ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ

ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ

ಲೇಖಕರು: ಡಾ||ಸಂತೇಬಾಚಹಳ್ಳಿ ನಂಜುಂಡಸ್ವಾಮಿ
ಪ್ರಕಾಶಕರು: ಸುಮೇರು ಪ್ರಕಾಶನ

ಸಾಕಷ್ಟು ಸಮಯ ಮತ್ತು ಶ್ರಮ ಬೇಡುವ ಕೆಲಸವೆಂದರೆ ಪ್ರಾಗೈತಿಹಾಸಿಕ ಅಧ್ಯಯನ.ಶಾಸನಗಳ ಅಧ್ಯಯನ ಮಾಡುತ್ತಾಅವುಗಳು ನೀಡುವ ಸಾಂಸ್ಕೃತಿಕ ಒಳನೋಟಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾ ಸುದೀರ್ಘವಾದ ಅಧ್ಯಯನ ಮಾಡಿ ಸಿದ್ಧಪಡಿಸಿದ ಅಧ್ಯಯನ ಪ್ರಬಂಧವೇ ಮಂಡ್ಯ ಜಿಲ್ಲೆಯ ಶಾಸನ ಮತ್ತು ಸಂಸ್ಕೃತಿ.
ಒಂದು ಭೌಗೋಳಿಕ ಪ್ರದೇಶದ ರಾಜಕೀಯ,ಸಾಮಾಜಿಕ,ಆರ್ಥಿಕ ಪರಿಸ್ಥಿತಿಯನ್ನು ಆಯಾ ಪ್ರದೇಶದಲ್ಲಿ ಲಭ್ಯವಿರುವ ಶಿಲಾಶಾಸನಗಳು ತಿಳಿಸುತ್ತವೆ ಎಂಬುದಕ್ಕೆ ಈ ಪ್ರೌಢ ಪ್ರಬಂಧವೇ ಸಾಕ್ಷಿ.

ಆಂಗ್ಲ ಭಾಷೆಯ passion ಎಂಬ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಗಾಢಾನುರಕ್ತಿ ಎಂದು ಕರೆದವರು ನನ್ನ ಗುರುಗಳಾದ ಶ್ರೀ ಸತ್ಯೇಶ್ ಬೆಳ್ಳೂರ್ ಅವರು. ಈ ಗಾಢಾನುರಕ್ತಿ ಗೂ ಡಾ||ಸಂತೇಬಾಚಹಳ್ಳಿ ನಂಜುಂಡಸ್ವಾಮಿಯವರಿಗೂ ಅವಿನಾಭಾವ ಸಂಬಂಧ ಇದೆ ಎಂದು ಹೇಳಬೇಕು.

ಈ ಗಾಢಾನುರಕ್ತಿಯಿಂದಲೇ ಶ್ರಮ,ಚಲ,ನಿಷ್ಠೆ, ಅಧ್ಯಯನಶೀಲತೆ ಎಲ್ಲವೂ ನಂಜುಂಡಸ್ವಾಮಿಗಳಲ್ಲಿ ಮೇಳೈಸಿ ಒಂದು ಉತ್ಕೃಷ್ಟ ಕೃತಿ ಹೊರಬರಲು ಸಾಧ್ಯವಾಗಿದೆ.

ಮೊದಲಿಗೆ ಮಂಡ್ಯ ಜಿಲ್ಲೆಯ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡುವ ಅವರು ಅಲ್ಲಿಯ ಭೂಗೋಳ,ಪುರಾತತ್ತ್ವ, ಸ್ಥಳಪುರಾಣದ ಕುರಿತು ಬೆಳಕು ಚೆಲ್ಲುತ್ತಾರೆ. ರಾಜಕೀಯವಾಗಿ ಮಂಡ್ಯವನ್ನು ಆಳಿದ ತಲಕಾಡಿನ ಗಂಗರು,ನೊಳಂಬರು,ರಾಷ್ಟ್ರಕೂಟರು,ಸಗರ ವಂಶ,ಚೋಳ,ಪಾಂಡ್ಯ,ಹೊಯ್ಸಳ, ವಿಜಯನಗರದ ಅರಸರ ಹಾಗೂ ಮೈಸೂರು ಅರಸರು ಮತ್ತು ಹೈದರಾಲಿ,ಟಿಪ್ಪುವಿನ ಕುರಿತು ಅಧ್ಯಯನಶೀಲ ವಿಚಾರ ಮಂಡಿಸಿದ್ದಾರೆ.

ವಿವಿಧ ರಾಜಮನೆತನದ ಕಾಲದಲ್ಲಿ ಇದ್ದ ಆಡಳಿತ ವ್ಯವಸ್ಥೆ, ಅಲ್ಲಿನ ಧರ್ಮ ಮತ್ತು ಸಂಸ್ಕೃತಿಗಳ ಕುರಿತು ಬೆಳಕು ಚೆಲ್ಲುವ ಈ ಕೃತಿ ,ಮಂಡ್ಯ ಜಿಲ್ಲೆಯ ಸಾಮಾಜಿಕ ಮತ್ತು ಕೃಷಿ ಸಂಸ್ಕೃತಿಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತದೆ.

ಕೃಷಿ ಚಟುವಟಿಕೆಗಳಿಗೆ ಮೂಲಾಧಾರವಾದ ನೀರಾವರಿ ವ್ಯವಸ್ಥೆ ಮತ್ತು ಇದನ್ನು ಆಧರಿಸಿದ ಆರ್ಥಿಕ ವ್ಯವಸ್ಥೆಗಳ ಪರಿಚಯ ಮಾಡಿಕೊಡುವ ಲೇಖಕರು ತಮ್ಮ ಕೃತಿಯನ್ನು ಶ್ರೇಷ್ಠ ಕೃತಿಯಾಗಿಸಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಅತ್ಯಂತ ಸರಳ ವ್ಯಕ್ತಿತ್ವದ ನಂಜುಂಡಸ್ವಾಮಿಗಳು ಬಗಲಿಗೊಂದು ಚೀಲ ಏರಿಸಿಕೊಂಡು ಕಾಲ್ನಡಿಗೆಯಲ್ಲಿ, ಸೈಕಲ್, ಬೈಕುಗಳಲ್ಲಿ ಊರೂರು ಅಲೆದು ಅಲ್ಲಿಯ ಅಧ್ಯಯನ ಮಾಡಿ ರಚಿಸಿದ ಈ ಕೃತಿ ಕನ್ನಡ ಶಾಸನ ಮತ್ತು ಸಂಸ್ಕೃತಿಗಳ ಒಂದು ಶ್ರೇಷ್ಠ ಕೃತಿ ಎಂಬುದರಲ್ಲಿ ಸಂದೇಹವಿಲ್ಲ.

ಇಂತಹ ಒಂದು ಮಹತ್ವದ ಕೃತಿಗಾಗಿ ಶ್ರೀ ಸಂತೇಬಾಚಹಳ್ಳಿ ನಂಜಂಡಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾ ಅವರಿಗೆ ಶುಭ ಹಾರೈಸುತ್ತೇನೆ.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *