ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ

ಮುತ್ತಿನಂಥ ‘ರಾಜ’, ಸಾಗರದಂಥ ‘ಪಾರ್ವತಮ್ಮ’
ಮನೆಯೊಳು ಮೂಡಿದ ಫಳಫಳ ಬೆಳ್ಳಿ ‘ಚುಕ್ಕಿ’
ಅಮ್ಮ ಬರೆದ ರಂಗವಲ್ಲಿಯಲ್ಲಿ ಮೂಡಿ ಬೆಳೆದ
ಅವಸರದ ಗಗನಯಾತ್ರಿ ಮತ್ತೆ ಹುಟ್ಟಿ ಬನ್ನಿ

ಪಾವನ ಗಂಗೆಯ ಕೊಳದೊಳ ತೀರ್ಥದ ಜಲ
ತೀರ್ಥದ ಜಲದೊಳು ಉದಿಸಿದ ನವಕಮಲ
ನವಕಮಲದ ಮೊದಲ ಮಂದ ಸ್ಮಿತಹಾಸ
ಸ್ಮಿತಹಾಸದ ಸುಕುಮಾರ ಮತ್ತೆ ಹುಟ್ಟಿ ಬನ್ನಿ

ಕೋಟಿ ಕೋಟಿ ಮನಗಳ ಗೆದ್ದ ಕೋಟ್ಯಾಧಿಪತಿ
ಕೋಟಿ ಇದ್ದರೂ ಸೆಟೆಯದ ಸರಳ ಸುಮತಿ
ಕೆರೆಯ ನೀರನು ಕೆರೆಗೆ ಚೆಲ್ಲಿದಂತೆ ದಾನಗೈದ
ದಾನಶೂರ ಕರ್ಣ ಚಿನ್ನ ರನ್ನ  ಮತ್ತೆ ಹುಟ್ಟಿ ಬನ್ನಿ

ದೀನ ದಲಿತ ಅನಾಥರ ಕಂಡು ಕರಗಿದ ನವನೀತ
ಹಸಿದವರಿಗೆ ಅರವಟ್ಟಿಗೆ, ಬಟ್ಟೆರಹಿತರಿಗೆ ಬಟ್ಟೆ
ಮನೆ ಇಲ್ಲದವರಿಗೆ ಆಶ್ರಮ, ಕಂಬನಿ ಒರೆಸಿದ
ಪರರ ಆತ್ಮ ಓ ಪರಮಾತ್ಮ ಮತ್ತೆ ಹುಟ್ಟಿ ಬನ್ನಿ

ಕದ್ದಿಂಗಳ ಅಮವಾಸ್ಯೆ, ಎಲ್ಲೆಲ್ಲೂ ಬರೀ ಕತ್ತಲೆ
ಅಭಿಮಾನಿ ದೇವರುಗಳ ಅರಣ್ಯರೋಧನ
ಕಂಬನಿ ಮಹಾಪೂರ ಕಡಲ ಒಡಲಲಿ ಸುನಾಮಿ
ಒಮ್ಮೆ ಮೊಗದೊರ ಬನ್ನಿ ಮತ್ತೆ ಹುಟ್ಟಿ ಬನ್ನಿ.

ಡಾ. ಗುರುಸಿದ್ಧಯ್ಯಾ ಸ್ವಾಮಿ
ಚಿತ್ರ ಕೃಪೆ- ಕು. ಸೃಷ್ಟಿ ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ ಮಹಾರಾಷ್ಟ್ರ
ಮೊಬೈಲ್ 9175547259

Related post

Leave a Reply

Your email address will not be published. Required fields are marked *