ಮಯೂರ ನೃತ್ಯ ನೋಡೋಣ ಬನ್ನಿ!

ನವಿಲುಗಳು

ನವಿಲು ಎಂದು ಕೇಳಿದೊಡನೆ ಸಂತೋಷ ಪಡದವರು ಪ್ರಾಯಃ ಯಾರೂ ಇಲ್ಲ. ನವಿಲು ನಮ್ಮ ಸಾಹಿತ್ಯ, ಸಂಸ್ಕೃತಿಗಳಲ್ಲಿ ಹಾಸುಹೊಕ್ಕಾಗಿರುವ ಹಕ್ಕಿ, ಸುಬ್ರಹ್ಮಣ್ಯ ಸ್ವಾಮಿಯ ವಾಹನ, ಬೌದ್ಧ ಧರ್ಮದಲ್ಲಿಯೂ ಇದರ ಪ್ರಸ್ತಾಪವಿದೆ. ಹಾಗಾಗಿ ಇದಕ್ಕೆ ಆಧ್ಯಾತ್ಮದ ಸ್ಪರ್ಶವೂ ಇದೆ. ಮಯೂರ ಎಂಬುದು ಇದರ ಇನ್ನೊಂದು ಹೆಸರು. ನರ್ತಿಸುವ ನವಿಲು “ಗಂಡು”. ಹಾಗಾಗಿಯೇ ನೃತ್ಯ ನಿಪುಣೆಯರನ್ನು “ನಾಟ್ಯ ಮಯೂರಿ” ಎಂದು ಕರೆಯುವುದು. ಸೌಂದರ್ಯದ ಪ್ರತೀಕ ಈ ನಮ್ಮ ನವಿಲು. ನವಿಲು ನಮ್ಮ ರಾಷ್ಟ್ರಪಕ್ಷಿ.

 ನಮ್ಮ ವಿನ್ಯಾಸಲೋಕದ ಅನಭಿಷಿಕ್ತ ದೊರೆಯೇ ನವಿಲು! ಅದು ಭಿತ್ತಿಚಿತ್ರಗಳಲ್ಲಿರಬಹುದು ಇಲ್ಲವೇ ಜರತಾರಿ ಸೀರೆಯ ಅಂಚೇ ಇರಬಹುದು. ಗರಿಬಿಚ್ಚಿ ನರ್ತಿಸುವ ನವಿಲು ಒಂದು ಅದ್ಭುತವಾದ ಭಾವವನ್ನು ತರುತ್ತದೆ. ಹಾಗಾಗಿಯೇ ಇದು ಕಾಷ್ಠ (ಮರ) ಶಿಲ್ಪಗಳಲ್ಲಿಯೂ, ಕಲ್ಲಿನ ಶಿಲ್ಪಗಳಲ್ಲಿಯೂ, ಕಂಚು, ಬೆಳ‍್ಳಿ, ಚಿನ್ನದಲ್ಲಿಯೂ ರಾರಾಜಿಸಿದೆ.

ಇಂತಹ ನವಿಲು ನಮ್ಮ ವಿಶಿಷ್ಟವಾದ ಹಾಗೂ ಆಕರ್ಷಕ ಹಕ್ಕಿಗಳಲ್ಲಿ ಒಂದು. ಇದು ಗರಿಗೆದರಿ ನರ್ತಿಸುವ ದೃಶ್ಯ ನಮ್ಮನ್ನು ಉಸಿರುಗಟ್ಟಿಕೊಂಡು ನೋಡುವಂತೆ ಮಾಡುತ್ತದೆ. ಇದು ಗರಿಗೆದರಿ ಕುಣಿಯಿತೆಂದರೆ ಮುಂಗಾರು ಆರಂಭವಾಯಿತೆಂದೇ ಲೆಕ್ಕ. ನಮ್ಮ ಹಳ್ಳಿಗರ ಈ ಮಾತು ಎಂದಿಗೂ ಸುಳ್ಳಾಗದು! ವಾಸ್ತವವಾಗಿ ನವಿಲಿನ ನರ್ತನ ಹೆಣ್ಣನ್ನು ಒಲಿಸಿಕೊಳ್ಳುವ ಮಾರ್ಗ.

ನವಿಲಿನ ಗರಿಗಳ ಮೇಲಿನ “ಕಣ್ಣು”ಗಳು ಹೆಣ್ಣು ನವಿಲನ್ನು ಆಕರ್ಷಿಸುತ್ತವೆ. ಹೆಚ್ಚು ಗರಿ “ಕಣ್ಣು” ಗಳಿರುವ ನವಿಲು ಸಂಗಾತಿಯನ್ನು ಬಹಳ ಸುಲಭವಾಗಿ ಗಳಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಇದರ ಹೊಳಪೂ ಸಹ ಸಂಗಾತಿಯನ್ನು ಗಳಿಸುವಲ್ಲಿ ಸಹಾಯಕ ಎನ್ನುತ್ತವೆ ಸಂಶೋಧನೆಗಳು. ಹಾಗೆಯೇ, ಮರಿಮಾಡುವ ಸಮಯದಲ್ಲಿನ ಗಂಡಿನ ಕೂಗು ಸಹ ಅರ್ಹ ಸಂಗಾತಿಯನ್ನು ಹುಡುಕುವಲ್ಲಿ ಸಹಾಯ ಮಾಡುತ್ತದೆ ಎನ್ನಲಾಗಿದೆ. ಇನ್ನು ಅನೇಕ ವಿಷಯಗಳನ್ನು ಕುರಿತು ಸಂಶೋಧನೆಗಳು ನಡೆದಿವೆ.

ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಬಸ್ನಿಯಾ ಎಂಬ ಹಳ‍್ಳಿಯಲ್ಲಿ ಜನರಿಗಿಂತ ನವಿಲುಗಳೇ ಹೆಚ್ಚಾಗಿವೆ. ಇದೇ ರಾಜ್ಯದ ಮೊರ್‍ ಜಿಲ್ಲೆಯಲ್ಲಿ ನವಿಲುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಇದರಿಂದಲೇ ರಾಜಾಸ್ಥಾನದ ಆ ಪ್ರದೇಶಕ್ಕೆ “ಮೊರ್‍” ಎಂಬ ಹೆಸರು ಬಂದಿರುವುದು.

ಇಂಗ್ಲಿಷಿನಲ್ಲಿ ಪೀಫೌಲ್/ಪಿಕಾಕ್ ಎಂದು ಕರೆಯುತ್ತಾರೆ (Indian Peafowl Pavo cristatus). ಫೇಸಾನಿಡೇ ಎಂದು ಕರೆಯಲಾಗುವ ಕುಟುಂಬಕ್ಕೆ ಸೇರುತ್ತವೆ. ಇದೇ ಕುಟುಂಬದ ಹಿಮಾಲಯದ ಕಡೆ ಕಂಡುಬರುವ “ಮೋನಲ್” ಹಕ್ಕಿಗಳನ್ನು ಕಂಡರೆ ಇವು ಸುಂದರವೋ ನವಿಲು ಸುಂದರವೋ ಎಂದು ಒಂದು ಕ್ಷಣ ಸಂದೇಹವುಂಟಾಗಿಬಿಡುತ್ತದೆ!

ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿ ನೀಲಿ ನವಿಲು ಕಂಡುಬಂದರೆ ಬರ್ಮಾ ಮತ್ತು ಮಾಯಾನ್ಮಾರ್‍ಗಳಲ್ಲಿ ಹಸಿರು ನವಿಲು (Pavo muticus) ಕಂಡುಬರುತ್ತದೆ. ಇವುಗಳ ತಲೆ ಮೇಲಿನ ಚೊಟ್ಟಿ ಅರಳಿರದೆ ಚೂಪಾದ ತುದಿಯಂತಿರುತ್ತದೆ. ಮತ್ತೊಂದು ಕಾಂಗೋ ನವಿಲು ಎಂದು ಕರೆಯಲಾಗುವ ನವಿಲು (Afropavo congensis) ಆಫ್ರಿಕಾದ ಕಾಡುಗಳಲ್ಲಿ ಕಂಡುಬರುತ್ತದೆ.

ಹುಳು, ಹುಪ್ಪಟ್ಟೆ, ಗಿಡಗಳ ಚಿಗುರು ಮತ್ತು ಕಾಳುಗಳನ್ನು ತಿನ್ನುವ ಇದು ಅಪರೂಪವಾಗಿ ಹಾವನ್ನೂ ತಿನ್ನುತ್ತದೆ. ಇದು ರೈತನ ಮಿತ್ರ. ಹುಳುಗಳ ನಿಯಂತ್ರಣದಲ್ಲಿ ಇದಕ್ಕೆ ಸ್ಥಾನವಿದೆ. ಗಂಡುಹಕ್ಕಿಯ ಉದ್ದವಾದ ಬಾಲ, ಮರಿಮಾಡುವ ಕಾಲಕ್ಕೆ ಬಹಳ ದೊಡ್ಡದಾಗುತ್ತದೆ. ಆನಂತರ ಈ ಬಾಲದ ಬಹುತೇಕ ಗರಿಗಳು ಬಿದ್ದುಹೋಗುತ್ತವೆ. ಮರಿಗಳನ್ನು ಬೆನ್ನಮೇಲೆ ಕೂರಿಸಿಕೊಂಡು “ಕೂಸುಮರಿ” ಮಾಡಿರುವ ಪ್ರಸಂಗಗಳು ವರದಿಯಾಗಿವೆ. ಹೆಣ್ಣು ನವಿಲಿಗೆ ಉದ್ದವಾದ ಬಾಲ ಇರುವುದಿಲ್ಲ ಆದರೆ ತಲೆಯ ಮೇಲಿನ ಚೊಟ್ಟಿ, ಗಂಡಿಗೆ ಇದ್ದಂತೆಯೇ ಇರುತ್ತದೆ.

ನವಿಲು ಕಾಡಿನಲ್ಲಿ ಹುಳು ನಿಯಂತ್ರಣದೊಂದಿಗೆ ಇನ್ನೂ ಕೆಲವು ಕಾರ್ಯಗಳಿಗೂ ಬರುತ್ತದೆ. ಎತ್ತರದ ಮರದ ಮೇಲೆ ಕುಳಿತು ಕೇಳಗೆ ಹುಲಿಯಂತಹ ಬೇಟೆಗಾರ ಪ್ರಾಣಿ ಬರುತ್ತಿದ್ದರೆ ಜೋರಾಗಿ ಕೂಗಿ ಜಿಂಕೆಯಂತಹ ಬಲಿ ಪ್ರಾಣಿಗಳನ್ನು ಎಚ್ಚರಿಸುತ್ತದೆ.

ವಿಪರ್ಯಾಸವೆಂದರೆ ತಾಯಿ ಹುಲಿ ತನ್ನ ಮರಿಗಳಿಗೆ ಬೇಟೆಯನ್ನು ಕಲಿಸಲು ಇದೇ ನವಿಲನ್ನು ಬಳಸುತ್ತದೆ. ನವಿಲು, ಮೊಲದಂತಹ ಪ್ರಾಣಿಯನ್ನು ಅರ್ಧ ಸಾಯಿಸಿ ಮರಿಗಳ ಮುಂದೆ ಹಾಕಿ ಬೇಟೆಯನ್ನು ಕಲಿಸುತ್ತದೆ,

ಇಂದು ನಮ್ಮ ರಾಷ್ಟ್ರ ಪಕ್ಷಿ ತುಸು ಸಂಕಷ್ಟದಲ್ಲಿದೆ. ಇವುಗಳನ್ನು ಗರಿಗಳಿಗಾಗಿ ಕೊಲ್ಲಲಾಗುತ್ತದೆ. ಆದ್ದರಿಂದ ದಯಮಾಡಿ ಈ ಗರಿಗಳನ್ನು ಕೊಳ್ಳಬೇಡಿ. ಯಾವುದೇ ವನ್ಯಜೀವಿಯ ದೇಹಭಾಗಗಳನ್ನು ಕೊಳ್ಳಬೇಡಿ.

ಮುಂದಿನ ಬಾರಿ ನವಿಲುಗರಿ ಮಾರುವವರನ್ನು ಕಂಡರೆ ನೀವು ಕೊಳ್ಳುವುದಿಲ್ಲ, ಅಲ್ಲವೆ? ಹಾಗೆಯೇ ನವಿಲನ್ನು ಕಂಡರೆ ನಮಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಕೃಪೆ : ಜಿ ಎಸ್ ಶ್ರೀನಾಥ್ ಹಾಗು dreamstime.com

Related post

2 Comments

Leave a Reply

Your email address will not be published. Required fields are marked *