ಗಿಡಮರಗಳು ಸುಂದರ ಪರಿಸರ ಮನಸ್ಸಿಗೆ ಉಲ್ಲಾಸವನ್ನು ತರುತ್ತದೆಯಲ್ಲದೇ ಸಕಾರಾತ್ಮಕ ಶಕ್ತಿಯ ಅನುಭವವಾಗುತ್ತಾದೆ. ಇಲ್ಲೂ ಸಹ ಬರುವ ಭಕ್ತರಿಗೆ ಮಧ್ಯಾಹ್ನ 1 ಘಂಟೆಗೆ ತೀರ್ಥ ಪ್ರಸಾದದ ವ್ಯವಸ್ಥೆ ಇರುತ್ತದೆ. ಮನುಕುಲದ ಉದ್ದಾರಕ್ಕೆ ರಾಯರ ಅಷ್ಟೋತ್ತರ ರಚಿಸಿಕೊಟ್ಟ ಶ್ರೀ ಅಪ್ಪಣ್ಣಾಚಾರ್ಯರ ಊರು ಹಾಗೂ ರಾಯರು ಜಪತಪಾದಿಗಳನ್ನು ಮಾಡಿದ ಬಿಚ್ಚಾಲೇ ಕ್ಷೇತ್ರ ನಿಜಕ್ಕೂ ಭೇಟಿಕೊಡಬಹುದಾದಂತಹ ಸ್ಥಳ.
ಹೋಗುವುದು ಹೇಗೆ? ಮಂತ್ರಾಲಯದಿಂದ ರಾಯಚೂರು ಹೋಗುವ ಮಾರ್ಗದಲ್ಲಿ ಗಿಲೆಸೂಗುರು ಕ್ಯಾಂಪಿಗೆ ಬಂದು ಅಲ್ಲಿಂದ ಬಸ್ಸು, ಆಟೋ ಅಥವಾ ಜೀಪಿನ ಮೂಲಕ ಇಲ್ಲಿಗೆ ತಲುಪಬಹುದು. ರಾಯಚೂರಿನಿಂದ 35 ಕಿಲೋ ಮೀಟರ್ ಇರುವ ಬಿಚ್ಚಾಲೆ ಕರ್ನಾಟಕಕ್ಕೆ ಸೇರುತ್ತದೆ.
ಡಾ|| ಪ್ರಕಾಶ್ ಕೆ.ನಾಡಿಗ್
ತುಮಕೂರು