ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ. (Common Iora Aegithina tiphia)ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ ನಾಲ್ಕು ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ ಪ್ರಸಿದ್ಧವಾದದ್ದು.
ಎಲೆಗಳ ನಡುವೆ ನುಸುಳಿ ಕೀಟಗಳನ್ನು ಹೆಕ್ಕಿಕೊಳ್ಳುವುದು ಇದರ ಆಹಾರ ಸಂಪಾದನೆಯ ಕ್ರಮ. ಇವು ವಿಶೇಷವಾಗಿ ಕಂಬಳಿಹುಳುಗಳನ್ನು ತಿನ್ನುತ್ತವೆಯಾದ್ದರಿಂದ ಆಹಾರ ಚಕ್ರದಲ್ಲಿ ಇವಕ್ಕೆ ವಿಶೇಷವಾದ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಕಂಡುರುವುದು ಸಾಮಾನ್ಯ ಮಧುರಕಂಠ. ಉತ್ತರ-ಪಶ್ಚಿಮ ಭಾರತದಲ್ಲಿ ಮಾರ್ಷಲ್ ಮಧುರಕಂಠ ಕಂಡುಬರುತ್ತದೆ.
ದಕ್ಷಿಣ ಭಾರತದಲ್ಲಿಯೂ ಮಾರ್ಷಲ್ಸ್ ಕಂಡುಬರುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಮಾರ್ಷಲ್ ಮಧುರಕಂಠದ ಬಾಲದಲ್ಲಿನ ಬಿಳಿಬಣ್ಣ ಈ ಎರಡೂ ಬಗೆಯ ಹಕ್ಕಿಗಳ ವ್ಯತ್ಯಾಸವನ್ನು ಗುರುತಿಸಲು ಅತ್ಯಂತ ಸಹಕಾರಿ.
ಇವುಗಳಲ್ಲಿ ಒಳಪಂಗಡಗಳು ಅನೇಕವಿವೆ. ಇವುಗಳ ಬಣ್ಣದ ಸಾಂದ್ರತೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.
ಈ ಹಕ್ಕಿ ನಿಮಗೆ ಕಂಡರೆ ನಮಗೆ ಬರೆದು ತಿಳಿಸಿ.
ಲೇಖನ :ಕಲ್ಗುಂಡಿ ನವೀನ್
ಚಿತ್ರ ಕೃಪೆ:
ಜಿ ಎಸ್ ಶ್ರೀನಾಥ ,ಚಂದ್ರಶೇಖರ್ ಎಂ ಹಾಗು ದಿಬ್ಯೆಂದು ಕರ್ಮಾಕರ್