ಮನೆ ಮನಗಳ ಬೆಳಕು – ದೀಪಾವಳಿ

ಮನೆ ಮನಗಳ ಬೆಳಕು – ದೀಪಾವಳಿ

ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಮನೆಯ ಮತ್ತು ಮನದ ಕತ್ತಲು ಓಡಿಸುವ ಬೆಳಕಿನ ಹಬ್ಬ.

ಕರುಣಾಳು ಬಾ ಬೆಳಕೇ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಬಿ. ಎಂ. ಶ್ರೀಕಂಠಯ್ಯ

ಬಿ.ಎಮ್.ಶ್ರೀ ಅವರ ಮೇಲಿನ ಪ್ರಸಿದ್ಧ ಸಾಲುಗಳು ಇಲ್ಲಿ ನೆನಪಾಗುತ್ತದೆ. ಇದೊಂದು ಹಬ್ಬವಷ್ಟೇ ಅಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಒಂದು ಧನಾತ್ಮಕತೆಯ ಭಾವ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಹಿನ್ನೆಲೆ ಇದೆ ಹಾಗೇ ಆಚರಿಸುವ ವಿಧಾನಗಳಿವೆ. ಆಚರಣೆಗಳು ಹೇಗೆ ಇದ್ದರೂ ಉದ್ದೇಶಗಳು ಮಾತ್ರ ಒಂದೇ. ಅದು ಎಲ್ಲರೂ, ಒಟ್ಟುಗೂಡಿ ಆಚರಿಸುವ ಹಣತೆಯೊಂದಿಗಿನ ಸಂಭ್ರಮ, ಸಡಗರ ಮತ್ತು ಸಂಸ್ಕೃತಿ.

ದೀಪಾವಳಿಯು ಭಾರತೀಯರ ಅತ್ಯಂತ ದೊಡ್ಡ ಹಬ್ಬವಾಗಿಯೂ ಸಹ ಹೊರಹೊಮ್ಮಿದೆ. ನಮ್ಮ ಕರ್ನಾಟಕದಲ್ಲಿ ಮೂರು ದಿನಗಳ ಹಬ್ಬವನ್ನು ಮೊದಲನೇ ದಿನದ ಹಿಂದಿನ ದಿವಸ ನೀರು ತುಂಬವ ದಿನ ಎಂದು ಆಚರಿಸಿ ಕ್ರಮೇಣ ನರಕ ಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮಿ ಪೂಜೆ ಮತ್ತು ಕೊನೆಯ ದಿನವನ್ನು ಬಲಿಪಾಡ್ಯಮಿ ಎಂದು ಸಂಭ್ರಮದಿಂದ ಆಚರಿಸಿದರೆ. ಗುಜರಾತ್ ರಾಜ್ಯದಲ್ಲಿ ತುಪ್ಪದ ದೀಪಗಳನ್ನು ರಾತ್ರಿಯಿಡೀ ಹಚ್ಚಿ, ಪ್ರಾರ್ಥನೆ ಸಲ್ಲಿಸಿ ಒಳ್ಳೆಯ ದಿನವೆಂದು ವ್ಯಾಪಾರ ವ್ಯವಹಾರಗಳನ್ನು ಅಂದಿನ ದಿನ ಪ್ರಾರಂಭ ಮಾಡುತ್ತಾರೆ. ಐದು ದಿನಗಳವರೆಗೆ ಮನೆ ಮನೆಯಲ್ಲೂ ದೀಪ ಹಚ್ಚಿ ಅವುಗಳನ್ನು ಬಿಡಿಸಿದ ರಂಗೋಲಿ ಮೇಲೆ ಇಟ್ಟು ಕಾಳಿದೇವಿಯನ್ನು ಆರಾಧಿಸುತ್ತಾರೆ. ಅನೇಕ ಸಾಂಸೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರೂ ಸಂಜೆ ಕುಟುಂಬದೊಡನೆ ಸಮಯ ಕಳೆಯುತ್ತಾರೆ.

ಉತ್ತರ ಭಾರತದಾದ್ಯಂತ ರಾಮ ಸೀತೆಯರು ರಾವಣನ ಮೇಲೆ ವಿಜಯ ಸಾಧಿಸಿ ಮರಳಿದಾಗ ದೀಪಗಳನ್ನು ಹಚ್ಚಿ ಹೂವುಗಳಿಂದ ಅಲಂಕಾರ ಮಾಡಿ ಅವರನ್ನು ಬರಮಾಡಿಕೊಂಡರೆಂದು ಪ್ರತೀತಿ ಇದೆ. ಅಂದಿನ ದಿನವನ್ನು ದೀಪಗಳ ಹಬ್ಬ ಎಂದು ಪರಿಗಣಿಸಲಾಗಿದೆ. ಹಾಗೆಯೇ ಶ್ರೀಕೃಷ್ಣ ನರಕಾಸುರನ ವಧೆ ಮಾಡಿದ ದಿನವನ್ನು ದೀಪಾವಳಿಯ ಮೊದಲ ದಿನ, ನರಕ ಚತುರ್ದಶಿ ಎನ್ನಲಾಗಿದೆ. ಅಂದರೆ ಮೂಲವಾಗಿ ಈ ಹಬ್ಬವು ವಿಜಯದ ಸಂಕೇತವಾಗಿಯೂ, ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ದಾರಿ ಎಂದೆನ್ನಬಹುದು. ಇನ್ನು ಮುಖ್ಯವಾಗಿ ಬೆಳಕಿನ ಹಬ್ಬದಲ್ಲಿ ದೇವಿ ಮಹಾಲಕ್ಷ್ಮಿಯ ಆರಾಧನೆ ಎಲ್ಲಾ ರಾಜ್ಯ ಗಳಲ್ಲೂ ಸಾಮಾನ್ಯ. ಕೆಲವೆಡೆ ಗೋವುಗಳು ಲಕ್ಷ್ಮಿಯ ಸಂಕೇತವಾಗಿರುವುದರಿಂದ ಅವುಗಳಿಗೆ ಅಲಂಕಾರ ಮಾಡಿ ಪೂಜಿಸುವುದುಂಟು.

ಗುಜರಾತ್ ರಾಜ್ಯದಲ್ಲಿ ತುಪ್ಪದ ದೀಪಗಳನ್ನು ರಾತ್ರಿಯಿಡೀ ಹಚ್ಚಿ, ಪ್ರಾರ್ಥನೆ ಸಲ್ಲಿಸಿ ಒಳ್ಳೆಯ ದಿನವೆಂದು ವ್ಯಾಪಾರ ವ್ಯವಹಾರಗಳನ್ನು ಅಂದಿನ ದಿನ ಪ್ರಾರಂಭ ಮಾಡುತ್ತಾರೆ. ಐದು ದಿನಗಳವರೆಗೆ ಮನೆ ಮನೆಯಲ್ಲೂ ದೀಪ ಹಚ್ಚಿ ಅವುಗಳನ್ನು ಬಿಡಿಸಿದ ರಂಗೋಲಿಯ ಮೇಲೆ ಅಂದವಾಗಿ ಇಟ್ಟು ಕಾಳಿದೇವಿಯನ್ನು ಆರಾಧಿಸುತ್ತಾರೆ. ಅನೇಕ ಸಾಂಸೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರೂ ಸಂಜೆ ಕುಟುಂಬದೊಡನೆ ಒಟ್ಟಿಗೆ ಸಮಯ ಕಳೆಯುತ್ತಾರೆ. ಪಂಜಾಬಿನಲ್ಲಿ ದೀಪಾವಳಿ ಹಬ್ಬವನ್ನು “ಬಂದಿ ಛೋರ್ ದಿವಸ್” ಎಂದು ಆಚರಿಸುತ್ತಾರೆ. ಗುರು ಹರಗೋಬಿಂದ್ ರವರು ಮೊಘಲ್ ದೊರೆ ಜಹಾಂಗೀರ್ ಸೆರೆ ಹಿಡಿದಿದ್ದ 52 ರಾಜರನ್ನು ಆ ದಿವಸ ಸೆರೆಮನೆಯಿಂದ ಬಿಡಿಸಿದರು ಆ ಸವಿ ದಿನದ ನೆನಪಾಗಿ ಪಂಜಾಬ್ ನ ಮನೆ ಮನೆಗಳಲ್ಲಿ ಹಣತೆಯನ್ನು ಹಚ್ಚಿ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸುತ್ತಾರೆ.

ಮಹಾರಾಷ್ಟ್ರದಲ್ಲೂ ಐದು ದಿನಗಳ ಕಾಲ ಹಬ್ಬವನ್ನು ಆಚರಿಸುವರು. ಮೊದಲ ದಿನ ಧನ್ ತೇರಾಸ್ ಎಂದು ಎರಡನೇ ದಿನ ನರಕ ಚತುರ್ದಶಿ ಮೂರನೇ ದಿನ ಲಕ್ಷ್ಮಿ ಪೂಜೆ, ಹಾಗೂ ನಾಲ್ಕನೇ ದಿನ ಬಲಿಪಾಡ್ಯಮಿಯಂದು ಹಸು ಕರುಗಳ ಪೂಜೆ ನೆರವೇರಿಸುತ್ತಾರೆ. ಬಂಗಾಳದಲ್ಲಿ ದೀಪಗಳನ್ನು ಹಚ್ಚಿ ಪಿತೃಪಕ್ಷದ ರೀತಿ ಅಂದರೆ ಅಳಿದ ಕುಟುಂಬದವರಿಗೆ ಸ್ನೇಹಿತರಿಗೆ ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ದೀಪಾವಳಿ ಸಮಯದಲ್ಲಿ ಪೂಜೆ ಸಲ್ಲಿಸಿದರೆ ಹಿರಿಯರು ಸ್ವರ್ಗದ ದಾರಿ ಹಿಡಿದು ಮುಕ್ತಿ ಹೊಂದುತ್ತಾರೆಂದು ಅಚಲ ನಂಬಿಕೆ.

ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿ, ಇಲ್ಲಿ ಬಡವ ಶ್ರೀಮಂತ ಎನ್ನುವುದಿಲ್ಲ. ಎಲ್ಲರೂ ಸರಿ ಸಮಾನರು. ಅವರವರ ಯೋಗ್ಯತೆ ಅನುಸಾರ ಆಚರಿಸುವರು. ಇಲ್ಲಿ ಮುಖ್ಯವಾಗುವುದು, ಭಕ್ತಿ ಭಾವ ಅಷ್ಟೇ. ಕೊನೆಯದಾಗಿ ದೀಪಾವಳಿ ಹಬ್ಬದ ಆಚರಣೆಗಳು ಎಲ್ಲರಿಗೂ ಶುಭವನ್ನು ತರಲಿ. ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಬರಮಾಡಿ ಕೊಳ್ಳೋಣ. ಇದರ ಜೊತೆ ಸುರಕ್ಷತೆಯ ದೃಷ್ಟಿಯಿಂದ ಆದಷ್ಟು ಸದ್ದು ಮಾಡುವ ಪಟಾಕಿಗಳಿಗೆ ಕಡಿವಾಣ ಹಾಕೊಣ. ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಉಳಿವು ಅಳಿವು ಕೂಡ ನಮ್ಮ ಕೈಯಲ್ಲೇ ಇದೆ.

“ದೀಪದಿಂದ ದೀಪವ ಹಚ್ಚಬೇಕು ಮಾನವ” ಎಂದು ಹಂಸಲೇಖರವರು ರಚಿಸಿದ ಸಾಲಿನಂತೆ ಜ್ಞಾನದ ಹಣತೆಯನ್ನು ಹಚ್ಚಿಸಿ ಒಬ್ಬರಿಂದ ಇನ್ನೊಬ್ಬರಿಗೆ, ಇನ್ನೊಬ್ಬರಿಂದ ಮತ್ತೊಬ್ಬರಿಗೆ ದಾಟಿಸೋಣ ಮತ್ತು ದೀಪಾವಳಿಯನ್ನು ಒಗ್ಗಟ್ಟಿನಿಂದ ಸುರಕ್ಷತೆಯಿಂದ ಭಕ್ತಿಭಾವದಿಂದ ಆಚರಿಸಿ ಸಂಭ್ರಮಿಸೋಣ.

ಶೈಲ
ಬೆಂಗಳೂರು

Related post

Leave a Reply

Your email address will not be published. Required fields are marked *