ಮನೆ ಮನೆ ವಿಮಾನಾಯಣ

ಮನೆ ಮನೆ ವಿಮಾನಾಯಣ

ಅಭಿವೃದ್ಧಿಶೀಲ ರಾಷ್ಟ್ರಗಳ ಶ್ರೀಸಾಮಾನ್ಯರಿಗೆ ತಮ್ಮ ಜೀವಿತಾವಧಿಯಲ್ಲಿ ತಾವೊಂದು ಕಾರ್ ಮಾಲೀಕರಾಗುವ, ಶ್ರೀಮಂತ ವರ್ಗದ ಜನರಿಗೆ ತಾವು ಬ್ರಾಂಡೆಡ್ ಕಾರ್ ಮಾಲೀಕರಾಗಬೇಕೆಂಬ ಆಸೆಯಿರುವುದು ಸಹಜ. ಇದರಿಂದ ಇಂದು ಮನೆ ಮನೆಗಳಲ್ಲೂ ಬೈಕ್ ಹಾಗೂ ಕಾರ್ ಸಾಮಾನ್ಯವಾಗಿದೆ. ಬದುಕಿನ ಬಂಡಿಯನ್ನು ಸಾಗಿಸುವುದು ಕಷ್ಟಕರವಾಗಿದ್ದರೂ ಹಾಗೋ ಹೀಗೋ ಹೊಂದಾಣಿಕೆ ಮಾಡಿ ಕಾರು ಖರೀದಿಸಿ ಭೇಷ್ ಅನಿಸಿಕೊಂಡವರೆಷ್ಟೋ. ಮನುಷ್ಯನ ಆಸೆಗಳಿಗೆ ಮಿತಿಯಿಲ್ಲವಾಗಿ ತನ್ನ ಮನೆ ಮುಂದೆ ಕೇವಲ ಕಾರ್ ಮತ್ತು ಬೈಕ್ ಅಷ್ಟೇ ಅಲ್ಲದೇ ಹೆಲಿಕಾಪ್ಟರ್ ಅಥವಾ ವಿಮಾನ ನಿಲ್ಲಬೇಕೆಂಬ ಕನಸು ಕಾಣುತ್ತಾನೆ.

ಪ್ರತಿಯೊಂದು ಮನೆಗೂ ವಿಮಾನಗಳನ್ನು ಖರೀದಿಸುವುದು ಕಷ್ಟ ಸಾಧ್ಯವಾದರೂ ಅಮೆರಿಕದ ಸ್ಪ್ರೂಸ್ ಕ್ರೀಕ್ ಎಂಬ ಗ್ರಾಮದ ಪ್ರತೀ ಮನೆಯಲ್ಲಿಯೂ ವಿಮಾನಗಳಿವೆ. ಮಾರುಕಟ್ಟೆಗೆ ಬಂದಂತಹ ಹೊಸ ವಾಹನಗಳನ್ನು ನಾವು ಹೇಗೆ ಖರೀದಿಸುತ್ತೇವೆಯೋ ಅದೇ ರೀತಿ ಅಮೆರಿಕದ ಈ ಗ್ರಾಮಸ್ಥರು ತಮ್ಮ ಪ್ರಯಾಣಕ್ಕಾಗಿ ಮನೆ ಮನೆಗಳಿಗೂ ಹೊಸ ಹೊಸ ವಿಮಾನಗಳನ್ನು ಖರೀದಿಸುತ್ತಾರೆ. ಭಾರತದಲ್ಲಿ ಮನೆಯೊಂದರಲ್ಲಿ ಎರಡು ಮೂರು ಬೈಕ್ ಅಥವಾ ಕಾರುಗಳು ಇರುವಂತೆ ಅಮೆರಿಕದ ಈ ಗ್ರಾಮದ ಮನೆ ಮನೆಗಳಲ್ಲಿ ತರ ತರಹದ ವಿಮಾನಗಳಿವೆ ಹಾಗೂ ಈ ವಿಮಾನಗಳನ್ನು ಸ್ವತಃ ಅದರ ಮಾಲೀಕರೇ ಚಾಲನೆಯನ್ನು ಮಾಡುತ್ತಾರೆ ಎನ್ನುವುದು ವಿಶೇಷ. ಹಾಗಾದರೆ ಆ ಗ್ರಾಮದಲ್ಲಿ ಅದೆಷ್ಟು ವಿಮಾನ ನಿಲ್ದಾಣಗಳಿರಬಹುದು ಎಂದು ನೋಡಿದರೆ ಇಡೀ ಗ್ರಾಮದ ರಸ್ತೆಗಳನ್ನೇ ವಿಮಾನ ನಿಲ್ದಾಣಗಳಲ್ಲಿರುವ ರನ್ ವೇಯಂತೆ ನಿರ್ಮಿಸಿದ್ದಾರೆ.

ಅಮೆರಿಕ ರಾಷ್ಟ್ರದ ಫ್ಲೋರಿಡಾ ಎಂಬ ರಾಜ್ಯದ ಡೇಟೋನಾ ಬೀಚ್ ಪ್ರದೇಶದಿಂದ ಸರಿಸುಮಾರು ಹನ್ನೊಂದು ಕಿ.ಮೀ (ಏಳು ನಾಟಿಕಲ್ ಮೈಲ್) ದೂರದಲ್ಲಿ ಸ್ಪ್ರೂಸ್ ಕ್ರೀಕ್ ವಿಮಾನ ನಿಲ್ದಾಣವಿದೆ. ಈ ವಿಮಾನ ನಿಲ್ದಾಣದ ಹೆಸರಲ್ಲಿ ಸ್ಪ್ರೂಸ್ ಕ್ರೀಕ್ ಗೇಟೆಡ್ ಕಮ್ಯುನಿಟಿಯು ಗ್ರಾಮವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಈ ಗ್ರಾಮದಲ್ಲಿ ಒಟ್ಟು ಆರು ಸಾವಿರ ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿ ಸುಮಾರು 1,300 ಮನೆಗಳು ಹಾಗೂ ಸುಮಾರು 700 ವಿಮಾನಗಳನ್ನು ನಿಲ್ಲಿಸುವ ಸುಸಜ್ಜಿತ ವಿಮಾನ ಶೆಡ್ ನಿರ್ಮಿಸಲಾಗಿದೆ. ಇಲ್ಲಿನ ಪ್ರತಿಯೊಂದು ಮನೆಗಳಲ್ಲೂ ಕನಿಷ್ಠವೆಂದರೂ ಒಂದೊಂದು ವಿಮಾನಗಳಿದ್ದು, ಇಲ್ಲಿನ ಕೆಲವೊಂದು ಕುಟುಂಬಗಳ ಬಳಿಯಂತೂ 2 – 3 ವಿಮಾನಗಳಿವೆ. ಇವರು ತಮ್ಮ ವಿಮಾನಗಳನ್ನು ತಮ್ಮ ಮನೆಯ ಮುಂದೆ, ಕೆಲವೊಮ್ಮೆ ರಸ್ತೆಯಲ್ಲಿ ಹಾಗೂ ಕೆಲವರು ಪ್ರತ್ಯೇಕವಾದ ಪಾರ್ಕಿಂಗ್ ಜಾಗವನ್ನು ಮಾಡಿಕೊಂಡು ಅಲ್ಲಿ ತಮ್ಮ ವಿಮಾನಗಳನ್ನು
ನಿಲ್ಲಿಸುತ್ತಾರೆ.

ನಮ್ಮ ದೇಶದಲ್ಲಿ ನಾವು ನಮ್ಮ ಮನೆಯ ಮುಂಭಾಗದಲ್ಲಿ ನಮ್ಮ ಕಾರು ಮತ್ತು ಬೈಕ್ ಹೇಗೆ ಅಂದವಾಗಿ ನಿಲ್ಲಿಸುತ್ತೇವೆಯೋ ಅದೇ ರೀತಿ ಈ ಗ್ರಾಮದ ಜನರು ತಮ್ಮ ಮನೆಯ ಮುಂಭಾಗದಲ್ಲಿ ಹಾಗೂ ಮನೆ ಮುಂಭಾಗದ ರಸ್ತೆಗಳಲ್ಲಿ ವಿಮಾನಗಳನ್ನು ಸಾಲು ಸಾಲಾಗಿ ನಿಲ್ಲಿಸುತ್ತಾರೆ. ಆದ್ದರಿಂದ ಈ ಗ್ರಾಮವೇ ಒಂದು ಸಂಪೂರ್ಣ ವಿಮಾನ ನಿಲ್ದಾಣದಂತೆ ಕಾಣಿಸುತ್ತದೆ. ಇಲ್ಲಿನ ಜನರು ತಮ್ಮ ವಿಮಾನಗಳ ಸುಗಮ ಸಂಚಾರಕ್ಕೆ ವಿಶೇಷವಾದ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದು, ಇದರ ಮೂಲಕ ಯಾವ ಮನೆಯ ವಿಮಾನವು ಎಲ್ಲಿ ಓಡಾಡುತ್ತಿದೆ ಮತ್ತು ಯಾವ ರನ್ ವೇಯಲ್ಲಿ ಬಂದು ಇಳಿಯುತ್ತಿದೆ ಎಂದು ಸುಲಭವಾಗಿ ಗುರುತಿಸುತ್ತಾರೆ. ಇದರಿಂದಾಗಿ ಎಲ್ಲರೂ ತಮ್ಮ ಪ್ರಯಾಣವನ್ನು ಸುಖಮಯವಾಗಿ ನಡೆಸುತ್ತಿದ್ದು, ಇಲ್ಲಿ ಯಾವುದೇ ಅಪಘಾತಗಳು ನಡೆಯುವುದಿಲ್ಲ. ಇಲ್ಲಿ ಗ್ರಾಮಸ್ಥರೇ ನಿರ್ಮಿಸಿದ ಖಾಸಗಿ ವಿಮಾನ ನಿಲ್ದಾಣವಿದ್ದು, ಇಲ್ಲಿ ರಾತ್ರಿಯ ವೇಳೆ ವಿಮಾನಗಳು ಇಳಿಯಲು ಹಾಗೂ ನೆಗೆಯಲು ಅನುಕೂಲವಾಗುವಂತೆ ವಿದ್ಯುತ್ ದೀಪಗಳ ಅಳವಡಿತ ರನ್ ವೇ, ಹದಿನಾಲ್ಕು ಕಿಲೋಮೀಟರ್ ಉದ್ದದ ಸುಸಜ್ಜಿತ ಟ್ಯಾಕ್ಸಿ ವೇ, ವಿಮಾನಗಳಿಗೆ ಇಂಧನ ತುಂಬುವ ವ್ಯವಸ್ಥೆ, ವಿಮಾನಗಳ ದುರಸ್ತಿ ಸ್ಟೇಷನ್, ರೆಸ್ಟೊರೆಂಟ್ ಮತ್ತು ಸುಸಜ್ಜಿತವಾದ ಕಚೇರಿಗಳನ್ನು ಈ ಗ್ರಾಮದಲ್ಲಿ ಗ್ರಾಮಸ್ಥರೇ ಅತ್ಯಂತ ಸುಂದರವಾಗಿ ನಿರ್ಮಿಸಿಕೊಂಡಿದ್ದಾರೆ.
ಈ ಗ್ರಾಮವು ಅಕ್ಕಪಕ್ಕದ ಹಳ್ಳಿಗಳಿಂದ ಹಾಗೂ ಪ್ರದೇಶಗಳಿಂದ ಬಹುತೇಕ ಗೌಪ್ಯವಾಗಿಯೇ ಇದ್ದು ಇಲ್ಲಿ ಬಹುತೇಕ ಸೆಲೆಬ್ರಿಟಿಗಳೇ ವಾಸಿಸುತ್ತಿದ್ದಾರೆ.

ಇಲ್ಲಿನ ಮನೆಗಳ ಮುಂದೆ ವಿಮಾನಗಳನ್ನು ಆಟಿಕೆ ಸಾಮಗ್ರಿಗಳಂತೆ ನಿಲ್ಲಿಸಿರುವುದನ್ನು ನೋಡುವುದೇ ಒಂದು ವಿಶೇಷ ಅನುಭವವನ್ನು ನೀಡುತ್ತದೆ. ಸ್ಪ್ರೂಸ್ ಕ್ರೀಕ್ ವಿಮಾನ ನಿಲ್ದಾಣವನ್ನು ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ನೌಕಾ ಸೇನೆಯ ಎರಡು ವಿಮಾನ ನಿಲ್ದಾಣಗಳಿಗೆ ಪರ್ಯಾಯವಾಗಿ ಅಭ್ಯಾಸದ ವಿಮಾನ ನಿಲ್ದಾಣಗಳಾಗಿ ನಿರ್ಮಿಸಲಾಗಿತ್ತು. ಇಲ್ಲಿ ಸುಮಾರು 4000×176 ಅಡಿ ಉದ್ದದ ಸುಸಜ್ಜಿತವಾದ ನಾಲ್ಕು ರನ್ ವೇಯನ್ನು ನಿರ್ಮಿಸಲಾಗಿದ್ದು, ಇದನ್ನು ಅಮೆರಿಕದ ನೌಕಾ ಸೇನೆಯು 1946 ರಲ್ಲಿ ತನ್ನ ಸೇವೆಯಿಂದ ಕೈಬಿಟ್ಟಿತ್ತು.

ಇಲ್ಲಿನ ಮರಳಿನ ಬೀಚಿನಲ್ಲಿ ಪ್ರವಾಸಿಗರು ಕಾರ್ ಮತ್ತು ಬೈಕ್ ರೇಸಿಂಗ್ ಮೋಜಿಗಾಗಿ ನಡೆಸುತ್ತಾರೆ. ಈ ಗ್ರಾಮದಲ್ಲಿ ಒಂದೇ ಕಡೆ ಬೈಕ್, ಕಾರು ಮತ್ತು ವಿಮಾನಗಳು ಸಮ್ಮಿಳಿತಗೊಂಡಿರುವುದು ಇಲ್ಲಿನ ವಿಶೇಷ. ಈ ಗ್ರಾಮವು ಬೈಕ್ ರೇಸರ್, ಕಾರ್ ಡ್ರೈವರ್ ಮತ್ತು ಪೈಲಟ್‌ಗಳ ಸ್ವರ್ಗವೆನ್ನಬಹುದು. ಈ ಗ್ರಾಮದ ಒಟ್ಟು ನಿವಾಸಿಗಳ ಸಂಖ್ಯೆ ಸುಮಾರು 60,000 ಇದ್ದು, ಈ ಗ್ರಾಮಕ್ಕೆ ವರ್ಷವೊಂದರಲ್ಲಿ ಸುಮಾರು ಎಂಟು ಮಿಲಿಯನ್ನಷ್ಟು ಪ್ರವಾಸಿಗರು ಇಲ್ಲಿ ವಿವಿಧ ಮೋಜಿನ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ನೋಡಲು ಆಗಮಿಸುತ್ತಾರೆ. ಈ ಗ್ರಾಮದ ಕೆಲವೊಂದು ಭಾಗಗಳ ಮನೆಗಳಲ್ಲಿ ವಿಶೇಷವಾಗಿ ವಿವಿಧ ವಿಮಾನಗಳನ್ನು ನಿಲ್ಲಿಸಲು ಅಗತ್ಯವಿರುವ ಮೂರು ಗೋಡೆಗಳುಳ್ಳ ವಿವಿಧ ಗಾತ್ರದ ಶೆಡ್ ನಿರ್ಮಿಸಿದ್ದಾರೆ. ಕೆಲವೊಬ್ಬರು ಇತರರಿಗೆ ವಿಮಾನ ನಿಲ್ಲಿಸಲು ಬಾಡಿಗೆಗೆ ಆ ಶೆಡ್ಡುಗಳನ್ನು ನೀಡುವ ಉದ್ಯಮವನ್ನೂ ನಡೆಸುತ್ತಾರೆ.

ಈ ವಿಮಾನ ನಿಲ್ದಾಣವು ಖಾಸಗಿ ವಿಮಾನ ನಿಲ್ದಾಣವಾಗಿದ್ದು, ಸ್ಪ್ರೂಸ್ ಕ್ರೀಕ್ ಪ್ರಾಪರ್ಟಿ ಒನರ್ಸ್ ಅಸೋಸೊಯೇಷನ್ ಇವರ ಮಾಲಕತ್ವದಲ್ಲಿದೆ. ಇದರ ಮುಖ್ಯಸ್ಥರಾಗಿ ಜೋ ಫ್ರೆಂಡ್ ಎಂಬವರು ಜವಾಬ್ದಾರಿ ನಿರ್ವಹಿಸುತ್ತಿದ್ದು, ವಾರ್ಷಿಕ ಸುಮಾರು 25,000 ಬಾರಿ ಇಲ್ಲಿ ವಿಮಾನಗಳು ಗಗನಕ್ಕೆ ನೆಗೆದು ಮತ್ತೆ ಇಳಿಯುತ್ತವೆ. ಈ ಗ್ರಾಮದ ಬಾನಂಗಳದಲ್ಲಿ ಎರಡಕ್ಕಿಂತ ಹೆಚ್ಚು ವಿಮಾನಗಳು ಏಕಕಾಲದಲ್ಲಿ ಏರ್ ಶೋಗಳು ನಡೆಯುವ ಸಂದರ್ಭಗಳಲ್ಲಿ ಕಾಣುವಂತಹ ಆಕರ್ಷಕ ಚಿತ್ತಾರ ಕಂಡುಬರುವುದು ಸಾಮಾನ್ಯವಾದ ದೃಶ್ಯವಾಗಿದೆ. ಇಲ್ಲಿ ವಿಮಾನಗಳು ತನ್ನ ಬಿಳಿಯ ಹೊಗೆಯ ಮೂಲಕ ಬಾನಂಗಳದಲ್ಲಿ ನಾನಾ ತರಹದ ಬರಹಗಳನ್ನು ವರ್ಣರಂಜಿತವಾಗಿ ಬಿಡಿಸುವುದನ್ನು ಇಲ್ಲಿನ ಸಮುದ್ರ ಕಿನಾರೆಯಲ್ಲಿ ನಿಂತು ನೋಡುವುದೇ ಸಂಭ್ರಮ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

Related post

Leave a Reply

Your email address will not be published. Required fields are marked *