ಮನೆ – ಮನಗಳನು ಬೆಸೆಯುವ ಮಹಾನವಮಿ

ಮನೆ – ಮನಗಳನು ಬೆಸೆಯುವ ಮಹಾನವಮಿ

ಜಗತ್ತಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನ – ಮಾನವಿದೆ. ಭಾರತವು ಹಲವು ಧರ್ಮಗಳ ತವರೂರಾಗಿದ್ದು ಪ್ರಾಚೀನ ಕಾಲದಿಂದಲೂ ವಿವಿಧತೆಯಲ್ಲಿ ಏಕತೆಯ ಪರಂಪರೆಯನ್ನು ಹೊಂದಿದ ದೇಶವಾಗಿದೆ. ಭಾರತದ ಇತಿಹಾಸದ ಪುಟಗಳಲ್ಲಿ ಎರಡು ಧರ್ಮಗಳ ನಡುವೆ ಕೆಲವು ಕಾಲ ಸಂಘರ್ಷ ನೆಡೆದಿದ್ದರೂ ಅನಂತರದ ದಿನಗಳಲ್ಲಿ ಅವರೆಲ್ಲ ಮತ್ತೆ ಒಂದೇ ಮನೆಯವರಂತೆ ಕೂಡಿ ಬಾಳುತ್ತ ಬಂದಿರುವುದು ವಾಸ್ತವ ಸಂಗತಿ. ಒಳ್ಳೆಯ ಸಂಸ್ಕಾರಗಳನ್ನು ಬೆಳೆಸುವ ನಮ್ಮ ಹಬ್ಬಗಳೇ ಇದಕ್ಕೆ ಮೂಲ ಪ್ರೇರಣೆ. ಈ ನಿಟ್ಟಿನಲ್ಲಿ ‘ದಸರಾ’ ಒಂದು ಅತ್ಯಂತ ಮಹತ್ವಪೂರ್ಣ ಹಬ್ಬವಾಗಿದೆ.

ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ದಸರಾ ಹಬ್ಬ ಆಚರಿಸುವ ಪರಂಪರೆ ಇದೆ. ಈ ಹಬ್ಬಕ್ಕೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಇದೆ. ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ನೆನಪಿಗಾಗಿ ದಸರಾ ಹಬ್ಬ ಆಚರಿಸಲಾಗುತ್ತದೆ. ಇದೆ ದಿನ ಶ್ರೀ ರಾಮಚಂದ್ರನು ರಾವಣನನ್ನು ಕೊಂದು ಸೀತೆಯೊಂದಿಗೆ ಮರಳಿ ಬಂದನಂತೆ. ಪಾಂಡವರು ಅಜ್ಞಾತವಾಸಕ್ಕೆ ಹೋಗುವಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದು ವಿಜಯೋತ್ಸವ ಆಚರಿಸಿದ ದಿವಸ ಇದಾಗಿದೆ. ಕನ್ನಡ ನಾಡಿನ ಅರಸು ಮನೆತನಗಳು ತಮ್ಮ ಕುಲದೇವತೆ, ನಾಡದೇವತೆ ಭುವನೇಶ್ವರಿಯನ್ನು ಸಂಭ್ರಮದಿಂದ ಪೂಜಿಸುವ ಹಬ್ಬ ಇದಾಗಿತ್ತು.

‘ದಸರಾ’ ಎಂಬ ಹೆಸರು ‘ದಶಹರಾ’ ಎಂಬ ಮೂಲದಿಂದ ಬಂದಿದೆ. ಇದರ ಹೆಸರೇ ಸೂಚಿಸುವಂತೆ ಇದು ಒಟ್ಟು ಇದು ಹತ್ತು ದಿನಗಳವರೆಗೆ ಆಚರಿಸುವ ಹಬ್ಬ, ದಸರಾ ಹಬ್ಬಕ್ಕೆ ‘ಮಹಾನವಮಿ’ ಎಂದೂ ಕರೆಯುತ್ತಾರೆ. ಜನಪದರು ಇದಕ್ಕೆ ‘ಮಾನಮಿ’ ಅಥವಾ ‘ಮಾರ್ನವಮಿ’ ಎಂದೂ ಕರೆಯುತ್ತಾರೆ. ನವಮಿ ಈ ಪದ ಸೂಚಿಸುವಂತೆ ಒಟ್ಟು ಒಂಬತ್ತು ದಿನಗಳವರೆಗೆ ದೇವಿಯ ಆರಾಧನೆ ನಡೆಯುತ್ತದೆ.

ಅಶ್ವಯುಜ ಶುದ್ಧ ಪ್ರತಿಪದೆಯ ದಿವಸ ದೇವಿಯ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ದಿನ ಪ್ರತಿ ಮನೆ ಮನೆಗಳಲ್ಲಿ ದೇವರ ಮುಂದೆ ಘಟಸ್ಥಾಪನೆ ಮಾಡಲಾಗುತ್ತದೆ. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳಲ್ಲಿ ಶಕ್ತಿ ದೇವತೆಯಾದ ದುರ್ಗಾದೇವಿಯನ್ನು ಭಿನ್ನ-ಭಿನ್ನ ರೂಪಗಳಲ್ಲಿ ಪೂಜಿಸಲಾಗುತ್ತದೆ. ದೇವಿಯ ಮುಂಬಾಗದಲ್ಲಿ ದೇವಾನು ದೇವತೆಗಳ ಮತ್ತು ರಾಜ-ರಾಣಿಯರ ಗೊಂಬೆಗಳನ್ನು ಇಟ್ಟು ಅಲಂಕರಿಸಿ ಪೂಜಿಸುವ ಪದ್ದತಿಯು ಇದೆ. ಕೊನೆಯ ದಿನ ಆಯುಧಗಳ ಪೂಜೆಯನ್ನು ಮಾಡುತ್ತಾರೆ.

ಒಂಬತ್ತು ದಿನಗಳವರೆಗೆ ದುರ್ಗಾದೇವಿಯನ್ನು ಆರಾಧನೆ ಮಾಡಿದ ನಂತರ ಹತ್ತನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಈ ದಿನ ಸಂಜೆ ಊರಿನ ಸಮಸ್ತ ಹಿರಿ-ಕಿರಿಯರು ಒಂದೆಡೆ ಸೇರಿ ಅತ್ಯಂತ ಸಂಭ್ರಮದಿಂದ ಬನ್ನಿ ಮರವನ್ನು ಪೂಜಿಸಿ ಬನ್ನಿಯನ್ನು ತರುತ್ತಾರೆ. ಇದಕ್ಕೆ ‘ಬನ್ನಿ ಮುರಿಯುವುದು’ ಎಂದು ಕರೆಯುತ್ತಾರೆ. ಒಬ್ಬರಿಗೊಬ್ಬರು ತುಂಬಾ ಗೌರವದಿಂದ ಬನ್ನಿ ಕೊಡುತ್ತಾರೆ. ದೂರದಲ್ಲಿರುವವರಿಗೆ ಈ ಮೊದಲು ಪೋಸ್ಟ್ ಮುಖಾಂತರ ಬನ್ನಿಯನ್ನು ಕಳುಹಿಸುವ ಪದ್ಧತಿ ಇತ್ತು. ಈಗ ಮೊಬೈಲ್ ಮೆಸೇಜ್ ಮತ್ತು ಅಂತರ್ಜಾಲದ ಮುಖಾಂತರ ಪರಸ್ಪರ ಶುಭಕೋರುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ದಸರಾ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಕನ್ನಡ ನಾಡಿನ ಅರಸು ಮನೆತನಗಳು ಈ ಹಬ್ಬವನ್ನು ‘ನಾಡಹಬ್ಬ’ ಎಂದು ಕರೆದು ವೈಭವದಿಂದ ಆಚರಿಸಿ ಈ ಹಬ್ಬದ ಜನಪ್ರಿಯತೆಯನ್ನು ಹೆಚ್ಚಿಸಿವೆ. ಈ ಅರಸು ಮನೆತನದವರು ಇಂದಿಗೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಕರ್ನಾಟಕದ ಮೈಸೂರು ದಸರಾ ಅಂತೂ ಜಗತ್ಪ್ರಸಿದ್ಧವಾಗಿದೆ. ಭಾರತ ಮತ್ತು ಉಳಿದ ರಾಜ್ಯ ಮತ್ತು ವಿದೇಶಗಳಲ್ಲಿರುವ ಹೊರನಾಡು ಕನ್ನಡಿಗರು ಇಂದಿಗೂ ನಾಡಹಬ್ಬ ಆಚರಿಸುತ್ತಿದ್ದಾರೆ. ಈ ಮೂಲಕ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಂಡು ಇನ್ನೂ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ನಾಡಹಬ್ಬದ ಪ್ರಯುಕ್ತ ಹತ್ತು ಹಲವಾರು ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಶಕ್ತಿಯ ಆರಾಧನೆ ಪ್ರಮುಖವಾದರೆ ಉತ್ತರ ಭಾರತದಲ್ಲಿ ಈ ಹಬ್ಬವನ್ನು ‘ರಾಮಲೀಲಾ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಉತ್ತರ ಭಾರತದ ಹಲವೆಡೆಗಳಲ್ಲಿ ರಾವಣನ ಯುದ್ಧದ ನೆನಪಿಗಾಗಿ ಎರಡು ಗುಂಪುಗಳ ನಡುವೆ ಕಲ್ಲು ಎಸೆಯುವ ಸಂಪ್ರದಾಯವು ಇದೆ.

ನವರಾತ್ರಿ ಹಬ್ಬಕ್ಕೆ ಮೂಲಪ್ರೇರಣೆಯಾಗಿರುವ ಮಹಿಷಾಸುರನನ್ನು ಮರ್ದಿಸಿದ ದೇವಿಯ ಪೌರಾಣಿಕ ಕಥೆ ಸಂಕೇತಿಕವೂ ಆಗಿದೆ. ನಮ್ಮ ಮನಸ್ಸಿನಲ್ಲಿರುವ ತಮೋ ಗುಣಗಳನ್ನು ಸಾತ್ವಿಕ ಗುಣಗಳ ಮೂಲಕ ಮರ್ದಿಸುವುದೇ ಈ ಹಬ್ಬದ ತಿರುಳು ಆಗಿದೆ. ಒಂಬತ್ತು ದಿನಗಳವರೆಗೆ ಘಟಕ ಸುತ್ತ ಸಸಿ ಬೆಳೆಸಿ ಆಚರಿಸಲ್ಪಡುವ ದಸರಾ ಹಬ್ಬ ಪ್ರಕೃತಿಗೆ ತುಂಬಾ ಹತ್ತಿರವಾದ ಹಬ್ಬವಾಗಿದೆ. ಆದರೆ ಬನ್ನಿ ಗಿಡದಿಂದ ಬನ್ನಿ ತರುವಾಗ ನಾವು ಒಂದು ಕ್ಷಣ ಪರಿಸರವಾದಿಗಳಾಗಿ ಕೊಂಚ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಅಗತ್ಯವಿದ್ದಸ್ಟು ಮಾತ್ರ ಬನ್ನಿ ತರಲು ನಾವು ಪ್ರಯತ್ನಿಸಿ ಅನ್ಯರಿಗೂ ಪ್ರೇರೇಪಿಸಬೇಕಿದೆ.

ಅಂಗಾರದಂತ ಹಗೆಯನ್ನಳಿಸಿ ಮನೆ-ಮನಗಳನ್ನು ಬೆಸೆದು ಬದುಕನ್ನು ಬಂಗಾರವಾಗಿಸುವ ಈ ‘ಹಸಿರು ಹೊನ್ನು’ ಬನ್ನಿಗೆ ಇರುವ ‘ಬಂಗಾರ’ ಎಂಬ ಹೆಸರು ಎಷ್ಟೊಂದು ಅನ್ವರ್ಥಕ ಅಲ್ವಾ?

ಡಾ. ಗುರುಸಿದ್ದಯ್ಯ ಎಸ್ ಸ್ವಾಮಿ
ಅಕ್ಕಲಕೋಟ
ಮಹಾರಾಷ್ಟ್ರ

Related post

Leave a Reply

Your email address will not be published. Required fields are marked *